ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮ ದಾಳಿಯ ಬಗ್ಗೆ ಇಷ್ಟು ಪ್ರಶ್ನೆಗಳಿಗೆ ಉತ್ತರಿಸುವುದು ಯಾರು?

By ಕಿಶೋರ್ ನಾರಾಯಣ್
|
Google Oneindia Kannada News

Recommended Video

ಪುಲ್ವಾಮ ಧಾಳಿಯ ಬಗ್ಗೆ ಎದ್ದಿವೆ ಹಲವು ಪ್ರಶ್ನೆಗಳು..! | Oneindia Kannada

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದಿರುವ ಉಗ್ರಗಾಮಿ ದಾಳಿಯಲ್ಲಿ ಬಸ್ಸಿನಲ್ಲಿದ್ದ ‌ಸಿಆರ್ ಪಿಎಫ್ ನ ಅಷ್ಟೂ ಸಿಬ್ಬಂದಿ ಹುತಾತ್ಮರಾಗಿರುವುದು ಅದೆಂಥ ಆಕ್ರೋಶ ತರಿಸುತ್ತಿದೆ ಎಂಬುದನ್ನು ವಿವರಿಸುವುದು ಕಷ್ಟ. ಏಕೆಂದರೆ ಇದು ಭಾರತ ದೇಶದ ಮರ್ಯಾದೆ ಪ್ರಶ್ನೆ. ನಮ್ಮ ದೇಶದ ಸೈನಿಕರ ಮರ್ಯಾದೆ ವಿಚಾರ.

ಸಿಆರ್ ಪಿಎಫ್ ಸಿಬ್ಬಂದಿ ಕೂತು ಕೂತ ಕಡೆ, ಯಾವನೋ ಚಿಲ್ಲರೆ ಉಗ್ರನೊಬ್ಬ ಸ್ಕಾರ್ಪಿಯೋ ನುಗ್ಗಿಸಿ, ಅಷ್ಟೂ ಜನರನ್ನು ಕೊಂದು ಹಾಕಿದ್ದಾನೆ. ಇಂದಿನ ಗಾಯ ಸುಲಭಕ್ಕೆ ಆರುವಂಥದ್ದಲ್ಲ. ಆದರೆ ಇಂದಿನ ಘಟನಾವಳಿಗಳನ್ನು ಗಮನಿಸಿದರೆ ಸಾಲು ಸಾಲು ತಪ್ಪುಗಳು ಕಂಡುಬರುತ್ತವೆ. ಅಕ್ಕಪಕ್ಕದಲ್ಲಿ ಚೀನಾ, ಪಾಕಿಸ್ತಾನದಂಥ ದೇಶಗಳಿರುವಾಗ ಇಂಥ ಮೈ ಮರೆವು ಖಂಡಿತಾ ಅಕ್ಷಮ್ಯ.

ಜಮ್ಮು ಮತ್ತು ಕಾಶ್ಮೀರಕ್ಕೆ ಶುಕ್ರವಾರ ರಾಜನಾಥ್ ಸಿಂಗ್ ಭೇಟಿಜಮ್ಮು ಮತ್ತು ಕಾಶ್ಮೀರಕ್ಕೆ ಶುಕ್ರವಾರ ರಾಜನಾಥ್ ಸಿಂಗ್ ಭೇಟಿ

ಈಗ ಬರುತ್ತಿರುವ ಸುದ್ದಿಯ ಆಧಾರದಲ್ಲಿ ಉದ್ಭವಿಸುವ ಪ್ರಶ್ನೆಗಳನ್ನು ನಿಮ್ಮೆದುರು ಇಡುತ್ತಾ ಹೋಗುವುದೇ ಈ ವರದಿ ಉದ್ದೇಶ. ಏಕೆಂದರೆ, ನಲವತ್ತಕ್ಕೂ ಹೆಚ್ಚು ಯೋಧರ ಹತ್ಯೆ ಎಂಬುದು ಎಂಥ ದೇಶಕ್ಕಾದರೂ ಎಸೆಯುವ ದೊಡ್ಡ ಸವಾಲು. ಅದರಲ್ಲೂ ಭಾರತ ಜಾಗತಿಕ ಮಟ್ಟದಲ್ಲಿ ತನ್ನ ಸೇನಾ ಸಾಮರ್ಥ್ಯದ ಬಗ್ಗೆ ಸಂದೇಶ ನೀಡುವ ಮಟ್ಟಿಗೆ ಬೆಳೆದು ನಿಂತಿರುವ ಇಂತಹ ವೇಳೆ ಹೀಗಾಗಿದ್ದು ಹೇಗೆ?

ಅಷ್ಟು ದೊಡ್ಡ ಪ್ರಮಾಣದ ಸ್ಫೋಟಕ ದೊರೆತಿದ್ದು ಹೇಗೆ?

ಅಷ್ಟು ದೊಡ್ಡ ಪ್ರಮಾಣದ ಸ್ಫೋಟಕ ದೊರೆತಿದ್ದು ಹೇಗೆ?

ಸಾಮಾನ್ಯವಾಗಿ ಯೋಧರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವಾಗ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಯಾಣ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಅದು ಸುರಕ್ಷಿತವಂತೂ ಅಲ್ಲ. ಸೇನೆಯು ಇಂಥದ್ದನ್ನು ಪ್ರೋತ್ಸಾಹಿಸುವುದಿಲ್ಲ. ಹೀಗೆ ಎರಡೂವರೆ ಸಾವಿರಕ್ಕೂ ಹೆಚ್ಚು ಯೋಧರನ್ನು ಅಷ್ಟು ದೂರಕ್ಕೆ ಪ್ರಯಾಣ ಮಾಡಲು ಸಲಹೆ ನೀಡಿದ್ದು, ಅದಕ್ಕೆ ಒಪ್ಪಿಗೆ ನೀಡಿದ್ದು ಎರಡೂ ವಿಚಿತ್ರ ಎನಿಸುತ್ತದೆ. ಜತೆಗೆ ಎರಡು ದಿನದಿಂದ ಬಂದ್ ಆಗಿದ್ದ ರಸ್ತೆಯಲ್ಲಿ ಭದ್ರತಾ ವ್ಯವಸ್ಥೆ ಹೇಗಿರಬಹುದು ಎಂಬ ಅಂದಾಜು ಇರದೆ ಅಷ್ಟು ದೂರದ ಪ್ರಯಾಣಕ್ಕೆ ಸಿದ್ಧವಾಗಿದ್ದು ಹೇಗೆ? ಇನ್ನು ಎದುರಿನಿಂದ ಬಂದ ವ್ಯಕ್ತಿ ಸ್ಥಳೀಯನಾಗಿದ್ದು, ಇಂಥದ್ದೊಂದು ದಾಳಿ ಆಯೋಜಿಸುವುದು ಕಷ್ಟವಲ್ಲ ಎಂಬ ಸಂಗತಿ ಕಲಿತುಕೊಳ್ಳಲೇ ಬೇಕಾದ ಪಾಠ. ಹೇಗೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಸ್ಫೋಟಕ, ಅದರಲ್ಲೂ ಸುಧಾರಿತ ಸ್ಫೋಟಕ ದೊರೆಯಿತು ಎಂಬ ಪ್ರಶ್ನೆ ಬಂದಿದೆಯೋ ಅಷ್ಟು ದೊಡ್ಡ ಸಂಖ್ಯೆಯಲ್ಲಿ ಸೈನಿಕರನ್ನು ಕರೆದೊಯ್ಯಲು ಅನುಮತಿಸಿದ್ದು ಏಕೆ ಎಂಬುದು ಕೂಡ ತನಿಖೆ ಆಗಬೇಕು.

ಈ ಹಿಂದೆ ಇಂಥ ದಾಳಿ ನಡೆದಿರಲಿಲ್ಲ

ಈ ಹಿಂದೆ ಇಂಥ ದಾಳಿ ನಡೆದಿರಲಿಲ್ಲ

ಆದರೆ, ಹೀಗೆ ನೂರಾರು ಕೇಜಿ ಸುಧಾರಿತ ಸ್ಫೋಟಕಗಳನ್ನು ಕಣಿವೆ ರಾಜ್ಯದೊಳಗೆ ತಂದಿದ್ದಾರೆ ಅಂದರೆ ಇದು ಖಂಡಿತವಾಗಿಯೂ ಗುಪ್ತಚರ ಇಲಾಖೆಯ ವೈಫಲ್ಯವೇ. ಏಕೆಂದರೆ ನಮ್ಮ ದೇಶದ ಗುಪ್ತಚರ ಇಲಾಖೆ ಅತ್ಯುತ್ತಮವೇ ಆಗಿರಬಹುದು. ಇವತ್ತಿನಂಥ ಸಾವಿರ ಘಟನೆಗಳನ್ನು ತಡೆದಿರಬಹುದು. ಆದರೆ ಇಂದಿನ ಅನಾಹುತ ತಡೆಯಲು ಸಾಧ್ಯವಾಗದಿದ್ದದ್ದು ಗುಪ್ತಚರ ಇಲಾಖೆ ವೈಫಲ್ಯವೇ. ಭದ್ರತಾ ಸಿಬ್ಬಂದಿಯ ವಾಹನಗಳ ಮೇಲೆ ಉಗ್ರಗಾಮಿಗಳು ದಾಳಿ ಮಾಡುವ ವಿಷಯ ಹೊಸದಲ್ಲ. ಆ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಅಪಾಯ ಮೈ ಮೇಲೆ ಎಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಈಚೆಗೆ ಕೆಲವು ಬದಲಾವಣೆಗಳನ್ನು ಭಾರತೀಯ ಸೇನೆ ಮಾಡಿಕೊಂಡಿತ್ತು. ಸಣ್ಣ ಸಂಖ್ಯೆಯಲ್ಲಿ ಸೈನಿಕರು ಒಂದು ಕಡೆಯಿಂದ ಮತ್ತೊಂದು ಕಡೆ ತೆರಳುತ್ತಿದ್ದರು. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೈನಿಕರ ಮೇಲೆ ಈ ರೀತಿ ಹಲವು ದಾಳಿಗಳಾಗಿವೆ. ಉಗ್ರಗಾಮಿಗಳ ದಾಳಿ ವಿಧಾನದಲ್ಲಿ ಇದೂ ಒಂದು ಬಗೆ. ಆದರೆ ಈ ವರೆಗೆ ಭಾರತದಲ್ಲಿ ಇಂಥ ದಾಳಿ ನಡೆದಿರಲಿಲ್ಲ.

ಜೆಇಎಂ ಬೆಂಬಲಕ್ಕೆ ನಿಂತಿದೆ ಚೀನಾ

ಜೆಇಎಂ ಬೆಂಬಲಕ್ಕೆ ನಿಂತಿದೆ ಚೀನಾ

ಜೈಶ್-ಇ-ಮೊಹ್ಮದ್ ಉಗ್ರ ಸಂಘಟನೆಯನ್ನು ನಿಷೇಧಿಸಬೇಕು, ಮಸೂದ್ ಅಜರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು..ಹೀಗೆ ಭಾರತ ಒತ್ತಾಯ ಮಾಡಿದಾಗ ಚೀನಾವು ತನ್ನ ಮಿತ್ರ ದೇಶ ಪಾಕಿಸ್ತಾನದ ನೆರವಿಗೆ ನಿಂತು ಬಿಡುತ್ತಿತ್ತು. ಈಗ ಸ್ವತಃ ಜೆಇಎಂ ಈ ಹೇಡಿ-ಹೇಯ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ಅದರ ವಿಡಿಯೋ ಬಿಡುಗಡೆ ಆಗಿದೆ. ಚೀನಾ ದೇಶ ಇದಕ್ಕೆ ಉತ್ತರ ಹೇಳಬೇಕು. ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರ ಹೇಳಿಕೆ ಗಮನಿಸಿದರೆ ಮುಂದಿನ ಪರಿಣಾಮಗಳು ಏನಾಗಬಹುದು ಎಂಬುದನ್ನು ಊಹಿಸುವುದು ಕಷ್ಟವಲ್ಲ. ಉಗ್ರಗಾಮಿಗಳ ದಾಳಿಯನ್ನು ಖಂಡಿಸುತ್ತೇವೆ ಎನ್ನುವುದಕ್ಕೂ ಕರಿನಾಗರದಂಥ ಜೈಶ್-ಇ-ಮೊಹ್ಮದ್ ಉಗ್ರಗಾಮಿ ಸಂಘಟನೆಯನ್ನು ಮಡಿಲಲ್ಲಿ ಇಟ್ಟುಕೊಂಡು ಬೆಳೆಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತೇವೆ. ಈ ಮಾತು ದೇಶದ ಜನರಿಗೆ ನೀಡುತ್ತಿರುವ ಮಾತು ಎನ್ನುವುದಕ್ಕೂ ಸ್ಪಷ್ಟ ವ್ಯತ್ಯಾಸ ಇದೆ. ಮುಂದಿನ ದಿನಗಳಲ್ಲಿ ಉತ್ತರ ಕಾಣುವ ನಿರೀಕ್ಷೆ ಖಂಡಿತಾ ಇದೆ.

ಶತ್ರು ದೇಶವು ಶುರುವಿಟ್ಟಿರುವ ಹೊಸ ಆಟ

ಶತ್ರು ದೇಶವು ಶುರುವಿಟ್ಟಿರುವ ಹೊಸ ಆಟ

ಇತ್ತೀಚಿನ ವರ್ಷಗಳಲ್ಲಿ ಉಗ್ರಗಾಮಿಗಳನ್ನು ಕಾಶ್ಮೀರಕ್ಕೆ ಕಟ್ಟಿ ಹಾಕಲಾಗಿದೆ. ಅಲ್ಲೂ ಕೂಡ ಒಂದೊಂದೇ ಜಿಲ್ಲೆಯಲ್ಲಿ ತರಿದು ಹಾಕಲಾಗುತ್ತಿದೆ. ಪಾಕಿಸ್ತಾನ ಮೂಲದ ಉಗ್ರರು ಭಾರತದೊಳಕ್ಕೆ ನುಸುಳುವುದ ಬಲು ಕಷ್ಟವಾಗಿದೆ. ಆದ್ದರಿಂದ ತನ್ನ ಯೋಜನೆಯನ್ನೇ ಬದಲಿಸಿಕೊಂಡು ಶುರುವಿಟ್ಟಿರುವ ಪಾಕ್ ಉಗ್ರರ ಹೊಸ ಆಟ ಇದು. ಸ್ಥಳೀಯರನ್ನೇ ಬಳಸಿಕೊಂಡು ದಾಳಿ ಮಾಡುವ ಹೇಡಿ ಕೃತ್ಯಕ್ಕೆ ಉತ್ತರ ಹೇಳಬೇಕಿದೆ. ಲೋಕಸಭೆ ಚುನಾವಣೆ ಕಣ್ಣೆದುರು ಇಟ್ಟುಕೊಂಡು ದೇಶದ ಜನರೆದುರು ಮತ ಕೇಳಲು ಹೋಗುವುದು ಇಂಥ ಸನ್ನಿವೇಶಗಳಲ್ಲಿ ಕಷ್ಟ. ಆದರೆ ರಾಜಕೀಯವನ್ನು ಪಕ್ಕಕ್ಕಿಟ್ಟು ಇಂದಿನ ಘಟನೆ ನೋಡಬೇಕು. ಶತ್ರು ದೇಶ ಆರಂಭಿಸಿರುವ ಹೊಸ ಬಗೆಯ ದಾಳಿ ಇದು. ಭಾರತಕ್ಕೆ ಗಾಯವಾಗಿದೆ. ಭಾರತೀಯ ಸೇನೆ ಹೊಸ ನೀತಿ ಅಳವಡಿಸಿಕೊಂಡು ವರ್ಷಗಳೇ ಕಳೆದಿವೆ. ಈ ಸಲದ ಉತ್ತರ ಗಟ್ಟಿ ಆಗಿರುತ್ತದೆ, ತಟ್ಟಿ ಹೇಳುವಂತಿರುತ್ತದೆ.

English summary
Pulwama attack: Who are going to answer all these questions? Which are really matter of concern at this moment. There are some strategy in Indian army while moving soldiers from one place to another. But on Thursday there were some lapses. What are the lapses? Here is an analytical story by Kishor Narayan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X