• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿ.ಜಿ. ಸಿದ್ಧಾರ್ಥ ಮಲೆನಾಡ ನಂಟಿನ ನೆನಪಿನ ಪಯಣ

|
Google Oneindia Kannada News

ಶಿವಮೊಗ್ಗ, ಜುಲೈ 30 : ವಿ.ಜಿ. ಸಿದ್ಧಾರ್ಥ ಈ ಹೆಸರು ಕೇಳಿ ಮಲೆನಾಡಿನ ಯುವಕರು ರೋಮಾಂಚನಗೊಳ್ಳುತ್ತಿದ್ದರು. ಪಿಯುಸಿ, ಪದವಿ ಮುಗಿಸಿದ ಈ ಭಾಗದ ಸಾವಿರಾರು ಯುವಕರಿಗೆ ಸಿದ್ದಾರ್ಥ ಕೆಲಸ ನೀಡಿದ್ದರು. ಅವರು ನಿಗೂಢವಾಗಿ ನಾಪತ್ತೆ ಎಂಬ ಸುದ್ದಿ ಕೇಳಿ ಅನೇಕ ಯುವಕರು ದುಃಖಿಸುತ್ತಿದ್ದಾರೆ.

ಕೆಫೆ ಕಾಫಿ ಡೇ ಮಾಲೀಕ, ಶ್ರೀಮಂತ ಉದ್ಯಮಿ, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅಳಿಯ ವಿ. ಜಿ. ಸಿದ್ಧಾರ್ಥ. ಮಲೆನಾಡಿನ ಕಾಫಿಯ ಘಮವನ್ನು ದೇಶ ವಿದೇಶಕ್ಕೆ ಹಬ್ಬಿಸಿದ ಜಾದೂಗಾರ. ಮಲೆನಾಡ ಭಾಗದ ಯುವಕರಿಗೆ, ಹೊಸ ಉದ್ಯಮಿಗಳಿಗೆ ರೋಲ್ ಮಾಡೆಲ್.

ವಿ.ಜಿ. ಸಿದ್ಧಾರ್ಥ ನಾಪತ್ತೆ : ಎಸ್‌.ಎಂ.ಕೃಷ್ಣ ಭೇಟಿಯಾದ ಸಿದ್ದರಾಮಯ್ಯವಿ.ಜಿ. ಸಿದ್ಧಾರ್ಥ ನಾಪತ್ತೆ : ಎಸ್‌.ಎಂ.ಕೃಷ್ಣ ಭೇಟಿಯಾದ ಸಿದ್ದರಾಮಯ್ಯ

ವಿ. ಜಿ. ಸಿದ್ಧಾರ್ಥ ಅವರ ಉದ್ಯಮದ ಮುಖ್ಯ ಕಚೇರಿಗಳು ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಹರಡಿರಬಹುದು. ಆದರೆ, ಅವರು ತೀರ್ಥಹಳ್ಳಿಯ ಜೊತೆಗೂ ನಂಟು ಹೊಂದಿದ್ದಾರೆ. ವಿ. ಜಿ. ಸಿದ್ಧಾರ್ಥ ಅವರ ತಾಯಿಯ ಮನೆ ತೀರ್ಥಹಳ್ಳಿ. ವಿ. ಜಿ. ಸಿದ್ಧಾರ್ಥ ಮಾವ ಎಸ್‌. ಎಂ. ಕೃಷ್ಣ ಅವರು ಸಹ ತೀರ್ಥಹಳ್ಳಿಯ ಅಳಿಯ.

ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್

ವಿ. ಜಿ. ಸಿದ್ಧಾರ್ಥ ತೀರ್ಥಹಳ್ಳಿ ತಾಲೂಕಿನೊಂದಿಗೆ ನಂಟನ್ನು ಮಾತ್ರ ಹೊಂದಿಲ್ಲ. ತಾಲೂಕಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟ್ರಕವಿ ಕುವೆಂಪು ಹುಟ್ಟೂರು ಕುಪ್ಪಳ್ಳಿಗೆ ಅವರು ಅನೇಕ ಕೊಡುಗೆ ನೀಡಿದ್ದಾರೆ. ವಿ. ಜಿ. ಸಿದ್ಧಾರ್ಥ ತಂದೆ ಮೂಡಿಗೆರೆಯಲ್ಲಿರುವ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾಗಿದ್ದರು.

ಸಿದ್ಧಾರ್ಥ ಸಹಿಯಲ್ಲಿ ವ್ಯತ್ಯಾಸ? ಹೊಸ ಅನುಮಾನಸಿದ್ಧಾರ್ಥ ಸಹಿಯಲ್ಲಿ ವ್ಯತ್ಯಾಸ? ಹೊಸ ಅನುಮಾನ

ವಿ. ಜಿ. ಸಿದ್ಧಾರ್ಥ ಅವರ ಮಲೆನಾಡಿನ ನಂಟಿನ ಬಗ್ಗೆ ತೀರ್ಥಹಳ್ಳಿಯ ಪತ್ರಕರ್ತ ನೆಂಪೆ ದೇವರಾಜ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಆ ಬರಹದ ಆಯ್ದ ಭಾಗ ಇಲ್ಲಿದೆ...

ಅಂದು ಅರ್ಥ ಸಚಿವರಾಗಿದ್ದ ಮನಮೋಹನ ಸಿಂಗ್ ರವರ ಉದಾರ ಆರ್ಥಿಕ ನೀತಿ ಫಲ ಕೊಡುವ ಕಾಲದಲ್ಲಿ ಸಿದ್ದಾರ್ಥರವರ ಹೆಸರು ಮಲೆನಾಡಿನಾದ್ಯಂತ ಹೆಸರು ಪಡೆದುಕೊಳ್ಳುತ್ತಿತ್ತು. ಇವರ ಶೇರು ಮಾರುಕಟ್ಟೆಗೆ ಸಂಬಂಧಿಸಿದ ಶಿವನ್ ಅಂಡ್ ಶಿವನ್ ಕಂಪೆನಿ, ಕಾಫಿ ಮಾರುಕಟ್ಟೆಗೆ ಸಂಬಂಧಿಸಿದ ಎಬಿಸಿ ಕಂಪನಿ ಆರಾಮ ದಾಯಕ ಮಾತುಕತೆಗಳಿಗೆ ಪೂರಕವಾಗಿ ಸ್ಥಾಪನೆಗೊಳ್ಳುತ್ತಿದ್ದ ಕಾಫಿ ಡೇಗಳಲ್ಲಿ ಮಲೆನಾಡಿನ ಅನೇಕರು ಕೈತುಂಬಾ ಸಂಬಳ ಪಡೆದುಕೊಳ್ಳುತ್ತಿದ್ದ ಕಾಲ.

ಎಬಿಸಿ, ಕಾಫಿ ಡೇ ಎಂಬ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರ ಬಗ್ಗೆ ಈ ಭಾಗದಲ್ಲಿ ವಿಶೇಷ ಗೌರವಾಧರಗಳು!. 'ಎಬಿಸಿ' ಎಂಬ ಪದ ಸೃಷ್ಟಿಸುತ್ತಿದ್ದ ಚೈತನ್ಯ ಯುವಕರುಗಳಿಗೆ ಮತ್ತಷ್ಟು ರೋಮಾಂಚನ ನೀಡುವಂತಾದ್ದಾಗಿತ್ತು. ಇಂತಹ ಸಂದರ್ಭದಲ್ಲೆ ಸಿದ್ದಾರ್ಥರವರ ಸರಳತನಗಳ ಬಗ್ಗೆ ಅವರನ್ನು ಹತ್ತಿರದಿಂದ ಬಲ್ಲವರುಗಳಿಂದ ದಂತಕತೆಗಳೋಪಾದಿಯಲ್ಲಿ ಹೊಸ ಹೊಸ ಸಂಗತಿಗಳು ಹೊರ ಬರುತ್ತಿದ್ದವು.

ತಮ್ಮ ಕಂಪನಿಯಲ್ಲಿ ಐವತ್ತು ಸಾವಿರ ಮಂದಿಗೆ ಉದ್ಯೋಗ ನೀಡಿದ್ದಾರೆ, ಅದರಲ್ಲೂ ಮಲೆನಾಡಿನ ಯುವಕರುಗಳಿಗೆ ತಾವೇ ತರಬೇತಿಯ ವ್ಯವಸ್ಥೆ ಮಾಡಿ ಕಂಪೆನಿಯ ಶಿಸ್ತುಗಳಿಗೆ ಒಗ್ಗಿಕೊಳ್ಳುವಂತೆ ಮಾಡುತ್ತಿದ್ದ ಇವರ ಉದಾರತೆಗಳ ಬಗ್ಗೆ ತುಂಬ ಆಸಕ್ತಿದಾಯಕ ಕತೆಗಳೇ ಇವೆ.

ಮಲೆನಾಡ ಕಾಲೇಜುಗಳಲ್ಲಿ ಬಿ.ಎ, ಬಿ.ಎಸ್ಸಿ, ಬಿಕಾಂ ಮಾಡಿದವರಿಗೂ ತಮ್ಮ ಕಂಪನಿಯಲ್ಲಿ ಉತ್ತಮೋತ್ತಮ ಹುದ್ದೆಗಳನ್ನು ನೀಡಿದ್ದರ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ. ಇಂದು ಸಿದ್ದಾರ್ಥರವರು ಕಣ್ಮರೆಯಾಧ ಸುದ್ದಿ ಬರುತ್ತಿದ್ದಂತೆ ಇವರ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಯುವಕರು ತಮ್ಮ ದುಃಖ ತೋಡಿಕೊಳ್ಳುತ್ತಿರುವುದನ್ನು ಗಮನಿಸಿದರೆ ಸಿದ್ದಾರ್ಥರವರ ವ್ಯಕ್ತಿತ್ವ ಎಂತಾದ್ದು ಎಂಬುದು ಬರುತ್ತದೆ.

ಸಿದ್ದಾರ್ಥರವರು ಮತ್ತೆ ಮತ್ತೆ ನೆನಪಾಗುವುದು ಕುಪ್ಪಳ್ಳಿಯ ಮೂಲಕ. ಅಂದು ಪೂರ್ಣಚಂದ್ರ ತೇಜಸ್ವಿಯವರು ಇಡೀ ಕುಪ್ಪಳ್ಳಿಗೆ ವಿಶ್ವ ಮಟ್ಟದ ಮೆರಗು ನೀಡ ಬಯಸಿದರು. ಕಗ್ಗಾಡಿನ ಯಾವುದೇ ಜೀವ ಸಂಕುಲಕ್ಕೂ ತೊಂದರೆಯಾಗದಂತೆ ರಾಷ್ಟ್ರ ಕವಿಯ ಸ್ಮಾರಕ ನಿರ್ಮಿಸುವ ಬಗ್ಗೆ ತಮ್ಮದೇ ಕನಸು ಕಂಡರು.

ವಿಶ್ವ ವಿಖ್ಯಾತ ಕಲಾವಿದ ಕೆ.ಟಿ ಶಿವಪ್ರಸಾದ್ ಸಲಹೆಯಂತೆ ರೂಪುಗೊಳ್ಳ ಬೇಕಾದ ನೀಲ ನಕ್ಷೆ ತಯಾರಾಯಿತು. ವಿಖ್ಯಾತ ದಾರ್ಶನಿಕ ಲಿಯೋ ಟಾಲಸ್ಟಾಯ್ ಮತ್ತು ಶೇಕ್ಸ್ ಪಿಯರ್ ಮುಂತಾದವರ ಸ್ಮಾರಕಗಳನ್ನೆಲ್ಲ ಅದ್ಯಯನಿಸಿ ಕುಪ್ಪಳ್ಳಿ ರೂಪುಗೊಳ್ಳಬೇಕಾಯಿತು.

ಗಾಳಿ ಮಳೆ ಚಳಿ ,ಇಂತಹ ಯಾವುದೇ ಪ್ರಾಕೃತಿಕ ಹೊಡೆತಗಳಿಗೆ ಬಲಿಯಾಗದಂತಹ ರಚನೆಗಳು ನಿರ್ಮಾಣಗೊಳ್ಳಬೇಕು. ಅಂತೆಯೇ ನಿರ್ಮಾಣಗೊಂಡಿತು. ಗ್ರೀಕ್ ಮಾದರಿಯ ಶಿಲ್ಪಾಕೃತಿಗಳು ಸಾಮನ್ಯ ನೋಡುಗನಿಗೆ ಬೆಕ್ಕಸ ಬೆರಗು ಗೊಳಸಬಲ್ಲದೇ ಹೊರತು ವಿಶೇಷ ಅರ್ಥ ಕಲ್ಪಿಸಲಾರದಿರಬಹುದು.

ಆದರೆ ಕವಿ ದಾರ್ಶನಿಕರು ಇಲ್ಲಿಗೆ ಬಂದಾಗ ಈ ಶಿಲ್ಪಗಳು ಸೃಷ್ಟಿಸುವ ಯೋಚನಾಲಹರಿಗಳು ಅತ್ಯಪೂರ್ವ ಎನ್ನದೆ ವಿಧಿ ಇಲ್ಲ. ಈ ಬೃಹತ್ ಕಲ್ಲುಗಳನ್ನು ನೀಡಿದವರು ಈ ಸಿದ್ದಾರ್ಥ ಎಂಬುದು ನಮಗೆಲ್ಲ ಹೆಮ್ಮೆ. ಲಕ್ಷಾಂತರ ರೂಪಾಯಿ ಮೌಲ್ಯದ ಈ ಗ್ರಾನೈಟುಗಳನ್ನು ಕೊರೆದು ಕಡೆದು ಹೊತ್ತು ತಂದು ನಿಲ್ಲಿಸಲು ಆದ ಸಂಪೂರ್ಣ ವೆಚ್ಚವನ್ನು ಸಿದ್ದಾರ್ಥರವರೇ ಭರಿಸಿದರೂ ಒಮ್ಮೆಯೂ ತಮ್ಮ ದಾರಾಳತನದ ಬಗ್ಗೆ ಎಲ್ಲೂ ಹೇಳಿಕೊಂಡವರಲ್ಲ.

ಕೊಡುಗೆ ನೀಡಿದ ತಮ್ಮ ಹೆಸರನ್ನು ಇಂತಲ್ಲೇ ಕೊರೆಯಿಸಬೇಕೆಂದೂ ಕೇಳಿಕೊಂಡವರಲ್ಲ. ಕುಪ್ಪಳ್ಳಿ ಕುವೆಂಪು ಟ್ರಸ್ಟ್ ವತಿಯಿಂದ ಸಣ್ಣ ಸನ್ಮಾನ ಅಥವಾ ಗೌರವವನ್ನೂ ಬಯಸಲಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ನೆನೆಯಲೇ ಬೇಕು.

ಅದೆಲ್ಲಕ್ಕಿಂತ ಮುಖ್ಯವಾಗಿ ಕೋಟ್ಯಾದೀಶ ಸಿದ್ದಾರ್ಥರವರು ಹುಟ್ಟಿದ್ದು ನಮ್ಮ ತೀರ್ಥಹಳ್ಳಿಯಲ್ಲಿ. ಅದೂ ತೀರ್ಥಹಳ್ಳಿಯ ಸರ್ಕಾರಿ ಜಯಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ. ಈ ವಿಷಯವನ್ನು ಮೆಡಿಕಲ್ ಆಫಿಸರ್ ಆಗಿದ್ದ ಡಾ. ಶಿವಪ್ರಕಾಶ್ ಒಮ್ಮೆ ನನಗೆ ತಿಳಿಸಿದರು.

ಆಸ್ಪತ್ರೆಯ ಸುಧಾರಣೆಯ ಬಗ್ಗೆ ಹತ್ತಾರು ಕನಸುಗಳನ್ನು ಹೊತ್ತಿದ್ದ ಡಾ. ಶಿವಪ್ರಕಾಶ್ ಸಿದ್ದಾರ್ಥರವರನ್ನು ಭೇಟಿ ಮಾಡುವ ಉದ್ದೇಶವನ್ನೂ ಹೊಂದಿದ್ದರು. ಈ ಭಾವನಾತ್ಮಕ ಸಂಬಂಧದ ಎಳೆ ಹಿಡಿದು ಆಸ್ಪತ್ರೆಯ ಅಭಿವೃದ್ದಿಗೆ ಒಂದಷ್ಟು ದೇಣಿಗೆ ಪಡೆವ ಉದ್ದೇಶ ಹೊಂದಿದ್ದರು ಕೂಡಾ.

ಆದರೆ, ಶಿವಪ್ರಕಾಶ್ ಮಂಗಳೂರಿಗೆ ವರ್ಗಾವಣೆ ಗೊಂಡರು. ಸಿದ್ದಾರ್ಥರವರ ತಾಯಿಯ ಮನೆ ಬೆಜ್ಜವಳ್ಳಿ ಸಮೀಪದ ಹಿರೇತೋಟ ಎಂಬುದನ್ನೂ ಇಲ್ಲಿ ಗಮನಿಸಬೇಕಿದೆ. ಮೊದಲು ಎಲ್ಲ ಶ್ರೀಮಂತರ ಅಥವಾ ಬಡವರ ಹೆರಿಗೆಗಳು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಯಲ್ಲೇ ಆಗುತ್ತಿದ್ದವು. ಹಾಗೆಯೇ ಎಲ್ಲ ಬಡವ ಬಲ್ಲಿದರ ವಿದ್ಯಾಭ್ಯಾಸವೂ ಸರ್ಕಾರಿ ಶಾಲೆಗಳಲ್ಲೇ ನಡೆಯುತ್ತಿದ್ದವು ಕೂಡಾ.

ಸಿದ್ದಾರ್ಥರವರು ಜೀವಂತವಾಗಿ ಬರಲಿ. ಅವರ ಎಲ್ಲ ಕಷ್ಟ ಕೋಟಲೆಗಳು ಪರಿಹಾರವಾಗಲಿ.ಇವರ ಕನಸುಗಳು ಮರಗಟ್ಟಿ ಹೋಗದಿರಲಿ. ಇವರ ಸರಳತನ ಎಲ್ಲ ಉಳ್ಳವರಿಗೂ ಮಾದರಿಯಾಗಲಿ.

English summary
Former CM S.M.Krishna's son in law and founder & owner of the Cafe Coffee Day V.G. Siddhartha has been missing in Mangaluru on July 29, evening. Here are the story of his contribution to Thirthahalli, Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X