ಕಾಶ್ಮೀರ ಹಿಂಸಾಚಾರಕ್ಕೆ ಈ ಬಾಲಿವುಡ್ ಸಿನಿಮಾ ಕಾರಣ ಎಂದ ಮುಫ್ತಿ
ಶ್ರೀನಗರ್, ಮೇ 17: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಭುಗಿಲೇಳಲು 'ದಿ ಕಾಶ್ಮೀರ್ ಫೈಲ್ಸ್' ಹಿಂದಿ ಸಿನಿಮಾ ಕಾರಣ ಎಂದು ಈ ರಾಜ್ಯದ ಮಾಜಿ ಸಿಎಂ ಮೆಹಬೂಬ ಮುಫ್ತಿ ಆರೋಪಿಸಿದ್ದಾರೆ. ಮೇ 12ರಂದು ಬಡಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ರಾಹುಲ್ ಭಟ್ ಎಂಬ ನೌಕರನನ್ನು ಹತ್ಯೆಗೈಯಲ್ಲಾಗಿತ್ತು. ಕಾಶ್ಮೀರಿ ಪಂಡಿತನೆಂಬ ಕಾರಣಕ್ಕೆ ಆತನ ಹತ್ಯೆಯಾಗಿದೆ ಎಂಬ ಆರೋಪ ಇದೆ. ಆ ಘಟನೆ ಹಿನ್ನೆಲೆಯಲ್ಲಿ ಮೆಹಬೂಬ ಮುಫ್ತಿ ಈ ಹೇಳಿಕೆ ನೀಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಕಾಶ್ಮೀರದಲ್ಲಿ ಪಂಡಿತ ಸಮುದಾಯದವರನ್ನು ಹೆದರಿಸಿ ಬೆದರಿಸಿ ರಾಜ್ಯದಿಂದ ಹೊರಹೋಗುವಂತೆ ಮಾಡಲಾಯಿತು ಎಂಬುದನ್ನು ತೋರಿಸಲಾಗಿದೆ. ಮುಸ್ಲಿಮ್ ಸಮುದಾಯದವರೆಲ್ಲರನ್ನೂ ಕೆಟ್ಟದಾಗಿ ಬಿಂಬಿಸಿ ವಾಸ್ತವ ಬಿಟ್ಟು ಏಕಪಕ್ಷೀಯವಾಗಿ ಕಥೆ ಹೆಣೆಯಲಾಗಿದೆ ಎಂಬ ಆರೋಪವೂ ಇದೆ. ಈ ಚಿತ್ರದ ಪರಿಣಾಮವಾಗಿ ಕಾಶ್ಮೀರದಲ್ಲಿ ಈಗ ಹಿಂಸಾಚಾರಕ್ಕೆ ಪ್ರಚೋದನೆ ಸಿಕ್ಕಂತಾಗಿದೆ ಎಂಬುದು ಮಾಜಿ ಸಿಎಂ ಅನಿಸಿಕೆ.
ಕಾಶ್ಮೀರ ಬಿಟ್ಟು ತೊಲಗಿ, ಇಲ್ಲದಿದ್ದರೆ ಹೆಣವಾಗುವಿರಿ: ಕಾಶ್ಮೀರಿ ಪಂಡಿತರಿಗೆ ಲಶ್ಕರೆ ಇಸ್ಲಾಮ್‌ನಿಂದ ಬೆದರಿಕೆ
"ನಾವು ಕಾಶ್ಮೀರಿ ಪಂಡಿತರಿಗೆ ಬಹಳ ಸುರಕ್ಷತಾ ವಾತಾವರಣ ನಿರ್ಮಿಸಿದ್ದೆವು. 2016ರಲ್ಲಿ ಸೂಕ್ಷ್ಮ ಪರಿಸ್ಥಿತಿ ಇದ್ದರೂ ಯಾವ ಹತ್ಯೆಯೂ ಆಗಲಿಲ್ಲ. ಈಗ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ" ಎಂದು ಮೆಹಬೂಬ ಮುಫ್ತಿ ತಿಳಿಸಿದ್ದಾರೆ.
ಫೈಲ್ಸ್ ಸಿನಿಮಾಗೆ ಫಾರೂಕ್ ಆಕ್ಷೇಪ:
ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮತ್ತೊಬ್ಬ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಕೂಡ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ತೋರಿಸಲಾಗಿರುವ ಘಟನೆಗಳು ಸತ್ಯಕ್ಕೆ ದೂರವಾದವು, ಆಧಾರರಹಿತವಾಗಿರುವುವು. ದೇಶದಲ್ಲಿ ದ್ವೇಷಕ್ಕೆ ಕುಮ್ಮಕ್ಕು ಕೊಡುವ ವಾತಾವರಣ ಈ ಸಿನಿಮಾದಿಂದ ನಿರ್ಮಾಣ ಆಗುತ್ತದೆ. ಈ ಸಿನಿಮಾವನ್ನು ನಿಷೇಧಿಸಬೇಕು ಎಂದು ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ಮುಖ್ಯಸ್ಥರೂ ಅದ ಅವರು ಆಗ್ರಹ ಮಾಡಿದ್ದಾರೆ.
ಮಸೀದಿಗಳ ಧ್ವನಿವರ್ಧಕ, ಹಲಾಲ್ ಕಟ್ ನಿಷೇಧ; ಹಿಂಗಾದ್ರೆ ಹೆಂಗೆ ಎಂದ ಒಮರ್ ಅಬ್ದುಲ್ಲಾ
ಕಾಶ್ಮೀರದಲ್ಲಿ ಪಂಡಿತ ಹಾಗು ಇತರ ಸಮುದಾಯಗಳಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯ ಭಾಗವಾಗಿ ಸಾವಿರಾರು ಮಂದಿಗೆ ಜಮ್ಮು ಕಾಶ್ಮೀರದ ವಿವಿಧ ಇಲಾಖೆಗಳಲ್ಲಿ ನೌಕರಿ ನೀಡಲಾಗಿದೆ. ತಾತ್ಕಾಲಿಕ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ಕಳೆದ ಎರಡು ವರ್ಷದಲ್ಲಿ ಅಲ್ಲಿ ಹಲವು ಹಿಂಸಾಚಾರ ಘಟನೆಗಳು ನಡೆದಿದ್ದು, ಏಳಕ್ಕೂ ಹೆಚ್ಚು ಮಂದಿ ಹಿಂದೂ ಸಮುದಾಯದವರನ್ನು ಗುರಿಯಾಗಿಸಿ ಹತ್ಯೆ ಮಾಡಿರುವುದು ವರದಿಯಾಗಿದೆ. ರಾಹುಲ್ ಭಟ್ ಸೇರಿ ಮೂವರು ಕಾಶ್ಮೀರಿ ಪಂಡಿತರ ಹತ್ಯೆಯಾಗಿದೆ. ಸರಕಾರಿ ಕಛೇರಿ ಸ್ಥಳಕ್ಕೇ ನುಗ್ಗಿ ಇಬ್ಬರು ವ್ಯಕ್ತಿಗಳು ರಾಹುಲ್ ಭಟ್‌ರನ್ನು ಗುಂಡಿಟ್ಟು ಸಾಯಿಸಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಎರಡು ದಿನಗಳ ಹಿಂದೆ ಈ ಇಬ್ಬರು ದಾಳಿಕೋರರನ್ನು ಎನ್‌ಕೌಂಟರ್‌ನಲ್ಲಿ ಸಾಯಿಸಿದ್ದಾಗಿ ಪೊಲೀಸರು ಹೇಳಿದ್ಧಾರೆ. ಈ ಇಬ್ಬರು ವ್ಯಕ್ತಿಗಳು ಪಾಕಿಸ್ತಾನದ ಉಗ್ರರೆಂದು ಅವರು ಮಾಹಿತಿ ನೀಡಿದ್ದಾರೆ.

'ಮಸೀದಿ ಹಿಂದೆ ಬಿದ್ದ ಸರಕಾರ'
ಮೆಹಬೂಬ ಮುಫ್ತಿ ಇದೇ ವೇಳೆ, ಜ್ಞಾನವಾಪಿ ಮಸೀದಿ ವಿಚಾರವನ್ನು ಪ್ರಸ್ತಾಪಿಸಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ನೈಜ ಸಮಸ್ಯೆಗಳನ್ನು ಮರೆಮಾಚಲು ಕೇಂದ್ರ ಸರಕಾರ ಹಿಂದು ಮುಸ್ಲಿಮ್ ವಿಚಾರವನ್ನು ಕೆದಕುತ್ತಿದ್ದಾರೆ. ಈಗ ಜ್ಞಾನವಾಪಿ ಮಸೀದಿ ಹಿಂದೆ ಬಿದ್ದಿದ್ದಾರೆ. ನಮ್ಮ ಎಲ್ಲಾ ಮಸೀದಿಗಳ ಮೇಲೂ ಅವರ ಕಣ್ಣು ಬಿದ್ದಿದೆ. ನೀವು ಕಣ್ಣಿಟ್ಟಿರುವ ಎಲ್ಲಾ ಮಸೀದಿಗಳ ಪಟ್ಟಿ ನಮಗೆ ಕೊಡಿ. ನಾವು ಪ್ರಾರ್ಥಿಸುವ ಸ್ಥಳದಲ್ಲೆಲ್ಲಾ ದೇವರು ಇದ್ದಾನೆ" ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜ್ಞಾನವಾಪಿ ಮಸೀದಿಯಲ್ಲಿ ವಾರಣಾಸಿ ಕೋರ್ಟ್ ಅಣತಿಯಂತೆ ಸರ್ವೆ ನಡೆದಿದೆ. ಮಸೀದಿ ಆವರಣದಲ್ಲಿ ಶಿವಲಿಂಗವೊಂದು ಪತ್ತೆಯಾಗಿದೆ ಎಂದು ಹಿಂದೂ ಅರ್ಜಿದಾರರ ಪರ ವಕೀಲರು ಮಾಹಿತಿ ನೀಡಿದ್ದಾರೆ. ಸದ್ಯ ಈ ಸ್ಥಳವನ್ನು ಸೀಲ್ ಮಾಡಲಾಗಿದೆ. ಇಲ್ಲಿ ಪತ್ತೆಯಾಗಿರುವುದು ಶಿವಲಿಂಗವಲ್ಲ, ಬದಲಾಗಿ ಅದು ಒಂದು ಕಾರಂಜಿ. ಇವು ಪ್ರತಿಯೊಂದು ಮಸೀದಿಯಲ್ಲೂ ಇರುತ್ತದೆ ಎಂದು ಅಸಾದುದ್ದೀನ್ ಒವೈಸಿ ಸೇರಿದಂತೆ ಕೆಲವರು ವಾದಿಸಿದ್ದಾರೆ.
ಇಂದು ಮಸೀದಿ ಸಮೀಕ್ಷೆ ಕಾರ್ಯಕ್ಕೆ ತಡೆ ನೀಡಬೇಕೆಂದು ಅಂಜುಮ್ ಇಂತೇಜಾಮಿಯಾ ಮಸ್ಜಿದ್ ಕಮಿಟಿಯವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ಮಂಗಳವಾರ ಸುಪ್ರೀಂ ನ್ಯಾಯಪೀಠ ಕೈಗೆತ್ತಿಕೊಳ್ಳಲಿದೆ. ಸಮೀಕ್ಷೆ ಕಾರ್ಯ ಈಗಾಗಲೇ ಮುಕ್ತಾಯಗೊಂಡಿರುವುದರಿಂದ ಕೋರ್ಟ್ ತೀರ್ಪು ಏನಿರುತ್ತದೆ ಎಂಬುದು ಕುತೂಹಲ ಮೂಡಿಸಿದೆ.
(ಒನ್ಇಂಡಿಯಾ ಸುದ್ದಿ)