ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮ್ಮನಿಗಾಗಿ ಬಾವಿಯನ್ನೇ ತೋಡಿದ ಸಾಗರದ 'ಬಾಹುಬಲಿ'

By Prasad
|
Google Oneindia Kannada News

ಸಾಗರ (ಶಿವಮೊಗ್ಗ), ಮೇ 07 : ಸಾಗರದಂಥ ಮಲೆನಾಡಿನ ಪ್ರದೇಶದಲ್ಲೂ ನೀರಿಗೆ ತತ್ವಾರ. ಅಂಥ ಬೇಸಿಗೆ ಇದು. ಅಮ್ಮ ಪ್ರತಿದಿನ ನೀರು ತರಲೆಂದು ಅರ್ಧ ಕಿ.ಮೀ. ದೂರ ಕ್ರಮಿಸಬೇಕಾಗಿತ್ತು. ಇದನ್ನು ನೋಡುತ್ತಿದ್ದ ಮಗ ಒಂದು ನಿರ್ಧಾರಕ್ಕೆ ಬಂದ. ಅಮ್ಮನಿಗಾಗಿ ಮನೆಯ ಹಿತ್ತಿಲಲ್ಲಿ ಬಾವಿಯನ್ನೇ ಅಗೆದ! ಇಂಥ ಮಕ್ಕಳನ್ನಲ್ಲವೆ ಎಲ್ಲ ಅಮ್ಮಂದಿರು ಬಯಸುವುದು?

ಈ ಸುದ್ದಿ ಸ್ವಲ್ಪ ಅತಿರೇಕದಂತೆ ಕಾಣಿಸುತ್ತದೆ. ಆದರೆ, ಅಮ್ಮನ ಕಷ್ಟ ನೋಡಲಾಗದೆ, ಸಾಗರ ತಾಲೂಕಿನ ಶೆಟ್ಟಿಸಾರ ಗ್ರಾಮದಲ್ಲಿ ನೆಲೆಸಿರುವ 15 ವರ್ಷದ ಹುಡುಗ ಪವನ್ ಕುಮಾರ್ ಬಾವಿಯನ್ನು ಅಗೆದು ನೀರು ಬರಿಸಿದ್ದಾನೆ. ಬಾವಿಯಲ್ಲಿ ನೀರು ಕಂಡೊಡನೆ ಅಮ್ಮನ ಕಣ್ಣು ಮಾತ್ರವಲ್ಲ, ಹೃದಯವೂ ತುಂಬಿ ಬಂದಿದೆ.

ಬಾವಿಯನ್ನು ಪವನ್ ನಿರ್ಮಿಸಿದ ಮೇಲೆ ಊರಿನಲ್ಲಿ ಎಲ್ಲರೂ ಅವನನ್ನು 'ಬಾಹುಬಲಿ' ಎಂದು ಕರೆಯುತ್ತಿದ್ದಾರಂತೆ ಎಂದು ದಿನ್ಯೂಸ್ ಮಿನಿಟ್ ವರದಿ ಮಾಡಿದೆ. ಅಮ್ಮನ ಪೂಜೆಗೆ ನೀರು ತರಲು ಕಷ್ಟವಾಗದಿರಲೆಂದು ಬಾಹುಬಲಿಯು ಶಿವನ ಲಿಂಗವನ್ನೇ ಎತ್ತಿಕೊಂಡು ಬಂದು ಜಲಪಾತದ ಬಳಿ ಪ್ರತಿಷ್ಠಾಪಿಸಿದ್ದನಂತೆ. ತೆಲುಗು ಸಿನೆಮಾದ ಕಥೆಯಿದು. ಇದನ್ನು ಸಾಗರದ 'ಬಾಹುಬಲಿ' ನಿಜವಾಗಿಸಿದ್ದಾನೆ. [ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು]

Son digs well for mother in Sagar, Shivamogga

"ನೀರು ತರಲು ಅಮ್ಮ ಪ್ರತಿದಿನ ಎರಡು ಗಂಟೆ ವ್ಯಯಿಸುತ್ತಿದ್ದಳು. ನನಗೂ ರಜಾ ಇದ್ದ ಕಾರಣ ಅಮ್ಮನಿಗಾಗಿ ಯಾಕೆ ಬಾವಿಯನ್ನೇ ತೋಡಬಾರದು" ಎಂದು ಕಂಗಳನ್ನು ಅರಳಿಸುತ್ತಾನೆ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಪವನ್ ಕುಮಾರ್.

ಅಮ್ಮನೂ ಸೇರಿದಂತೆ ಹಲವಾರು ಜನರು ಇಂಥ ಕೆಲಸಕ್ಕೆ ಕೈಹಾಕಬೇಡ ಎಂದು ತಿಳಿಮಾತು ಹೇಳಿದರು. ನನ್ನ ಕೆಲ ಸ್ನೇಹಿತರು ಕೂಡ ಇದೆಲ್ಲ ಆಗತಕ್ಕ ಮಾತಲ್ಲ ಎಂದು ಬುದ್ಧಿವಾದ ಹೇಳಿದರು. ಅಮ್ಮನೂ ನಾನು ಹತ್ತಿರದ ಬಾವಿಯಿಂದ ನೀರು ತರುತ್ತೇನೆ ಎಂದು ನುಡಿದರು. ಆದರೆ, ನಾನು ನಿರ್ಧಾರ ಮಾಡಿಯಾಗಿತ್ತು ಅಂತಾನೆ ಪವನ್.

ಏಪ್ರಿಲ್ ತಿಂಗಳಲ್ಲಿ ಬಾವಿ ತೋಡಲು ಪವನ್ ಆರಂಭಿಸಿದ್ದಾನೆ. 45 ಅಡಿ ಅಗೆತ ಆದ ನಂತರ ಕೈಮುರಿದಿದ್ದರಿಂದ ಇನ್ನಿಬ್ಬರ ಸಹಾಯ ತೆಗೆದುಕೊಳ್ಳಬೇಕಾಯಿತು ಎಂದು ಹೇಳುವ ಪವನ್ ಮುಂದೆ ಪೊಲೀಸ್ ಅಧಿಕಾರಿಯಾಗಿ ರಾಜ್ಯದ ಸೇವೆ ಸಲ್ಲಿಸಬೇಕು ಎಂದು ಕನಸು ಹೊತ್ತಿದ್ದಾನೆ. [ಮಕ್ಕಳ ಕಳೆದುಕೊಂಡ ಅಮ್ಮಂದಿರ ಗೋಳು ಕೇಳೋರ್ಯಾರು?]

45 ಅಡಿ ಅಗೆದ ನಂತರವೂ ನೀರು ಬರದಿದ್ದರಿಂದ ತುಂಬಾ ನಿರಾಶೆ ಆಗಿತ್ತು. ಆದರೆ, ಇಬ್ಬರು ವೃತ್ತಿಪರ ಬಾವಿ ತೋಡುವವರ ಸಹಕಾರದಿಂದ ಇನ್ನೂ ಹತ್ತು ಅಡಿ ತೋಡಿದಾಗ ನೀರು ಜಿನುಗಿತು ಎಂದು ಪವನ್ ಹೇಳುತ್ತಾನೆ. ಈ ಬಾವಿಯ ನೀರನ್ನು ಪವನ್ ಮನೆಯವರು ಮಾತ್ರವಲ್ಲ ಅಕ್ಕಪಕ್ಕದವರೂ ಬಳಸುತ್ತಿದ್ದಾರೆ.

ಇದೇ ಭಾನುವಾರ, ಮೇ ತಿಂಗಳ ಎರಡನೇ ಭಾನುವಾರ, ಮೇ 8ರಂದು ಅಮ್ಮನ ದಿನಾಚರಣೆ. ಅಮ್ಮನ ದಿನಕ್ಕೆ ಬಾವಿ ತೋಡಿ ಇದ್ದಲ್ಲಿಯೇ ನೀರು ಸಿಗುವಂತೆ ಮಾಡಿದ್ದಕ್ಕಿಂತ ದೊಡ್ಡ ಕಾಣಿಕೆ ಇನ್ನೇನಿದೆ. ಎಲ್ಲ ಅಮ್ಮಂದಿರಿಗೂ ಇಂಥ ಮಕ್ಕಳು ಸಿಗಲಿ.

English summary
15-year-old son of a mother in Sagar taluk in Shivamogga district has given wonderful gift to the beloved by digging well behind the house. Mother had to walk half a kilometer to fetch water. Then Pavan Kumar decided to dig well for the sake of her mother and succeeded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X