ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿ; ಕೊರೊನಾ ಸೋಂಕಿತ ಡಯಾಲಿಸಿಸ್ ರೋಗಿ ಪ್ರಾಣದ ಜೊತೆ ಆಸ್ಪತ್ರೆಗಳ ಚೆಲ್ಲಾಟ

|
Google Oneindia Kannada News

ಶಿರಸಿ, ಸೆಪ್ಟೆಂಬರ್ 25: ಕೊರೊನಾ ಸೋಂಕು ದೃಢಪಟ್ಟಿದ್ದ, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ರೋಗಿಯೊಬ್ಬರಿಗೆ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ, ಜೀವನ್ಮರಣ ಹೋರಾಟ ನಡೆಸುವಂತಾಗಿರುವ ಅಮಾನವೀಯ ಘಟನೆ ತಾಲೂಕಿನಲ್ಲಿ ನಡೆದಿದೆ. ಆರೋಗ್ಯ ಇಲಾಖೆಯೇ ರೋಗಿಯ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿರುವ ಆರೋಪ ಕೇಳಿಬಂದಿದೆ.

ತಾಲೂಕಿನ ಹನುಮಂತ (52) ಎನ್ನುವವರಿಗೆ ಎರಡೂ ಕಿಡ್ನಿ ವೈಫಲ್ಯವಾಗಿದ್ದು, ಕಳೆದ ಒಂದು ವರ್ಷದಿಂದ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಶಿರಸಿಯಲ್ಲಿ ಈಗಾಗಲೇ 27 ಜನರಿಗೆ ಡಯಾಲಿಸಿಸ್ ಮಾಡಿಸುತ್ತಿದ್ದು, ಬೆಡ್ ಇಲ್ಲದ ಕಾರಣ ಮುಂಡಗೋಡ ಅಥವಾ ಸಿದ್ದಾಪುರ ಆಸ್ಪತ್ರೆಗೆ ಹೋಗಿ ಡಯಾಲಿಸಿಸ್ ಮಾಡಿಸಲು ಸೂಚನೆ ನೀಡಿದ್ದರು. ಸೆಪ್ಟೆಂಬರ್ 18ರಂದು ಎಂದಿನಂತೆ ಮುಂಡಗೋಡಿಗೆ ತೆರಳಿದ ವ್ಯಕ್ತಿ, ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಪರಿಚಯದವರೊಬ್ಬರ ಮನೆಯಲ್ಲಿ ಆ ದಿನ ತಂಗಿ ಮರು ದಿನ (19)ದಂದು ವಾಪಸ್ ಶಿರಸಿಯ ತಮ್ಮ ಮನೆಗೆ ಬಂದಿದ್ದರು. ಮುಂದೆ ಓದಿ...

 ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಣೆ

ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಣೆ

ಮನೆಗೆ ಬಂದ ನಂತರ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಲಾಗಿತ್ತು. ಸ್ಥಳೀಯ ಆಸ್ಪತ್ರೆಯ ವೈದ್ಯರು ತಪಾಸಣೆಗೂ ಮುನ್ನ ಕೋವಿಡ್ ಆಂಟಿಜೆನ್ ರ್ಯಾಪಿಡ್ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ತಮ್ಮಲ್ಲಿ ಚಿಕಿತ್ಸೆ ಕೊಡಲಾಗುವುದಿಲ್ಲ. ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ಸೂಚಿಸಿದ್ದರು. ತಕ್ಷಣ ಕೊರೊನಾ ಸೋಂಕಿತ ಡಯಾಲಿಸಿಸ್ ರೋಗಿಯನ್ನು ಶಿರಸಿ ತಾಲೂಕು ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಆಸ್ಪತ್ರೆಯ ವೈದ್ಯರು ಇದಕ್ಕೆ ಒಪ್ಪಿಗೆ ನೀಡಿಲ್ಲ. ತಾಲೂಕು ಆರೋಗ್ಯಾಧಿಕಾರಿಗಳ ಬಳಿ ಕೇಳುವಂತೆ ಸೂಚಿಸಿದ್ದು, ಸೋಂಕು ದೃಢಪಟ್ಟಿರುವ ಹಿನ್ನೆಲೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಬೇಕು. ಅಲ್ಲದೇ ಬೇರೆ ಆಸ್ಪತ್ರೆಯಿಂದ ಬಂದಿರುವುದರಿಂದ ತಾವು ಚಿಕಿತ್ಸೆ ಕೊಡಲು ಸಾಧ್ಯವಿಲ್ಲ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರ ಸಾವಿಗೇನು ಕಾರಣ?ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರ ಸಾವಿಗೇನು ಕಾರಣ?

 ಎಷ್ಟೇ ಮನವಿ ಮಾಡಿಕೊಂಡರೂ ಸ್ಪಂದನೆ ಸಿಕ್ಕಿಲ್ಲ

ಎಷ್ಟೇ ಮನವಿ ಮಾಡಿಕೊಂಡರೂ ಸ್ಪಂದನೆ ಸಿಕ್ಕಿಲ್ಲ

ರೋಗಿಯ ಸಂಬಂಧಿಗಳು ಶಿರಸಿಯ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಯ ವೈದ್ಯರ ಕೈಕಾಲು ಹಿಡಿದು ದಾಖಲು ಮಾಡಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಇಲ್ಲದ ಕಾರಣ, ವೆಚ್ಚ ಸಹ ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ದಾಖಲು ಮಾಡಿಕೊಳ್ಳುವಂತೆ ಸೆ.20ರಿಂದಲೂ ಸಂಬಂಧಿಗಳು ವೈದ್ಯರ ಬಳಿ, ತಾಲೂಕು ವೈದ್ಯಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರೂ ಇದಕ್ಕೆ ಸ್ಪಂದನೆ ಸಿಕ್ಕಿಲ್ಲ. ಜಿಲ್ಲಾ ಯುವಕ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಈತನಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ವೈದ್ಯಾಧಿಕಾರಿ, ಆಸ್ಪತ್ರೆಯ ವೈದ್ಯರಿಗೂ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೂ ಸ್ಪಂದನೆ ಸಿಕ್ಕಿಲ್ಲ. ಕಾರವಾರದ ಕ್ರಿಮ್ಸ್ ‍ನಲ್ಲಿ ಐಸಿಯು ಇದ್ದು, ಅಲ್ಲಿ ಚಿಕಿತ್ಸೆ ಕೊಡುವಂತೆ ಮನವಿ ಮಾಡಿದರು ಅಲ್ಲೂ ಬೆಡ್ ಇಲ್ಲ, ಬೇಕಿದ್ದರೆ ಮಂಗಳೂರು ಅಥವಾ ಹುಬ್ಬಳ್ಳಿಗೆ ಹೋಗಿ ಎಂದು ಸೂಚಿಸಿದ್ದಾರೆ.

 ಸಾಮಾಜಿಕ ಜಾಲತಾಣದಿಂದ ಎಚ್ಚೆತ್ತ ಆಸ್ಪತ್ರೆ

ಸಾಮಾಜಿಕ ಜಾಲತಾಣದಿಂದ ಎಚ್ಚೆತ್ತ ಆಸ್ಪತ್ರೆ

ಖಾಸಗಿ ಆಸ್ಪತ್ರೆಯಲ್ಲಿ ದಿನೇ ದಿನೇ ಚಿಕಿತ್ಸಾ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ, ಜೊತೆಗೆ ಡಯಾಲಿಸಿಸ್ ಸಹ ಮಾಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಬುಧವಾರ ಬೆಳಿಗ್ಗೆ ಕೊರೊನಾ ಸೋಂಕಿತ ವ್ಯಕ್ತಿಯನ್ನು ಮನೆಗೆ ವಾಪಸ್ ಕರೆದುಕೊಂಡು ಬರಲು ಕುಟುಂಬದವರು ನಿರ್ಧರಿಸಿದ್ದರು. ಮನೆಯವರೇ ಕೊರೊನಾ ಕಿಟ್ ಖರೀದಿ ಮಾಡಿ ಧರಿಸಿಕೊಂಡು ಖಾಸಗಿ ವಾಹನ ಬಾಡಿಗೆ ಪಡೆದು ಸೋಂಕಿತ ಡಯಾಲಿಸಿಸ್ ರೋಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.

ಕೋವಿಡ್: ಅಘಾತಕಾರಿ ಮಾಹಿತಿ ಹಂಚಿಕೊಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ!ಕೋವಿಡ್: ಅಘಾತಕಾರಿ ಮಾಹಿತಿ ಹಂಚಿಕೊಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ!

ಬುಧವಾರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬೆಡ್ ಸಿಗದೇ ರೋಗಿ ಪರದಾಡಿದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರಿಂದ ಎಚ್ಚೆತ್ತುಕೊಂಡ ಆಸ್ಪತ್ರೆಯ ವೈದ್ಯರು, ಗುರುವಾರ ಕೊರೋನಾ ಸೋಂಕಿತ ವ್ಯಕ್ತಿಯ ಸಂಬಂಧಿಗಳಿಗೆ ಫೋನ್ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ.

ಆದರೆ ರೋಗಿಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಇದೇ ಕೆಲಸ ವೈದ್ಯರು ಮುಂಚೆಯೇ ಮಾಡಿದ್ದರೆ ಆತನನ್ನು ಬದುಕಿಸಬಹುದಿತ್ತು. ಈಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಯೋಜನವೇನು ಎಂದು ಆಸ್ಪತ್ರೆಗೆ ಕಳುಹಿಸಿಕೊಡಲು ಕುಟುಂಬದವರು ಹಿಂದೇಟು ಹಾಕಿದ್ದಾರೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಹರಿಹಾಯ್ದಿದ್ದಾರೆ. ಇಂತಹ ಪರಿಸ್ಥಿತಿ ಬೇರೆಯವರಿಗೆ ಆಗದಂತೆ ಇನ್ನಾದರೂ ಎಚ್ಚೆತ್ತುಕೊಂಡು ಗಮನ ಹರಿಸುವಂತೆ ಆಗ್ರಹಿಸಿದ್ದಾರೆ.

Recommended Video

ಭಾರತದ ಪವರ್ ಗೆ ಶಾಕ್ ಆದ China | Oneindia Kannada
 ಲಜ್ಜೆಗೆಟ್ಟ ವ್ಯವಸ್ಥೆ: ಸಂತೋಷ್ ಶೆಟ್ಟಿ

ಲಜ್ಜೆಗೆಟ್ಟ ವ್ಯವಸ್ಥೆ: ಸಂತೋಷ್ ಶೆಟ್ಟಿ

ಲಜ್ಜೆಗೆಟ್ಟ ವ್ಯವಸ್ಥೆಗೆ ಶಿರಸಿಯಲ್ಲಿ ನಡೆದಿರುವ ಘಟನೆಯೇ ಸಾಕ್ಷಿಯಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಕಿಡಿಕಾರಿದ್ದಾರೆ.

ನನ್ನ ಬಳಿ ಕುಟುಂಬದವರು ಚಿಕಿತ್ಸೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರಿಂದ ಕಳೆದ ಸೋಮವಾರದಿಂದ ಹಲವು ಅಧಿಕಾರಿಗಳ ಬಳಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದೆ. ಆದರೆ ಗಂಭೀರ ಇರುವ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಲಾಗಿದೆ. ವಿಧಾನಸಭೆಯ ಸಭಾಧ್ಯಕ್ಷರ ತವರಿನಲ್ಲಿಯೇ ರೋಗಿಯ ಪ್ರಾಣಕ್ಕೆ ಬೆಲೆ ಇಲ್ಲದಂತಾದರೆ ಹೇಗೆ? ಜಿಲ್ಲೆಯ ಎಲ್ಲೂ ಡಯಾಲಿಸಿಸ್ ರೋಗಿಗೆ ಚಿಕಿತ್ಸೆ ಕೊಡಲು ಸಾಧ್ಯವಾಗದಿದ್ದರೆ ಹೇಗೆ? ಇಂತಹ ಪರಿಸ್ಥಿತಿ ಬೇರೆಯವರಿಗೆ ಬರಬಾರದು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಸಮಯದಲ್ಲಿ ಎಲ್ಲರಿಗೂ ಚಿಕಿತ್ಸೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

English summary
An inhumane incident happened in sirsi, where a corona infected dialysis patient, didnt get a bed at a government hospital for treatment and now he is in critical condition
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X