ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ಈ ಬಡಾವಣೆ ಜನರಿಗೆ ಮಳೆಗಾಲದ ಪ್ರವಾಹ ಆತಂಕ!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮೇ 29: ಶಿವಮೊಗ್ಗ ನಗರದಲ್ಲಿ ಸಣ್ಣದೊಂದು ಮಳೆಯಾದರೂ ಸಾಕು, ಮೊದಲು ಮುಳುಗುವ ಬಡಾವಣೆಗಳ ಪೈಕಿ ಶಾಂತಮ್ಮ ಲೇಔಟ್ ಕೂಡ ಒಂದಾಗಿದೆ. ಪ್ರತಿಷ್ಠಿತ ಬಡಾವಣೆಯಾಗಿದ್ದ ಶಾಂತಮ್ಮ ಲೇಔಟ್‌ನಲ್ಲಿ ಇನ್ನು ಮುಂದೆ ಪ್ರತಿ ಮಳೆಗಾಲದಲ್ಲೂ ಆತಂಕದಲ್ಲೇ ಸಮಯ ದೂಡಬೇಕಾಗುತ್ತದೆ.

ಪ್ರಭಾವಿ ಎನಿಸಿಕೊಂಡಿರುವ ರಾಜಕಾರಣಿಗಳು, ಉದ್ಯಮಿಗಳು ಇಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಆದರೂ ಮುಳುಗಡೆ ಭೀತಿಯಿಂದ ಇಲ್ಲಿಯ ನಿವಾಸಿಗಳನ್ನು ಪಾರು ಮಾಡಲು ಸಾಧ್ಯವಾಗುತ್ತಿಲ್ಲ. ಮುಂಗಾರು ಪೂರ್ವ ಮಳೆಯೂ ಸಹ ನಗರದಲ್ಲಿ ಅವಾಂತರ ಸೃಷ್ಟಿ ಮಾಡಿತ್ತು.

ಇತ್ತೀಚೆಗೆ ಅತಿವೃಷ್ಟಿಯಿಂದಾಗಿ ಉಂಟಾಗಿರುವ ಅನಾಹುತಗಳು ಮುಂಬರುವ ಮಳೆಗಾಲದಲ್ಲಿ ಮರುಕಳಿಸದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಿವಮೊಗ್ಗ ನಗರದಲ್ಲಿ ಕಾಲುವೆಗಳು, ಚರಂಡಿಗಳಲ್ಲಿ ತುಂಬಿರುವ ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಇದೇ ರೀತಿ ನೀರು ಸರಾಗವಾಗಿ ಹರಿದುಹೋಗಲು ಅಡ್ಡಿಯಾಗುವ ಅಡೆತಡೆಗಳನ್ನು ನಿವಾರಿಸಬೇಕು. ಇತ್ತೀಚಿನ ಅತಿವೃಷ್ಟಿಯಿಂದ ಮತ್ತೆ ಚರಂಡಿಗಳಲ್ಲಿ ಕಸ ಕಡ್ಡಿಗಳು ತುಂಬಿರುವ ಸಾಧ್ಯತೆಯಿದ್ದು, ಆದಷ್ಟು ಬೇಗನೇ ತೆರವುಗೊಳಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

2019ರಿಂದ ಜಲ ಕಂಟಕ ಶುರು

2019ರಿಂದ ಜಲ ಕಂಟಕ ಶುರು

ಹೊಳೆಹೊನ್ನೂರು ರಸ್ತೆಯಲ್ಲಿರುವ ಶಾಂತಮ್ಮ ಬಡಾವಣೆ ತುಂಗಾ ನದಿಗೆ ಹೊಂದಿಕೊಂಡಂತೆ ಇದೆ. 2019ರವರೆಗೂ ಈ ಬಡಾವಣೆಗೆ ನೀರು ನುಗ್ಗಿದ ಉದಾಹರಣೆ ಇಲ್ಲ. 2019ರ ಆಗಸ್ಟ್ ತಿಂಗಳಲ್ಲಿ ಸುರಿದ ಭೀಕರ ಮಳೆ ಮತ್ತು ತುಂಗಾ ನದಿ ಪ್ರವಾಹದಿಂದ ನೂರಾರು ಮನೆಗಳು ಜಲಾವೃತ್ತಗೊಂಡಿದ್ದವು. ತುಂಗೆಯಲ್ಲಿ 80 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟರೆ ಈ ಬಡಾವಣೆಗೆ ನೆರೆ ಆವರಿಸುತ್ತದೆ. ತುಂಗೆ ಉಕ್ಕಿ ಹರಿದಾಗಷ್ಟೇ ಬಡಾವಣೆಗೆ ನೀರು ನುಗ್ಗುತ್ತದೆ ಎಂಬ ಮಾತನ್ನು ಮೊನ್ನೆ ಸುರಿದ ಮಳೆ ಸುಳ್ಳು ಮಾಡಿದೆ.

ಕಾಲುವೆಗೆ ಸಿಮೆಂಟ್ ತಡೆಗೋಡೆ

ಕಾಲುವೆಗೆ ಸಿಮೆಂಟ್ ತಡೆಗೋಡೆ

ಶಿವಮೊಗ್ಗದ ವಿದ್ಯಾನಗರ ಮೂಲಕ ಹಾದುಹೋಗುವ ತುಂಗಾ ಕಾಲುವೆಯು ಪುರಲೆ ಕೆರೆಗೆ ತಲುಪುತ್ತದೆ. ಅಲ್ಲಿಂದ ಅದು ಭರ್ತಿಯಾಗಿ ತುಂಗಾ ನದಿ ಸೇರುತ್ತದೆ. ಈ ಕಾಲುವೆಯು ಮೊದಲು 30 ಅಡಿಗೂ ಅಧಿಕ ಅಗಲವಿತ್ತು. ಎಷ್ಟೇ ನೀರು ಹರಿದುಬಂದರೂ ಸರಾಗವಾಗಿ ಹರಿದು ಹೋಗುತಿತ್ತು.

2018-19ರಲ್ಲಿ ಈ ಕಾಲುವೆಗೆ ಸಿಮೆಂಟ್ ತಡೆಗೋಡೆ ಮಾಡಲಾಗಿದೆ. ಅಗಲವನ್ನು 10 ಅಡಿಗೆ ಇಳಿಸಲಾಗಿದ್ದು ನೀರು ರಭಸವಾಗಿ ಹರಿದುಹೋಗದಂತೆ ಮಾಡಲಾಗಿದೆ. ಈ ಕಾಲುವೆಯಲ್ಲಿ ಎಲ್ಲ ಕಾಲದಲ್ಲೂ ಒಂದೆರೆಡು ಅಡಿ ನೀರು ಇರಲೇಬೇಕು. ಅದಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಸ್ಥಳೀಯರಿಗೆ ಸಬೂಬು ಹೇಳಿದ್ದಾರೆ. ವಿದ್ಯಾನಗರದಿಂದ ಪುರಲೆ ಕೆರೆ ತಲುಪುವ ಈ ಕಾಲುವೆ 4 ಕಿ. ಮೀ. ಉದ್ದ ಇದ್ದು ಈ ಕಾಲುವೆಗೆ ಹರಿಗೆ ಕೆರೆಯ ಮೂರು ಕಾಲುವೆಗಳು ಬಂದು ಸೇರುತ್ತವೆ.

ಪ್ರತಿ ಮಳೆಗಾಲದಲ್ಲೂ ಮುಳುಗಡೆ ಭೀತಿ

ಪ್ರತಿ ಮಳೆಗಾಲದಲ್ಲೂ ಮುಳುಗಡೆ ಭೀತಿ

ಹೊಳೆಹೊನ್ನೂರು ರಸ್ತೆಯಲ್ಲಿರುವ ಶಾಂತಮ್ಮ ಬಡಾವಣೆಯ ಭದ್ರಾ ಕಾಲುವೆಯ ನೀರು ಹರಿಗೆ ಕೆರೆ ತುಂಬಿ, ಕೋಡಿ ಬಿದ್ದು, ಪುರಲೆ ಬಳಿ ತುಂಗಾ ನದಿಗೆ ಸೇರುತ್ತದೆ. ಹರಿಗೆ ಕೆರೆಗೆ ಒಟ್ಟು ಮೂರು ಕಾಲುವೆಗಳಿದ್ದು ಒಂದು ಪುರಲೆ ಕೆರೆಗೆ, ಇನ್ನೊಂದು ಖಾಸಗಿ ಲೇಔಟ್ ಮೂಲಕ ತುಂಗಾ ಕಾಲುವೆಗೆ, ಇನ್ನೊಂದು ತೋಟ, ಗದ್ದೆಗಳ ಮೂಲಕ ತುಂಗಾ ಕಾಲುವೆ ಸೇರುತ್ತದೆ.

ಭದ್ರಾದಿಂದ ಬರುವ ಎಲ್ಲ ನೀರು ತುಂಗಾ ಕಾಲುವೆ ಮೂಲಕವೇ ಪುರಲೆ ಕೆರೆ ಸೇರಿ ಅಲ್ಲಿಂದ ನದಿಗೆ ಹೋಗುತ್ತದೆ. ಮೂರು ಕಾಲುವೆಗಳ ಪೈಕಿ ಎರಡು ಕಾಲುವೆಗಳು ಒತ್ತುವರಿಯಾಗಿ ಕಿರಿದಾಗಿದೆ. ಮೂರನೇ ಕಾಲುವೆ ಮೂಲಕ ಭಾರೀ ಪ್ರಮಾಣದಲ್ಲಿ ತುಂಗಾ ಕಾಲುವೆಗೆ ಸೇರುವ ನೀರು ಮುಂದೆ ಹರಿಯಲು ಆಗದೆ ಕಾಲುವೆ ಮುಂದೆ ಉಕ್ಕಿ ಶಾಂತಮ್ಮ ಲೇಔಟ್ ಮೂಲಕ ಹೋಗುವ ಎರೆ ಕಾಲುವೆಗೆ ಸೇರುತ್ತದೆ. ಈ ಎರೆ ಕಾಲುವೆ ಸಹ ಕಿರಿದಾಗಿದ್ದು ನೀರು ಉಕ್ಕಿ ಬಡಾವಣೆಗೆ ಆವರಿಸಿಕೊಳ್ಳುತ್ತಿದೆ. ಪ್ರತಿ ಮಳೆಗಾಲದಲ್ಲೂ ಮುಳುಗಡೆ ಭೀತಿ ಅನುಭವಿಸಬೇಕಾಗುತ್ತದೆ.

ಕಾಲುವೆ ಅಗಲ ಮಾಡಲು ಗ್ರಾಮಸ್ಥರ ಆಗ್ರಹ

ಕಾಲುವೆ ಅಗಲ ಮಾಡಲು ಗ್ರಾಮಸ್ಥರ ಆಗ್ರಹ

ಕಾಂಕ್ರೀಟ್ ವಾಲ್ ನಿರ್ಮಿಸುವ ಮೊದಲು ಕಾಲುವೆ 25 ರಿಂದ 30 ಅಡಿ ಅಗಲವಿತ್ತು. ಎಂತಹ ದೊಡ್ಡ ಮಳೆಯಾದರೂ ಸೇತುವೆ ಹಂತದವರೆಗೂ ನೀರು ಬರುತಿತ್ತು. ಈಗ ಕಾಲುವೆ ಅಗಲ 10 ಅಡಿಗೆ ಇಳಿಸಲಾಗಿದೆ. ಇದರಿಂದ ನೀರು ಮುಂದೆ ಹರಿಯಲಾಗದೆ ಉಕ್ಕಿ ಶಾಂತಮ್ಮ ಲೇಔಟ್ ಮೂಲಕ ಹೋಗುವ ಕಾಲುವೆಗೆ ಹೋಗುತ್ತಿದೆ. ಆದ್ದರಿಂದ ಕಾಲುವೆ ಅಗಲ ಮಾಡಬೇಕೆಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಕಾಂಕ್ರೀಟ್ ವಾಲ್‌ಗಳನ್ನು ಕಿತ್ತು ನೀರು ಸರಾಗವಾಗಿ ಹರಿಯುವಂತೆ ಮಾಡದಿದ್ದರೆ ವಿದ್ಯಾನಗರ, ಶಾಂತಮ್ಮ ಲೇಔಟ್‌ನ ನೂರಾರು ಮನೆಗಳು ಮುಳುಗುತ್ತವೆ. ಈ ಬಗ್ಗೆ ಶಾಸಕರಿಗೆ ಅನೇಕ ಬಾರಿ ಸ್ಥಳಕ್ಕೆ ಕರೆದು ತಿಳಿ ಹೇಳಿದ್ದೇವೆ. ಮಳೆಗಾಲಕ್ಕೂ ಮುನ್ನ ಕ್ರಮ ಕೈಗೊಳ್ಳದಿದ್ದರೆ ಈ ವರ್ಷ ಇನ್ನೆಷ್ಟು ಬಾರಿ ನೀರು ನುಗ್ಗುತ್ತದೆಯೊ ಗೊತ್ತಿಲ್ಲ ಎನ್ನುತ್ತಾರೆ ವಾರ್ಡ್ ಕಾರ್ಪೊರೇಟರ್ ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ.

ಈಗಲೆ ಎಚ್ಚೆತ್ತುಕೊಳ್ಳದೆ ಹೋದರೆ ವಿದ್ಯಾನಗರ ಮತ್ತು ಶಾಂತಮ್ಮ ಲೇಔಟ್ ಜನ ಪ್ರತಿ ಮಳೆಗಾಲದಲ್ಲೂ ಮುಳುಗಡೆ ಭೀತಿ ಅನುಭವಿಸಬೇಕಾಗುತ್ತದೆ.

English summary
Shivamogga rain: Shanthamma Layout, Vidyanagar area people facing flood risk ahead of monsoon session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X