
ಮೆಸ್ಸಿ ಆಗಮನದಿಂದ ದಾಖಲೆಯ ಆದಾಯ ಕಂಡ ಪಿಎಸ್ಜಿ
ಪ್ಯಾರಿಸ್,ಜೂನ್ 25: ವಿಶ್ವದ ಶ್ರೇಷ್ಠ ಪುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿರುವ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ತೊರೆದು ವರ್ಷ ಉರುಳಿದೆ. ಮೆಸ್ಸಿ 21 ವರ್ಷಗಳ ಕಾಲ ಬಾರ್ಸಿಲೋನ ಪರವೇ ಆಡಿದ್ದರಿಂದ ಅವರಿಲ್ಲದ ಕ್ಲಬ್ ಊಹಿಸಲು ಅಭಿಮಾನಿಗಳಿಗೆ ಕಷ್ಟಕರವಾಗಿತ್ತು.
ಆದರೆ ನಷ್ಟದಲ್ಲಿದ್ದ ಕ್ಲಬ್ ದುಬಾರಿಯಾಗಿದ್ದ ಮೆಸ್ಸಿಯನ್ನು ತಂಡದಿಂದ ಕೈಬಿಡದೇ ಬೇರೆ ದಾರಿಯಿರಲಿಲ್ಲ. ಇಷ್ಟವಿಲ್ಲದಿದ್ದರೂ ಬಾರ್ಸಿಲೋನ ತೊರೆದಿದ್ದ ಮೆಸ್ಸಿ, ಕಳೆದ ವರ್ಷ ಆಗಸ್ಟ್ನಲ್ಲಿ ಪ್ರಾನ್ಸ್ ಕ್ಲಬ್ ಪಿಎಸ್ಜಿ ಸೇರಿಕೊಂಡಿದ್ದರು.
ಒಂದು ಕಾಲದ ಅಂತಾರಾಷ್ಟ್ರೀಯ ಅಂಪೈರ್ ಈಗ ಬಟ್ಟೆ, ಶೂ ಅಂಗಡಿ ಓನರ್
7 ಬಾರಿಯ ಬಲೋನ್ ಡಿ'ಆರ್ ವಿನ್ನರ್ ಮೆಸ್ಸಿ ಪಿಎಸ್ಜಿ ಜೊತೆ 2 ವರ್ಷಗಳ ಒಪ್ಪಂದದಲ್ಲಿದ್ದು, ಕ್ಲಬ್ ಸುಮಾರು 35 ಮಿಲಿಯನ್ ಯೂರೋ( ಸುಮಾರು 305 ಕೋಟಿ ರೂ) ವ್ಯಯಿಸಿ ಅರ್ಜೆಂಟೀನಾ ಆಟಗಾರನನ್ನು ಪಡೆದುಕೊಂಡಿದೆ. ಇನ್ನು ಅರ್ಜೆಂಟೀನಾ ನಾಯಕ ಮೈದಾನದಲ್ಲಿ ಕ್ಲಬ್ ನಿರೀಕ್ಷಿಸಿದಷ್ಟು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು.
ಆದರೆ ಮೈದಾನದ ಹೊರಗಿನ ಲೆಕ್ಕಾಚಾರದಲ್ಲಿ ಕ್ಲಬ್ಗೆ ಭಾರೀ ನೆರವಾಗಿದ್ದಾರೆ. ಮೆಸ್ಸಿ ಪ್ಯಾರಿಸ್ ದೈತ್ಯ ಕ್ಲಬ್ ಸೇರಿದ ನಂತರ ಕ್ಲಬ್ ಆದಾಯ ಸುಮಾರು 700 ಮಿಲಿಯನ್ ಯೂರೋ ಆದಾಯವನ್ನು ಗಳಿಸಿಕೊಂಡಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಇದರ ಮೊತ್ತ 5 ಸಾವಿರ ಕೋಟಿ ರೂಗಳಿಗಿಂತಲೂ ಹೆಚ್ಚಾಗಿದೆ.
ಫುಟ್ಬಾಲ್ ತಾರೆ ಮೆಸ್ಸಿಗೆ 35ನೇ ಜನ್ಮದಿನ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯ

ಮೆಸ್ಸಿ ಸೇರ್ಪಡೆ ನಂತರ 700 ಮಿಲಿಯನ್ ಯೂರೋ ಆದಾಯ
35 ವರ್ಷದ ಮೆಸ್ಸಿ ಕಳೆದ ಬೇಸಿಗೆಯಲ್ಲಿ ಬಾರ್ಸಿಲೋನಾದಿಂದ ಪಿಎಸ್ಜಿಗೆ ವರ್ಗಾವಣೆಗೊಂಡಿದ್ದರು. ಪಿಎಸ್ಜಿ ಸೇರಿದ ನಂತರ ಅವರು 34 ಪಂದ್ಯಗಳಲ್ಲಿ ಕೇವಲ 11 ಗೋಲು ಸಿಡಿಸಿದ್ದರೆ, 15 ಅಸಿಸ್ಟ್ಸ್ ಮಾಡಿದ್ದಾರೆ. ಮೈದಾನದಲ್ಲಿ ಅವರ ಸಾಧನೆ ಹೇಳಿಕೊಳ್ಳುವಷ್ಟಾಗಿಲ್ಲವಾದರೂ ಕ್ಲಬ್ಗೆ ದಾಖಲೆಯ ಆದಾಯವನ್ನು ತಂದುಕೊಟ್ಟಿದೆ. ಮೆಸ್ಸಿ ಆಗಮನದ ನಂತರ ಕ್ಲಬ್ 700 ಮಿಲಿಯನ್ ಆದಾಯ ಗಳಿಸಿರುವುದನ್ನ ಸ್ವತಃ ಕ್ಲಬ್ ಅಧ್ಯಕ್ಷ ನಾಸಿರ್ ಅಲ್ ಖೆಲೈಫಿ ಮಾರ್ಕಾ ವೆಬ್ ಸೈಟ್ಗೆ ತಿಳಿಸಿದ್ದಾರೆ.

ಕ್ಲಬ್ನ ಆದಾಯ ಎಲ್ಲಿಲ್ಲಿ ಹೆಚ್ಚಳ
ಮೆಸ್ಸಿ ಚಿರಪರಿಚಿತರಾಗಿದ್ದಾರೆ. ಹಾಗಾಗಿ ಅವರ ಸೇರ್ಪಡೆಯೊಂದಿಗೆ ಕ್ಲಬ್ನ ಜನಪ್ರಿಯತೆಯೂ ಕೂಡ ಕೂಡ ದುಪ್ಪಟ್ಟಾಗಿದೆ. ಆದ್ದರಿಂದ ಕ್ಲಬ್ ಸಾಕಷ್ಟು ಸ್ಪಾನ್ಸರ್ಶಿಪ್ ಸೆಳೆಯುವಲ್ಲಿ ಮತ್ತು ಸರಕುಗಳ ಮಾರಾಟ ಹೆಚ್ಚಳವಾಗಿದೆ. ಈ ಋತುವಿನಲ್ಲಿ ಪಿಎಸ್ಜಿ ಗಳಿಸಿರುವ ಆದಾಯವನ್ನ(700 ಮಿಲಿಯರ್ ಯೂರೋ) ಹಿಂದೆ ಗಳಿಸಿರಲಿಲ್ಲ, ಇದು ದಾಖಲೆಯ ಆದಾಯ ಎಂದೂ ಮೂಲಗಳು ತಿಳಿಸಿವೆ.
ಮೆಸ್ಸಿ ಪ್ಯಾರೀಸ್ ಜೈಂಟ್ಸ್ ಸೇರಿದ ಮೇಲೆ 10 ಹೊಸ ಸ್ಪಾನ್ಸರ್ಗಳು ಕ್ಲಬ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. "ನಾವು 3ರಿಂದ 5 ಮಿಲಿಯನ್ ಯೋರೋ ನಡುವಿನ ಒಪ್ಪಂದಗಳನ್ನು ಪಡೆಯಬಹುದಾದ ಪ್ರದೇಶದಲ್ಲಿ, ಪ್ರಸ್ತುತ 5ರಿಂದ 8 ಮಿಲಿಯನ್ ಪಡೆಯುವತ್ತ ಸಾಗಿದ್ದೇವೆ. ಇದು ಖಂಡಿತ ನಾವು ಮೆಸ್ಸಿ ಆಗಮನದ ನಂತರ ಬೆಳವಣಿಗೆ ಕಂಡಿದ್ದೇವೆ ಎಂದು ಕ್ಲಬ್ನ ಕಲ್ಬ್ ಸ್ಪಾನ್ಸರ್ಶಿಪ್ ನಿರ್ದೇಶಕ ಮಾರ್ಕ್ ಆರ್ಮಸ್ಟ್ರಾಂಗ್ ಹೇಳಿದ್ದಾರೆ.

ಸರಕುಗಳ ಮಾರಾಟದಲ್ಲಿ ಶೇ.60 ರಷ್ಟು ಹೆಚ್ಚಳ
ಇನ್ನು ಮೆಸ್ಸಿ ಸೇರ್ಪಡೆಯೂ ತಂಡದ ಸರಕುಗಳಾದ ಜರ್ಸಿಗಳ ಮಾರಾಟ ಪ್ರಮಾಣ ಕೂಡ ಕಳೆದ ಆವೃತ್ತಿಗೆ ಹೋಲಿಸಿದರೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಅವಧಿಯಲ್ಲಿ ಕ್ಲಬ್ ಸುಮಾರು 10 ಲಕ್ಷ ಶರ್ಟ್ಸ್ ಮಾರಾಟ ಮಾಡಿದೆ. ಅದರಲ್ಲಿ ಶೇ 60ರಷ್ಟು ಮೆಸ್ಸಿ ಮತ್ತು ಜರ್ಸಿ ನಂಬರ್ 30 ಶರ್ಟ್ಗಳೇ ಹೆಚ್ಚಾಗಿವೆ ಎಂದು ತಿಳಿದುಬಂದಿದೆ.
"ಪಿಎಸ್ಜಿ 2020-21ರ ಋತುವಿನಿಂದ 2021-22ರ ಋತುವಿನ ಅರ್ಧ ಹಂತದಲ್ಲಿ 41 ಮಿಲಿಯನ್ ಯೂರೋ ವ್ಯಾಪಾರ ವಹಿವಾಟುಗಳನ್ನು ಸಾಧಿಸಿದೆ. ಬೇಡಿಕೆಯೂ 30 ರಿಂದ 40% ರಷ್ಟು ಬೆಳೆದಿದೆ . ನಾವು ಈಗಾಗಲೇ ಸಾಕಷ್ಟು ಜರ್ಸಿಗಳನ್ನು ಮಾರಾಟ ಮಾಡಿದ್ದೇವೆ. ಇದು ಬಹುಶಃ ಬೇರೆ ತಂಡಗಳಿಗಿಂತ ಹೆಚ್ಚಾಗಿದೆ. ಇದಕ್ಕೆಲ್ಲಾ ನಾವು ಮೆಸ್ಸಿಗೆ ಧನ್ಯವಾದ ತಿಳಿಸಬೇಕು" ಎಂದು ಆರ್ಮ್ಸ್ಟ್ರಾಂಗ್ ತಿಳಿಸಿದ್ದಾರೆ.

ಸಾಮಾಜಿಕ ಜಾಲಾತಾಣದಲ್ಲಿ ಹಿಂಬಾಲಕರ ಹೆಚ್ಚಳ
ಆದಾಯದಲ್ಲಿ ಮಾತ್ರವಲ್ಲದೆ ಮೆಸ್ಸಿ ಆಗಮನದ ನಂತರ ಪ್ಯಾರಿಸ್ ಸೇಂಟ್ ಜರ್ಮನ್ ಕ್ಲಬ್ನ ಫಾಲೋವರ್ಸ್ ಸಂಖ್ಯೆಯಲ್ಲೂ ಗಣನೀಯ ಪ್ರಗತಿ ಸಾಧಿಸಿದೆ. ಎಲ್ಲಾ ಸಾಮಾಜಿಕ ಜಾಲಾತಾಣಗಳಿಂದ ಪಿಎಸ್ಜಿ 15 ಮಿಲಿಯನ್ ಹೊಸ ಫಾಲೋವರ್ಸ್ಗಳನ್ನು ಪಡೆದುಕೊಂಡು 150 ಮಿಲಿಯನ್ ಗಡಿಯನ್ನು ದಾಟಿದೆ. ಪ್ರತಿವಾರಕ್ಕೆ 1.4 ಮಿಲಿಯನ್ ಫಾಲೋವರ್ಸ್ಗಳನ್ನು ಪಡೆದುಕೊಳ್ಳಿತ್ತಿದೆ. ಟಿಕ್ಟಾಕ್ನಲ್ಲಿ ಪಿಎಸ್ಜಿ 20 ಮಿಲಿಯನ್ ಫಾಲೋವರ್ಸ್ ದಾಟಿದ ಮೊದಲ ಕ್ಲಬ್ ಎನಿಸಿಕೊಂಡಿದೆ ಎಂದು ಆರ್ಮ್ಸ್ಟ್ರಾಂಗ್ ತಿಳಿಸಿದ್ದಾರೆ.
ಇನ್ನು ಇನ್ಸ್ಟಾಗ್ರಾಮ್ನಲ್ಲಿ 38.5 ಮಿಲಿಯನ್ ಫಾಲೋವರ್ಸ್ನಿಂದ 60.9 ಮಿಲಿಯನ್ಗೆ ಏರಿಕೆ ಕಂಡಿದೆ. ಇನ್ನು ಮೆಸ್ಸಿ ಆಗಮನದಿಂದ ಪಂದ್ಯದ ದಿನದ ಟಿಕೆಟ್ಗಳ ಸಂಖ್ಯೆ ಕೂಡ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಎಂದು ತಿಳಿದುಬಂದಿದೆ.