ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

‘ಕೈ’ ಹಿಡಿದ ಮಧು: ಉತ್ತರ ಕನ್ನಡ ರಾಜಕಾರಣದ ಕಥೆಯೇನು?

|
Google Oneindia Kannada News

ಶಿರಸಿ, ಮಾರ್ಚ್ 13: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಪುತ್ರ, ಮಾಜಿ ಶಾಸಕ, ಜೆಡಿಎಸ್ ಮುಖಂಡರಾಗಿದ್ದ ಮಧು ಬಂಗಾರಪ್ಪ ಕೊನೆಗೂ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಬೃಹತ್ ಸಭೆಯಲ್ಲಿ ಮಧು ಬಂಗಾರಪ್ಪ ಪಕ್ಷ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣ ಏನಾಗಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

Recommended Video

ನಾನು, ಗೀತಾ ಶಿವರಾಜ್‌ಕುಮಾರ್‌ ಇಬ್ಬರೂ ಕಾಂಗ್ರೆಸ್‌ ಸೇರುತ್ತಿದ್ದೇವೆ ಎಂದ ಮಾಜಿ ಶಾಸಕ ಮಧು ಬಂಗಾರಪ್ಪ | Oneindia Kannada

ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷರಾಗಿದ್ದ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಪ್ತರಾಗಿದ್ದ ಮಧು ಬಂಗಾರಪ್ಪ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ನಂತರ ಜೆಡಿಎಸ್ ಪಕ್ಷದಿಂದ ದೂರ ಉಳಿದಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದಿಂದ ರಾಜಕೀಯ ಬಲಪಡಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಪಕ್ಷ ಬಿಡಲು ತೀರ್ಮಾನಿಸಿ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದರು. ಗುರುವಾರ (ಮಾ.11) ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಮಧು, ಪಕ್ಷ ಸೇರ್ಪಡೆಯ ಕುರಿತು ಚರ್ಚೆ ನಡೆಸಿದರು. ಅಲ್ಲದೇ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಭೇಟಿ ನಂತರ ಸ್ಪಷ್ಟನೆ ನೀಡಿದರು. ಇನ್ನು ಶುಕ್ರವಾರ (ಮಾ.12) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಸಹ ಭೇಟಿ ನೀಡಿ ಪಕ್ಷ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುವ ಸಾಧ್ಯತೆ

ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುವ ಸಾಧ್ಯತೆ

ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷ ಸೇರ್ಪಡೆ ಉತ್ತರ ಕನ್ನಡ ಜಿಲ್ಲೆಯ ರಾಜಕಾರಣದ ಮಟ್ಟಿಗೂ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಕಳೆದ ಚುನಾವಣೆ ವೇಳೆಗೆ ಜೆಡಿಎಸ್ ಪಕ್ಷ ಸಂಘಟನೆಯ ನೇತೃತ್ವವನ್ನು ಮಧು ಬಂಗಾರಪ್ಪನವರೇ ವಹಿಸಿಕೊಂಡಿದ್ದರು. ಮಧು ಬಂಗಾರಪ್ಪನವರ ಜೊತೆ ಮಾತುಕತೆ ನಡೆಸಿಯೇ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದರು. ಅಲ್ಲದೇ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಮೊಮ್ಮಗ ಶಶಿಭೂಷಣ್ ಹೆಗಡೆ, ಕುಮಟಾದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರದೀಪ್ ನಾಯಕ್ ಸೇರಿದಂತೆ ಜಿಲ್ಲೆಯ ಹಲವು ಜೆಡಿಎಸ್ ಮುಖಂಡರು ಮಧು ಬಂಗಾರಪ್ಪನವರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಸದ್ಯ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಜಿಲ್ಲೆಯ ತಮ್ಮ ಆಪ್ತ ಬಳಗದ ನಾಯಕರುಗಳು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷರ ಮುದ್ರೆ; ಡಿಕೆಶಿ ಕೊಟ್ಟ ಅಭಯವೇನು?ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷರ ಮುದ್ರೆ; ಡಿಕೆಶಿ ಕೊಟ್ಟ ಅಭಯವೇನು?

ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಬಲ ಬಂದಂತಾಗಲಿದೆ

ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಬಲ ಬಂದಂತಾಗಲಿದೆ

ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷ ಸೇರ್ಪಡೆ ಸಂಬಂಧ ಕೆಲ ತಿಂಗಳುಗಳಿಂದಲೇ ಚರ್ಚೆ ನಡೆಸುತ್ತಿದ್ದು, ಜಿಲ್ಲೆಯ ತಮ್ಮ ಆಪ್ತ ಬಳಗದ ನಾಯಕರ ಜೊತೆ ಸಹ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಮಧು ಬಂಗಾರಪ್ಪನವರ ಜೊತೆ ಜಿಲ್ಲೆಯ ಅವರ ಆಪ್ತ ಬಳಗದ ನಾಯಕರು ಕಾಂಗ್ರೆಸ್ ಸೇರ್ಪಡೆಯಾದರೆ ಜಿಲ್ಲೆಯಲ್ಲಿ ಶಿರಸಿ, ಕಾರವಾರ ಹಾಗೂ ಕುಮಟಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಬಲ ಬಂದಂತಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್

ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್

ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಫ್ಲಸ್ ಆಗಲಿದೆ ಎನ್ನುವ ಮಾತು ಕೇಳಿ ಬಂದಿದೆ. ಈಡಿಗ (ನಾಮಧಾರಿ) ಸಮುದಾಯಕ್ಕೆ ಇಂದಿಗೂ ದೊಡ್ಡ ನಾಯಕರೆಂದರೆ ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪನವರು. ಜಿಲ್ಲೆಯಲ್ಲಿ ಇಂದಿಗೂ ಬಂಗಾರಪ್ಪನವರ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಲ್ಲದೇ ಬಂಗಾರಪ್ಪನವರ ಪತ್ನಿ ದಿವಂಗತ ಶಕುಂತಲಾ ಬಂಗಾರಪ್ಪ ಸಹ ಶಿರಸಿ ಮೂಲದವರು. ಮಧು ಬಂಗಾರಪ್ಪನವರ ಕಾಂಗ್ರೆಸ್ ಪಕ್ಷ ಸೇರ್ಪಡೆಯಿಂದ ಜಿಲ್ಲೆಯಲ್ಲಿ ನಾಮಧಾರಿ ಸಮುದಾಯದ ಮತ ಬ್ಯಾಂಕ್‌ಗಳನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ಸಹಕಾರಿಯಾಗಲಿದೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಗೀತಾ ಶಿವರಾಜ್‌ ಕುಮಾರ್ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಗೀತಾ ಶಿವರಾಜ್‌ ಕುಮಾರ್

ನಾಮಧಾರಿ ಮತಗಳೇ ಪ್ರಮುಖ

ನಾಮಧಾರಿ ಮತಗಳೇ ಪ್ರಮುಖ

ಜಿಲ್ಲೆಯ ಶಿರಸಿ, ಯಲ್ಲಾಪುರ, ಕುಮಟಾ, ಭಟ್ಕಳ ಹಾಗೂ ಕಾರವಾರ ಕ್ಷೇತ್ರದಲ್ಲಿ ನಾಮಧಾರಿ ಮತಗಳೇ ಪ್ರಮುಖ ಪಾತ್ರ ವಹಿಸಿರುತ್ತದೆ. ಅದರಲ್ಲೂ ಶಿರಸಿ, ಕುಮಟಾ ಹಾಗೂ ಭಟ್ಕಳ ಕ್ಷೇತ್ರದಲ್ಲಿ ನಾಮಧಾರಿ ಸಮುದಾಯದ ಮತಗಳೇ ಅತ್ಯಧಿಕ. ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿರುವುದು ಈ ಕ್ಷೇತ್ರಗಳಲ್ಲಿ ನಾಮಧಾರಿ ಸಮುದಾಯದ ಮತಗಳನ್ನು ಕಾಂಗ್ರೆಸ್ ಪಕ್ಷ ಸೆಳೆಯಲು ಸಹಕಾರಿಯಾಗಲಿದೆ ಎನ್ನಲಾಗಿದ್ದು, ಚುನಾವಣೆಯಲ್ಲಿ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.

English summary
Madhu Bangarappa, son of former chief minister S.Bangarappa, has finally decided to leave the JDS and join the Congress party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X