ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈನಿಕ ಶಾಲೆ ಯೋಜನೆ; ಆಗುಂಬೆ ವನಸಿರಿಗೆ ಎದುರಾದ ಆತಂಕ

|
Google Oneindia Kannada News

ಶಿವಮೊಗ್ಗ, ನವೆಂಬರ್ 29 : ಕಸ್ತೂರಿ ರಂಗನ್ ವರದಿ, ಅಭಯಾರಣ್ಯ, ಜಲ ವಿದ್ಯುತ್ ಯೋಜನೆಗಳಿಂದ ಮಲೆನಾಡು ಭಾಗದಲ್ಲಿ ಕಾಡು ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ 'ಸೈನಿಕ ಶಾಲೆ' ಎಂಬ ಘೋಷಣೆ ಕಾಡಿನ ಒಡನಾಡಿಯಾಗಿ ಬದುಕುತ್ತಿರುವ ಜನರಲ್ಲಿ ಆತಂಕ ಉಂಟು ಮಾಡಿದೆ.

ಶಿವಮೊಗ್ಗ ಕ್ಷೇತ್ರದ ಸಂಸದ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ಅವರು ಸೈನಿಕ ಶಾಲೆ ಯೋಜನೆ ಬಗ್ಗೆ ಘೋಷಣೆ ಮಾಡಿದ್ದಾರೆ. "ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸೈನಿಕ ಶಾಲೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ" ಎಂದು ಹೇಳಿದ್ದಾರೆ.

ಶಿವಮೊಗ್ಗ; ಹೊಸನಗರದಲ್ಲಿ ಗಣಿಗಾರಿಕೆಗೆ ಮರಗಳಿಗೆ ಕೊಡಲಿಶಿವಮೊಗ್ಗ; ಹೊಸನಗರದಲ್ಲಿ ಗಣಿಗಾರಿಕೆಗೆ ಮರಗಳಿಗೆ ಕೊಡಲಿ

"ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಮಾಡಲಾಗಿದೆ. ಆಗುಂಬೆಯಲ್ಲಿ ಸೈನಿಕ ಶಾಲೆಗಾಗಿ 100 ಎಕರೆ ಜಾಗ ಗುರುತಿಸುವ ಕಾರ್ಯ ಆರಂಭವಾಗಿದೆ. ಸುಮಾರು 300 ಕೋಟಿ ರೂ. ಯೋಜನೆ ಇದಾಗಿದೆ" ಎಂದು ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ.

ಶರಾವತಿ ಭೂಗರ್ಭ ವಿದ್ಯುತ್ ಯೋಜನೆ; ಸಮೀಕ್ಷೆಗೆ ತಡೆ ಶರಾವತಿ ಭೂಗರ್ಭ ವಿದ್ಯುತ್ ಯೋಜನೆ; ಸಮೀಕ್ಷೆಗೆ ತಡೆ

Agumbe Sainik School Project

ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಬಳಿ ಸೈನಿಕ ಶಾಲೆ ಆರಂಭಿಸುವುದಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳು 100 ಎಕರೆ ಗೋಮಾಳ ಜಮೀನು ಲಭ್ಯವಿದೆ ಎಂದು ತಹಶೀಲ್ದಾರ್‌ ಅವರಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ ಶರಾವತಿ ನೀರು; ಮತ್ತೆ ಚರ್ಚೆ ಆರಂಭಬೆಂಗಳೂರಿಗೆ ಶರಾವತಿ ನೀರು; ಮತ್ತೆ ಚರ್ಚೆ ಆರಂಭ

ಉದ್ದೇಶಿತ ಯೋಜನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸೈನಿಕ ಶಾಲೆ ಯೋಜನೆಗೆ ಜನರ ವಿರೋಧವಿಲ್ಲ. ಆದರೆ, ಆಗುಂಬೆಯಂತಹ ವನ್ಯಜೀವಿಗಳ ಆವಾಸಸ್ಥಾನದಲ್ಲಿ ಕಾಡನ್ನು ಕಡಿದು ಸೈನಿಕ ಶಾಲೆ ಆರಂಭಿಸಲು ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಆಗುಂಬೆಯಲ್ಲಿನ ಸೈನಿಕ ಶಾಲೆ ಯೋಜನೆ ಇನ್ನೂ ಪ್ರಸ್ತಾವಿತ ಹಂತದಲ್ಲಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಸರ್ಕಾರ ಇರುವುದರಿಂದ ಯೋಜನೆಗೆ ಬೇಗ ಒಪ್ಪಿಗೆ ಸಿಕ್ಕಿ ಆರಂಭವಾಗಬಹುದು ಎಂಬ ಆತಂಕ ಜನರದ್ದು, ಆದ್ದರಿಂದ, ಯೋಜನೆ ವಿರೋಧಿ ಹೋರಾಟವನ್ನು ಆರಂಭಿಸುತ್ತಿದ್ದಾರೆ.

ಸೈನಿಕ ಶಾಲೆ : ಕರ್ನಾಟಕದಲ್ಲಿ ಈಗಾಗಲೇ ಎರಡು (ವಿಜಯಪುರ, ಮಡಿಕೇರಿ) ಸೈನಿಕ ಶಾಲೆಗಳು ಇವೆ. ಮಕ್ಕಳನ್ನು ನ್ಯಾಷನಲ್ ಡೆಫೆನ್ಸ್ ಅಕಾಡೆಮಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಾಯುಪಡೆ, ನೌಕಾ ಪಡೆ ಮತ್ತು ಸೇನೆಯಲ್ಲಿ ಕೆಲಸ ಮಾಡಲು ಪ್ರೇರೇಪಿಸುವುದು ಈ ಶಾಲೆಯ ಉದ್ದೇಶವಾಗಿದೆ.

ಪ್ರಸ್ತಾವಿತ ಯೋಜನೆ ಬಗ್ಗೆ ಮಾತನಾಡಿದ ಆಗುಂಬೆ ಸಮೀಪದ ಹಸಿರುಮನೆ ನಿವಾಸಿಯೊಬ್ಬರು, "ಸೈನಿಕ ಶಾಲೆ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ಆಗುಂಬೆಯಂತಹ ಪ್ರದೇಶದಲ್ಲಿ ಗೋಮಾಳ ಜಮೀನಿನಲ್ಲಿ ಶಾಲೆ ಮಾಡುವುದಕ್ಕೆ ವಿರೋಧವಿದೆ" ಎಂದರು.

"ನಾವು ಇಲ್ಲಿ ಮಲೆನಾಡು ಗಿಡ್ಡ ಹಸುಗಳನ್ನು ಸಾಕುತ್ತೇವೆ. ಅವುಗಳನ್ನು ಮನೆಯಲ್ಲಿ ಕಟ್ಟಿಹಾಕಿ ಸಾಕಲು ಆಗುವುದಿಲ್ಲ. ಪ್ರತಿದಿನ ಅವುಗಳನ್ನು ಮೇಯಲು ಗುಡ್ಡಕ್ಕೆ ಬಿಡುತ್ತೇವೆ. ಇಲ್ಲಿ ಅಪಾರವಾದ ವನ್ಯ ಸಂಪತ್ತು, ದೊಡ್ಡ ದೊಡ್ಡ ಮರಗಳಿವೆ ಅವುಗಳನ್ನು ಕಡಿದು ಶಾಲೆ ಕಟ್ಟುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದರು.

"ಆಗುಂಬೆ ಉತ್ತಮ ಕಾಡನ್ನು ಹೊಂದಿರುವ ಪರಿಸರವಾಗಿದೆ. ಪ್ರಸ್ತಾವಿತ ಯೋಜನೆ ಜಾರಿಗೊಳಿಸುತ್ತಿರುವ ಪ್ರದೇಶದಲ್ಲಿಯೂ ಅಪಾರ ಕಾಡಿದೆ. ಅದನ್ನು ಕಡಿದು ದೊಡ್ಡ ಕಾಪೌಂಡ್ ಕಟ್ಟಿ ಶಾಲೆ ಮಾಡುವ ಬದಲು ಜಿಲ್ಲೆಯ ಬೇರೆ ತಾಲೂಕಿನಲ್ಲಿರುವ ಒಣ ಭೂಮಿಯಲ್ಲಿ ಸೈನಿಕ ಶಾಲೆ ಮಾಡಬಹುದು" ಎಂದು ಹೇಳಿದರು.

ಜನಪ್ರತಿನಿಧಿಗಳ ಭೇಟಿ; ಆಗುಂಬೆಯ ಹೊಸೂರು ಬಳಿ ಸೈನಿಕ ಶಾಲೆ ಬೇಡ ಎಂದು ಸ್ಥಳೀಯರು ತೀರ್ಮಾನಿಸಿದ್ದು, ಇದನ್ನು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡುವ ಕಾರ್ಯವನ್ನು ಜನರು ಪಕ್ಷಾತೀತವಾಗಿ ಆರಂಭಿಸಿದ್ದಾರೆ.

ವಿವಿಧ ಯೋಜನೆಗಳು, ಅರಣ್ಯ ಇಲಾಖೆಯವರ ಕಿರಿಕಿರಿಯಿಂದ ಮಲೆನಾಡಿನ ಜನರು ಕಾಡಿನಿಂದ ದೂರವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದಟ್ಟ ಕಾಡಿನ ಪ್ರದೇಶದಲ್ಲಿ ಸೈನಿಕ ಶಾಲೆ ಮಾಡುವ ಯೋಜನೆ ಸಿದ್ಧವಾಗುತ್ತಿದೆ. ಸರ್ಕಾರ ಯೋಜನೆಯ ಸ್ಥಳವನ್ನು ಬದಲಾವಣೆ ಮಾಡಲಿದೆಯೇ? ಕಾದು ನೋಡಬೇಕು.

English summary
Local people opposed for the proposed Sainik school project at Hosuru grama panchayat of Agumbe, Shivamogga district. Sainik school will come up in the 100 acres of gomala land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X