• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ: ಗೊತ್ತಿಲ್ಲ ಗೊತ್ತಿದೆ ಎಂಬುದರ ನನಗೆ ಗೊತ್ತಿರುವ ಮತ್ತು ಗೊತ್ತಿಲ್ಲದ ವಿಷಯಗಳು

By ಶ್ರೀನಾಥ್ ಭಲ್ಲೆ
|
Google Oneindia Kannada News

ಇಂದಿನ ವಿಷಯವೇ ನನಗೆ ಗೊತ್ತಿಲ್ಲ. ಮುಂದಿನ ಬರಹದ ಶೀರ್ಷಿಕೆ ಏನು ಕೊಡಬೇಕು ಎಂದುಕೊಂಡಾಗ ತಲೆಗೆ ಬಂದ ಪದವೇ "ಗೊತ್ತಿಲ್ಲ". ಯಾಕೆ ಎಂದರೆ ಏನು ಬರೆಯಬೇಕು ಅಂತ ಗೊತ್ತಿರಲಿಲ್ಲ ಆಗ ಕೊಟ್ಟ ಶೀರ್ಷಿಕೆಯೇ 'ಗೊತ್ತಿಲ್ಲ'. ಹೇಗಿದ್ದರೂ ಶೀರ್ಷಿಕೆ ಕೊಟ್ಟಾಗಿದೆ. ಗೊತ್ತಿಲ್ಲ ಎಂಬುದರ ಬಗ್ಗೆಯೇ ಗೊತ್ತಿರುವುದೂ, ಗೊತ್ತಿಲ್ಲದಿರುವುದೂ, ಗೊತ್ತಿದ್ದೂ ಗೊತ್ತಿಲ್ಲರಿಡುವುದು, ಗೊತ್ತಿಲ್ಲದೆಯೂ ಗೊತ್ತಿರುವುದರ ಬಗ್ಗೆ ಸ್ವಲ್ಪ ಆಲೋಚಿಸಿ ನೋಡೋಣ, ನನಗೆಷ್ಟು ಗೊತ್ತು, ನಿಮಗೆಷ್ಟು ಗೊತ್ತು ಅಂತ.

ಕಾಲ ಒಂದಿತ್ತು, ಗಂಡು ಎಂಬ ಗತ್ತು. ಅವರೇನಿದ್ದರೂ ಹೊರಗೆ ಹೋಗಿ ದುಡಿದು ಬರೋದು ಅಷ್ಟೇ. ಸಂಜೆಗೆ ಬಂದು ಕೂತರೆ ಮುಗೀತು, ಎಲ್ಲ ಸೇವೆ ಕೂತಲ್ಲೇ. ಇಂಥವರಿಗೆ ಅಡುಗೆಮನೆ ಯಾವ ದಿಕ್ಕಿನಲ್ಲಿದೆ ಅಂತ ಕೇಳಿದರೆ ಅವರ ಉತ್ತರವೇ "ಗೊತ್ತಿಲ್ಲ' ಅಂತ. ಒಂದು ಸಕ್ಕರೆ ಡಬ್ಬ ಕೇಳಿದರೆ ಗೊತ್ತಿಲ್ಲ, ಉಪ್ಪಿನ ಡಬ್ಬ ಎಲ್ಲಿದೆ ಅಂತಲೂ ಗೊತಿಲ್ಲ ಅಷ್ಟೇ. ಇನ್ನು ಕೆಲವರಿಗೆ ಕಡಲೆಬೇಳೆ ಮತ್ತು ತೊಗರಿಬೇಳೆ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಈಗ ಕಾಲ ಬದಲಾಗಿದೆ.

ಭೀಮಸೇನ ನಳಮಹಾರಾಜರ ಸಂತತಿ

ಲೋಕದಲ್ಲಿ ಭೀಮಸೇನ ನಳಮಹಾರಾಜರ ಸಂತತಿ ಹೆಚ್ಚಾಗಿರಲು ಅಡುಗೆಮನೆ ಅಂದರೇನು ಎಂದು ಕೇಳುವ ಲಲನಾಮಣಿಯರು ಹೇರಳವಾಗಿದ್ದಾರೆ. ನಿಮಗೆ ಅಡುಗೆ ಮಾಡಲು ಗೊತ್ತೇ ಎಂದರೆ ಗೊತ್ತಿಲ್ಲ. ಇಷ್ಟು ವರ್ಷವಾದರೂ ಅಡುಗೆ ಕಲಿತಿಲ್ವಾ ಎಂದು ಕೇಳಿದಾಗ "ನಮ್ಮ ಮನೆಯಲ್ಲಿ ಮೊದಲಿಂದಾನೂ ಅಡುಗೆಯವರು ಇದ್ದಾರೆ ಎಂಬ ಉತ್ತರ ಬಂದರೆ ಏನು ಮಾಡುತ್ತೀರಿ? ಇದು ಇಂದಿನ ಕಥೆ ಮಾತ್ರವಲ್ಲ ಬಿಡಿ, ಬಹಳ ಹಿಂದಿನಿಂದಲೂ ಇರುವಂಥದ್ದೇ. ವಸಂತಗೀತಾ ಸಿನಿಮಾ ನೋಡಿದ್ದರೆ ನಿಮಗೆ ಈ ಸನ್ನಿವೇಶ ಗೊತ್ತಿರುತ್ತದೆ. ಸಿರಿವಂತರ ಮನೆಯ ಮಗಳಾದ ನಾಯಕಿಗೆ ಅಡುಗೆ ಮನೆಯ ಪರಿಚಯವೇ ಇರುವುದಿಲ್ಲ. ಅರ್ಥಾತ್ ಅಡುಗೆಮನೆ ಎಲ್ಲಿದೆ ಎಂದರೆ ಗೊತ್ತಿಲ್ಲ!
ಶಾಲೆಯಲ್ಲಿ ಮೇಷ್ಟ್ರು ಏನಾದರೂ ಪ್ರಶ್ನೆ ಕೇಳಿದರೆ ನಮ್ಮ ಉತ್ತರ ಏನು? ಗೊತ್ತಿಲ್ಲ. ಪಾಣಿಪತ್ ಮೊದಲ ಯುದ್ಧ ಯಾವಾಗ ನಡೆಯಿತು? ಗೊತ್ತಿಲ್ಲ. ಪಾಣಿಪಟ್ ಎರಡನೆಯ ಯುದ್ಧ ಯಾವಾಗ ನಡೆಯಿತು? ಮೊದಲ ಯುದ್ಧವಾದ ಮೇಲೆ ನಡೆಯಿತು ಅಂತ ಗೊತ್ತು ಆದರೆ ನಡೆದ ಇಸವಿ ಗೊತ್ತಿಲ್ಲ. ಇರಲಿ, ಬರೀ ಇಂಥಾ ಯುದ್ಧಗಳ ಬಗ್ಗೆಯೇ ಕಲಿತು ನಾವೇನು ಸಾಧಿಸಿದೆವು? ಗೊತ್ತಿಲ್ಲ, ಗೊತ್ತಿಲ್ಲ, ಗೊತ್ತಿಲ್ಲ!

ಆ ವಿಷಯ ನಿಮಗೆ ಇಷ್ಟವಿತ್ತಾ?

ಕೆಲವೊಮ್ಮೆ ಸ್ನೇಹಿತರ ಜೊತೆಗೆ social gatheringನಲ್ಲಿ ಇರುತ್ತೇವೆ. ಊಟ ತಿಂಡಿ ಕಾಫಿ ಜೊತೆಗೆ ಮಾತುಗಳು ಯಾವ ಯಾವ ವಿಷಯದ ಬಗ್ಗೆ ಓಡಾಡಿರುತ್ತದೆ ಎಂಬುದರ ಬಗ್ಗೆ ಲೆಕ್ಕವೇ ಇರುವುದಿಲ್ಲ. ಕೆಲವರಿಗೆ ಎಲ್ಲಾ ವಿಷಯ ಗೊತ್ತಿರುತ್ತದೆ ಎಂದೇ ಅನ್ನಿಸುತ್ತದೆ. ಆದರೆ ನಮಗೇಕೆ ಆ ವಿಷಯಗಳು ಗೊತ್ತಿಲ್ಲ? ತುಂಬಾ ಸಿಂಪಲ್ ಉತ್ತರ ಎಂದರೆ ನಮಗೆ ಅದರ ಬಗ್ಗೆ ಆಸಕ್ತಿ ಇಲ್ಲ ಅಷ್ಟೇ. ನಮಗೆ ಆಸಕ್ತಿ ಇರುವ ಬಗ್ಗೆ ಮಾತನಾಡಲು ಶುರುಮಾಡಿದರೆ, ಅಲ್ಲಿ ಬೇರಾರೂ ಇರುವುದಿಲ್ಲ, ಯಾಕೆ? ಅವರಿಗೆ ಅದು ಗೊತ್ತಿಲ್ಲ ಮತ್ತು ಬೇಕಿಲ್ಲ. ಅವರಿಗೆ ಗೊತ್ತಿರುವ ವಿಷಯ ಮಾತನಾಡುವಾಗ ಆ ವಿಷಯ ನಿಮಗೆ ಇಷ್ಟವಿತ್ತಾ? ಇಲ್ಲವಾ? ನಿಮಗೆ ಗೊತ್ತಾ? ಗೊತ್ತಿಲ್ಲ? ಇಷ್ಟವಿಲ್ಲಾ ಅಂತಲೇ ಅಂದುಕೊಂಡರೆ, ಅಷ್ಟೂ ಹೊತ್ತು ಅವರ ಮಾತು ಕೇಳುತ್ತಾ ಕೂತಿದ್ದೇಕೆ? ಗೊತ್ತಿಲ್ಲಾ!

ವೈಯಕ್ತಿಕ ಸಾಧನೆಗಳ ಬಗ್ಗೆ ಹೇಳಬೇಕೇ?

ಜಗತ್ತಿನಲ್ಲಿ ಒಂದು ಅತೀ ಕ್ಲಿಷ್ಟ ಪ್ರಶ್ನೆ ಒಂದಿದೆ. ಅದು ನಿಮಗೆ ಗೊತ್ತೇ? ಗೊತ್ತಿಲ್ಲ ಎನ್ನದಿರಿ! ಬಹಳಷ್ಟು ಸಾರಿ ಸಂದರ್ಶನಗಳಲ್ಲಿ ಕೇಳುವ ಮೊದಲ ಪ್ರಶ್ನೆಯೇ ಇದು. ನಿಮ್ಮಗೆ ಬಗ್ಗೆ ಹೇಳಿ ಅಂತ. ಎಲ್ಲಿಂದ ಶುರು ಮಾಡಬೇಕು? ಗೊತ್ತಿಲ್ಲ. ನಾನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಳಗಿನ ಜಾವ ಎರಡು ಗಂಟೆಯಲ್ಲಿ ಹುಟ್ಟಿದೆ ಅಂತ ಶುರು ಮಾಡಬೇಕೆ? ಸ್ವಂತ ವಿಷಯ ಹೇಳಬೇಕೇ? ಮನೆಯಲ್ಲಿ ನಾವು ಎಷ್ಟು ಮಂದಿ ಮಕ್ಕಳು ಎಂದು ಹೇಳಬೇಕೇ? ವಿದ್ಯಾಭ್ಯಾಸದ ಬಗ್ಗೆ ಹೇಳಬೇಕೇ? ವೈಯಕ್ತಿಕ ಸಾಧನೆಗಳ ಬಗ್ಗೆ ಹೇಳಬೇಕೇ? ಈಗ ಸಂದರ್ಶನದ ವಿಷಯ ಬಿಡಿ. 'ನೀವು ಯಾರು?' ಎಂಬ ಪ್ರಶ್ನೆ ಕೇಳಿದೆ ಎಂದುಕೊಳ್ಳಿ, ನಿಮ್ಮ ಉತ್ತರವೇನು? ಗೊತ್ತಿಲ್ಲ ಎಂದು ಹೇಳಲಾರಿರಿ ಏಕೆಂದರೆ ಇದು ನಿಮ್ಮ ಬಗ್ಗೆಯೇ ಕೇಳಿರೋದು. ಹೇಳಿ ಆಯ್ತಾ?

ಮೈನಸ್ ಅನ್ನು ಮೈನಸ್‌ನಿಂದ ಗುಣಿಸಿದಾಗ ಪ್ಲಸ್

ಈಗ ಒಂದು ಹೆಜ್ಜೆ ಮುಂದೆ ಸಾಗೋಣ ಬನ್ನಿ. ಗಣಿತ ಲೋಕದಲ್ಲಿ -3 ಅನ್ನು -4 ರಿಂದ ಗುಣಿಸಿದರೆ +12 ಆಗುತ್ತದೆ ಎಂದು ನಿಮಗೆ ಗೊತ್ತು. ಬಹಳ ಸರಳವಾದ ವಿಷಯ ಅಲ್ಲವೇ? ಆದರೆ ಮೈನಸ್ ಅನ್ನು ಮೈನಸ್‌ನಿಂದ ಗುಣಿಸಿದಾಗ ಪ್ಲಸ್ ಹೇಗಾಗುತ್ತದೆ ಅಂತ ನನಗೆ ಗೊತ್ತಿಲ್ಲ. ನನಗೆ ಅರಿವಿರುವ ಚಿಕ್ಕ ವಿಷಯ ಎಂದರೆ ಮೂರು ಋಣಾತ್ಮಕ ಅಂಶವನ್ನು, 4 ಋಣಾತ್ಮಕದಿಂದ ಗುಣಿಸಿದರೆ ಹನ್ನೆರಡು ಎಂಬುದು ಋಣಾತ್ಮಕವಾಗಬೇಕು, ಧನಾತ್ಮಕ ಹೇಗಾಯ್ತು? ಎರಡು ಧನಾತ್ಮಕ ಗುಣಿಸಿದರೆ ಧನಾತ್ಮಕ ಸರಿ. ಹಲವಾರು ಧನಾತ್ಮಕಗಳ ಜೊತೆಗೆ ಒಂದು ಋಣಾತ್ಮಕ ಸೇರಿದರೂ ಅದು ಕೊನೆಯಲ್ಲಿ ಮೈನಸ್ ಎಂದೇ ಆಗೋದು. ಒಂದು ಹಾಳಾದ ಸೇಬಿನಿಂದ ಎಲ್ಲವೂ ಹಾಳು ಅಂತಾರಲ್ಲ ಹಾಗೆ. ಆದರೆ ಗೊತ್ತಿಲ್ಲ ಎಂಬ ವಿಷಯ ಎಂದರೆ ಮೈನಸ್ ಅನ್ನು ಮೈನಸ್ ನಿಂದ ಗುಣಿಸಿದಾಗ ಪ್ಲಸ್ ಹೇಗೆ?
ತುಂಬಾ ತಲೆ ಕೆರೆದುಕೊಳ್ಳದಿರಿ, ಗಾಯವಾದೀತು. ಆಧ್ಯಾತ್ಮ ಬೇರೆ, ಲೆಕ್ಕ ಬೇರೆ. ಎರಡು ಕೆಟ್ಟಗುಣಗಳು ಗುಣಿಸಿದರೆ ಇನ್ನೂ ಕೆಡಕಾಗುತ್ತದೆಯೇ ವಿನಃ ಧನಾತ್ಮಕ ಆಗುವುದಿಲ್ಲ. ಆದರೆ ಲೆಕ್ಕ ಬೇರೆ. ಮೈನಸ್ ಎಂದರೆ negative ಅಂದರೆ ಉಲ್ಟಾ ಅಂತ ಅಂದುಕೊಳ್ಳಿ. ಉಲ್ಟಾದ ಉಲ್ಟಾ ಎಂದರೆ ಧನ್ಯಾತ್ಮಕ ತಾನೇ? ಇಷ್ಟೇ ವಿಷಯ. ಈವರೆಗೆ ಗೊತ್ತಿಲ್ಲಾ ಎಂಬುದು ಈಗ ಗೊತ್ತಾಯ್ತು ಅಲ್ಲವೇ? ಗೊತ್ತಿಲ್ಲ, ಗೊತ್ತಿದೆ ಎಂಬುದರ ನಡುವೆಯೇ ಜೀವನ.

ಈ ಗೊತ್ತಿಲ್ಲ ಮತ್ತು ಗೊತ್ತಿರುವುದು ಎಂಬ ವಿಷಯದಲ್ಲಿ ನಾಲ್ಕು ವಿಷಯಗಳಿವೆ.
(1) ನಮಗೆ ವಿಷಯ ಗೊತ್ತಿರುವುದು ಮತ್ತು ಅರ್ಥವಾಗಿರೋದು. ಉದಾಹರಣೆಗೆ ಲೋಹದ ತಂತಿಯಲ್ಲಿ ವಿದ್ಯುತ್ ಹರಿಯುತ್ತದೆ ಮತ್ತು ಶಾಕ್ ಹೊಡೆಸಿಕೊಂಡಿರುವುದರಿಂದ ಆ ವಿಷಯ ಅರ್ಥವೂ ಆಗಿದೆ.

(2) ನಮಗೆ ವಿಷಯ ಗೊತ್ತಿರುವುದು ಮತ್ತು ಅರ್ಥವಾಗದೇ ಇರೋದು. ಉದಾಹರಣೆಗೆ ಗ್ರಹಣದ ಸಮಯದಲ್ಲಿ ಆಹಾರದ ಪದಾರ್ಥಗಳ ಮೇಲೆ ದರ್ಭೆ ಹಾಕಬೇಕು ಆದರೆ ಯಾಕೆ ಅಂತ ಗೊತ್ತಿಲ್ಲ.

(3) ನಮಗೆ ವಿಷಯ ಗೊತ್ತಿಲ್ಲದೇ ಇರೋದು ಆದರೆ ಗೊತ್ತಿಲ್ಲ ಅಂತ ಅರ್ಥವಾಗಿರೋದು. ಉದಾಹರಣೆಗೆ - ಪ್ರಶ್ನೆ ಪತ್ರಿಕೆಯ ಮೇಲಿರುವ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಆದರೆ ಗೊತ್ತಿಲ್ಲ ಅಂತ ಚೆನ್ನಾಗಿ ಗೊತ್ತು

(4) ನಮಗೆ ವಿಷಯವೂ ಗೊತ್ತಿಲ್ಲ ಮತ್ತು ಅರ್ಥವೂ ಆಗದೇ ಇರುವುದು. ಉದಾಹರಣೆಗೆ ಚೈನೀಸ್ ಭಾಷೆ

ವರಾಹ ಸ್ವಾಮಿಯ ಪುತ್ರ ನರಕಾಸುರನೇ ದುಷ್

ಹಿರಿಯರೊಡನೆ ಮಾತನಾಡುತ್ತಿದ್ದೆ ಒಮ್ಮೆ. ಅವರು ಹೇಳಿದರು 'ರಕ್ಕಸನಿಂದ ಭೂದೇವಿಯನ್ನು ಕಾಪಾಡಿದ ವರಾಹ ಸ್ವಾಮಿಯ ಪುತ್ರ ನರಕಾಸುರನೇ ದುಷ್ಟ. ಜಗದೋದ್ಧಾರ ಶ್ರೀಕೃಷ್ಣನ ಮಗನಾದ ಸಾಂಬ ಯದುವಂಶ ನಾಶಕ. ಅಂತಹದರಲ್ಲಿ ಮಕ್ಕಳಿಂದ ನಾವೇನು ಬಯಸೋದು?' ತಮ್ಮ ಮಕ್ಕಳ ಬಗ್ಗೆ ಏನೋ ದೂರು. ಜೊತೆಗೆ ತಾವು ಎಂಥಾ ಜ್ಞಾನಿ ಎಂದು ತೋರಿಸಿಕೊಂಡರು. ಹೀಗೇಕೆ ಅಂತ ನನಗೆ ಗೊತ್ತಿಲ್ಲ. ಕೊಂಚ ಆಲೋಚಿಸಿ ಕೇಳಿದೆ 'ಪುರಾಣ ಪುರುಷರನ್ನು ಪಕ್ಕಕ್ಕೆ ಇರಿಸಿ ನಮ್ಮನ್ನೇ ನಾವು ಪ್ರಶ್ನಿಸಿಕೊಂಡರೆ, ಮಕ್ಕಳು ಸರಿ ಇಲ್ಲ ಎಂಬುವವರೂ ಮತ್ತೊಬ್ಬರ ಮಕ್ಕಳೇ ಅಲ್ಲವೇ? ಅರ್ಥಾತ್ ದೂರುವವರೂ ಸರಿ ಇಲ್ಲ ಅಂತಾಯ್ತು ಅಲ್ಲವೇ?'. ನಾ ಕೇಳಿದ ಪ್ರಶ್ನೆಗೆ ಅವರಿಗೆ ಉತ್ತರ ಗೊತ್ತಿಲ್ಲ ಅಂತ ನನಗೆ ಗೊತ್ತಿತ್ತೋ ಅಥವಾ ಗೊತ್ತಿಲ್ಲವೋ ಎಂಬುದು ನನಗೆ ಗೊತ್ತಿಲ್ಲ. ನಿಮಗೆ ಗೊತ್ತೇ?

ದಿನನಿತ್ಯದಲ್ಲಿ ಇಂಥಾ ನೂರಾರು ವಿಷಯಗಳು ನನಗೆ ಗೊತ್ತಿಲ್ಲ. ಎಷ್ಟೋ ವಿಷಯಗಳ ಬೆನ್ನು ಹತ್ತಿ ಹೋಗಿ ಕೆದಕಿ ನಿಮ್ಮ ಮುಂದೆ ಇಡುವ ಯತ್ನ ಮಾಡುತ್ತೇನೆ. ಇಲ್ಲಿನ ಉದ್ದೇಶ ಎರಡು. ಮೊದಲಿಗೆ, ಮುಂಚೆ ಗೊತ್ತಿಲ್ಲ ಎಂಬುದನ್ನು ಈಗ ಗೊತ್ತಿದೆ ಎಂದುಕೊಂಡಾಗ ಅದೇನೋ ಸಂತೃಪ್ತಿ. ಜೊತೆಗೆ ಹಂಚಿಕೊಳ್ಳುವುದರಿಂದ ಕನಿಷ್ಠ ಮತ್ತೊಬ್ಬರು ಕಲಿತರೆ ಅಲ್ಲಿಗೆ 'ಕಲಿಯೋಣ, ಕಲಿಸೋಣ' ಎಂಬ ಜೀವನ ಅಭಿಯಾನ ಮುಂದೆ ಸಾಗುತ್ತದೆ. ಇದಕ್ಕಿಂತಾ ಹೆಚ್ಚಿಗೆ ನನಗೆ ಗೊತ್ತಿಲ್ಲ. ನಿಜಕ್ಕೂ ನನಗೇನೂ ಗೊತ್ತಿಲ್ಲ. ನಿಮಗೆ?

English summary
Srinath Bhalle Column: Let's think about what you don't even know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X