ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿ: 'ಟವರ್' ಹತ್ತಿಸಿ ಕೋಟಿಗಟ್ಟಲೆ ಪಂಗನಾಮ ಹಾಕಿತೇ 'ಟ್ರೇಡಿಂಗ್ ಗ್ರೂಪ್'?

|
Google Oneindia Kannada News

ಶಿರಸಿ, ಸೆಪ್ಟೆಂಬರ್ 18: ಟ್ರೇಡಿಂಗ್ ಆ್ಯಪ್ ಮೂಲಕ ಕೋಟಿಗಟ್ಟಲೆ ಹಣ ವಂಚನೆಯಾಗಿರುವ ಆರೋಪ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಳಿಬಂದಿದೆ. ಟವರ್ ಎಕ್ಸ್‌ಚೇಂಜ್ ಎನ್ನುವ ಟ್ರೇಡಿಂಗ್ ಆ್ಯಪ್ ಮೂಲಕ ಜನರಿಗೆ ಕೋಟಿಗಟ್ಟಲೆ ಹಣ ಪಂಗನಾಮ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಈ ಆ್ಯಪ್ ಮೂಲಕ ಹಣ ತೊಡಗಿಸಿ ಉತ್ತರ ಕನ್ನಡ ಜಿಲ್ಲೆಯ ಕೇವಲ ಶಿರಸಿ ತಾಲೂಕಿನಲ್ಲೇ ಸಾವಿರಾರು ಜನ 16 ಕೋಟಿ ರೂ.ಗೂ ಮಿಕ್ಕಿ ಹಣ ಕಳೆದುಕೊಂಡಿರುವ ಸಾಧ್ಯತೆಯ ಬಗ್ಗೆ ಪೊಲೀಸ್ ಮೂಲದಿಂದ ತಿಳಿದು ಬಂದಿದ್ದು, ಹೀಗೆ ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಯನ್ನು ಈ‌ ಆ್ಯಪ್ ಮೂಲಕ ವಂಚಿಸಲಾಗಿದೆ ಎಂದು ಸ್ಥಳೀಯ 'ಜನಮಾಧ್ಯಮ' ಪತ್ರಿಕೆ ವರದಿ ಮಾಡಿದೆ.

ಟವರ್ ಎಕ್ಸ್‌ಚೇಂಜ್ ಆ್ಯಪ್ ಎನ್ನುವುದು ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್, ಎಕ್ಸ್‌ಆರ್‌ಪಿ, ಇಥಿರಿಯಂ, ಡಾಗಿ ಕಾಯಿನ್ ಸೇರಿದಂತೆ ವಿವಿಧ ಕರೆನ್ಸಿಗಳ ಖರೀದಿಗೆ ಇರುವ ಆ್ಯಪ್ ಎಂದು ಬಿಂಬಿಸಲಾಗಿದೆ. ಆದರೆ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್‌ನಲ್ಲಿ ಡೌನ್‌ಲೋಡ್‌ಗೆ ಸಿಗುವುದಿಲ್ಲ. ಮತ್ತೆಲ್ಲಿ ಇದು ಲಭ್ಯ ಎಂದು ನೋಡುವುದಾದರೆ, ಈ ಟವರ್ ಎಕ್ಸ್‌ಚೇಂಜ್ ಆ್ಯಪ್ ಹೆಸರಿನಲ್ಲಿ ರಚಿಸಲಾದ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಮಾತ್ರ ಆ್ಯಪ್ ಡೌನ್‌ಲೋಡ್ ಲಿಂಕ್ ಹರಿಬಿಡಲಾಗುತ್ತಿತ್ತು.

 ಏನಿದು ಟವರ್ ಎಕ್ಸ್‌ಚೇಂಜ್ ಆ್ಯಪ್?

ಏನಿದು ಟವರ್ ಎಕ್ಸ್‌ಚೇಂಜ್ ಆ್ಯಪ್?

ಈ ಲಿಂಕ್‌ನಿಂದ ಮೊಬೈಲ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡ ಬಳಿಕ ಆ್ಯಪ್ ವಾಲೆಟ್‌ಗೆ ವ್ಯಕ್ತಿಯೊಬ್ಬ ಸೂಚಿಸಿದಷ್ಟು ಹಣವನ್ನು ಪಾವತಿ ಮಾಡಬೇಕು (ಕನಿಷ್ಠ 5 ಸಾವಿರ). ಆ ವಾಲೆಟ್ ಬ್ಯಾಲೆನ್ಸ್‌ನ ಶೇ.12ರಷ್ಟು ಹಣವನ್ನು ಕ್ರಿಪ್ಟೋ ಕರೆನ್ಸಿಗಳ ಮೇಲೆ ಹೂಡಿಕೆ ಮಾಡಬೇಕು. ಯಾವ ಬ್ರ್ಯಾಂಡ್ ಕ್ರಿಪ್ಟೋ ಕರೆನ್ಸಿಯ ಮೇಲೆ ಹೂಡಿಕೆ ಮಾಡಬೇಕು ಎಂಬುದಷ್ಟೇ ಹೂಡಿಕೆದಾರನ ಆಯ್ಕೆಯ ವಿಷಯ. ಯಾವಾಗ ಹೂಡಿಕೆ ಮಾಡಬೇಕು, ಯಾವಾಗ ಮಾರಾಟ (ಟ್ರೇಡ್) ಮಾಡಬೇಕು ಎಂಬುದನ್ನೆಲ್ಲ ವಾಟ್ಸಪ್ ಗ್ರೂಪ್‌ನಲ್ಲೇ ಆ್ಯಪ್ ನಿರ್ವಾಹಕ ತಿಳಿಸುತ್ತಿದ್ದ.

 ನಿವ್ವಳ ಲಾಭದ ಗ್ಯಾರೆಂಟಿ ನೀಡುವ ನಿರ್ವಾಹಕ

ನಿವ್ವಳ ಲಾಭದ ಗ್ಯಾರೆಂಟಿ ನೀಡುವ ನಿರ್ವಾಹಕ

ಶೇ.75ರಷ್ಟು ನಿವ್ವಳ ಲಾಭದ ಗ್ಯಾರೆಂಟಿ ನೀಡುವ ನಿರ್ವಾಹಕ ಮೊದಲ ವಾರದಲ್ಲೇ ಹೂಡಿಕೆಯ ಹಣವನ್ನು ವಾಪಸ್ ನೀಡುತ್ತಿದ್ದ. ಅದನ್ನು ರಿಯಲ್ ಕರೆನ್ಸಿ (ಭಾರತದಲ್ಲಿ ರೂಪಾಯಿ) ರೂಪದಲ್ಲಿ ವಿತ್‌ಡ್ರಾ ಮಾಡಲೂ ಅವಕಾಶವಿತ್ತು. 5000 ರೂ. ಹೂಡಿಕೆ ಮಾಡಿದರೆ ವ್ಯವಹಾರ ಮುಗಿವ ವೇಳೆ ಗರಿಷ್ಠ 8750 ರೂ. ಖಾತೆಯಲ್ಲಿರುತ್ತಿತ್ತು. ಆ ಹಣವನ್ನು ಮತ್ತೆ ಟ್ರೇಡಿಂಗ್‌ನಲ್ಲಿ ಬಳಸುವ ಆಯ್ಕೆಯೂ ಹೂಡಿಕೆದಾರನಿಗೆ ಇರುತ್ತಿತ್ತು. ಅದಲ್ಲದೆ ಚೈನ್‌ಲಿಂಕ್ ರೀತಿಯೇ ಮತ್ತೊಬ್ಬನನ್ನು ಹೂಡಿಕೆಗೆ ಪ್ರೋತ್ಸಾಹಿಸಿ ಆ್ಯಪ್ ಇನ್‌ಸ್ಟಾಲ್ ಮಾಡಿಸಿ, ವಾಟ್ಸಪ್ ಗ್ರೂಪ್‌ಗೆ ಸೇರಿಸಿದರೆ ಆ ಹೊಸ ವ್ಯಕ್ತಿಯ ವಾಲೆಟ್ ಬ್ಯಾಲೆನ್ಸ್‌ನ ಶೇ.25ರಷ್ಟು ಹಣವನ್ನು ಸೇರಿಸಿದಾತನಿಗೆ ನೀಡುವ ಯೋಜನೆಯೂ ಈ ಆ್ಯಪ್‌ನಲ್ಲಿತ್ತು.

 ವ್ಯಕ್ತಿಯ ಮುಖವನ್ನೇ ನೋಡಿಲ್ಲ!

ವ್ಯಕ್ತಿಯ ಮುಖವನ್ನೇ ನೋಡಿಲ್ಲ!

ಈ ಆಕರ್ಷಕ ಆಫರ್‌ಗೆ ಮರುಳಾಗಿ ನೂರಾರು ಜನರು ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಮೊದಲೊಂದು ವಾರದಲ್ಲಿ ಹಾಕಿದ ಹಣ ಮರಳಿ ಪಡೆದವರು ಮತ್ತಷ್ಟು ಹಣ ಹೂಡಿ, ಹೊಸಬರನ್ನು ಸೇರಿಸಿದ್ದಾರೆ. 100 ಜನರ ತಂಡವಾಗಿ ಟ್ರೇಡಿಂಗ್ ಮಾಡಿದರೆ ಶೇ.12ರಷ್ಟು ಹೂಡಿಕೆ ಬದಲು ವಾಲೆಟ್ ಬ್ಯಾಲೆನ್ಸಿನ ಶೇ.24ರಷ್ಟು ಹೂಡಿಕೆ ಮಾಡುವ ಅವಕಾಶ ಇದ್ದುದರಿಂದ ಹೆಚ್ಚಿನ ಲಾಭದ ಆಸೆಗೆ ಮತ್ತೂ ಹೊಸಬರ ಸೇರ್ಪಡೆಯಾಗಿದೆ. ಶಿರಸಿಯೊಂದರಲ್ಲೇ 29 ವಾಟ್ಸಪ್ ಗ್ರೂಪ್‌ಗಳಿದ್ದು, ಪ್ರತಿ ಗ್ರೂಪ್‌ಗಳೂ 250 ಮಂದಿಯಿಂದ ತುಂಬಿದ್ದವು.

ಲಕ್ಷಾಂತರ ರೂ. ವ್ಯವಹಾರ ಮಾಡಿದವರೂ ಕೂಡ ಮುಖತಃ ಯಾರೊಬ್ಬರನ್ನೂ ಭೇಟಿಯಾಗಿಲ್ಲ. ಆ್ಯಪ್ ಬಿಟ್ಟರೆ ತಾವು ಹಣ ಹಾಕಿದ್ದು ಯಾರ ಖಾತೆಗೆ ಎಂಬ ಅರಿವೂ ಹೂಡಿಕೆದಾರರಿಗೆ ಇರಲಿಲ್ಲ. ಯುಪಿಐ ಮೂಲಕ ಹಣ ಪಾವತಿಸಿದವರಿಗೆ ಆ ವ್ಯಕ್ತಿಯ ಯುಪಿಐ ಹೆಸರು ಎಸ್.ಯು. ಪಾಲ್ ಎಂದು ತೋರಿಸುತ್ತಿದ್ದರೂ ಖಾತೆದಾರನ ಹೆಸರು ಮನೀಶ್‌ಕುಮಾರ್‌ ಎಂದು ತೋರಿಸುತ್ತಿತ್ತೆಂಬ ಮಾಹಿತಿಯಿದೆ.
 ವಾಲೆಟ್‌ನಿಂದ ಹಣ ಮಾಯ

ವಾಲೆಟ್‌ನಿಂದ ಹಣ ಮಾಯ

ಇನ್ನು ಸೆ.14ರ ಬಳಿಕ ಹಣ ವಾಪಸ್ ತೆಗೆಯಬಹುದು ಎಂದು ಸೂಚಿಸಲಾಗಿತ್ತಾದರೂ ಇದೀಗ ಹಲವರ ವಾಲೆಟ್‌ನಲ್ಲಿ ಹೂಡಿಕೆಯ ಹಣ ನಾಪತ್ತೆಯಾಗಿದೆ. ಆ್ಯಪ್ ಸದ್ಯ ಕಾರ್ಯನಿರ್ವಹಿಸದಾಗಿ, ವಾಲೆಟ್‌ನಲ್ಲಿ ಹಣ ಇದ್ದವರೂ ಅದನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಲು ಸಾಧ್ಯವಾಗದೇ ಪೇಚಿಗೆ ಸಿಲುಕಿಕೊಂಡಿದ್ದಾರೆ. ವಾಟ್ಸಾಪ್ ಗ್ರೂಪ್‌ಗಳಲ್ಲಿಯೂ ಯಾವುದೇ ಉತ್ತರ ಬರುತ್ತಿಲ್ಲ ಎಂದು ಹೂಡಿಕೆದಾರರು ಇದೀಗ ದೂರಲಾರಂಭಿಸಿದ್ದಾರೆ. ಅಧಿಕೃತ ಹೂಡಿಕೆ ಆಗಿರದ ಕಾರಣ ಹಣ ಹೂಡಿರುವ ಕುರಿತು ಯಾವುದೇ ದಾಖಲೇ ಹೂಡಿಕೆದಾರರಲ್ಲಿಲ್ಲ. ಆದರೂ ಕೆಲವರು ಶಿರಸಿ ಪೊಲೀಸರಲ್ಲಿ ಮೋಸವಾಗಿರುವ ಬಗ್ಗೆ ದೂರು ಸಲ್ಲಿಕೆ ಮಾಡಿದ್ದಾರೆ. ಕಾರವಾರದ ಸೈಬರ್ ಅಪರಾಧ ಠಾಣೆಯ ಮೂಲಕ ಇದೀಗ ತನಿಖಾ ಪ್ರಕ್ರಿಯೆ ಮುಂದುವರಿದಿದೆ.

 ಚೀನಾದ ಸರ್ವರ್, ಹಾಂಕಾಂಗ್‌ನಿಂದ ನಿರ್ವಹಣೆ

ಚೀನಾದ ಸರ್ವರ್, ಹಾಂಕಾಂಗ್‌ನಿಂದ ನಿರ್ವಹಣೆ

ಇನ್ನು 'ಒನ್ ಇಂಡಿಯಾ ಕನ್ನಡ' ನಡೆಸಿದ ತಾಂತ್ರಿಕ ಮಾಹಿತಿ ಪರಿಶೀಲನೆಯಲ್ಲಿ, ಈ ಆ್ಯಪ್ ಈ ವರ್ಷದ ಜೂನ್ ನಲ್ಲಿ ರಚನೆಯಾಗಿದೆ ಎಂಬುದು ತಿಳಿದುಬಂದಿದೆ. ಚೀನಾದ ಅಲಿಬಾಬ ಗ್ರೂಪ್‌ನ ಸರ್ವರ್‌ನಿಂದ ಕಾರ್ಯನಿರ್ವಹಿಸುತ್ತಿರುವ ಈ ಆ್ಯಪ್‌ನ ಮೂಲ ಹಾಂಕಾಂಗ್ ಎಂಬುದು ತಿಳಿದುಬರುತ್ತದೆ. ಆದರೆ ಮುಂಬೈ ವಿಳಾಸವೊಂದರಲ್ಲೂ ಈ ಆ್ಯಪ್ ನೋಂದಣಿಯಾಗಿದೆ. ಇನ್ನೂ ಒಂದು ವರ್ಷ, ಅಂದರೆ 2022ರ ಜೂನ್‌ನಲ್ಲಿ ಈ ಆ್ಯಪ್‌ನ ವ್ಯಾಲಿಡಿಟಿ ಅಂತ್ಯಗೊಳ್ಳಲಿದೆ ಎನ್ನಲಾಗಿದ್ದರೂ, ಈಗಲೇ ಈ ಆ್ಯಪ್ ಕಾರ್ಯ‌ ಸ್ಥಗಿತಗೊಂಡಿದೆ. ಸರ್ವರ್ ಸಮಸ್ಯೆಯಿಂದಾಗಿ ಪ್ರಸ್ತುತ ಆ್ಯಪ್ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಆದರೆ ಆ್ಯಪ್‌ನಿಂದಲೇ ಹಣ ವಂಚಿಸಲು ಸರ್ವರ್ ಅನ್ನು ಸಮಸ್ಯೆಗೆ ದುರ್ಬಲಗೊಳಿಸಿಕೊಳ್ಳಲಾಗಿದೆಯೇ ಅಥವಾ ನಿಜವಾಗಿಯೂ ತಾಂತ್ರಿಕ ಸಮಸ್ಯೆ ಎದುರಾಗಿದೆಯೇ ಎನ್ನುವುದು ತನಿಖೆಯ ಮೂಲಕವೇ ತಿಳಿದು ಬರಬೇಕಿದೆ.

ಟವರ್ ಎಕ್ಸ್‌ಚೇಂಜ್ ಆ್ಯಪ್‌ನಿಂದ ಮೋಸವಾದ ಬಗ್ಗೆ ಮಾಹಿತಿ ದೊರಕಿದೆ. ಈ ಬಗ್ಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಭರವಸೆ ನೀಡಿದ್ದಾರೆ.

Recommended Video

ಮೊಹಮ್ಮದ್ ಸಿರಾಜ್ ಗೆ BCCI ಇಂಥಾ ಮೋಸ ಮಾಡಬಾರದಿತ್ತು | Oneindia Kannada

\

English summary
In the Uttara Kannada district has been accused of cheating people through a trading app called Tower Exchange.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X