ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಒಂದು ಜೀವ ಬಲಿ ಪಡೆದ ಮಂಗನ ಕಾಯಿಲೆ; ಲಕ್ಷಣಗಳ ಬಗ್ಗೆ ತಿಳಿಯಿರಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮೇ 3: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತೆ ಮಂಗನ ಕಾಯಿಲೆ ಆತಂಕ ಶುರುವಾಗಿದೆ. ಕೆಎಫ್‌ಡಿ (ಮಂಗನ ಕಾಯಿಲೆ) ಸೋಂಕು ತಗುಲಿದ್ದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಅರಳಗೋಡು ಗ್ರಾಮ ಪಂಚಾಯಿತಿ ಸದಸ್ಯ ರಾಮಸ್ವಾಮಿ (55) ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಏಪ್ರಿಲ್ 24ರಂದು ಅವರಿಗೆ ಜ್ವರ ತಗುಲಿರುವುದು ಪತ್ತೆಯಾಗಿತ್ತು. ಈ ಹಿನ್ನಲೆ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ರಾಮಸ್ವಾಮಿಗೆ ಮಂಗನ ಕಾಯಿಲೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.

Breaking; ಸಿದ್ದಾಪುರದಲ್ಲಿ ಮಂಗನ ಕಾಯಿಲೆಗೆ ವೃದ್ಧೆ ಬಲಿ Breaking; ಸಿದ್ದಾಪುರದಲ್ಲಿ ಮಂಗನ ಕಾಯಿಲೆಗೆ ವೃದ್ಧೆ ಬಲಿ

ಜ್ವರ ಹೆಚ್ಚಾದ ಹಿನ್ನಲೆ ಏಪ್ರಿಲ್ 26ರಂದು ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾಮಸ್ವಾಮಿ ಸೋಮವಾರ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು; ಮೊದಲ ಮಂಗನ ಕಾಯಿಲೆ ಪ್ರಕರಣ ಪತ್ತೆ ಚಿಕ್ಕಮಗಳೂರು; ಮೊದಲ ಮಂಗನ ಕಾಯಿಲೆ ಪ್ರಕರಣ ಪತ್ತೆ

Grama Panchayat Member Ramaswamy Died due to monkey fever in Shivamogga Aralagodu

ಗ್ರಾಮದಲ್ಲಿ ಮತ್ತೆ ಆತಂಕ: ಶಿವಮೊಗ್ಗದ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಹಿಂದೆ ಮಂಗನ ಕಾಯಿಲೆ ತೀವ್ರ ಸ್ವರೂಪದಲ್ಲಿ ಬಾಧಿಸಿತ್ತು. 2019ರಲ್ಲಿ 28 ಜನರು ಇದೇ ಮಂಗನ ಕಾಯಿಲೆಯಿಂದ ಪ್ರಾಣ ಬಿಟ್ಟಿದ್ದರು. ಇದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಗ್ರಾಮ ಪಂಚಾಯಿತಿ ಸದಸ್ಯ ರಾಮಸ್ವಾಮಿ ಸಾವನ್ನಪ್ಪಿರುವ ಹಿನ್ನೆಲೆ ಮತ್ತೆ ಭೀತಿ ಸೃಷ್ಟಿಯಾಗಿದೆ.

 ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಭೀತಿ; ಜಿಲ್ಲಾಧಿಕಾರಿಗಳಿಂದ ಹಲವು ಸಲಹೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಭೀತಿ; ಜಿಲ್ಲಾಧಿಕಾರಿಗಳಿಂದ ಹಲವು ಸಲಹೆ

Grama Panchayat Member Ramaswamy Died due to monkey fever in Shivamogga Aralagodu

ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯು ಅತ್ಯಂತ ಕುಗ್ರಾಮವಾಗಿದೆ. ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯ ವ್ಯಾಪ್ತಿಗೆ ಹೊಂದಿಕೊಂಡಿದೆ. ಇಲ್ಲಿನ ಹತ್ತಿಗೋಡು ಗ್ರಾಮದ ಬಳಿ ಕಳೆದ ಹತ್ತು ದಿನದ ಹಿಂದೆ ಮಂಗವೊಂದು ಸಾವನ್ನಪ್ಪಿತ್ತು.

ವನ್ಯಜೀವಿ ವಿಭಾಗದ ಅಧಿಕಾರಿಗಳು ಸತ್ತ ಮಂಗದ ಕಳೆಬರವನ್ನು ಸುಟ್ಟು ಅಗತ್ಯ ಪ್ರತಿಬಂಧಕ ಸುರಕ್ಷಾ ಕ್ರಮ ಕೈಗೊಂಡಿತ್ತು. ಆದರೂ ಸೋಂಕು ಹರಡುತ್ತಿರುವುದರಿಂದ ಅರಣ್ಯ ವ್ಯಾಪ್ತಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Grama Panchayat Member Ramaswamy Died due to monkey fever in Shivamogga Aralagodu

ಶೇ 90ರಷ್ಟು ಮಂದಿಗೆ ಲಸಿಕೆ: "ಕೆಎಫ್‌ಡಿ ಸೋಂಕು ಹರಡದಂತೆ ತಡೆಯಲು ಲಸಿಕೆ ಅಭಿಯಾನ ನಡೆಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇ 90ರಷ್ಟು ಮಂದಿಗೆ ಮೊದಲನೆ ಮತ್ತು ಎರಡನೆ ಹಂತದ ಲಸಿಕೆ ನೀಡಲಾಗಿದೆ. ಶೇ 75ರಷ್ಟು ಜನರಿಗೆ ಬೂಸ್ಟರ್ ಡೋಸ್ ಕೂಡ ನೀಡಲಾಗಿದೆ" ಎಂದು ಅರಳಗೋಡು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀರಭದ್ರಪ್ಪ ಗೌಡ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯು ಅತ್ಯಂತ ಕುಗ್ರಾಮವಾಗಿದೆ. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಇವರಿಗೆ ಸೂಕ್ತ ವಾಹನ ವ್ಯವಸ್ಥೆಯಿಲ್ಲ ಎಂಬ ಆರೋಪವಿದೆ.

ಇನ್ನು, ಕಾಡಿಗೆ ಮೇಯಲು ಹೋಗಿ ಬರುವ ಜಾನುವಾರುಗಳಿಗೆ ಲೇಪನ ಮಾಡಲು ದ್ರಾವಣ ನೀಡಿಲ್ಲ. ಹಾಗಾಗಿ ಜಾನುವಾರುಗಳು ಕೆಎಫ್‌ಡಿ ಸೋಂಕು ಹರಡುವ ಉಣ್ಣೆಗಳನ್ನು ಕಾಡಿನಿಂದ ಸುಲಭವಾಗಿ ಹೊತ್ತು ಬರುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

Grama Panchayat Member Ramaswamy Died due to monkey fever in Shivamogga Aralagodu

ಏನಿದು ಮಂಗನ ಕಾಯಿಲೆ?: ಕ್ಯಾಸನೂರು ಫಾರೆಸ್ಟ್ ಡಿಸೀಸ್ (KFD) ಅಥವಾ ಮಂಗನ ಕಾಯಿಲೆ ಮಲೆನಾಡು ಭಾಗದಲ್ಲಿ ತೀವ್ರ ತಲ್ಲಣ ಸೃಷ್ಟಿಸಿದೆ. ಕಳೆದ 1956ರಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ ಕಾಯಿಲೆ ಪತ್ತೆಯಾಯಿತು. ಆದ್ದರಿಂದ ಈ ಕಾಯಿಲೆಗೆ ಕ್ಯಾಸನೂರ ಫಾರೆಸ್ಟ್ ಡಿಸೀಸ್ ಎಂದು ಕರೆಯಲಾಗುತ್ತದೆ. ಕಾಡಿನಲ್ಲಿರುವ ಸೋಂಕಿತ ಉಣ್ಣೆಗಳು ಕಚ್ಚುವುದರಿಂದ ಈ ಸೋಂಕು ಹರಡುತ್ತದೆ.

ಕಾಡಿನಲ್ಲಿ ಮಂಗಗಳು ಈ ಸೋಂಕಿಗೆ ಬೇಗ ತುತ್ತಾಗುತ್ತವೆ. ಮಂಗಗಳು ಸಾಯುವುದೆ ಈ ಸೋಂಕಿನ ಮುನ್ಸೂಚನೆಯಾಗಿದೆ. ಹಾಗಾಗಿ ಜನರು ಇದನ್ನು ಮಂಗನ ಕಾಯಿಲೆ ಎಂದು ಕರೆಯುತ್ತಾರೆ. ಇನ್ನು, ಈ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಉಣ್ಣೆಗಳು ಕಚ್ಚುವುದರಿಂದ ಮಾತ್ರ ಮನುಷ್ಯರಿಗೆ ಸೋಂಕು ತಗುಲುತ್ತವೆ.

Grama Panchayat Member Ramaswamy Died due to monkey fever in Shivamogga Aralagodu

ಹೇಗೆ ಬರುತ್ತೆ ಮಂಗನ ಕಾಯಿಲೆ?: ಕಾಡಿನಲ್ಲಿರುವ ಉಣ್ಣೆಗಳೊಂದಿಗೆ ಸಂಪರ್ಕಕ್ಕೆ ಬಂದರೆ ಮಂಗನ ಕಾಯಿಲೆ ಹರಡುತ್ತದೆ. ಮಲೆನಾಡು ಭಾಗದಲ್ಲಿ ಧರಗು ತರಲು, ಸೌದೆ ಆರಿಸುವುದು ಸೇರಿದಂತೆ ಕಾಡಿನೊಂದಿಗೆ ನಿಕಟ ಸಂಪರ್ಕ ಹೊಂದಿರಲಾಗುತ್ತದೆ. ಅಲ್ಲದೆ ಜಾನುವಾರುಗಳನ್ನು ಮೇಯಲು ಕಾಡಿಗೆ ಬಿಡಲಾಗುತ್ತದೆ. ಇವುಗಳ ಮೈಗೆ ಅಂಟಿಕೊಂಡು ಉಣ್ಣೆಗಳು ಮನೆಗೆ ಬರುತ್ತವೆ. ಈ ಉಣ್ಣೆಗಳು ಕಚ್ಚುವುದರಿಂದ ಜಾನುವಾರುಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ.

ಆದರೆ ಮನುಷ್ಯರಿಗೆ ಕಚ್ಚಿದರೆ ಸೋಂಕು ಹರಡುತ್ತದೆ. ಇದೇ ಕಾರಣಕ್ಕೆ ಜನರಿಗೆ ಲಸಿಕೆ ನೀಡಲಾಗುತ್ತದೆ. ಕಾಡಿಗೆ ಹೋಗುವಾಗ ಮೈಗೆ ಡಿಎಂಪಿ ತೈಲ ಹಚ್ಚಿಕೊಂಡು ಹೋಗುವಂತೆ ವಿತರಣೆ ಮಾಡಲಾಗುತ್ತದೆ. ಜಾನುವಾರುಗಳಿಗೆ ಕೂಡ ದ್ರಾವಣ ಲೇಪನ ಮಾಡಿ ಕಾಡಿಗೆ ಬಿಡಲಾಗುತ್ತದೆ.

ಲಕ್ಷಣಗಳೇನು?; ಕೆಎಫ್‌ಡಿ ಸೋಂಕಿಗೆ ತುತ್ತಾದವರಲ್ಲಿ ಮೊದಲು ಜ್ವರ ಕಾಣಿಸುತ್ತದೆ. ಐದರಿಂದ 7 ದಿನ ಜ್ವರ ಬಾಧಿಸುತ್ತದೆ. ತಲೆನೋವು, ಮೈಕೈ ನೋವು, ಕೀಲು ನೋವು, ನಿಶಕ್ತಿ, ವಾಂತಿ ಭೇದಿ, ಹೊಟ್ಟೆ ನೋವು, ಕಣ್ಣು ಕೆಂಪಾಗುವುದು ಕೂಡ ಈ ಸೋಂಕಿನ ಲಕ್ಷಣವಾಗಿದೆ.

ಮಂಗನ ಕಾಯಿಲೆಗೆ ಯಾವುದೆ ಔಷಧವಿಲ್ಲ. ಮುಂಜಾಗ್ರತೆ ವಹಿಸಿದರೆ ಈ ಸೋಂಕಿನಿಂದ ಸುರಕ್ಷಿತವಾಗಿ ಇರಬಹುದಾಗಿದೆ. ಸದ್ಯ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈಗ ಸಾಗರ ತಾಲೂಕು ಅರಳಗೋಡು ಗ್ರಾಮದಲ್ಲಿ ಸೋಂಕು ಪತ್ತೆಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಇದು ಮಲೆನಾಡು ಭಾಗದಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.

English summary
Grama Panchayat Member Ramaswamy Died due to monkey fever in Shivamogga Aralagodu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X