• search
  • Live TV
ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗ್ರಾಮ ಪಂಚಾಯತ್ ಚುನಾವಣೆ ಕುರಿತು ಶಿರಸಿಯಲ್ಲಿ ಡಿಕೆಶಿ ಮಹತ್ವದ ಹೇಳಿಕೆ!

|

ಶಿರಸಿ, ನ. 28: ದೊಡ್ಡ ದೊಡ್ಡ ನಾಯಕರ ಹಿಂದೆ ತಿರುಗಾಡುವವರು ನಾಯಕರಾಗುವುದಿಲ್ಲ. ಬೂತ್ ಮಟ್ಟದಲ್ಲಿ ಪಕ್ಷದ ಅಭ್ಯರ್ಥಿಗೆ ಮುನ್ನಡೆ ತಂದುಕೊಡುವವನೇ ನಿಜವಾದ ನಾಯಕ. ಪಕ್ಷ ಭವಿಷ್ಯದಲ್ಲಿ ಇಂತಹವರಿಗೆ ಆದ್ಯತೆ ನೀಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಶಿರಸಿಯಲ್ಲಿ ಶನಿವಾರ ನಡೆದ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 'ರಾಜಕೀಯವನ್ನು ವ್ಯವಸಾಯದಂತೆ ಮಾಡಬೇಕು. ಮಳೆ ಬಂದಾಗ ಹೊಲ ಬಿತ್ತಬೇಕು, ಗೊಬ್ಬರ ಹಾಕಬೇಕು, ಕಳೆ ಕೀಳಬೇಕು. ಅದೇ ರೀತಿ ಪಕ್ಷಕ್ಕಾಗಿ ವರ್ಷಾನುಗಟ್ಟಲೆ ಕೆಲಸ ಮಾಡಿ ನಾಯಕರಾಗಬೇಕು. ಕೇವಲ ಚುನಾವಣೆ ಬಂದಾಗ ನಾಯಕರಾದರೆ ಆಗುವುದಿಲ್ಲ. ಯಾರು ಬೂತ್ ಗಳಲ್ಲಿ ಪಕ್ಷದ ಅಭ್ಯರ್ಥಿಗೆ ಮುನ್ನಡೆ ತಂದುಕೊಡುತ್ತಾನೋ ಅವನೇ ನಿಜವಾದ ನಾಯಕ. ಬೂತ್ ಮಟ್ಟದಲ್ಲಿ ನೀವು ಲೀಡ್ ತಂದುಕೊಡಲು ಆಗದಿದ್ದರೆ ನಾಯಕರಾಗಲು ಹೇಗೆ ಸಾಧ್ಯ? ಎಂದು ಕಾರ್ಯಕರ್ತರಿಗೆ ತಿಳಿಹೇಳಿದರು.

ಪಂಚಾಯ್ತಿ ಮಟ್ಟದಲ್ಲೂ ಮಹಿಳಾ ಘಟಕ ಸೇರಿದಂತೆ ಎಲ್ಲ ಘಟಕ ಆರಂಭವಾಗಬೇಕು. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲು ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಮಹಿಳೆಯರನ್ನು ರಾಜಕೀಯವಾಗಿ ಸಂಘಟಿಸಬೇಕು ಎಂದರು.

ಕೆಡರ್ ಬೇಸ್ ಪಕ್ಷ ಮಾಡುವುದು ಗುರಿ

ಕೆಡರ್ ಬೇಸ್ ಪಕ್ಷ ಮಾಡುವುದು ಗುರಿ

ಪ್ರತಿ ಬೂತ್‌ನಲ್ಲೂ ಡಿಜಿಟಲ್ ಯೂತ್ ಇರಬೇಕು. ಆತ ಬೂತ್ ಮಟ್ಟದ ಸಮಿತಿ ಜತೆ ಕೆಲಸ ಮಾಡಬೇಕು. ಪಕ್ಷವನ್ನು ಕೇಡರ್ ಬೇಸ್ ಮಾಡುವುದೇ ಗುರಿ. ಪರಾಜಿತ ಅಭ್ಯರ್ಥಿಗಳು ತಾವು ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು. ನಿಮ್ಮಿಂದ ಸಾಧ್ಯವಾಗದಿದ್ದರೆ ಬೇರೆಯವರಿಗೆ ಅವಕಾಶ ನೀಡಿ. ನಮಗೆ ಕಾರ್ಯಕರ್ತರು, ಅವರ ಭವಿಷ್ಯ ಮುಖ್ಯ. ಇವರಿಗೊಸ್ಕವಾದರೂ ನಾವು ತ್ಯಾಗ ಮಾಡಬೇಕು.

ಇದು ಕಾಂಗ್ರೆಸ್ ಇತಿಹಾಸ ಇರುವ ಜಿಲ್ಲೆ. ಇಲ್ಲಿ ಸಂಘಟನೆ ಮಾಡಿದರೆ ಮತ್ತೆ ಪಕ್ಷ ಗೆಲ್ಲಲಿದೆ. ಸದ್ಯದಲ್ಲೇ ಅಧಿವೇಶನ ಆರಂಭವಾಗಲಿದ್ದು, ನಾವು ನಮ್ಮ ಹೋರಾಟ ಮಾಡುತ್ತೇವೆ. ತೇರದಾಳದಲ್ಲಿ ಪಾಲಿಕೆ ಸದಸ್ಯೆ, ಹೆಣ್ಣು ಮಗಳು ಮತ ಚಲಾಯಿಸಲು ಹೋದಾಗ ಆಕೆಯನ್ನು ಯಾವ ರೀತಿ ಎಳೆದಾಡಿದ್ದಾರೆ. ಈವರೆಗೂ ಈ ಸರ್ಕಾರ ಅವರನ್ನು ಬಂಧಿಸಿಲ್ಲ. ಇದೇನಾ ನಿಮ್ಮ ಆಡಳಿತ ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಕೇಳಲು ಬಯಸುತ್ತೇನೆ ಎಂದರು.

ಎಲ್ಲೆಡೆ ಬ್ಲಾಕ್ ಕಾಂಗ್ರೆಸ್ ಕಚೇರಿ

ಎಲ್ಲೆಡೆ ಬ್ಲಾಕ್ ಕಾಂಗ್ರೆಸ್ ಕಚೇರಿ

ಕಾಂಗ್ರೆಸ್ ಪಕ್ಷದಲ್ಲಿ ಸಹಕಾರಿ, ಚಾಲಕರ ವಿಭಾಗವನ್ನು ಆರಂಭಿಸಲು ತೀರ್ಮಾನಿಸಿದ್ದೇವೆ. ಇನ್ನು ಎಲ್ಲ ಬ್ಲಾಕ್ ಮಟ್ಟದಲ್ಲೂ ಪಕ್ಷದ ಕಚೇರಿ ಇರಲೇಬೇಕು. ಕಾಂಗ್ರೆಸ್ ಕಚೇರಿ ಅಂದರೆ ನಮಗೆ ದೇವಾಲಯ ಇದ್ದಂತೆ. ಇದಕ್ಕಾಗಿ ನಾವು ಭಿಕ್ಷೆ ಎತ್ತಿ ಆದರು ಸರಿ ಹಣ ನೀಡುತ್ತೇವೆ.

ಗ್ರಾಮ ಪಂಚಾಯತಿ ಚುನಾವಣೆ ಮಹತ್ವದ್ದಾಗಿದ್ದು, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಇನ್ನು ಉಪಚುನಾವಣೆ ಬರಲಿದ್ದು ಎಲ್ಲರೂ ಕೆಲಸ ಹಂಚಿಕೊಂಡು ಶ್ರಮಿಸಬೇಕು. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಮೊನ್ನೆ ಮಸ್ಕಿಗೆ ತೆರಳಿದ್ದಾಗ 25 ಸಾವಿರ ಜನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಚುನಾವಣೆಯಲ್ಲಿ ಕೆಲವೇ ಮತದಲ್ಲಿ ಸೋತ ಅಭ್ಯರ್ಥಿ, ನಮ್ಮ ಪಕ್ಷಕ್ಕೆ ಸೇರಿದ್ದಾರೆ. ನಾವು ಮತ್ತೆ 2 ಕ್ಷೇತ್ರ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ.

ಭವಿಷ್ಯದ ನಾಯಕರು

ಭವಿಷ್ಯದ ನಾಯಕರು

ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲಿ ಪಕ್ಷ ಗೆಲ್ಲಲು ಯಾರು ಶ್ರಮಿಸುತ್ತಾರೋ ಅವರೇ ಭವಿಷ್ಯದ ನಾಯಕರು. ನನಗೆ ಜಾತಿ ಮೇಲೆ ನಂಬಿಕೆ ಇಲ್ಲ. ಇಡೀ ಕಾಂಗ್ರೆಸ್ ಪಕ್ಷವೇ ಜಾತಿ. ಇಂದು ಬಿಜೆಪಿ ಅವರು ಜಾತಿ, ಧರ್ಮ ಅಂತಾ ಜನಸಮುದಾಯವನ್ನು ಭಾಗ ಮಾಡಿ, ಒಂದೊಂದು ಮಂಡಳಿ ಮಾಡಿ ಈಗ ಅವರೇ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ.

ದಿನ ನಿತ್ಯದ ಬದುಕು ಸಾಗಿಸಲು ಕಷ್ಟಪಡುವ ಜನರ ಬಗ್ಗೆ ಚಿಂತನೆ ಮಾಡಿದರೆ ತಪ್ಪಿಲ್ಲ. ಆದರೆ ಈ ರೀತಿ ಜಾತಿ ಆಧಾರದ ಮೇಲೆ ಹಣ ಹಂಚುವುದಾದರೆ, ಬಜೆಟ್ ಯಾಕೆ ಬೇಕು? ನಾನು ಈಗ ಈ ಬಗ್ಗೆ ಮಾತನಾಡುವುದಿಲ್ಲ. ಇದರ ಬಗ್ಗೆ ಚರ್ಚೆ ಮಾಡಲು ನಾನು 30 ರಂದು ಹಿರಿಯ ನಾಯಕರ ಸಭೆ ಕರೆದಿದ್ದೇನೆ.

ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗ ಅಧಿಕಾರಕ್ಕೆ ಬಂದಂತೆ. ಈಗ ಬಿಜೆಪಿ ಅಧಿಕಾರದಲ್ಲಿ ಏನಾಗುತ್ತಿದೆ ನೋಡುತ್ತಿದ್ದೀರಿ. ಈಗ ನಾವು ಅವರ ವಿಚಾರ ಮಾತನಾಡುವುದು ಬೇಡ. ನಮ್ಮ ಮನೆಯನ್ನು ನಾವು ಸರಿ ಮಾಡಿಕೊಳ್ಳೋಣ. ಜಿಲ್ಲೆಯಲ್ಲಿ ಈ ಹಿಂದೆ 6 ಕ್ಷೇತ್ರದಲ್ಲಿ ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲವನ್ನೂ ಗೆದ್ದಿದ್ದೆವು. ಇದು ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ. ಈಗ ನಾವು ಅದನ್ನು ಕಳೆದುಕೊಂಡಿದ್ದು, ಜನರಿಗೆ ವಿವರಿಸುವ ಅಗತ್ಯವಿದೆ.

ರೈತರ ಹಿತ ರಕ್ಷಣೆಗೆ ಬದ್ಧ

ರೈತರ ಹಿತ ರಕ್ಷಣೆಗೆ ಬದ್ಧ

ಅರಣ್ಯ ಪ್ರದೇಶದಲ್ಲಿ ಕೃಷಿ ಮಾಡಿ ಬದುಕುತ್ತಿದ್ದ ಜನರಿಗೆ ಆ ಜಮೀನು ನೀಡಲು ಕೇಂದ್ರದಲ್ಲಿ ಹೊಸ ಕಾನೂನು ತಂದಿದ್ದು ಕಾಂಗ್ರೆಸ್ ಪಕ್ಷ. ನಾವು, ದೇಶಪಾಂಡೆಯವರು ಆ ಸಮಿತಿಯಲ್ಲಿ ಇದ್ದೆವು. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ನಾವು ತಡ ಮಾಡಿದೆವು.

ಇಂದು ಮಲೆನಾಡು ಭಾಗದಲ್ಲಿ ಜನರ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಮುಂದಾಗಿದೆ. ಅರಣ್ಯ ಇಲಾಖೆ ತಮ್ಮ ಅರಣ್ಯ ವ್ಯಾಪ್ತಿಯಲ್ಲಿ ಬಂದೋಬಸ್ತ್ ಮಾಡಿಕೊಳ್ಳಬೇಕು. ಈ ಜನರು ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳಲು ಅವಕಾಶವಿದೆ. ಆದರೆ ರೈತರನ್ನು ಒಕ್ಕಲೆಬ್ಬಿಸುವುದು, ಅರಣ್ಯ ಗಡಿ ಭಾಗದಲ್ಲಿ ಏನು ಮಾಡಬೇಡ ಎಂದು ನಿರ್ಬಂಧ ಹೇರುತ್ತಿರುವುದು ಸರಿಯಲ್ಲ. ಇದರಿಂದ ರೈತರಿಗೆ ಆಗುವ ನಷ್ಟ ತುಂಬುವವರು ಯಾರು? ಈ ಬಗ್ಗೆ ವ್ಯಾಪಕ ಚರ್ಚೆ ಅಗತ್ಯವಿದೆ.

ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯದಿಂದ 25 ಸಂಸದರನ್ನು ಆರಿಸಲಾಗಿದೆ. ಈ ಭಾಗದ ಜಿಲ್ಲೆಗಳಿಂದ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದೀರಿ. ಯಾರಾದರೂ ಒಬ್ಬ ಸಂಸದ ಈ ರೈತರ ಕಷ್ಟಕ್ಕೆ ಧ್ವನಿ ಎತ್ತಿದ್ದಾನಾ? ಈ ವಿಚಾರದಲ್ಲಿ ನಾವು ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ನಡೆಸುತ್ತೇವೆ. ಈ ಹೋರಾಟದ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷವೇ ಹೊತ್ತು, ಈ ಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ರಕ್ಷಣೆ ನೀಡುವುದು ನಮ್ಮ ಸಂಪೂರ್ಣ ಜವಾಬ್ದಾರಿ.

ನಮ್ಮ ಕಾಲದಲ್ಲಿ ಕೆಲವು ತಪ್ಪುಗಳಾಗಿರಬಹುದು

ನಮ್ಮ ಕಾಲದಲ್ಲಿ ಕೆಲವು ತಪ್ಪುಗಳಾಗಿರಬಹುದು

ನಮ್ಮ ಕಾಲದಲ್ಲಿ ಕೆಲವು ತಪ್ಪುಗಳಾಗಿರಬಹುದು. ಆದರೆ ರೈತರ ಹಿತಕ್ಕಾಗಿ ನಮ್ಮ ಸರ್ಕಾರಗಳು ಸಾಕಷ್ಟು ಕಾನೂನುಗಳನ್ನು ತಂದಿವೆ. ರೈತರನ್ನು ಉಳಿಸಿಕೊಳ್ಳಲು ನಾವು ಬದ್ಧರಾಗಿದ್ದೆವು. ಆದರೆ ಈ ಸರ್ಕಾರ ರೈತರನ್ನು ಮುಗಿಸಲು ಹೊರಟಿದೆ. ನಾವು ಎಲ್ಲಿಯವರೆಗೆ ರೈತರಿಗೆ ರಕ್ಷಣೆ ನೀಡುವುದಿಲ್ಲವೋ, ಅಲ್ಲಿಯವರೆಗೂ ಬೆಂಗಳೂರಿಗೆ ಜನ ವಲಸೆ ಬರುವುದು ನಿಲ್ಲುವುದಿಲ್ಲ. ಈ ರಾಜ್ಯದ ಸಮಸ್ಯೆ ಬಗೆಹರಿಸಲು ದೇಶಪಾಂಡೆ ಅವರ ನೇತೃತ್ವದಲ್ಲಿ ವಿಷನ್ ಕರ್ನಾಟಕ ಅಂತಾ ಸಮಿತಿ ಮಾಡಿದ್ದೆವು.

ನಮ್ಮ ರಾಜ್ಯ 20 ವರ್ಷ ಹಿಂದಕ್ಕೆ ಹೋಗಿದೆ. ಬೊಕ್ಕಸದಲ್ಲಿ ಹಣ ಇಲ್ಲ. ಅಭಿವೃದ್ಧಿ ಆಗುತ್ತಿಲ್ಲ, ಶಾಸಕರಿಗೆ ಅನುದಾನ ಇಲ್ಲ. ಕೋವಿಡ್ ಸಮಯದಲ್ಲಿ ರೈತರಿಗೆ ಬೆಂಬಲ ಬೆಲೆ ನೀಡಲಿಲ್ಲ. ಕಾರ್ಮಿಕರಿಗೆ ರಕ್ಷಣೆ ನೀಡಲಿಲ್ಲ. ತೆರಿಗೆ ವಿನಾಯಿತಿ ನೀಡಲಿಲ್ಲ. ಇಂದು ಕೆಇಬಿ 40 ಪೈಸೆ ಶುಲ್ಕ ಹೆಚ್ಚಿಸಿದೆ.

ಈ ಸರ್ಕಾರದ ಆಂತರಿಕ ಜಗಳ ನಮಗೆ ಬೇಡ. ಆದರೆ ಸರ್ಕಾರದಿಂದ ಜನರಿಗೆ ಆಗಬೇಕಾದ ಅನುಕೂಲ ಅಗಬೇಕಲ್ಲವೇ? ಈಗ ಯಾವುದೂ ಸಿಗುತ್ತಿಲ್ಲ. ನಿಮ್ಮಿಂದ ಮತ್ತೆ ನಮ್ಮ ಸರ್ಕಾರ ಬರಬೇಕು. ಪ್ರತಿ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಬೇಕು. ಮುಂದೆ ಬೂತ್ ಮಟ್ಟದಲ್ಲೇ ಸಮಿತಿ ಮಾಡುತ್ತೇವೆ. ಎಲ್ಲ ವರ್ಗದವರು ಈ ಸಮಿತಿಯಲ್ಲಿ ಇರಬೇಕು. ಪ್ರತಿ ಪಂಚಾಯಿತಿ ಮಟ್ಟದ ನಾಯಕರು ಶಿಸ್ತಿನಿಂದ ಪಕ್ಷ ಸಂಘಟಿಸಬೇಕಿದೆ.

ಇನ್ನು ವೇದಿಕೆ ಸಂಸ್ಕೃತಿ ಇಲ್ಲ

ಇನ್ನು ವೇದಿಕೆ ಸಂಸ್ಕೃತಿ ಇಲ್ಲ

ಈಗ ಕಾಂಗ್ರೆಸ್ ಪಕ್ಷದಲ್ಲಿ ವೇದಿಕೆ ಸಂಸ್ಕೃತಿ ತೆಗೆದು ಹಾಕಲಾಗಿದೆ. ಜಾಗ ಚಿಕ್ಕದಾಗಿದೆ ಅಂತಾ ಇಲ್ಲಿ ಹಾಕಲಾಗಿದೆ. ಈಗ ಪಕ್ಷದಲ್ಲಿ ಎಲ್ಲರೂ ಕಾರ್ಯಕರ್ತರೇ. ಇದಕ್ಕೆ ದೆಹಲಿ ನಾಯಕರೂ ಒಪ್ಪಿಕೊಂಡಿದ್ದಾರೆ.

ನಾನು ಕಾರವಾರಕ್ಕೆ ಮೊದಲ ಬಾರಿಗೆ ಬಂದ ಸಂದರ್ಭದಲ್ಲಿ ಭವ್ಯವಾದ ಸ್ವಾಗತ ನೀಡಿದ್ದೀರಿ. ನಿಮಗೆಲ್ಲ ಧನ್ಯವಾದ. ಮಾರಿಕಾಂಬ ದೇವಸ್ಥಾನಕ್ಕೂ ನನ್ನನ್ನು ಕರೆದುಕೊಂಡು ಹೋಗಿದ್ದೀರಿ. ಅಲ್ಲೂ ಆಶೀರ್ವಾದ ಪಡೆದಿದ್ದೇನೆ. ನೀವು ಕಷ್ಟದಲ್ಲಿದ್ದಾಗ ಈ ಜಿಲ್ಲೆ ಜನ ದೇವಾಸ್ಥಾನಕ್ಕೆ ಹೋಗಿ ವಾರಗಟ್ಟಲೆ ಪೂಜೆ, ಪ್ರಾರ್ಥನೆ ಮಾಡಿದ್ದಾರೆ. ಅದರ ಫಲವಾಗಿ ನೀವು ಇಲ್ಲಿಗೆ ಬಂದಿದ್ದೀರಿ ಅಂತಾ ದೇವಾಲಯದ ಅರ್ಚಕರು ನನ್ನ ಕಿವಿಯಲ್ಲಿ ಹೇಳಿದರು. ಇದು ನನ್ನ ಅರಿವಿನಲ್ಲಿದೆ.

ಈ ಸ್ಥಾನ ನನಗೆ ಅಧಿಕಾರ ಅಲ್ಲ, ಜವಾಬ್ದಾರಿ. ಈ ಎಲ್ಲ ಕಾರ್ಯಕರ್ತರನ್ನು ವಿಧಾನಸೌಧದವರೆಗೂ ಕರೆದುಕೊಂಡು ಹೋಗಬೇಕು ಅನ್ನೋದೇ ಈ ಜವಾಬ್ದಾರಿ. ಈ ರಾಜ್ಯದಲ್ಲಿ ಬದಲಾವಣೆ ತರಬೇಕಾದರೆ, ಹೆಣ್ಣುಮಕ್ಕಳು, ಯುವಕರಿಂದ ಮಾತ್ರ ಸಾಧ್ಯ. ಇವರು ದಿನನಿತ್ಯ ಏನಾಗುತ್ತಿದೆ ಅಂತಾ ತಿಳಿಯುತ್ತಿದ್ದಾರೆ.

English summary
KPCC President DK Shivakumar made ipmortaint statement on Gram Panchayat Election in Sirsi. The future leaders are the ones who strive to win the Gram Panchayat and the Taluk Panchayat said Dikeshi. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X