ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿ ಮಾರಿಕಾಂಬಾ ಜಾತ್ರೆ ಸಂಪನ್ನ; ಮೆರವಣಿಗೆಯಲ್ಲಿ ಸಹೋದರಿಯರತ್ತ ತಿರುಗಿ ನೋಡಿದ ಮಾರಮ್ಮ

|
Google Oneindia Kannada News

ಶಿರಸಿ, ಮಾರ್ಚ್ 24: ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಯೆಂಬ ಹೆಗ್ಗಳಿಕೆ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಜಾತ್ರೆ ಬುಧವಾರ ಮಾರಿಕಾಂಬೆಯ ಮೂರ್ತಿಯನ್ನು ಜಾತ್ರಾ ಗದ್ದುಗೆಯಿಂದ ಮೆರವಣಿಗೆಯಲ್ಲಿ ಕೊಂಡೊಯ್ದು, ಊರ ಹೊರವಲಯದಲ್ಲಿ ವಿಸರ್ಜಿಸುವ ಮೂಲಕ ಸುಸಂಪನ್ನಗೊಂಡಿತು.

ಮಾ.15ರಿಂದ ಮಾರಿಕಾಂಬೆಯ ವಿವಾಹ ಮಹೋತ್ಸವದ ಮೂಲಕ ಆರಂಭಗೊಂಡಿದ್ದ ಶಿರಸಿ ಜಾತ್ರೆಯಲ್ಲಿ ಮಾ.16ರಂದು ಮಾರಿಕಾಂಬೆ ಬೀಡ್ಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನಳಾಗಿ 8 ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ್ದಳು.

ಹರಕೆ ಹೊತ್ತವರು ದೇವಿಗೆ ಪ್ರಿಯವಾದ ಉಡಿಸೇವೆ, ಕುಂಕುಮಾರ್ಚನೆಯಂಥ ಸೇವೆಗಳನ್ನು ನೀಡಿ ದೇವಿಯ ಕೃಪೆಗೆ ಪಾತ್ರರಾಗಿದ್ದರು. 9 ದಿನವೂ ವಿಜೃಂಭಣೆಯಿಂದ ನಡೆದ ಜಾತ್ರೆಯ ಕೊನೆಯ ದಿನವಾದ ನಿನ್ನೆ (ಬುಧವಾರ) ಬೆಳಿಗ್ಗೆ 9.30ರವರೆಗೂ ದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಯಿತು.

Uttara Kannada: Famous Sirsi Marikamba Devi Jatre Concludes

ನಂತರ ಸಂಪ್ರದಾಯದಂತೆ ಬಾಬುದಾರ ಮನೆತನದಿಂದ ದೇವಿಗೆ ಕೊನೆಯ ಮಂಗಳಾರತಿ ಮಾಡಿ, ದೇವಿಯನ್ನು ಗದ್ದುಗೆಯ ಪೀಠದಿಂದ ಕೆಳಕ್ಕಿಳಿಸಲಾಯಿತು. ಜಾತ್ರಾ ಮೆರವಣಿಗೆಗೆ ಸೇರಿದ್ದ ಜನಸಂಖ್ಯೆಯ ಶೇ.75ರಷ್ಟು ಜನ ಈ ವಿಸರ್ಜನಾ ಮೆರವಣಿಗೆಯ ವೇಳೆ ಸೇರಿದ್ದರೂ, ಬಾಬುದಾರರು ಒಂಚೂರು ಕೂಡ ಗಲಿಬಿಲಿಗೊಳ್ಳದೆ ದೇವಿಗೆ ಸೇರಿದ ಪೂಜಾ ಸಾಮಗ್ರಿ, ಮಂಟಪ ಕಳಚುವುದು, ಕಾಣಿಕೆ ಹುಂಡಿ ಸೇರಿದಂತೆ ಎಲ್ಲವನ್ನು ಗದ್ದುಗೆಯಿಂದ ದೇವಸ್ಥಾನಕ್ಕೆ ಅಚ್ಚುಕಟ್ಟಾಗಿ ಲಾರಿಯಲ್ಲಿ ಸಾಗಿಸಿದರು.

ಮಾರಿಕಾಂಬಾ ದೇವಿಯ ಪತಿ ಎಂದು ನಂಬಲಾಗುವ ಮಾರಿಕೋಣದ ರಕ್ತವನ್ನು ಸಿರಿಂಜ್‌ನಲ್ಲಿ ತಂದು ದೇವಿಯ ಎಡಭಾಗದ ಮೂಲೆಯಲ್ಲಿದ್ದ ಹುಲುಸು ಪ್ರಸಾದಕ್ಕೆ ಮಿಶ್ರಣ ಮಾಡಿದರು. ನಂತರ ಓಡುತ್ತಾ ಗದ್ದೆಗೆ ತೆರಳಿದ ಬಾಬುದಾರರ ಮನೆತನದವರು ಆ ಹುಲುಸು ಪ್ರಸಾದವನ್ನು ಸಾಂಕೇತಿಕವಾಗಿ ಗದ್ದೆಗಳಲ್ಲಿ ಬೀರಿ ಬಂದರು. ಕೃಷಿ ಭೂಮಿಯಲ್ಲಿ ಈ ಹುಲುಸು ಪ್ರಸಾದ ಬೀರಿದರೆ ಉತ್ತಮ ಬೆಳೆ ಬರುತ್ತದೆಂಬ ನಂಬಿಕೆ ಇಲ್ಲಿನವರಲ್ಲಿದೆ. ಹೀಗಾಗಿ ಮೆರವಣಿಗೆಗೆ ಬಂದಿದ್ದ ಅನೇಕರು ಈ ಹುಲುಸು ಪ್ರಸಾದವನ್ನು ಪಡೆದರು.

Uttara Kannada: Famous Sirsi Marikamba Devi Jatre Concludes

ಇನ್ನು ಜಾತ್ರಾ ಗದ್ದುಗೆಯಿಂದ ದೇವಿ ಹೊರಬಂದು ರಥದ ಎದುರು ನಿಂತು ಹಿಂತಿರುಗಿ ನೋಡುತ್ತಿದ್ದಂತೆ ಮಾತಂಗಿ ಚಪ್ಪರಕ್ಕೆ ಬೆಂಕಿ ಹಚ್ಚಲಾಯಿತು. ಉರಿಯುತ್ತಿದ್ದ ಚಪ್ಪರವನ್ನು ನೋಡಿದ ತಾಯಿ ಮಾರಿಕಾಂಬೆ, ರೌದ್ರರೂಪ ತಾಳಿ ನಂತರ ಶರವೇಗದಲ್ಲಿ ಮೆರವಣಿಯ ಮೂಲಕ ತೆರಳಿದಳು. ಈ ಮಾತಂಗಿ ಚಪ್ಪರ ಸುಡುವ ಪದ್ಧತಿಯ ಹಿಂದೆ ದೇವಿಯ ಜೀವನದ ಕಥೆಯಿದೆ.

ತನಗೆ ಮೋಸ ಮಾಡಿದನೆಂದು ಪತಿಯನ್ನೇ ಸಂಹಾರಗೈದು ಮನೆಗೇ ಬೆಂಕಿ ಇಟ್ಟು ಮಾರಿಕಾಂಬೆ ಸ್ವವಿಧವೆಯಾದಳು ಎನ್ನುತ್ತದೆ ಪುರಾಣ ಕಥೆಗಳು. ಅದರಂತೆ ಈ ಚಪ್ಪರಕ್ಕೆ ಬೆಂಕಿ ಹಚ್ಚಲಾಗುತ್ತದೆ. ಆ ಕ್ಷಣದಿಂದ ದೇವಿ ವಿಧವೆಯಾದಳು ಎಂದು ನಂಬಲಾಗುತ್ತದೆ. ವಿಸರ್ಜನಾ ಮೆರವಣಿಗೆಯಲ್ಲಿ ಸೇರಿದ್ದ ಲಕ್ಷಾಂತರ ಭಕ್ತರಲ್ಲಿ ಪ್ರಮುಖವಾಗಿ ಮಹಿಳೆಯರು ಅಳುತ್ತಾ, ತಾಯಿ ವಿಧವೆಯಾದ ನೋವನ್ನು ತೋಡಿಕೊಂಡರು.

Uttara Kannada: Famous Sirsi Marikamba Devi Jatre Concludes

ಇನ್ನು ಅಲ್ಲಿಂದ ದೇವಿಯ ಸಹೋದರಿಯರೆಂದು ನಂಬಲಾದ ಮರ್ಕಿದುರ್ಗಿ ಕಟ್ಟೆಯ ಬಳಿ ಮೆರವಣಿಗೆ ತೆರಳುತ್ತಿದ್ದಂತೆ ಅವರತ್ತ ಮತ್ತೆ ಮಾರಿಕಾಂಬೆ ತಿರುಗಿ ನೋಡಿದಾಗ ನೆರೆದಿದ್ದವರೆಲ್ಲ ಒಮ್ಮೆ ಚಕಿತಗೊಂಡು, ಚಪ್ಪಾಳೆ ತಟ್ಟಿದರು. ನಂತರ ಊರ ಹೊರವಲಯಕ್ಕೆ ದೇವಿಯನ್ನು ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಮಾರಿಗುಡಿಯಿಂದ ಮುಂದಕ್ಕೆ ಮಹಿಳೆಯರು- ಮಕ್ಕಳಿಗೆ ಸಂಪ್ರದಾಯದಂತೆ ಪ್ರವೇಶ ನಿಷಿದ್ಧವಿತ್ತು. ಕಟ್ಟೆಯೊಂದರ ಮೇಲೆ ದೇವಿಯ ಚಿನ್ನಾಭರಣಗಳನ್ನು ತೆಗೆಯುವ ಮೂಲಕ ವಿಸರ್ಜನಾ ಮೆರವಣಿಗೆ ಪೂರ್ಣಗೊಳಿಸಲಾಯಿತು.

Recommended Video

Putin ಹತ್ಯೆಗೆ ರಷ್ಯಾದಲ್ಲೇ ಸಂಚು:ಭಯಕ್ಕೆ ಅಡುಗೆಯವರನ್ನೇ ಕೆಲಸದಿಂದ‌ ತೆಗೆದ ಪುಟಿನ್ | Oneindia Kannada

ಗಂಡನ ಸಂಹಾರ ಮಾಡಿ ವಿಧವೆಯಾದ ಮಾರಿಕಾಂಬೆಯನ್ನು ಸೂತಕ ಕಳೆದು 11 ದಿನಕ್ಕೆ, ಅಂದರೆ ಏ.2ರಂದು ಯುಗಾದಿ ಪ್ರತಿಷ್ಠಾಪನಾ ದಿನದಂದು ಬೆಳಿಗ್ಗೆ 8.27ರ ಶುಭ ಮುಹೂರ್ತದಲ್ಲಿ ದೇವಾಲಯದ ಗರ್ಭಗುಡಿಯಲ್ಲಿ ಮರು ಪ್ರತಿಷ್ಠಾಪನೆ ಮಾಡಲಾಗುತ್ತದೆ. ತದನಂತರದಿಂದ ಸಾರ್ವಜನಿಕರಿಗೆ ದೇವಿಯ ದರ್ಶನ, ಸೇವೆಗಳು ಎಂದಿನಂತೆ ಆರಂಭಗೊಳ್ಳಲಿದೆ.

English summary
Sirsi Marikamba Jatre in Uttara Kannada District, which is considered to be South India's largest fair Concludes on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X