ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಸತ್ ಕಲಾಪದಿಂದ ಕಾಂಗ್ರೆಸ್ ಪಲಾಯನ: ಸಂಸದ ಅನಂತಕುಮಾರ ಹೆಗಡೆ ಕಿಡಿ

|
Google Oneindia Kannada News

ಶಿರಸಿ, ಆಗಸ್ಟ್ 10: "ಸದನದ ಕಲಾಪಗಳಿಂದ ಪಲಾಯನಗೈಯ್ಯುತ್ತಿರುವ ಬೇಜವಾಬ್ದಾರಿ ಕಾಂಗ್ರೆಸ್ ಹಾಗೂ ವಿಪಕ್ಷಗಳ ನಡೆ ದೇಶಕ್ಕೆ ಮಾರಕ,'' ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ.

"ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೋವಿಡ್ ಮಹಾಮಾರಿಯಂಥ ಗಂಭೀರ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳ ಚರ್ಚೆ ನಡೆಸಬೇಕಿತ್ತು. ಇನ್ನೊಂದೆಡೆ ಇದರಿಂದ ಉದ್ಭವವಾಗಿರುವ ಆರ್ಥಿಕ ಸಮಸ್ಯೆಗಳು, ಉತ್ಪಾದನಾ ಕ್ಷೇತ್ರದ ಸವಾಲುಗಳು, ಆಂತರಿಕ ಭದ್ರತೆ, ಗಡಿಯಾಚೆಗೆ ಉಲ್ಬಣಗೊಳ್ಳುತ್ತಿರುವ ಅಫ್ಘಾನಿಸ್ತಾನದ ಸಮಸ್ಯೆಯ ಪರಿಣಾಮಗಳು, ನಮ್ಮ ದೇಶವನ್ನು ಅತಂತ್ರಗೊಳಿಸುವ ಪಾಕಿಸ್ತಾನ ಮತ್ತು ಚೀನಾದ ಷಡ್ಯಂತ್ರ ಹಾಗೂ ಇನ್ನಿತರ ಅನೇಕ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯುವ ಅಗತ್ಯವಿದೆ.''

"ಅನೇಕ ಪ್ರಮುಖ ವಿಧೇಯಕಗಳ ಮಂಡನೆ ಆಗುವ ಈ ಸಂದರ್ಭದಲ್ಲಿ ಸದನದ ಕಲಾಪಗಳನ್ನು ಸ್ಥಗಿತಗೊಳಿಸುವ ಮತ್ತು ಚರ್ಚೆಗಳಿಂದ ಪಲಾಯನ ಮಾಡುವ ಕಾಂಗ್ರೆಸ್‌ನ ಈ ಮಾನಸಿಕತೆ ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷದ ಸ್ವಯಂಕೃತ ಅಪರಾಧಗಳಿಂದ ಆ ಪಕ್ಷವು ಮುಂದಿನ ದಿನಗಳಲ್ಲಿ ದೇಶದಲ್ಲಿ ನಗಣ್ಯವಾಗಲಿದ್ದು, ಕಾಂಗ್ರೆಸ್ಸಿಗರ ಈ ಪಲಾಯನವಾದ "ವಿನಾಶಕಾಲೇ ವಿಪರೀತ ಬುದ್ಧಿ' ಎನ್ನುವ ಉಕ್ತಿಗೆ ನಿದರ್ಶನ,'' ಎಂದು ಜರಿದಿದ್ದಾರೆ.

Sirsi: Congress Flees From Parliament Session: Anant Kumar Hegde Outrage

"ಭಯೋತ್ಪಾದಕರಿಗೆ ಸಹಾಯ ಮಾಡುವ, ಜಿಹಾದಿ ಸಾಹಿತ್ಯವನ್ನು ಒದಗಿಸುವ ಮತ್ತು ಕಲ್ಲು ತೂರಾಟ ಹಾಗೂ ಮತ್ತು ಇನ್ನಿತರ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳುವವರನ್ನು ನಿಗ್ರಹಿಸುವ ಅತ್ಯಂತ ಪ್ರಮುಖ ಮಸೂದೆಯನ್ನು ಮಂಡಿಸುವ ಸಂದರ್ಭದಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಚರ್ಚೆಯಲ್ಲಿ ಭಾಗವಹಿಸದೇ ಭಯೋತ್ಪಾದಕರ ಪರವಾಗಿ ಸಭಾತ್ಯಾಗ ಮಾಡಿರುವುದು ಕಾಂಗ್ರೆಸ್ ಪಕ್ಷದ ಭಯೋತ್ಪಾದಕರ ಪರವಾದ ನಿಲುವನ್ನು ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ಮತ್ತು ಇತರ ಕೆಲವು ವಿರೋಧ ಪಕ್ಷಗಳಿಗೆ ಪೆಗಾಸಸ್‌ನ ಘಟನೆ ಕೋವಿಡ್ ಸಾಂಕ್ರಾಮಿಕ ಮತ್ತು ಅದರ ಪರಿಣಾಮಗಳಿಗಿಂತ ದೊಡ್ಡ ಸಮಸ್ಯೆಯಾಗಿದೆ. ಇಡೀ ದೇಶವು ಒಗ್ಗಟ್ಟಿನಿಂದ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದ್ದಾಗ, ಕಾಂಗ್ರೆಸ್ ಮತ್ತು ಇತರ ಕೆಲವು ವಿರೋಧ ಪಕ್ಷಗಳು ಎಲ್ಲೋ ಅಡಗಿ ಕುಳಿತಿದ್ದಂತಿದೆ,'' ಎಂದಿದ್ದಾರೆ.

"ರಾಹುಲ್ ಗಾಂಧಿಯವರ ಬೇಜವಾಬ್ದಾರಿ ಮತ್ತು ಗಾಂಭೀರ್ಯತೆ ಇಲ್ಲದ ನಾಯಕತ್ವ ಈ ದೇಶವನ್ನು ಸುದೀರ್ಘಕಾಲ ಆಳಿದ ಕಾಂಗ್ರೆಸ್ ಪಕ್ಷವನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕೆಂದು ಒತ್ತಾಯಿಸುತ್ತಿದ್ದ ವಿರೋಧ ಪಕ್ಷಗಳು ಈಗ ಸಂಸತ್ತಿನ ಅಧಿವೇಶನವು ನಡೆಯುವ ಸಂದರ್ಭದಲ್ಲಿ ಈ ಸಾಂಕ್ರಾಮಿಕದ ಪರಿಣಾಮಗಳ ಕುರಿತು ಚರ್ಚಿಸಲು ಹಿಂದೇಟು ಹಾಕುತ್ತಿರುವುದು ವಿರೋಧ ಪಕ್ಷಗಳ ರಾಜಕೀಯ ಸೋಗಲಾಡಿತನಕ್ಕೆ ಸಾಕ್ಷಿಯಾಗಿದೆ,'' ಎಂದು ಕುಟುಕಿದರು.

"ಪ್ರಜಾಪ್ರಭುತ್ವ ವ್ಯವಸ್ಥೆಯ ಪವಿತ್ರ ದೇಗುಲವಾಗಿರುವ ಸಂಸತ್ತಿನ ಒಳಗೆ ರಾಹುಲ್ ಗಾಂಧಿಯ ಅನುಯಾಯಿಗಳು ಮತ್ತು ಪ್ರತಿಪಕ್ಷಗಳು ಅತ್ಯಂತ ಬೇಜವಾಬ್ದಾರಿತನದಿಂದ ಕಲಾಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹರಿದು ಹಾಕುತ್ತ ಸಂಸತ್ತಿನ ಕಾರ್ಯ ನಿರ್ವಹಣೆಗೆ ತಡೆ ಉಂಟು ಮಾಡುತ್ತಿರುವುದು ಅತ್ಯಂತ ಶೋಚನೀಯ.''
"ಜುಲೈ 19 ರಿಂದ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪೆಗಾಸಸ್ ಮತ್ತು ರೈತರ ಸಮಸ್ಯೆಗಳ ಕುರಿತು ವಿರೋಧ ಪಕ್ಷಗಳ ನಿರಂತರ ಪ್ರತಿಭಟನೆಗಳಿಂದ ಲೋಕಸಭೆ ಮತ್ತು ರಾಜ್ಯಸಭೆಗಳು ಯಾವುದೇ ಮಹತ್ವದ ವ್ಯವಹಾರಗಳನ್ನು ನಡೆಸಲು ವಿಫಲವಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಚಾರವಾಗಿದೆ,'' ಎಂದಿದ್ದಾರೆ.

"ಜನವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನ ವಿರೋಧಿ ಕಾಂಗ್ರೆಸ್ ಪಕ್ಷವು ಈ ಹಿಂದೆಯೂ ರಫೇಲ್ ಜೆಟ್ ಖರೀದಿಯ ವಿಚಾರದಲ್ಲಿ ಸಂಸತ್ತಿನ ಸಮಯವನ್ನು ಹಾಳು ಮಾಡಿ, ದೇಶದ ಜನತೆಯನ್ನು ದಾರಿ ತಪ್ಪಿಸಲು ಮಾಡಿರುವ ಪ್ರಯತ್ನಗಳು ವಿಫಲವಾಗಿರುವುದು ಪಕ್ಷದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.''

"ಯುಪಿಎ ಸರಕಾರದ ಅವಧಿಯಲ್ಲಿ ಅಂದಿನ ಹಣಕಾಸು ಸಚಿವರು ತನ್ನ ಮೇಲೆ ಬೇಹುಗಾರಿಕೆ ನಡೆಸಿರುವ ಆಪಾದನೆಯನ್ನು ತನ್ನದೇ ಸರಕಾರದ ಮೇಲೆ ಹೇರಿದ್ದರು ಎನ್ನುವುದನ್ನು ಜಾಣಮರೆವಿನಿಂದ ಮರೆತಿರುವ ಕಾಂಗ್ರೆಸ್ ಪಕ್ಷ, ಪೆಗಾಸಸ್ ಪ್ರಕರಣವನ್ನು ಕೈಗೆತ್ತಿಕೊಂಡು ಪ್ರತಿಭಟನೆಗೆ ಮುಂದಾಗಿರುವುದು "ಕಾಂಗ್ರೆಸ್ ಟೂಲ್‌ಕಿಟ್ ತಂತ್ರಗಾರಿಕೆ'ಯ ಮುಂದುವರಿದ ಭಾಗವಾಗಿದ್ದರೂ ಆಶ್ಚರ್ಯವಿಲ್ಲ. ಕೋವಿಡ್ ಸಾಂಕ್ರಾಮಿಕದಿಂದ ಹಲವಾರು ದೇಶಗಳು ಆರ್ಥಿಕವಾಗಿ ನೆಲಕಚ್ಚಿರುವ ಸಂದರ್ಭದಲ್ಲಿ ಹಲವಾರು ಸಂಕಷ್ಟಗಳು ಮತ್ತು ಸವಾಲುಗಳ ನಡುವೆಯೂ, ಪ್ರಧಾನಿ ನರೇಂದ್ರ ಮೋದಿಯವರ ನಿರ್ಣಾಯಕ ನಾಯಕತ್ವದಲ್ಲಿ ಭಾರತವು ಕೊರೊನಾ ಸಾಂಕ್ರಾಮಿಕ ರೋಗವನ್ನು ಸೋಲಿಸಲು ಕೈಗೊಂಡಿರುವ ಕ್ರಾಂತಿಕಾರಿ ನಿರ್ಣಯಗಳು ಅಭೂತಪೂರ್ವವಾಗಿದ್ದು, ಜಗತ್ತಿನಲ್ಲೇ ಶ್ಲಾಘಿಸಲ್ಪಟ್ಟಿರುವುದು ಸ್ವಾಗತಾರ್ಹ,'' ಎಂದೂ ಹೇಳಿದ್ದಾರೆ.

"ಕೋವಿಡ್ ಪರೀಕ್ಷೆ, ಯುದ್ಧೋಪಾದಿಯಲ್ಲಿ ಸೇನಾ ವಿಮಾನಗಳು, ಯುದ್ಧನೌಕೆಗಳು ಮತ್ತು ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳ ಮೂಲಕ ಆಮ್ಲಜನಕದ ಸರಬರಾಜು, ಆಮ್ಲಜನಕ ಸ್ಥಾವರಗಳ ನಿರ್ಮಾಣ, ಆಮ್ಲಜನಕದ ಕಾನ್ಸನ್‌ಟ್ರೇಟರ್ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ, ವೈದ್ಯಕೀಯ ನೆರವು, ವಿಶ್ವದಲ್ಲೇ ದಾಖಲೆ ಎನಿಸಿರುವ ಲಸಿಕಾ ಕಾರ್ಯಕ್ರಮ ದೇಶದಲ್ಲಿ ಕೋವಿಡ್ ಸಾಂಕ್ರಾಮಿಕವನ್ನು ಹತೋಟಿಗೆ ತರುವಲ್ಲಿ ಯಶಸ್ಸನ್ನು ಕಂಡಿದೆ,'' ಎಂದು ಸಂಸದ ಅನಂತಕುಮಾರ ಹೆಗಡೆ ಹೆಸರಿನಲ್ಲಿ ಸಂಸದರ ಶಿರಸಿ ಕಾರ್ಯಾಲಯದಿಂದ ಈ ಪ್ರಕಟಣೆ ಹೊರಡಿಸಲಾಗಿದೆ.

Recommended Video

BJPಯಲ್ಲಿ ಖಾತೆಗಾಗಿ ಶುರುವಾಯ್ತು ಮಂತ್ರಿಗಳ ರಾಜೀನಾಮೆಯ ಬ್ಲಾಕ್ ಮೇಲ್ | oneindia kannada

English summary
The irresponsible Congress and Opposition parties fleeing from Parliament Sessions, Uttara Kannada Lok Sabha MP Ananta Kumara Hegde said that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X