• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗದಲ್ಲಿ ಸೋಡಾ, ಸೌತೇಕಾಯಿ ಮಾರುವ ಎಂಜಿನಿಯರ್ ರೋಹಿತ್ ಗೆ ಇದು ಫ್ಯಾಮಿಲಿ ಬಿಜಿನೆಸ್ !

By ಯಶಸ್ವಿನಿ ಎಂ.ಕೆ.
|

ಎಳೆ ಸೌತೇಕಾಯಿ. ಅದಕ್ಕೆ ಸವರಲೆಂದೇ ತಯಾರಾಗಿರುವ ಹಸಿರು- ಕೆಂಪಿನ ಖಾರ. ನೋಡಿದ ತಕ್ಷಣ ಒಮ್ಮೆ ಹೋಗಿ ರುಚಿ ನೋಡಿಯೇ ಬಿಡೋಣ ಎಂದು ನಾಲಗೆಗೆ ಆಸೆ ಹುಟ್ಟುವಂತೆ ಮಾಡುತ್ತವೆ. ಇದರ ಜತೆಗೆ ಸೋಡಾ ಕೂಡ ಇದ್ದರೆ ಓಹ್, ಇಲ್ಲ ನೀವೊಮ್ಮೆ ರುಚಿ ನೋಡಲೇ ಬೇಕು. ಆ ನಂತರ ಅನುಭವವನ್ನು ಹಂಚಿಕೊಳ್ಳಬೇಕು.

ಹಸಿರುಬಣ್ಣದ ಗಾಜಿನ ಬಾಟಲಿಯೊಳಗೆ ನೀಲಿ ಬಣ್ಣದ ಗೋಲಿಯನ್ನು ಒತ್ತಿ, ಅದರ ಒಳಗಿರುವ ಸೋಡಾಗೆ ಸ್ವಲ್ಪ ನಿಂಬೆಹಣ್ಣು ಹಾಗೂ ಕಾಳುಮೆಣಸಿನ ಪುಡಿಯನ್ನು ಮಿಶ್ರ ಮಾಡಿಕೊಟ್ಟ ನಂತರ ಕುಡಿದರೆ, ಅದೆಂಥ ಬೇಸಿಗೆಯಲ್ಲೂ ಜೀವಕ್ಕೆ ಹಾಯೆನಿಸುತ್ತದೆ. ಅಂತಹ ಸೋಡಾ ಈಗ ಎಲ್ಲಿ ಸಿಗುತ್ತದೆ? ಒಂದು ವೇಳೆ ಸಿಕ್ಕಿದರೂ ಸ್ವಚ್ಛ- ಶುದ್ಧವಾಗಿ ಇರುತ್ತದಾ ಎಂಬುದು ನಿಮ್ಮ ಪ್ರಶ್ನೆಯೇ?

ಶಿವಮೊಗ್ಗ- ದಾವಣಗೆರೆ ರಸ್ತೆಯ ಮಧು ಮಂಡಕ್ಕಿ ಹೋಟೆಲ್ ಬಗ್ಗೆ ಒಂದಿಷ್ಟು

ನೈಸರ್ಗಿಕವಾಗಿ ತಯಾರಾಗುತ್ತಿದ್ದ ಆ ಉತ್ಪನ್ನ, ಈಗಿನ ಫ್ಲೇವರ್ ಸೋಡಾಗಳ ಮಧ್ಯೆ ಮೂಲೆ ಗುಂಪಾಗುತ್ತಿದೆ. ಆದರೆ ಶಿವಮೊಗ್ಗದ ಒಂದಲ್ಲ ಎರಡು ತಲೆಮಾರಿಗೆ ಈ ಗೋಲಿ ಸೋಡಾದ ರುಚಿ- ಸ್ವಾದ ಹಾಗೇ ನಾಲಗೆ ಮೇಲೆ ಉಳಿದಿರಲಿಕ್ಕೆ ಸಾಕು. ಏಕೆಂದರೆ ಅದರಲ್ಲಿ ಇವರ ಕೊಡುಗೆ ಇದೆ. ಸುಮಾರು 45 ವರ್ಷಗಳಿಂದ ಶಿವಮೊಗ್ಗ ನಗರದ ಡಿವಿಎಸ್ ಕಾಲೇಜಿನ ಬಸವೇಶ್ವರ ವೃತ್ತದ ಬಳಿಯ ಜಯಣ್ಣ ಅವರ ಬಳಿ ಸೋಡಾ ಕುಡಿಯದವರೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಖ್ಯಾತಿ ಪಡೆದಿದ್ದಾರೆ.

120 ಬಾಟಲಿಗೂ ಅಧಿಕ ಸೋಡಾ ಮಾರಾಟ

120 ಬಾಟಲಿಗೂ ಅಧಿಕ ಸೋಡಾ ಮಾರಾಟ

ತಳ್ಳುವ ಗಾಡಿಯಲ್ಲಿ ಮಾರಾಟಕ್ಕೆ ಬರುವ ಶಿವಮೊಗ್ಗದ ಜಯಣ್ಣ ಹಾಗೂ ಅವರ ಮಗ ರೋಹಿತ್ ದಿನವೂ 120 ಬಾಟಲಿಗೂ ಅಧಿಕ ಸೋಡಾವನ್ನು ಮಾರುತ್ತಾರೆ. ಅದರೊಟ್ಟಿಗೆ ಸರಿಯಾದ ಕಾಂಬಿನೇಷನ್ ಎಂಬುವಂತೆ ಸೌತೇಕಾಯಿಗೆ ಹಸಿ ಖಾರ ಹಚ್ಚಿ, ನಿಂಬೆಹಣ್ಣು ಹಿಂಡಿ ಕೊಡುತ್ತಾರೆ. ಒಮ್ಮೆ ನೋಡಿದರೆ ತಿನ್ನಲೇಬೇಕೆನಿಸುತ್ತದೆ. ಇಲ್ಲಿಗೆ ಬರುವ ಗ್ರಾಹಕರ ಸಂಖ್ಯೆ ಜಾಸ್ತಿ. ಎಷ್ಟೋ ಬಾರಿ ಸರತಿ ಅತಿ ದೊಡ್ಡದಿರುತ್ತದೆ. ಒಂದು ಬಾರಿ ಇಲ್ಲಿ ಸೋಡಾ ಸವಿದವರು ಮತ್ತೆ ಮತ್ತೆ ಇಲ್ಲಿಗೆ ಬರುತ್ತಾರೆ. ಇಲ್ಲಿ ಸೋಡಾ ಸವಿದವರಲ್ಲಿ ರಾಜಕಾರಣಿಗಳು, ಶಿಕ್ಷಕರು, ವೈದ್ಯರು, ಕೂಲಿಕಾರರು ಹೀಗೆ ಪಟ್ಟಿ ಸಾಗುತ್ತಲೇ ಇರುತ್ತದೆ. ಬಹುಪಾಲು ಮಂದಿಗೆ ಇಲ್ಲಿ ಸಿಗುವ ಕಟ್ಟಾ ಮೀಟಾ ಸೋಡಾ, ಪುದೀನಾ ಸೋಡಾ, ಜಿಂಜರ್ ಸೋಡಾ, ಸ್ವೀಟ್ ಸೋಡಾ, ಲೆಮೆನ್ ಸೋಡಾ ಬಲು ಇಷ್ಟ. ಇನ್ನು ಸೌತೇಕಾಯಿಯಂತೂ ಬಾಯಿಯಲ್ಲಿ ನೀರು ಬರುವಂತೆ ಮಾಡುತ್ತದೆ.

ರೋಹಿತ್ ಅವರದು ಸೋಡಾ ಮಾರಾಟದಲ್ಲಿ ಮೂರನೇ ತಲೆಮಾರು

ರೋಹಿತ್ ಅವರದು ಸೋಡಾ ಮಾರಾಟದಲ್ಲಿ ಮೂರನೇ ತಲೆಮಾರು

ಶಿವಮೊಗ್ಗದ ಜನರು, ಹೊರಗಿನಿಂದ ಇಲ್ಲಿಗೆ ಬರುವವರು ಆರೇಳು ದಶಕಗಳಿಂದ ಜಯಣ್ಣ ಕುಟುಂಬದವರ ಕೈಯಿಂದ ನೀಡುತ್ತಿರುವ ಸೋಡಾ ಸವಿಯುತ್ತಿದ್ದಾರೆ. ಜಯಣ್ಣರಿಗಿಂತ ಮುಂಚೆ ಅವರ ತಂದೆ ರಂಗಪ್ಪ ಮನೆಯಲ್ಲಿ ತಯಾರಿಸಿದ ಸೋಡಾವನ್ನು ಮನೆ ಮನೆಗೆ ತೆರಳಿ ಮಾರುತ್ತಿದ್ದರು. ಅವರ ತರುವಾಯ ಮಗ ಜಯಣ್ಣ 1974ರಿಂದ ಈ ವೃತ್ತಿ ಮುಂದುವರಿಸಿಕೊಂಡು ಬಂದಿದ್ದಾರೆ. ಸುಮಾರು 45 ವರ್ಷಗಳಿಂದ ಅದೇ ರುಚಿಯನ್ನು ಕಾಪಾಡಿಕೊಂಡು ಬಂದಿರುವ ಜಯಣ್ಣ, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವರಿಗೆ ಮಗ ರೋಹಿತ್ ಸಾಥ್ ನೀಡುತ್ತಿದ್ದಾರೆ. ಸೋಡಾವನ್ನು ಮನೆಯಲ್ಲಿ ತಯಾರಿಸುತ್ತಿದ್ದು, ಇದಕ್ಕಾಗಿ ರಾತ್ರಿಯಿಂದಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಾರೆ. ಇನ್ನು ರೋಹಿತ್ ಸಿಇಟಿಯಲ್ಲಿ ಒಳ್ಳೆ ಅಂಕ ಪಡೆದು, ಬೆಂಗಳೂರಿನ ಜೈನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಷಯದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ.

ಊಟ-ತಿಂಡಿ ಮನೆಗೆ ತಲುಪಿಸುವ- 'ಬ್ರಾಹ್ಮಿನ್ ಲಂಚ್ ಬಾಕ್ಸ್'

ಒಂದೂವರೆ ವರ್ಷ ಖಾಸಗಿ ಕಂಪೆನಿಯಲ್ಲಿ ಕೆಲಸ

ಒಂದೂವರೆ ವರ್ಷ ಖಾಸಗಿ ಕಂಪೆನಿಯಲ್ಲಿ ಕೆಲಸ

ಎಂಜಿನಿಯರಿಂಗ್ ಮುಗಿದ ಬಳಿಕ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಒಂದೂವರೆ ವರ್ಷ ಕೆಲಸ ನಿರ್ವಹಿಸಿದ ಅವರು, ಬೇರೆ ಕಂಪನಿಯಲ್ಲಿ ಕೆಲಸ ಮಾಡುವುದಕ್ಕಿಂತ ತಂದೆಯ ಉದ್ಯೋಗವನ್ನೇ ಮುಂದುವರಿಸಬೇಕು ಎಂದು ಯೋಚನೆ ಮಾಡಿ, ವಾಪಸಾಗಿದ್ದಾರೆ. ಈಗ ತಂದೆಗೆ ಸಹಾಯ ಮಾಡುತ್ತಾ ಇರುವ ರೋಹಿತ್ ಗೆ ಈ ಕೆಲಸದ ಮೇಲೆ ಅತೀವ ಪ್ರೀತಿ. ಇನ್ನು ತಮಗೆ ಕೆಲಸ ಮಾಡುವ ಸಂದರ್ಭದಲ್ಲಿ ಜನರ ಮೆಚ್ಚುಗೆಯ ನುಡಿಗಳು ಅತ್ಯಂತ ತೃಪ್ತಿಕರ ಎನಿಸುತ್ತದೆ. ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಿದರೂ ಇಷ್ಟೊಂದು ಸಂತೃಪ್ತಿ ಸಿಗುತ್ತಿರಲಿಲ್ಲ. ಅದೆಲ್ಲವನ್ನೂ ನನ್ನ ಸೋಡಾ ವೃತ್ತಿ ಒದಗಿಸಿದೆ. ಸ್ನೇಹಿತರೇ ಸೋಡಾ ಕುಡಿಯಲು ಬಂದಾಗ ನನ್ನನ್ನು ನೋಡಿ ಅಚ್ಚರಿ ಪಡುತ್ತಾರೆ ಎನ್ನುತ್ತಾರೆ.

ಮಳೆಗಾಲಕ್ಕೂ ಮಜಬೂತು ಜಾಗ ಶಿವಮೊಗ್ಗದ ಶೆಟ್ಟರ ಗೋಲಿ ಬಜ್ಜಿ ಕಾರ್ನರ್

ಸೌತೇಕಾಯಿ ಪೀಸ್ ಗೆ 5 ರುಪಾಯಿ

ಸೌತೇಕಾಯಿ ಪೀಸ್ ಗೆ 5 ರುಪಾಯಿ

ದಿನಕ್ಕೆ 50 ಕೆ.ಜಿ. ಸೌತೇಕಾಯಿ ಮಾರುತ್ತೇವೆ. ಒಂದು ಸೋಡಾಗೆ 20 ರುಪಾಯಿ, ಸೌತೇಕಾಯಿ ಪೀಸ್ ಗೆ 5 ರುಪಾಯಿ ನಿಗದಿಪಡಿಸಿದ್ದೇವೆ. ನನಗೆ ವಿದ್ಯೆ ಕೇವಲ ಜ್ಞಾನಾರ್ಜನೆಗಾಗಿ ಮಾತ್ರ. ಇಂಜಿನಿಯರಿಂಗ್ ಓದಿದ ಮಾತ್ರಕ್ಕೆ ಸೋಡಾ ಮಾರಬಾರದು ಎಂಬ ನಿಯಮ ಇಲ್ಲ ಅಲ್ಲವೆ? ಎಂದು ನಗುತ್ತಾ ಪ್ರಶ್ನೆ ಮಾಡುತ್ತಾರೆ ರೋಹಿತ್. ಇಂಜಿನಿಯರಿಂಗ್ ಓದಿದ್ದೇನೆ. ನನಗೇನೂ ಕೆಲಸ ಇಲ್ಲವೆಂದು ಮನೆಯಲ್ಲಿಯೇ ಕೂರುವ ಅನೇಕ ಮಂದಿಗೆ ರೋಹಿತ್ ಜೀವನಶೈಲಿ ಮಾದರಿ ಆಗಬಹುದೇನೋ. ಇರಲಿ, ನೀವೇನಾದರೂ ಶಿವಮೊಗ್ಗಕ್ಕೆ ಹೋದರೆ, ನಿಮಗೆ ಸೋಡಾ- ಸೌತೇಕಾಯಿಯ ನೆನಪಾದರೆ, ರೋಹಿತ್ ರಂಥವರನ್ನು ಭೇಟಿ ಮಾಡಿ, ಮಾತನಾಡಿಸಬೇಕು ಅಂತೆನಿಸಿದರೆ ಭೇಟಿ ಮಾಡಬಹುದು.

ಹೊಸನಗರ ಯುವಕನ ಪ್ರಯೋಗ: ಅಡಿಕೆಯಿಂದ ತಯಾರಾಗಲಿದೆ ರುಚಿಕರ ಉಪ್ಪಿನಕಾಯಿ

English summary
Soda and cucumber sale is the family business of engineer Rohith in Shivamogga city DVS college Basaveshwara circle. This is the third generation engaging in this business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X