• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶೇಷ ವರದಿ: ಗಾಜನೂರಿನಲ್ಲೊಂದು ಯಶಸ್ವೀ ಕ್ವಾರಂಟೈನ್ ಕೇಂದ್ರ

By ರಮೇಶ್ ಎಚ್.ಕೆ, ಶಿವಮೊಗ್ಗ
|

ಈಗಾಗಲೇ ಕರ್ನಾಟಕದ ಹತ್ತು ಹಲವು ಕ್ವಾರಂಟೈನ್ ಕೇಂದ್ರಗಳ ಪರಿಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ನಮ್ಮಲ್ಲಿ ಬಹಳಷ್ಟು ಮಂದಿಗೆ ತಿಳಿದಿದೆ. ಬಿಸೀನಿರಿದ್ದರೆ ಊಟವಿಲ್ಲ, ಊಟವಿದ್ದರೆ ವೈದ್ಯರಿಲ್ಲ, ಇದ್ದ ವೈದ್ಯರು ಬರುವುದಿಲ್ಲ, ಅಗತ್ಯವಿರುವ ಔಷಧಿಗಳ ಪೂರೈಕೆ ಕೂಡಾ ಇಲ್ಲ. ಇನ್ನು ಕೆಲ ಕಡೆ ಸರಿಯಾದ ನೈರ್ಮಲ್ಯ ವ್ಯವಸ್ಥೆ ಇಲ್ಲದೇ ಸರ್ಕಾರೀ ಕ್ವಾರಂಟೈನ್ ಕೇಂದ್ರಗಳು ಅಪಾಯದ ಕೇಂದ್ರಗಳಾಗಿ ಬಹಳಷ್ಟು ಮಂದಿ ಜನರಲ್ಲಿ ವಿಶ್ವಾಸವನ್ನು ಕುಂದಿಸಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಆದರೆ ಇದೆಲ್ಲದಕ್ಕೂ ಅಪವಾದ ಎಂಬಂತೆ ಶಿವಮೊಗ್ಗ ಜಿಲ್ಲೆಯ ಗಾಜನೂರು ಮತ್ತು ಸಕ್ರೈಬೈಲ್ ನಡುವೆ ಇರುವ ಕ್ವಾರಂಟೈನ್ ಕೇಂದ್ರವು ಅತ್ಯುತ್ತಮವಾದ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಶಿವಮೊಗ್ಗದಲ್ಲಿ ಹೆಚ್ಚಾದ ಕೊರೊನಾ ಪ್ರಕರಣ; ಪರೀಕ್ಷೆ ಪ್ರಮಾಣವೂ ಹೆಚ್ಚಳ

ಗಾಜನೂರಿನ ಮೊರಾರ್ಜಿ ವಸತಿ ಶಾಲೆಯಲ್ಲಿ ರೂಪಿಸಲಾಗಿರುವ ಈ ಕ್ವಾರಂಟೈನ್ ಕೇಂದ್ರವು ನಿಜಕ್ಕೂ ಕರೋನಾ ಸೋಂಕು ತಗುಲಿ ಆತಂಕದಿಂದ ಕ್ವಾರಂಟೈನ್ ನಲ್ಲಿರುವವರಿಗೆ ವಿಶ್ವಾಸ ಮೂಡಿಸುವ ಮತ್ತು ಅವರಲ್ಲಿ ಗುಣವಾಗುವ ನಂಬಿಕೆಯನ್ನು ಹೆಚ್ಚು ಮಾಡುವಂತೆ ಕೆಲಸ ಮಾಡುತ್ತಿದೆ.

ಇಲ್ಲಿನ ಕಾರ್ಯ ನಿರ್ವಹಣಾ ರೀತಿ :

ಸುಮಾರು 190 ಮಂದಿ ಕೋವಿಡ್ ಸೋಂಕಿತರು ಇರುವಂತಹ ಈ ಕ್ವಾರಂಟೈನ್ ಕೇಂದ್ರಕ್ಕೆ ಪ್ರತಿ ದಿನ ಮೂರು ಬಾರಿ ವೈದ್ಯರ ತಂಡವು ಭೇಟಿ ನೀಡುತ್ತಿದ್ದು ಸೋಂಕಿತರ ನಿಯಮಿತ ಪರೀಕ್ಷೆ ಹಾಗೂ ಅವರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ.

ಸೋಂಕಿತರಿಗೆ ಯಾವ ಆತಂಕ ಉಂಟಾಗದಂತೆ ಅವರೊಡನೆ ಮಾತನಾಡುವ ವೈದ್ಯರು ಅವರಿಗೆ ಏನನ್ನು ನೀಡಬೇಕು ಮತ್ತು ನೀಡಬಾರದು ಎಂಬುದರ ಬಗ್ಗೆ ವ್ಯವಸ್ಥಿತವಾಗಿ ಅಲ್ಲಿನ ನಿರ್ವಾಹಕರಿಗೆ ಸೂಚನೆ ನೀಡುತ್ತಾರೆ ಮತ್ತು ಸೋಂಕಿತರಿಗೆ ಏನೇ ತೊಂದರೆಗಳಾದರೂ ಸಹ ಸಕಾರಾತ್ಮಕವಾಗಿ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.

ವೃದ್ಧನ ಅಂತ್ಯಕ್ರಿಯೆ ವಿಚಾರದಲ್ಲಿ ಮಹಾ ಎಡವಟ್ಟು ಮಾಡಿಕೊಂಡಿತಾ ಮೆಗ್ಗಾನ್ ಆಸ್ಪತ್ರೆ!

ಇನ್ನು ಈ ಕ್ವಾರಂಟೈನ್ ಕೇಂದ್ರದ ಯಶಸ್ಸಿಗೆ ಅತಿ ಮುಖ್ಯ ಕಾರಣ ಈ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ವಿ.ಜಿ.ಅನಿಲ್ ಕುಮಾರ್ ಅವರು ಎಂದು ಅಲ್ಲಿ ಕ್ವಾರಂಟೈನ್ ನಲ್ಲಿ ಇದ್ದ ಕೆಲ ಜನರು ಮತ್ತು ಅವರ ಕೆಲಸದ ರೀತಿಯನ್ನು ಕಣ್ಣಾರೆ ಕಂಡವರು ಹೇಳುತ್ತಿದ್ದಾರೆ.

ಅವರ ಪ್ರಕಾರ, ಕಳೆದ 3-4 ತಿಂಗಳಿಂದಲೂ ಸಹ ಕುಟುಂಬದಿಂದ ದೂರ ಇದ್ದುಕೊಂಡು ಕ್ವಾರಂಟೈನ್ ಕೇಂದ್ರದಲ್ಲಿರುವ ಕರೋನಾ ಸೋಂಕಿತರ ಸೇವೆ ಮಾಡುತ್ತಿರುವ ಇವರು ಅಲ್ಲಿರುವ ಜನರಿಗೆ ಯಾವ ಲೋಪವೂ ಬಾರದಂತೆ ಅಲ್ಲಿಗೆ ಹೋಗುವ ಆರೋಗ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳೊಂದಿಗೆ ಉತ್ತಮ ಸಹಕಾರ ಏರ್ಪಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ.

ಜೊತೆಗೆ ಅತ್ಯಂತ ಗುಣಮಟ್ಟದ ಆಹಾರವನ್ನು ಕರೋನಾ ಸೋಂಕಿತರಿಗೆ ತಲುಪಿಸುತ್ತಿರುವ ಅವರು ವಾರದಲ್ಲಿ ಎರಡು ಬಾರಿ ದೋಸೆ, ಎರಡು ಬಾರಿ ಇಡ್ಲಿ ಸಾಂಬಾರ್, ಹಾಗೂ ಇನ್ನುಳಿದ ದಿನ ಪೊಂಗಲ್, ಬಿಸಿಬೇಳೆಬಾತ್ ಅನ್ನು ನೀಡುತ್ತಿದ್ದಾರೆ. ಬೆಳಗ್ಗೆ 7 ಗಂಟೆ ಉಪಹಾರ ನೀಡಿದ ನಂತರ ಸುಮಾರು 10 ಗಂಟೆಗೆ ಮತ್ತೆ ರವೆ/ರಾಗಿ ಗಂಜಿಯ ಜೊತೆಗೆ ಹಣ್ಣನ್ನೂ ಸಹ ನೀಡುತ್ತಿದ್ದಾರೆ.

ಜೊತೆಗೆ ಮಧ್ಯಾಹ್ನ ಊಟಕ್ಕೆ ಚಪಾತಿ, ಅನ್ನ ಸಾಂಬಾರ್ ನೊಂದಿಗೆ ಮೊಸರು ಹಾಗೂ ಮೊಟ್ಟೆಯನ್ನು ಒದಗಿಸುತ್ತಿದ್ದು ಸಂಜೆಯ ಲಘು ಉಪಹಾರಕ್ಕೆ ಟೀ ಬಿಸ್ಕತ್ ಹಾಗೂ ಒಂದಷ್ಟು ಡ್ರೈ ಫ್ರೂಟ್ಸ್ ಹಾಗೂ ಸಿ ವಿಟಮಿನ್ ಗಾಗಿ 1 ಮ್ಯಾಂಗೋ ಕ್ಯಾಂಡಿಯನ್ನು ನೀಡುತ್ತಾರೆ.

ಇನ್ನು ರಾತ್ರಿಯೂ ಕೂಡಾ ಶುಚಿಯಾದ ಊಟದ ವ್ಯವಸ್ಥೆ ಮಾಡುವ ಅವರು ಸೋಂಕಿತರು ಮಲಗುವ ವೇಳೆಗೆ ಅವರಿಗೆ ಕುಡಿಯಲು ಹಾಲು ( ಸುವಾಸಿತ)/ ಹಾರ್ಲಿಕ್ಸ್/ ಬೋರ್ನ್ ವೀಟಾ/ ಬಾದಾಮಿ ಹಾಲಿನ ಜೊತೆಗೆ ಒಂದು ಬಾಳೆಹಣ್ಣನ್ನೂ ಕೂಡಾ ವಿತರಿಸುತ್ತಿದ್ದು ಕ್ವಾರಂಟೈನ್ ನಲ್ಲಿರುವ ಜನರಿಗೆ ಯಾವ ಕೊರತೆಯೂ ಬರದ ಹಾಗೆ ನೋಡಿಕೊಳ್ಳುತ್ತಿದ್ದಾರೆಂದು ತಿಳಿಸುತ್ತಾರೆ.

ಇನ್ನು ಯಾರಾದರೂ ಸಹಾಯಕ್ಕಾಗಿ ಕೂಗಿದರೆ 2 ರಿಂದ 3 ನಿಮಿಷದಲ್ಲಿ ಹಾಜರಿರುವ ಇವರು ಅವರ ಬೇಕು ಬೇಡಗಳನ್ನು ಖುದ್ದಾಗಿ ಆಲಿಸುತ್ತಾರೆ. ಹೀಗಾಗಿಯೇ ಅಲ್ಲಿನ ಇಂತಹ ಅತ್ಯುತ್ತಮ ವ್ಯವಸ್ಥೆಯ ಬಗ್ಗೆ ತಿಳಿದ ಜನರು ಕ್ವಾರಂಟೈನ್ ಗೆ ಹಾಕುವುದಾದರೆ ನಮ್ಮನ್ನು ಗಾಜನೂರಿಗೇ ಹಾಕಿ ಎಂದು ಅಧಿಕಾರಿಗಳನ್ನು ವಿನಂತಿಸಿಕೊಳ್ಳುತ್ತಿದ್ದಾರಂತೆ. ಅಲ್ಲಿ ಹೋದವರೆಲ್ಲಾ ಬಹುಬೇಗನೇ ಗುಣವಾಗುತ್ತಿರುವುದೂ ಕೂಡಾ ಅವರ ಈ ಬೇಡಿಕೆಗೆ ಕಾರಣವಾಗಿರಬಹುದು.

ಇನ್ನು ಪ್ರಾಂಶುಪಾಲರಾದ ಅನಿಲ್ ಕುಮಾರ್ ಅವರೊಂದಿಗೆ ರಘುಪತಿ ಹಾಗೂ ರಾಕೇಶ್ ಎಂಬಿಬ್ಬರು ವೈದ್ಯರೂ ಕೂಡಾ ಒಂದು ತಂಡವಾಗಿ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದು ಕರೋನಾ ಸೋಂಕಿನಿಂದ ಆತಂಕಗೊಂಡು ಕ್ವಾರಂಟೈನ್ ಕೇಂದ್ರಕ್ಕೆ ಬರುವ ಬಹಳಷ್ಟು ಜನರನ್ನು ರೋಗ ಮುಕ್ತರನ್ನಾಗಿ ಮಾಡಲು ಶಿಸ್ತುಬದ್ಧವಾಗಿ ಶ್ರಮಿಸಿಸುತ್ತಿದ್ದಾರೆ.

ಒಟ್ಟಿನಲ್ಲಿ ಕೇವಲ ಆತಂಕದ ಕೇಂದ್ರವಾಗಿ ಕಾಣುತ್ತಿದ್ದ ಹಲವು ಕ್ವಾರಂಟೈನ್ ಕ್ವಾರಂಟೈನ್ ಕೇಂದ್ರಗಳ ದುಸ್ಥಿತಿಯ ನಡುವೆ ಜನ ಸಾಮಾನ್ಯರಲ್ಲಿ ವಿಶ್ವಾಸ ಮೂಡುವಂತೆ ಕಾರ್ಯ ನಿರ್ವಹಿಸುತ್ತಿರುವ ಗಾಜನೂರಿನ ಕ್ವಾರಂಟೈನ್ ಕೇಂದ್ರವು ಕೇವಲ ಶಿವಮೊಗ್ಗಕ್ಕಲ್ಲ ಇಡೀ ರಾಜ್ಯಕ್ಕೇ ಮಾದರಿ ಎನ್ನಬಹುದು.

English summary
Shivamogga district Gajanur Morarji Desai school has been successfully converted to Covid 19 Quarantine center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X