ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರಪುತ್ರರ ನಾಡು ಈಸೂರಿನ ಇತಿಹಾಸ ನಿಮಗೆಷ್ಟು ಗೊತ್ತು?

By ರಘು ಆರ್ ನಿರ್ಮಿತ್
|
Google Oneindia Kannada News

ಶಿವಮೊಗ್ಗ, ಆಗಸ್ಟ್ 13: "ಏಸೂರು ಕೊಟ್ಟರು ಈಸೂರು ಕೊಡೆವು" ಎಂದು ಭಾರತದಲ್ಲಿ ಮೊಟ್ಟಮೊದಲ ಸ್ವಾತಂತ್ರ್ಯ ಘೋಷಿಸಿಕೊಂಡ ಹಳ್ಳಿ ಈಸೂರು. 1942ರಲ್ಲಿ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರೇ "ಭಾರತ ಬಿಟ್ಟು ತೊಲಗಿ" "ಮಾಡು ಇಲ್ಲವೇ ಮಡಿ" ಎಂದು ಘೋಷಣೆಯೊಂದಿಗೆ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದರು.

ಆಗ ಈ ಚಳವಳಿಯಲ್ಲಿ ಈಸೂರು ಗ್ರಾಮ ಮೇಲುಗೈ ಸಾಧಿಸಿದೆ ಎಂದರು ತಪ್ಪಾಗಲಾರದು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಈಸೂರು ಗ್ರಾಮದ ಜನರು ಬ್ರಿಟಿಷರಿಗೆ ಸೆಡ್ಡು ಹೊಡೆದು, ಅವರೊಂದಿಗೆ ಕಾದಾಡಿ ವೀರ ಮರಣ ಹೊಂದಿದವರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ 'ವಿಧುರಾಶ್ವತ್ಥ' ಹೋರಾಟದ ನೆನಪುಸ್ವಾತಂತ್ರ್ಯ ಸಂಗ್ರಾಮದಲ್ಲಿ 'ವಿಧುರಾಶ್ವತ್ಥ' ಹೋರಾಟದ ನೆನಪು

ಈಸೂರಿನಲ್ಲಿ 1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಲಾಯಿತು. ಪ್ರತಿ ದಿನ ಗ್ರಾಮದ ದೇವರು ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ಊರ ಬೀದಿಗಳಲ್ಲಿ ವಂದೇ ಮಾತರಂ, ಭಾರತ ಮಾತಕೀ ಜೈ ಘೋಷಣೆಯೊಂದಿಗೆ ಮೆರವಣಿಗೆ ನಡೆಸುತ್ತಿದ್ದರು.

ಬ್ರಿಟಿಷ್ ಕಂದಾಯ ಅಧಿಕಾರಿಗಳು ಕಂದಾಯ ಕಟ್ಟುವಂತೆ ಬಂದು ಊರಿನ ಗ್ರಾಮಸ್ಥರಿಗೆ ಕೇಳಿದಾಗ ಅವರ ಲೆಕ್ಕ ಪುಸ್ತಕವನ್ನು ಕಸಿದುಕೊಂಡು, ಗಾಂಧಿ ಟೋಪಿ ಧರಿಸುವಂತೆ ಹೇಳಿದರು. ಅವರು ಧರಿಸದೇ ವಾಪಸ್ಸು ಹೋಗಿ ಶಿಕಾರಿಪುರದ ಅಮಲ್ದಾರ್ ಗೆ ದೂರು ನೀಡಿದರು.

ಸ್ವಾತಂತ್ರ್ಯ ಚಳವಳಿಯ ಪರೋಕ್ಷ ಹೋರಾಟಗಾರ್ತಿ: ಅಮ್ಮಕ್ಕ ಗಣಪತಿ ಭಟ್ಸ್ವಾತಂತ್ರ್ಯ ಚಳವಳಿಯ ಪರೋಕ್ಷ ಹೋರಾಟಗಾರ್ತಿ: ಅಮ್ಮಕ್ಕ ಗಣಪತಿ ಭಟ್

ಇದರಿಂದ ಈಸೂರಿನ ಜನತೆ ಊರ ದ್ವಾರ ಬಾಗಿಲಿಗೆ "ಬೇಜವಾಬ್ದಾರಿ ಸರ್ಕಾರಿ ಅಧಿಕಾರಿಗಳಿಗೆ ಈಸೂರಿನಲ್ಲಿ ಪ್ರವೇಶವಿಲ್ಲ" ಎಂದು ನಾಮ ಫಲಕವನ್ನು ಹಾಕಿದರು. ಸಾಹುಕಾರ್ ಜಯಣ್ಣರನ್ನು ಅಮಲ್ದಾರ್ ಆಗಿ, ಕೆ.ಜಿ ಮಲ್ಲಯ್ಯ ಅವರನ್ನು ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕ ಮಾಡಿಕೊಂಡು ಜವಾಬ್ದಾರಿ ಸರ್ಕಾರವನ್ನು ರಚಿಸಿಕೊಂಡರು. ಹೀಗೆ ಮುಂದುವರಿದ ವಿಷಯ ಹೇಗೆಲ್ಲಾ ತಿರುವು ಪಡೆದುಕೊಂಡಿತು ಮುಂದೆ ಓದಿ.....

 ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾದ ಘಟನೆ

ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾದ ಘಟನೆ

ಸಾಹುಕಾರ್ ಜಯಣ್ಣರನ್ನು ಅಮಲ್ದಾರ್ ಆಗಿ, ಕೆ.ಜಿ ಮಲ್ಲಯ್ಯ ಅವರನ್ನು ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕ ಮಾಡಿಕೊಂಡ ವಿಷಯ ತಿಳಿದ ಶಿಕಾರಿಪುರದ ಅಮಲ್ದಾರ್ ಚೆನ್ನಕೃಷ್ಣಪ್ಪ ಮತ್ತು ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಕೆಂಚೇಗೌಡ ಅವರು 28/09/1942 ರಂದು ಸ್ವಾತಂತ್ರ್ಯ ಗ್ರಾಮ ಈಸೂರಿಗೆ ಬಂದು ದ್ವಾರ ಬಾಗಿಲಿಗೆ ಹಾಕಿದ ನಾಮ ಫಲಕ ಮತ್ತು ಹೂವಿನ ತೋರಣಗಳನ್ನು ಕಿತ್ತು ಹಾಕಿದರು.

ನಂತರ ದೇವಸ್ಥಾನದ ಹತ್ತಿರ ಬಂದು ಜನರನ್ನು ಹಿಂಸೆ ಮಾಡತೊಡಗಿದರು. ಪೊಲೀಸ್ ಅಧಿಕಾರಿ ಕೆಂಚೇಗೌಡ ಜನರ ಮೇಲೆ ಲಾಠಿ ಚಾರ್ಜ್ ಮಾಡಿದರು. ಆದರೂ ಶಾಂತವಾಗಿದ್ದ ಯುವಕರ ತಂಡ ಅದನ್ನು ಸಹಿಸಿಕೊಂಡು ಸುಮ್ಮನಿದ್ದರು. ಆದರೆ ಇಷ್ಟಕ್ಕೆ ಸುಮ್ಮನಿರದ ಪೊಲೀಸ್ ಕೆಂಚೇಗೌಡ ಜನರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದರು.

ಗುಂಡು ಊರ ಹಿರಿಯರಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದರು. ಇದರಿಂದ ಸಿಟ್ಟಿಗೆದ್ದ ಯುವಕರು ಪೊಲೀಸ್ ಕೆಂಚೇಗೌಡ ಮತ್ತು ಅಮಲ್ದಾರ್ ಚೆನ್ನಕೃಷ್ಣಪ್ಪ ಅವರನ್ನು ಹೊಡೆದು ಹಾಕಿದರು. ಆಗ ಅವರ ಪ್ರಾಣ ಪಕ್ಷಿ ಹಾರಿ ಹೋಯಿತು. ಈ ಘಟನೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಆಯಿತು.

 ಸ್ಮಶಾನವಾದ ಈಸೂರು ಗ್ರಾಮ

ಸ್ಮಶಾನವಾದ ಈಸೂರು ಗ್ರಾಮ

ಈ ಘಟನೆಯಿಂದ ಬ್ರಿಟಿಷ್ ಸರ್ಕಾರ ಮಿಲಿಟರಿ ಪಡೆಯೊಂದಿಗೆ ಈಸೂರು ಗ್ರಾಮಕ್ಕೆ ಆಗಮಿಸಿದರು. ಈ ಸುದ್ದಿ ತಿಳಿದು ಇಡೀ ಊರಿಗೆ ಊರೇ ತಲೆ ಮರಿಸಿಕೊಂಡಿತು. ಈಸೂರು ಗ್ರಾಮದ ಮನೆ ಮನೆಗೆ ಬೀಗ ಹಾಕಿಕೊಂಡು ಇಡೀ ಊರು ಸ್ಮಶಾನದಂತಾಗಿತ್ತು.

ಪೊಲೀಸ್ ಅಧಿಕಾರಿಗಳು ಆರೋಪಿಗಳ ಪಟ್ಟಿ ಸಿದ್ಧ ಮಾಡಿ 11 ಜನರಿಗೆ ಮರಣದಂಡನೆ, 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲು ನಿರ್ಧರಿಸಿದರು.

 ಗಲ್ಲಿಗೇರಿದವರು

ಗಲ್ಲಿಗೇರಿದವರು

ಆ ನಂತರ ಕೆ.ಗುರಪ್ಪ ಬಿನ್ ಈಶ್ವರಪ್ಪ ಕುಮಾರ್ ಅವರನ್ನು 8-03-1943 ರಲ್ಲಿ ಗಲ್ಲಿಗೇರಿಸಲಾಯಿತು. ಜಿನಹಳ್ಳಿ ಮಲ್ಲಪ್ಪ ಇವರನ್ನು 8-03-1943 ರಲ್ಲಿ ಗಲ್ಲಿಗೇರಿಸಲಾಯಿತು. ಸೂರ್ಯನಾರಯಣಾಚಾರ್ ಬಿನ್ ಪಂಪಪ್ಪಚಾರ್ ಇವರನ್ನು 09-03-1943 ರಲ್ಲಿ ಗಲ್ಲಿಗೇರಿಸಲಾಯಿತು.

ಇವರಲ್ಲಿ ಬಡಕಳ್ಳಿ ಹಾಲಪ್ಪ ಬಿನ್ ಬಸಪ್ಪ ಹಾಗೂ ಅಂಗಡಿ ಹಾಲಪ್ಪ ಎಂಬವರು ತಲೆಮರೆಸಿಕೊಂಡಿದರು. ಅವರ ಬದಲು ಬಿ.ಹಾಲಪ್ಪ ಅವರನ್ನು 9-03-1943 ರಲ್ಲಿ ಗಲ್ಲಿಗೇರಿಸಲಾಯಿತು.
ಗೌಡ್ರ ಶಂಕ್ರಪ್ಪ ಬಿನ್ ಹೊಳಿಯಪ್ಪ 10-03-43 ರಲ್ಲಿ ಇವರನ್ನು ಅಪರಾಧಿಗಳು ಎಂದು ಗಲ್ಲಿಗೇರಿಸಲಾಯಿತು. ಇನ್ನೂ 23 ಜನರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಯಿತು.

ಇದರಲ್ಲಿ ಮಹಿಳೆಯರು ಇದ್ದರು. ಇವರಲ್ಲಿ ಜೀವಂತವಾಗಿ ಇರುವವರು ಎಸ್.ಎಸ್ ಹುಚ್ಚರಾಯಪ್ಪನವರು ಮಾತ್ರ. ಅವರು ಇನ್ನೂ ಈಸೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ಇದ್ದಾರೆ.

 ನಿರ್ಲಕ್ಷ್ಯ ತಾಳಿದ ಸರ್ಕಾರ

ನಿರ್ಲಕ್ಷ್ಯ ತಾಳಿದ ಸರ್ಕಾರ

"ಈಸೂರು ಗ್ರಾಮ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಎಲ್ಲಾ ಗ್ರಾಮಗಳಂತೆ ಈ ಗ್ರಾಮವೂ ಸಾಮಾನ್ಯವಾಗಿದೆ. ಇದು ಇಡೀ ರಾಜ್ಯದಲ್ಲಿಯೇ ಒಂದು ಮಾದರಿ ಗ್ರಾಮವಾಗಿ ಅಭಿವೃದ್ಧಿಯಾಗಬೇಕು. ಈ ಗ್ರಾಮಕ್ಕೆ ಒಂದು ಸೈನಿಕ ಶಾಲೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಇಡಲಾಗಿದ್ದು, ಈವರೆಗೂ ಈ ಬಗ್ಗೆ ಯಾವುದೇ ರಾಜಕಾರಣಿಗಳಾಗಲಿ, ಸರ್ಕಾರವಾಗಲಿ ಗಮನಹರಿಸಿಲ್ಲ" ಎಂದು ಇಲ್ಲಿನ ಜನರು ವಿಷಾದಿಸಿದ್ದಾರೆ.

ಒಟ್ಟಿನಲ್ಲಿ ಈಸೂರಿನ ಹೋರಾಟದ ಚರಿತ್ರೆ ಭಾರತದ ಇತಿಹಾಸದಲ್ಲಿ ಒಂದು ಮೆಲುಗೈ ಸಾಧಿಸಿದೆ. ಸ್ವಾತಂತ್ರ್ಯ ಹೋರಾಟದ ಕಿಚ್ಚು, ಸ್ವಾಭಿಮಾನ, ದೇಶಾಭಿಮಾನ, ಶಾಂತಿ- ಕ್ರಾಂತಿ ಎರಡೂ ಚಿಂತನೆಗಳ ಮೂಲಕ ಬ್ರಿಟೀಷರ ಆಡಳಿತಕ್ಕೆ ವಿರುದ್ಧವಾಗಿ ಮೊಟ್ಟ ಮೊದಲ ಸ್ವಾತಂತ್ರ್ಯ ಘೊಷಿಸಿಕೊಂಡ ವೀರಪುತ್ರರ ನಾಡು ಈಸೂರು.

English summary
Esuru has the legacy of being the first village to be declared independent in the country. Quit India Movement started in Esuru in 1942.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X