Breaking- ಜಮ್ಮುವಿನ ಡೋಡಾ ಉದ್ವಿಗ್ನ; ಭದ್ರವಾಹ್ನಲ್ಲಿ ಕರ್ಫ್ಯೂ ಹೇರಿಕೆ
ಶ್ರೀನಗರ, ಜೂನ್ 9: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಡೋಡಾ ಜಿಲ್ಲೆಯ ಭದ್ರವಾಹ್ ಪಟ್ಟಣದಲ್ಲಿ ಕರ್ಫ್ಯೂ ಹೇರಲಾಗಿದೆ. ಕೆಲ ದುಷ್ಕರ್ಮಿಗಳು ಕೋಮುಗಲಭೆ ಸೃಷ್ಟಿಸುವ ಪ್ರಯತ್ನ ನಡೆಸಿದ ಹಿನ್ನೆಲೆಯಲ್ಲಿ ಭದ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೆ ತರಲಾಗಿದೆ. ಸೇನಾ ಪಡೆಗಳಿಂದ ನಗರದಲ್ಲಿ ಫ್ಲ್ಯಾಗ್ ಮಾರ್ಚ್ ನಡೆಸಲಾಗಿದೆ.
ಪೊಲೀಸರು ಎಚ್ಚರಿಕೆಯಿಂದ ಪರಿಸ್ಥಿತಿ ಗಮನಿಸುತ್ತಿದ್ದು, ನಿಷೇಧಾಜ್ಞೆ ನಿಯಮ ಮೀರಿ ಯಾರಾದರೂ ನಡೆದುಕೊಂಡಲ್ಲಿ ಬಿಗಿಕ್ರಮ ಕೈಗೊಳ್ಳಲು ನಿರ್ಧರಿಸಿದ್ಧಾರೆ. ಕಾನೂನನ್ನು ಯಾರೇ ಮುರಿದರೂ ಸುಮ್ಮನೆ ಬಿಡುವುದಿಲ್ಲ ಎಂದು ಪೊಲೀಸರು ಮತ್ತು ಆಡಳಿತ ಎಚ್ಚರಿಕೆ ನೀಡಿದ್ದಾರೆ.
ಮುಸ್ಲಿಮರು ಮುಕ್ಕಾಲು ಪಾಲು ಇರುವ ಈ ಪಟ್ಟಣ ಕೆಲ ದಿನಗಳಿಂದ ಉದ್ವಿಗ್ನ ಸ್ಥಿತಿಯಲ್ಲಿದೆ. ಡೋಡಾ ಜಿಲ್ಲೆಯ ವಾಸುಕಿ ನಾಗ್ ದೇವಸ್ಥಾನಕ್ಕೆ ಇತ್ತೀಚೆಗೆ ದುಷ್ಕರ್ಮಿಗಳು ಹಾನಿ ಮಾಡಿದ್ದರು. ಇದರ ಚಿತ್ರಗಳು ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹರಿದಸಾಡಿದ್ದವು. ಅದರ ವಿರುದ್ಧ ಹಲವು ಕಡೆ ಪ್ರತಿಭಟನೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಮಸೀದಿಯಿಂದ ಕೆಲ ಪ್ರಕಟಣೆಗಳು ನೀಡಲಾಗಿವೆ ಎಂದು ತಿಳಿಸಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿದೆ. ಇದು ಸಾಕಷ್ಟು ಕೋಮುಸಾಮರಸ್ಯ ಕದಡುತ್ತಿದೆ ಎನ್ನಲಾಗಿದೆ. ಈ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದವರ ವಿರುದ್ಧ ಭದರವಾಹ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇನ್ನು, ವಾಸುಕಿ ನಾಗ ದೇವಸ್ಥಾನ ಹಾನಿ ಮಾಡಿದ ಘಟನೆಯ ತನಿಖೆ ನಡೆಸಲು ಸೋಮವಾರ ಆರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಆದಷ್ಟೂ ಶೀಘ್ರ ತನಿಖೆ ಮುಗಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅದೇ ವೇಳೆ, ದೇವಸ್ಥಾನಕ್ಕೆ ಹಾನಿ ಮಾಡಿದ್ದನ್ನು ಖಂಡಿಸಿ ಸೋಮವಾರ ಭದ್ರವಾಹದ ಶ್ರೀ ಸನಾತನ್ ಧರಂ ಸಭಾ ಸಂಘಟನೆ ನೀಡಿದ ಮುಷ್ಕರ ಕರೆಗೆ ಪಟ್ಟಣದ ಅನೇಕ ವ್ಯಾಪಾರಿಗಳು ತಮ್ಮಾ ಅಂಗಡಿ ಬಂದ್ ಮಾಡಿ ಬೆಂಬಲ ಸೂಚಿಸಿದ್ದರು.
(ಒನ್ಇಂಡಿಯಾ ಸುದ್ದಿ)