7 ವರ್ಷದ ಪುಟಾಣಿ ಅಭಿಮಾನಿಗೆ ಖುದ್ದು ಕರೆ ಮಾಡಿದ ರಾಹುಲ್ ಗಾಂಧಿ
ಕಣ್ಣೂರು, ಏ.20: ಏಳು ವರ್ಷದ ಪುಟಾಣಿ ಅಭಿಮಾನಿ ಅಭಿಲಾಷೆ ಈಡೇರಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಖುದ್ದು ಕರೆ ಮಾಡಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ರಾಹುಲ್ ಗಾಂಧಿ ಪ್ರಚಾರ ಸಭೆ ಆಯೋಜಿಸಲಾಗಿತ್ತು. ರಾಹುಲ್ ಗಾಂಧಿಯನ್ನು ವಿಪರೀತ ಹಚ್ಚಿಕೊಂಡಿದ್ದ ಏಳು ವರ್ಷದ ಬಾಲಕ ನಂದನ್ ಬೆಳಗ್ಗೆ 5 ಗಂಟೆಯಿಂದಲೇ ಪ್ರಚಾರ ಸಭೆ ನಡೆಯುತ್ತಿದ್ದ ಜಾಗಕ್ಕೆ ಬಂದು ಕಾದು ಕುಳಿತಿದ್ದ.
ಸುಮಾರು 5 ಗಂಟೆಗಳ ಕಾಲ ಕಾದು ಭದ್ರತಾ ತಪಾಸಣೆಗಳನ್ನು ಮುಗಿಸಿದ ಬಳಿಕವೂ ಆ ಪುಟಾಣಿ ಅಭಿಮಾನಿಗೆ ರಾಹುಲ್ ಭೇಟಿ ಸಾಧ್ಯವಾಗಲಿಲ್ಲ.
ಇದರಿಂದ ಬೇಸರಗೊಂಡ ನಂದನ್ ಅಳುತ್ತಾ ಕೂತಿದ್ದ, ಈ ವಿಚಾರವನ್ನು ಆತನ ತಂದೆ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದರು. ಇದು ರಾಹುಲ್ ಗಾಂಧಿ ಗಮನಕ್ಕೂ ಬಂದಿತ್ತು.
ಪುಟ್ಟ ಅಭಿಮಾನಿಗೆ ಖುಷಿ ನೀಡುವ ಉದ್ದೇಶದಿಂದ ಖುದ್ದು ರಾಹುಲ್ ಗಾಂಧಿ ನಂದನ್ಗೆ ಕರೆ ಮಾಡಿ ಮಾತನಾಡಿದ್ದಾರೆ.
ರಾಹುಲ್ ಗಾಂಧಿಯ ಕರೆ ಸ್ವೀಕರಿಸಿದ ಬಳಿಕ ನಂದನ್ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ರಾಹುಲ್ ನಡವಳಿಕೆಗೆ ನಂದನ್ ಪಾಲಕರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರಶಂಸೆ ವ್ಯಕ್ತವಾಗಿದೆ.