ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಂಗಾ ಕಾಲೇಜಿನ ವಿದ್ಯಾರ್ಥಿಗಳ ಪ್ರೀತಿಯ 'ಕ್ಯಾಂಟೀನ್ ಭಟ್ಟರು' ಇನ್ನಿಲ್ಲ

|
Google Oneindia Kannada News

ತೀರ್ಥಹಳ್ಳಿ, ಜನವರಿ 15: ಸಾಮಾನ್ಯವಾಗಿ ನಾವು ಕಲಿಯುವ ಶಾಲೆ, ಕಾಲೇಜುಗಳ ತರಗತಿ ಕೊಠಡಿಗಳಿಗಿಂತ ಅದರ ಸುತ್ತಲೂ ಇರುವ ಪ್ರದೇಶ, ಅಂಗಡಿ, ಹೋಟೆಲ್ ಮುಂತಾದ ಜಾಗಗಳು ಆಪ್ತವಾಗುತ್ತವೆ. ಪಾಠ ಮಾಡುವ ಶಿಕ್ಷಕರು, ಉಪನ್ಯಾಸಕರಿಗಿಂತ ಕಾಲೇಜಿನ ಇತರೆ ಸಿಬ್ಬಂದಿ, ಪಕ್ಕದ ಅಂಗಡಿ, ಹೋಟೆಲ್ ಮಾಲೀಕರು ಆತ್ಮೀಯರಾಗುತ್ತಾರೆ.

ಅದರಲ್ಲಿಯೂ ಬಹುತೇಕ ವಿದ್ಯಾರ್ಥಿಗಳ ನೆಚ್ಚಿನ ತಾಣವಾಗುವುದು ಕಾಲೇಜು ಕ್ಯಾಂಟೀನ್. ಊಟ, ತಿಂಡಿಯ ಉದರ ಪೋಷಣೆಗಿಂತಲೂ ಅದು ವಿದ್ಯಾರ್ಥಿಗಳ ಪಾಲಿಗೆ ಹರಟೆ ಹೊಡೆಯುವ, ನೆಮ್ಮದಿ ಪಡೆಯುವ ಜಾಗ. ಕಾಲೇಜು ಬಿಟ್ಟು ಎಷ್ಟೋ ವರ್ಷಗಳಾದರೂ ತರಗತಿಗಳಿಗಿಂತಲೂ ಈ ಕ್ಯಾಂಟೀನುಗಳು ನಮ್ಮ ಮನಸಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತವೆ. ತರಗತಿ ಬಿಟ್ಟ ಬಳಿಕವೋ, ಅಥವಾ ಚಕ್ಕರ್ ಹೊಡೆದೋ ಬರುವ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಮಾತನಾಡಿಸುವ ಕ್ಯಾಂಟೀನ್ ಸಿಬ್ಬಂದಿಯೂ ಕೂಡ ನೆನಪಿನ ಪುಟಗಳಿಂದ ಮಾಸಲಾರರು.

ಸಾವಯವ ಕೃಷಿಕ, ನಾಡೋಜ ಎಲ್ ನಾರಾಯಣ ರೆಡ್ಡಿ ನಿಧನಸಾವಯವ ಕೃಷಿಕ, ನಾಡೋಜ ಎಲ್ ನಾರಾಯಣ ರೆಡ್ಡಿ ನಿಧನ

ಹಾಗೆ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸುತ್ತಮುತ್ತಲಿನ ಜನರಿಗೆ ತಮ್ಮ ಮೃದು, ಸರಳ ಹಾಗೂ ಸ್ನೇಹಗುಣದಿಂದ ಅಚ್ಚುಮೆಚ್ಚಿನವರಾಗಿದ್ದವರು ಕೆ. ನಾರಾಯಣ ಭಟ್ಟರು.

Canteen Bhatru famed Thirthahalli tunga college Narayana Bhat is no more

ತೀರ್ಥಹಳ್ಳಿಯ ಆನಂದಗಿರಿ ಗುಡ್ಡದ ತಪ್ಪಲಿನಲ್ಲಿರುವ ತುಂಗಾ ಮಹಾವಿದ್ಯಾಲಯದ ಕೆ. ನಾರಾಯಣ ಭಟ್ಟರು ಕಳೆದ 20-25 ವರ್ಷಗಳಿಂದ ಕ್ಯಾಂಟೀನ್ ನಡೆಸುತ್ತಿದ್ದವರು. ಕೆ. ನಾರಾಯಣ ಭಟ್ಟರೆಂದರೆ ಹೆಚ್ಚಿನವರಿಗೆ ತಕ್ಷಣ ತಿಳಿಯದು. 'ಕ್ಯಾಂಟೀನ್ ಭಟ್ರು' ಎಂದೇ ಅವರು ಖ್ಯಾತರಾದವರು. ಕಾಲೇಜಿನ ಮಗ್ಗುಲಲ್ಲೇ ಇರುವ ತುಡ್ಕಿ ಎಂಬ ಊರು ಅವರದು.

ಸಂಕ್ರಾಂತಿಯ ಸಂಭ್ರಮದಲ್ಲಿದ್ದ ತುಂಗಾ ಕಾಲೇಜಿನ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಕ್ಯಾಂಟೀನ್ ಭಟ್ರು ಇನ್ನಿಲ್ಲವೆಂಬ ಸುದ್ದಿ ಕೇಳಿ ಆಘಾತಗೊಂಡಿದ್ದಾರೆ. ಸುಮಾರು ಎರಡು ವರ್ಷದಿಂದ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದ ನಾರಾಯಣ ಭಟ್ಟರು ಜ.14ರಂದು ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ ಬಡಿಸಿದ ದೇಹ ವಿದಾಯ ಹೇಳಿದೆ.

ಕ್ಯಾಂಟೀನ್ ವ್ಯಾಪಾರ ವಹಿವಾಟಿನ ಲಾಭದ ಉದ್ದೇಶದಿಂದ ನಡೆಸಿದ್ದರೂ ನಾರಾಯಣ ಭಟ್ಟರು ಹಣ ಕೊಡದೆ ಹಾಗೆಯೇ ತಿಂದು ಹೋದವರನ್ನು ಜಗ್ಗಿ ಹಣ ಕೇಳಿದವರಲ್ಲ. 'ಒಳ್ಳೆಯ ಮನಸ್ಸಿನವರು ಕೊಟ್ಟೇ ಕೊಡುತ್ತಾರೆ. ಅನ್ಯಾಯ ಮಾಡುವುದಿಲ್ಲ' ಎಂಬ ಮನಸ್ಥಿತಿ ಅವರದು. ಕ್ಯಾಂಟೀನಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಅವರಿಗೆ ಪರಿಚಿತರು. ಸಮಯ ಸಿಕ್ಕಾಗ ವಿದ್ಯಾರ್ಥಿಗಳ ಊರು, ಬದುಕಿನ ಬಗ್ಗೆಯೂ ಒಂದಷ್ಟು ಕೇಳಿ ತಿಳಿದುಕೊಳ್ಳುತ್ತಿದ್ದರು.

ಹಣವಿಲ್ಲದೆ ಬರುವ ವಿದ್ಯಾರ್ಥಿಗಳಿಗೆ 'ಪರವಾಗಿಲ್ಲ, ನಾಳೆ ಕೊಡಿ' ಎಂದು ಅಷ್ಟೇ ನಂಬಿಕೆ, ವಿಶ್ವಾಸದಿಂದ ನಗುತ್ತಾ ಹೇಳುತ್ತಿದ್ದವರು.

ಅಪಘಾತದಿಂದ ಪಾರಾದ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ ಸಾವುಅಪಘಾತದಿಂದ ಪಾರಾದ ಪೊಲೀಸ್ ಅಧಿಕಾರಿ ಹೃದಯಾಘಾತದಿಂದ ಸಾವು

ಹೀಗೆ ಸುಮಾರು 20 ವರ್ಷಗಳ ಕಾಲ ತುಂಗಾ ಕಾಲೇಜಿನಲ್ಲಿ ಅವರು ಕ್ಯಾಂಟೀನ್ ನಡೆಸಿದ್ದರು. ಶುಚಿ ರುಚಿಯ ಆಹಾರಕ್ಕೆ ಅವರು ಹೆಸರುವಾಸಿ. ಅನಾರೋಗ್ಯದ ಕಾರಣಕ್ಕೆ ಕ್ಯಾಂಟೀನ್ ನಡೆಸುವುದನ್ನು ನಿಲ್ಲಿಸಿದ್ದ ಅವರು, ಚೇತರಿಸಿಕೊಂಡ ಬಳಿಕ ಕಾಲೇಜಿನ ಹೊರಭಾಗದಲ್ಲಿ ಸ್ವತಂತ್ರವಾಗಿ ಮತ್ತೆ ಪುಟ್ಟದೊಂದು ಕ್ಯಾಂಟೀನ್ ಆರಂಭಿಸಿದರು. ಕಾಲೇಜು ಕ್ಯಾಂಟೀನ್ ಬೇರೆಯೇ ಇದ್ದರೂ ಭಟ್ಟರ ಕ್ಯಾಂಟೀನಿನ ಇಡ್ಲಿ, ಕೇಸರಿಬಾತ್-ಉಪ್ಪಿಟ್ಟು ಸವಿಯಲೆಂದೇ ವಿದ್ಯಾರ್ಥಿಗಳು ಅಲ್ಲಿಗೆ ಬರುತ್ತಿದ್ದರು.

ಹಾಗೆ ಬಂದವರು ಜೊತೆ ವಿನೋದವಾಗಿ ಹರಟುವ ಭಟ್ಟರು, ಕಾಲೇಜು ಹಿಂದೆ ಹೇಗಿತ್ತು, ಉಪನ್ಯಾಸಕರು ಹೇಗಿದ್ದರು ಎಂಬುದನ್ನೆಲ್ಲಾ ಅವರ ತಿಂಡಿ ತಿನಿಸಿನಷ್ಟೇ ರುಚಿಕಟ್ಟಾಗಿ ವರ್ಣಿಸುತ್ತಿದ್ದರು.

ಆದರೆ, ವಯಸ್ಸು ಹಾಗೂ ಆರ್ಥಿಕ ಪರಿಸ್ಥಿತಿ ಅವರ ಉತ್ಸಾಹವನ್ನು ಮತ್ತೆಮತ್ತೆ ಕುಗ್ಗಿಸಿತು. ಅವರ ಉದಾರತೆಯ ಕಾರಣಕ್ಕಾಗಿಯೇನೋ, ಉತ್ತಮ ವ್ಯಾಪಾರವಾಗುತ್ತಿದ್ದರೂ ಅವರು ಆರ್ಥಿಕವಾಗಿ ಬಲಗೊಳ್ಳಲಿಲ್ಲ.

ಇತ್ತೀಚೆಗೆ ನಡೆದ ತುಂಗಾ ಮಹಾವಿದ್ಯಾಲಯದ ಸುವರ್ಣ ಸಂಭ್ರಮದ ಕಾರ್ಯಕ್ರಮದ ವೇಳೆ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಹಣ ಸಂಗ್ರಹಿಸಿ ಭಟ್ಟರ ಚಿಕಿತ್ಸೆಗೆ ಧನ ಸಹಾಯ ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬಂದಿದ್ದ ಜನಸ್ತೋಮವೇ ಅವರು ಸಂಪಾದಿಸಿದ್ದ ಸಂಪತ್ತನ್ನು ತೋರಿಸುತ್ತಿತ್ತು.

English summary
Tudki Narayan Bhat is familiar to the people of Thirthahalli and to the students of Tunga college as 'Canteen Bhatru'. He runned college canteen about 20 years. Due to health problem he died on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X