• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶೇಷ ಲೇಖನ; ಯಡಿಯೂರಪ್ಪ, ಈಶ್ವರಪ್ಪ ಮುನಿಸಿಗೆ ಕಾರಣವೇನು?

By ನಿತಿನ್ ಕೆ. ಆರ್.
|

ಶಿವಮೊಗ್ಗ, ಏಪ್ರಿಲ್ 4; ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಈಶ್ವರಪ್ಪ ಅವರ ನಡುವಿನ ಸಮರ ಮತ್ತೊಂದು ಹಂತಕ್ಕೆ ತಲುಪಿದೆ. ಇಲಾಖೆಯೊಳಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಸ್ತಕ್ಷೇಪ ವಿಚಾರವಾಗಿ ಸಚಿವ ಈಶ್ವರಪ್ಪ ಬರೆದ ಪತ್ರ, ಈ ಇಬ್ಬರು ನಾಯಕರ ನಡುವೆ ಇದ್ದ ಕಂದಕವನ್ನು ಮತ್ತಷ್ಟು ವಿಸ್ತರಿಸಿದೆ. ಅಂದಹಾಗೆ, ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಮುನಿಸಿನ ವಿಚಾರ ಶಿವಮೊಗ್ಗದ ಜನರಿಗೆ ಹೊಸ ವಿಚಾರವೇನಲ್ಲ.

ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರ ಪೈಕಿ ಆನಂದರಾವ್, ಡಿ. ಹೆಚ್. ಶಂಕರಮೂರ್ತಿ, ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಹಲವರ ಹೆಸರು ಅಗ್ರಪಂಕ್ತಿಯಲ್ಲಿದೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ಒಂದೇ ಸ್ಕೂಟರಿನಲ್ಲಿ ಓಡಾಡಿಕೊಂಡು, ಪಕ್ಷ ಸಂಘಟಿಸುತ್ತಿದ್ದರು. ಶಿಕಾರಿಪುರಕ್ಕೆ ಯಡಿಯೂರಪ್ಪ, ಶಿವಮೊಗ್ಗಕ್ಕೆ ಈಶ್ವರಪ್ಪ ಎಂಬ ಮಾತು ಜನಜನಿತವಾಗಿತ್ತು. ಆದರೆ ಇದೆ ನಾಯಕರು ಈಗ 'ದಾಯಾದಿ ಕಲಹ'ಕ್ಕೆ ಇಳಿದಿದ್ದಾರೆ. ಒಬ್ಬರ ಮುಖವನ್ನು ಮತ್ತೊಬ್ಬರು ನೋಡದಂತೆ ಆಗಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಈಶ್ವರಪ್ಪ ಪತ್ರ

ಮುಖ್ಯಮಂತ್ರಿ ಯಾವುದೇ ಜಿಲ್ಲೆಗೆ ಭೇಟಿ ನೀಡಿದರೂ ಉಸ್ತುವಾರಿ ಸಚಿವರು ಅವರಿಗೆ ಜೊತೆಯಾಗುತ್ತಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಮಟ್ಟಿಗೆ ಇದು ಭಿನ್ನ. ಸಿಎಂ ಯಡಿಯೂರಪ್ಪ ಅವರು ಶಿವಮೊಗ್ಗಕ್ಕೆ ಬಂದಾಗಲೆಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಅವರು ಕಣ್ಮರೆಯಾಗುತ್ತಾರೆ. ಕಾಮಗಾರಿಗಳ ಪರಿಶೀಲನೆಗೆ ಸಿಎಂ ತೆರಳಿದಾಗಲೂ ಸಚಿವರು ಗೈರಾಗುತ್ತಾರೆ. ಜಿಲ್ಲೆಯಲ್ಲೇ ಇದ್ದರೂ ಇಬ್ಬರು ಒಟ್ಟಿಗೆ ಕಾಣಿಸುವುದಿಲ್ಲ. ಅನಿವಾರ್ಯತೆ ಇದ್ದರಷ್ಟೆ ಅಕ್ಕಪಕ್ಕ ನಿಲ್ಲುತ್ತಾರೆ.

ನಾನು ರೆಬೆಲ್ ಅಲ್ಲ, ಪಕ್ಷಕ್ಕೆ ಲಾಯಲ್: ನನ್ನ ಮತ್ತು ಸಿಎಂ ನಡುವೆ ವೈಯಕ್ತಿಕ ಸಂಘರ್ಷವಿಲ್ಲ: ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ ಸಿಟಿ ವಿಚಾರಕ್ಕೆ ತಲೆ ಹಾಕದ ಸಿಎಂ

ಶಿವಮೊಗ್ಗ ಸಿಟಿ ವಿಚಾರಕ್ಕೆ ತಲೆ ಹಾಕದ ಸಿಎಂ

ಯಡಿಯೂರಪ್ಪ ಅವರು ಈ ಹಿಂದೆ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಅಗಿದ್ದ ವೇಳೆ, ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಕಾಮಗಾರಿ ಯಾವುದೆ ಇರಲಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಅಧಿಕಾರಿಗಳು, ಗುತ್ತಿಗೆದಾರರಿಗೆ ಚಳಿ ಬಿಡಿಸುತ್ತಿದ್ದರು. ಬಿ.ಹೆಚ್.ರಸ್ತೆ, ಗಾಂಧಿ ಪಾರ್ಕ್, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ ಕಾಮಗಾರಿಗಳೆಲ್ಲವು ಯಡಿಯೂರಪ್ಪ ಅವರ ಕಲ್ಪನೆಯಂತೆಯೇ ನಡೆದವು. ಆದರೆ ಈಗ ಶಿವಮೊಗ್ಗ ನಗರದಲ್ಲಿ ಸಾವಿರ ಕೋಟಿಯ ಸ್ಮಾರ್ಟ್ ಸಿಟಿ ಸಿದ್ಧವಾಗುತ್ತಿದೆ. ಈತನಕ ಯಡಿಯೂರಪ್ಪ ಅವರು ಈ ಯೋಜನೆಯತ್ತ ನಿಗಾ ವಹಿಸಿಲ್ಲ. ಕಾಮಗಾರಿ ಬಗ್ಗೆ ಮಾತಾಡುತ್ತಲೂ ಇಲ್ಲ. ಸಚಿವ ಈಶ್ವರಪ್ಪ ಅವರು ಇದರ ಉಸ್ತುವಾರಿ ವಹಿಸಿಕೊಂಡಿರುವುದೆ ಇದಕ್ಕೆಲ್ಲ ಕಾರಣ ಅಂತಾರೆ ಬಿಜೆಪಿ ಮುಖಂಡರು.

ಇದೆಲ್ಲ ಆರಂಭವಾಗಿದ್ದು 2010ರಲ್ಲಿ

ಇದೆಲ್ಲ ಆರಂಭವಾಗಿದ್ದು 2010ರಲ್ಲಿ

ರಾಮ, ಲಕ್ಷ್ಮಣರ ಹಾಗೆ ಇದ್ದ ಯಡಿಯೂರಪ್ಪ ಮತ್ತು ಈಶ್ವರಪ್ಪ, ಇಷ್ಟೊಂದು ಹಗೆ ಸಾಧಿಸಲು ಕಾರಣ, 2009ರ ಸಂಸತ್ ಚುನಾವಣೆ. ಈ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ಈಶ್ವರಪ್ಪ ವಾದಿಸಿದ್ದರು. ಆದರೆ ಯಡಿಯೂರಪ್ಪ ಅವರು ತಮ್ಮ ಪುತ್ರ, ಪುರಸಭೆ ಸದಸ್ಯ ಬಿ. ವೈ. ರಾಘವೇಂದ್ರ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದರು. ಇದು ಇಬ್ಬರ ನಡುವೆ ಪ್ರತಿಷ್ಠೆಯಾಯಿತು. ಈ ಕದನದಲ್ಲಿ ಯಡಿಯೂರಪ್ಪ ಅಂದುಕೊಂಡಿದ್ದನ್ನು ಸಾಧಿಸಿದರು. ಅಲ್ಲದೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ವಿರುದ್ಧ 52 ಸಾವಿರ ಮತಗಳ ಅಂತರದಲ್ಲಿ ರಾಘವೇಂದ್ರ ಗೆಲುವು ಕಂಡರು. ಈ ಮೂಲಕ ಪಕ್ಷದೊಳಗೆ ಯಡಿಯೂರಪ್ಪ ಅವರದ್ದೇ ಮೇಲಗೈ ಆಯಿತು.

ಈಶ್ವರಪ್ಪ ಅವರು ಶಾಸಕರಾಗಿದ್ದ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ರಾಘವೇಂದ್ರ ಅವರಿಗೆ ನಿರೀಕ್ಷಿತ ಮತಗಳು ಲಭಿಸಿರಲಿಲ್ಲ. ಇದು ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಬಿರುಕಿಗೆ ಕಾರಣವಾಯಿತು. ಕುಟುಂಬ ರಾಜಕಾರಣದಿಂದ ಪಕ್ಷ ದೂರ ಉಳಿಯಬೇಕು ಅನ್ನುವುದು ಈಶ್ವರಪ್ಪ ನಿಲುವಾಗಿತ್ತು. ಆದರೆ ಯಡಿಯೂರಪ್ಪ ಇದರ ವಿರುದ್ಧ ದಿಕ್ಕಿನಲ್ಲಿ ಯೋಚಿಸಿದ್ದು ಶೀತಲ ಸಮರ ಆರಂಭಿಸಿತು.

ಕಾಲಿಗೆ ಬಿದ್ದರೂ, ಅಂತರ ಮುಂದುವರೆಯಿತು

ಕಾಲಿಗೆ ಬಿದ್ದರೂ, ಅಂತರ ಮುಂದುವರೆಯಿತು

ಮುನಿಸಿನ ನಡುವೆಯು ಯಡಿಯೂರಪ್ಪ ಮತ್ತು ಈಶ್ವರಪ್ಪ ಒಂದಾದರು. ಶಿವಮೊಗ್ಗ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ, ಈಶ್ವರಪ್ಪ ಅವರು ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದಿದ್ದರು. ಆದರೆ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಮತ್ತೆ ಅಂತರ ಮುಂದುವರೆಯಿತು. ಶೀತಲ ಸಮರಕ್ಕೆ ಹೊಸ ಹೊಸ ಪಟ್ಟುಗಳು ಆರಂಭವಾಯಿತು.

ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿದಾಗ, ಈಶ್ವರಪ್ಪ ಅವರು ತಮ್ಮ ನಾಲಗೆ ಹರಿತಗೊಳಿಸಿಕೊಂಡರು. ಯಡಿಯೂರಪ್ಪ ಅವರ ವಿರುದ್ಧ ಆರೋಪಗಳನ್ನು ಮಾಡಿದರು. ಜೈಲಿಗೆ ಹೋಗಿ ಬಂದವರು ಎಂದು ತಿವಿದರು. ಇದು ಯಡಿಯೂರಪ್ಪ ಅವರ ಸಿಟ್ಟು ನೆತ್ತಿಗೇರಿಸಿತು. 2013ರ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪ ವಿರುದ್ಧ, ಕೆಜೆಪಿಯಿಂದ ಉದ್ಯಮಿ, ಕೆಪಿಎಸ್ಸಿ ಮಾಜಿ ಸದಸ್ಯ ರುದ್ರೇಗೌಡ ಅವರನ್ನು ಕಣಕ್ಕಿಳಿಸಲಾಯಿತು.

ಲಿಂಗಾಯತ ಸಮುದಾಯದ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಸಜ್ಜನ ಎಂದೇ ಹೆಸರು ಗಳಿಸಿದ್ದ ರುದ್ರೇಗೌಡ ಅವರು ಬಿಜೆಪಿಯ ಮತ ಬ್ಯಾಂಕ್‌ಅನ್ನು ಸಂಪೂರ್ಣವಾಗಿ ಕಬಳಿಸಿದರು. ಫಲಿತಾಂಶದಲ್ಲಿ ಈಶ್ವರಪ್ಪ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಬೆರಳೆಣಿಕೆಯಷ್ಟು ಮತಗಳಿಂದ ಕೆಜೆಪಿಯ ರುದ್ರೇಗೌಡರೂ ಸೋತರು. ಕಾಂಗ್ರೆಸ್‌ನ ಕೆ. ಬಿ. ಪ್ರಸನ್ನ ಕುಮಾರ್ ಅವರು ಗೆಲುವು ಸಾಧಿಸಿದರು. ಆ ಬಳಿಕ ಈಶ್ವರಪ್ಪ ಸ್ವಲ್ಪ ತಣ್ಣಗಾದರು. ಯಡಿಯೂರಪ್ಪ ಅವರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಿದರು. ಅದರೆ ಶೀತಲ ಸಮರ, ಒಳ ಹೊಡೆತ ನಿಲ್ಲಲಿಲ್ಲ.

ಯಡಿಯೂರಪ್ಪ ಕಂಟ್ರೋಲ್‌ನಲ್ಲಿ ಜಿಲ್ಲಾ ಬಿಜೆಪಿ

ಯಡಿಯೂರಪ್ಪ ಕಂಟ್ರೋಲ್‌ನಲ್ಲಿ ಜಿಲ್ಲಾ ಬಿಜೆಪಿ

ಕೆಜೆಪಿ ತೊರೆದು ಯಡಿಯೂರಪ್ಪ ಮತ್ತು ಅವರ ಬೆಂಬಲಿಗರ ಪಡೆ ಪುನಃ ಬಿಜೆಪಿಗೆ ಮರಳಿತು. ಆಗ ಶಿವಮೊಗ್ಗ ಬಿಜೆಪಿಯನ್ನು ಯಡಿಯೂರಪ್ಪ ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ರುದ್ರೇಗೌಡ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದರು. ಪ್ರಮುಖ ಪದಾಧಿಕಾರಿಗಳೆಲ್ಲರೂ ಕೆಜೆಪಿಯಿಂದ ಬಂದವರೇ ಆಗಿದ್ದರು. ಇದು ಈಶ್ವರಪ್ಪ ಅವರನ್ನು ಮತ್ತಷ್ಟು ಕೆರಳಿಸಿತು. ಈ ವಿಚಾರವಾಗಿ ವರಿಷ್ಠರವರೆಗೆ ದೂರು ಹೋಯಿತು. 2017ರಲ್ಲಿ ಬಿಜೆಪಿ ಉಳಿಸಿ ಸಮಾವೇಶಗಳು ಕೂಡ ನಡೆದವು.

2018ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಈಶ್ವರಪ್ಪ ಬದಲಿಗೆ, ತಮ್ಮ ಬೆಂಬಲಿಗ ರುದ್ರೇಗೌಡ ಅವರಿಗೆ ಟಿಕೆಟ್ ನೀಡುವಂತೆ ಯಡಿಯೂರಪ್ಪ ಕೇಂದ್ರದ ಮೇಲೆ ಒತ್ತಡ ಹೇರಿದರು. ತಮ್ಮ ಪಟ್ಟುಗಳನ್ನು ಹೂಡಿದರು. ಆದರೆ ಆರ್‌ಎಸ್‌ಎಸ್ ಬೆಂಬಲ ಇದ್ದಿದ್ದರಿಂದ ಈಶ್ವರಪ್ಪ ಟಿಕೆಟ್ ಪಡೆದರು ಎಂದು ಬಿಜೆಪಿ ವಲಯದಲ್ಲಿ ಮಾತಿದೆ. ಬಳಿಕ ಶಿವಮೊಗ್ಗ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿ ಈಶ್ವರಪ್ಪ ಗೆದ್ದು ಬೀಗಿದರು.

ಒಟ್ಟಿಗೆ ಕಾಣಿಸಲ್ಲ, ಹೇಳಿಕೆ ನೀಡಲ್ಲ

ಒಟ್ಟಿಗೆ ಕಾಣಿಸಲ್ಲ, ಹೇಳಿಕೆ ನೀಡಲ್ಲ

ಯಡಿಯೂರಪ್ಪ ಮತ್ತು ಈಶ್ವರಪ್ಪ ಒಟ್ಟಿಗೆ ಕಾಣಿಸುವುದಷ್ಟೆ ಅಲ್ಲ, ಒಬ್ಬರ ವಿರುದ್ಧ ಮತ್ತೊಬ್ಬರು ಹೇಳಿಕೆಗಳನ್ನೂ ಕೊಡುತ್ತಿರಲಿಲ್ಲ. ಬಣ ರಾಜಕೀಯಕ್ಕಷ್ಟೆ ಸೀಮೀತವಾಗಿದ್ದರು. ಯಡಿಯೂರಪ್ಪ ಅವರು ಜಿಲ್ಲೆಯಲ್ಲಿ ಪ್ರಾಬಲ್ಯ ಮೆರೆದರೆ, ಶಿವಮೊಗ್ಗ ನಗರದಲ್ಲಿ ಈಶ್ವರಪ್ಪ ಗಟ್ಟಿಯಾಗಿ ನೆಲೆಯೂರಿದರು. ಈಗ ಪತ್ರ ಸಮರ ಶುರುವಾಗಿದೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ ತಮ್ಮ ಆರೋಪಗಳನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ಈಶ್ವರಪ್ಪ ವಿರುದ್ಧ ತುಟಿ ಬಿಚ್ಚುತ್ತಿಲ್ಲ. ಆಪ್ತರ ಬಳಿಗೆ ಗುಟುರು ಹಾಕಿದ್ದಾರೆ.

ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಶೀತಲ ಸಮರ ಮತ್ತೊಂದು ಮಜಲು ಪಡೆದುಕೊಳ್ಳುತ್ತದೆ ಎಂಬುದನ್ನು ಅವರನ್ನು ಹತ್ತಿರದಿಂದ ಬಲ್ಲವರು ತಿಳಿಸುತ್ತಾರೆ. ಆದರೆ ಈ ಸಮರ ಶಿವಮೊಗ್ಗದ ಕಾರ್ಯಕರ್ತರ ಜೊತೆಗೆ ರಾಜ್ಯದ ಮುಖಂಡರು, ವಿವಿಧೆಡೆಯ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಿದೆ. ಬಿಜೆಪಿಯೊಳಗಿನ ಬಣ ರಾಜಕೀಯವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

English summary
What is the reason behind chief minister B. S. Yediyurappa and minister K. S. Eshwarappa fight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X