ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭದ್ರಾವತಿಯ ಜನಪ್ರಿಯ 'ಶಿಕ್ಷಕ' ಅಪಘಾತದಲ್ಲಿ ನಿಧನ

By Prasad
|
Google Oneindia Kannada News

Popular teacher of Bhadravathi dies in accident
ಭದ್ರಾವತಿ/ಹಾಸನ, ಅ. 23 : ತಮ್ಮ ಬಿಡುವಿನ ವೇಳೆಯನ್ನು ವಿದ್ಯಾರ್ಥಿಗಳಿಗೆ ಪಾಠ ಹೇಳಲು ಮೀಸಲಿಟ್ಟಿದ್ದ, ಭದ್ರಾವತಿಯಲ್ಲಿನ ತಮ್ಮ ಮನೆಯನ್ನೇ ಮಿನಿ 'ವಿಶ್ವವಿದ್ಯಾಲಯ'ವನ್ನಾಗಿ ಮಾಡಿಕೊಂಡಿದ್ದ ಭದ್ರಾವತಿಯ ಜನಪ್ರಿಯ ಶಿಕ್ಷಕ ಗೋಪಾಲ ಕೃಷ್ಣಮೂರ್ತಿ (64) ಮತ್ತು ಅವರ ಧರ್ಮಪತ್ನಿ ಪರಿಮಳ (55) ಅವರು ಹಾಸನದ ಬಳಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ.

ವಿಷಾದನೀಯ ಸಂಗತಿಯೆಂದರೆ, ಅವರು ಹಾಸನ ಜಿಲ್ಲೆಯಲ್ಲಿರುವ ಹೊಳೆನರಸೀಪುರದಲ್ಲಿ ನಡೆದ ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ಭದ್ರಾವತಿಗೆ ಕಾರಿನಲ್ಲಿ ಮರಳುತ್ತಿದ್ದರು. ಅರಸೀಕೆರೆ ತಾಲೂಕಿನ ತಳಲೂರು ಗೇಟ್ ಬಳಿ ಕಾರಿನ ಟೈರು ಸಿಡಿದು, ಮರಕ್ಕೆ ಕಾರು ಅಪ್ಪಳಿಸಿದ್ದರಿಂದ ಗೋಪಾಲ ಕೃಷ್ಣಮೂರ್ತಿ ಅವರು ಸ್ಥಳದಲ್ಲೇ ನಿಧನರಾದರು. ತೀವ್ರವಾಗಿ ಗಾಯಗೊಂಡಿದ್ದ ಪರಿಮಳಾ ಅವರು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮರಣ ಹೊಂದಿದರು. ಘಟನೆ ನಡೆದಿದ್ದು ಮಧ್ಯಾಹ್ನ 1.30ರ ಸುಮಾರಿಗೆ.

ಕೊನೆಯ ವರ್ಷದ ಇಂಜಿನಿಯರಿಂಗ್ ಪದವಿ ಓದುತ್ತಿರುವ ಓರ್ವ ಮಗ ವಿಜಯ ರಾಜ್ ನನ್ನು ಅಗಲಿರುವ ಗೋಪಾಲ ಕೃಷ್ಣಮೂರ್ತಿ ಮತ್ತು ಪರಿಮಳಾ ಅವರ ಅಂತ್ಯಕ್ರಿಯೆ ಭದ್ರಾವತಿಯ ರುದ್ರಭೂಮಿಯಲ್ಲಿ ಬುಧವಾರ ಬೆಳಿಗ್ಗೆ 11.30ರ ಸುಮಾರಿಗೆ, ದುಃಖತಪ್ತ ಬಂಧುಗಳು ಮತ್ತು ಸಹಸ್ರಾರು ವಿದ್ಯಾರ್ಥಿಗಳ ಸಮ್ಮಖದಲ್ಲಿ ನೆರವೇರಿತು. ಇಂಥ ಆದರ್ಶ ಶಿಕ್ಷಕನನ್ನು ಕಳೆದುಕೊಂಡಿರುವ ಭದ್ರಾವತಿಯ ವಿದ್ಯಾರ್ಥಿಗಳು ಅನಾಥಪ್ರಜ್ಞೆಯಿಂದ ಕಂಬನಿ ಮಿಡಿಯುತ್ತಿದ್ದಾರೆ.

ವೃತ್ತಿಯಿಂದ ಶಿಕ್ಷಕರಲ್ಲ : ಬಡ ಕುಟುಂಬದಿಂದ ಬಂದಿದ್ದ ಗೋಪಾಲ ಕೃಷ್ಣಮೂರ್ತಿ (ಪ್ರೀತಿಯಿಂದ ಜಿಕೆ) ಅವರು ವೃತ್ತಿಯಿಂದ ಜೀವ ವಿಮಾ ನಿಗಮದ ಉದ್ಯೋಗಿಯಾಗಿದ್ದರು. ಆದರೆ, ಪ್ರವೃತ್ತಿಯಿಂದ ಶಿಕ್ಷಕರಾಗಿದ್ದರು. ಹೊಟ್ಟೆಪಾಡಿಯಾಗಿ ಎಲ್‌ಐಸಿಯಲ್ಲಿ ಅವರು ದುಡಿಯುತ್ತಿದ್ದರೂ, ತಮ್ಮ ಉಳಿದ ಬಿಡುವಿನ ಸಮಯವನ್ನು ವಿದ್ಯಾರ್ಥಿಗಳಿಗೆ ಪಾಠ ಮಾಡಲು ವಿನಿಯೋಗಿಸುತ್ತಿದ್ದರು. ಇಂಥ ಶಿಕ್ಷಕರು ಸಿಗುವುದು ನಿಜಕ್ಕೂ ಅಪರೂಪ.

ಭದ್ರಾವತಿಯ ಜನ್ನಪುರ ಕಾಲೋನಿಯಲ್ಲಿ ವಾಸವಿದ್ದ ಮನೆಯನ್ನೇ ಪಾಠ, ಪ್ರವಚನ ಮಾಡುವ 'ವಿಶ್ವವಿದ್ಯಾಲಯ'ವನ್ನಾಗಿ ಅವರು ಮಾಡಿಕೊಂಡಿದ್ದರು. ಹೆಚ್ಚಾಗಿ ಮೊದಲನೇ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಧಾರೆಯೆರೆಯುತ್ತಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಅಗಾಧವಾಗಿ ಬೆಳೆಯುತ್ತಿದ್ದಂತೆ ಸಾಲ ಮಾಡಿ ಹೆಚ್ಚುವರಿ ಸ್ಥಳವನ್ನು ಕಟ್ಟಿಸಿದ್ದರು. ವಿದ್ಯಾರ್ಥಿಗಳ, ವಿದ್ಯಾರ್ಥಿಗಳಿಂದಲೇ ಮತ್ತು ವಿದ್ಯಾರ್ಥಿಗಳಿಗೋಸ್ಕರ ನಡೆಸಲಾಗುತ್ತಿದ್ದ ಚಾವಡಿಯನ್ನು ಜಿಕೆ ಹುಟ್ಟುಹಾಕಿದ್ದರು.

ನಾಲ್ಕು ದಶಕಗಳ ವಿದ್ಯಾರ್ಜನೆಯಲ್ಲಿ ಅವರು ಸಹಸ್ರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯೆ ಧಾರೆಯೆರೆದಿದ್ದಾರೆ. ಅವರಲ್ಲಿ ಬಡವರು, ಶ್ರೀಮಂತರು, ದಡ್ಡರು, ಬುದ್ಧಿವಂತರು ಕೂಡ ಇದ್ದಾರೆ. ಪಾಠ ಮಾಡುವ ಕೋಣೆಯನ್ನು ಅವರು ಡಿಸ್ಕಷನ್ ಕ್ಲಾಸ್ (ಡಿಸಿ) ಎಂದು ಕರೆಯುತ್ತಿದ್ದರು. ಅವರ ಬಳಿ ಕಲಿತ ನೂರಾರು ವಿದ್ಯಾರ್ಥಿಗಳು ಈಗ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ.

ಡಿಸಿಯ 39ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು 2013ರ ಜುಲೈ 28ರಂದು ವಿದ್ಯಾರ್ಥಿಗಳೇ ಆಯೋಜಿಸಿದ್ದು ಜಿಕೆ ಅವರ ಜನಪ್ರಿಯತೆಗೆ ಹಿಡಿದ ಕನ್ನಡಿ. ಅಂದು ಜಿಕೆಯನ್ನು ಅವರಿಂದ ಕಲಿತು ಉದ್ಧಾರವಾಗಿದ್ದ ವಿದ್ಯಾರ್ಥಿಗಳು ಆತ್ಮೀಯವಾಗಿ ಸನ್ಮಾನಿಸಿದ್ದರು. ಇಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ, ಅವರು ಪಾಠ ಹೇಳಲು ಹಣವನ್ನು ಪಡೆಯುತ್ತಿರಲಿಲ್ಲ!

English summary
Popular teacher of Bhadravathi Gopalakrishna (64) and his wife Parimala (55) died in a car accident near Talalur Gate, Arsikere taluk, Hassan, on 22nd October. He had converted his house into a 'University' and taught thousands of students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X