• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗದಲ್ಲಿ ಇನ್ನೆರಡು ದಿನ ಭಾರಿ ಮಳೆ: ಹೈ ಅಲರ್ಟ್ ಘೋಷಣೆ..!

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಸೆಪ್ಟೆಂಬರ್ 21: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಮುಂದುವರಿದಿದ್ದು, ಇನ್ನೆರಡು ದಿನ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಹೊರಡಿಸಿದೆ.

ಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿರುವುದರಿಂದ ಈಗಾಗಲೇ 70 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಭದ್ರಾವತಿ ಪಟ್ಟಣದ ಸಿದ್ಧರೂಢ ನಗರ, ಹುತ್ತಾ ಕಾಲೋನಿ, ಬಿ.ಹೆಚ್ ರಸ್ತೆ, ತರಿಕೆರೆ ರಸ್ತೆ ಮುಂತಾದ ಕಡೆಗಳಲ್ಲಿ ನೀರು ಅಪಾರ ಪ್ರಮಾಣದಲ್ಲಿ ನುಗ್ಗಿದ್ದು, ಅಲ್ಲಲ್ಲಿ ರಕ್ಷಣಾ ಕೇಂದ್ರ ಹಾಗೂ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ನೀರಿನ ಮಟ್ಟ ಸ್ವಲ್ಪ ತಗ್ಗಿದೆಯಾದರೂ ಮಲೆನಾಡಿನಲ್ಲಿ ಮಳೆ ಆರ್ಭಟ ಕಡಿಮೆಯಾಗಿಲ್ಲ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ದಕ್ಷಿಣದ ಚಿರಾಪುಂಜಿ ಆಗುಂಬೆಯಲ್ಲೂ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಆಗುಂಬೆ ಘಾಟ್ ನ ಕೆಲವು ಕಡೆ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದೆ. ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಮಲೆನಾಡಿನ ಭಾಗಗಳಲ್ಲಿ ಮಳೆ; ಮತ್ತೆ ತುಂಗಾ ನದಿ ಮಂಟಪ ಮುಳುಗಡೆ

ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ

ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ

ಶರಾವತಿ ಕಣಿವೆಯಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈಗಾಗಲೇ ಲಿಂಗನಮಕ್ಕಿ ಜಲಾಶಯ 1811.05 ಅಡಿ ತಲುಪಿದೆ. ಮಳೆ ಇದೇ ರೀತಿ ಮುಂದುವರೆದರೆ, ಲಿಂಗನಮಕ್ಕಿ ಈ ಸಲ ಭರ್ತಿಯಾಗುವ ನಿರೀಕ್ಷೆ ಇದೆ. ಶರಾವತಿ ಕಣಿವೆ ಪ್ರದೇಶದ ಅನೇಕ ಕಡೆ ರಮಣೀಯ ಕಿರು ಜಲಪಾತಗಳು ಸೃಷ್ಠಿಯಾಗಿವೆ. ಎಲ್ಲಾ ಕಡೆ ಕೆರೆ, ಕಟ್ಟೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಮತ್ತೆ ಕಳೆ ಬಂದಿದೆ.

ತುಂಗಾ ನದಿ ತುಂಬಿ ಹರಿಯುತ್ತಿದೆ

ತುಂಗಾ ನದಿ ತುಂಬಿ ಹರಿಯುತ್ತಿದೆ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹುಲಿಕಲ್, ನಾಗೋಡಿಯಲ್ಲಿ ಮಳೆ ಹೆಚ್ಚಾಗಿದ್ದು, ರಸ್ತೆ ಸಂಚಾರ ದುಸ್ತರವಾಗಿದೆ. ಮಾಣಿ, ಯಡೂರು, ಹುಲಿಕಲ್, ಮಾಸ್ತಿಕಟ್ಟೆ, ಚಕ್ರಾ, ಸಾವೆಹಕ್ಲು ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ತೀರ್ಥಹಳ್ಳಿ ಭಾಗದಲ್ಲೂ ಅತಿ ಹೆಚ್ಚು ಮಳೆಯಾಗಿದ್ದು, ತುಂಗಾ ನದಿ ತುಂಬಿ ಹರಿಯುತ್ತಿದೆ. ಕ್ಷಣ ಕ್ಷಣಕ್ಕೂ ನದಿಯ ನೀರು ಹೆಚ್ಚುತ್ತಿದ್ದು, ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸೊರಬ ಹಾಗೂ ಶಿಕಾರಿಪುರದಲ್ಲಿ ಕೂಡ ವರುಣನ ಆರ್ಭಟ ಮುಂದುವರಿದಿದೆ.

ಸೆಪ್ಟೆಂಬರ್ ತಿಂಗಳ ಮಳೆಯ ಸರಾಸರಿ ಪ್ರಮಾಣ 164.16 ಮಿ.ಮೀ

ಸೆಪ್ಟೆಂಬರ್ ತಿಂಗಳ ಮಳೆಯ ಸರಾಸರಿ ಪ್ರಮಾಣ 164.16 ಮಿ.ಮೀ

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 266.90 ಮಿ.ಮೀ ಮಳೆಯಾಗಿದ್ದು, ಸರಾಸರಿ 38.13 ಮಿ.ಮೀ ಮಳೆ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 164.16 ಮಿ.ಮೀ ಇದ್ದು, ಇದುವರೆಗೆ ಸರಾಸರಿ 291.65 ಮಿಮಿ ಮಳೆ ದಾಖಲಾಗಿದೆ. ಶಿವಮೊಗ್ಗ 16.40, ಭದ್ರಾವತಿ 3.60, ತೀರ್ಥಹಳ್ಳಿ 97.40, ಸಾಗರ 45.40, ಶಿಕಾರಿಪುರ 9.00, ಸೊರಬ 27.10 ಹಾಗೂ ಹೊಸನಗರದಲ್ಲಿ 68.00 ಮಿ.ಮೀ. ಮಳೆಯಾಗಿದೆ.

ತುಂಗಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಕ್ಕೆ

ತುಂಗಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಕ್ಕೆ

ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ತುಂಗಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗದ ಕೋರ್ಪಲಯ್ಯ ಛತ್ರದ ಮಂಟಪ ಮತ್ತೊಮ್ಮೆ ಮುಳುಗಡೆಯಾಗಿದೆ. ನಿನ್ನೆ ರಾತ್ರಿಯಿಂದ ಜಲಾಶಯದ ಹೊರ ಹರಿವು ಹೆಚ್ಚಳವಾಗಿದ್ದು, ತುಂಗಾ ನದಿ ಮೈದುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಭದ್ರಾವತಿಯ ಕವಲಗುಂದಿಯಲ್ಲಿ 30 ಮನೆಗಳು ಜಲಾವೃತಗೊಂಡಿದೆ. ಭದ್ರಾವತಿಯ ಹೊಸ ಸೇತುವೆ ಕಳೆದ ರಾತ್ರಿಯಿಂದ ಮುಳುಗಡೆಯಾಗಿದೆ. ಮಲೆನಾಡಿನಲ್ಲಿ ಮಳೆಯ ಪ್ರಮಾಣವು ಹೆಚ್ಚಾಗಿರುವ ಕಾರಣ ಜಲಾಶಯಗಳ ಹಿನ್ನೀರಿನ ಪ್ರಮಾಣದಲ್ಲೂ ಸಾಕಷ್ಟು ಏರಿಕೆ ಕಂಡಿದೆ.

English summary
The meteorological department forecasts that the rainfall in Shivamogga district will continue for the next two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X