ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

BS Yeddyurappa Journey: ಟೊರಿನೋ ಫ್ಯಾಕ್ಟರಿಯ ಸಾಲದಿಂದ ಸಿಟ್ಟಿನ ದಿನಗಳ ತನಕ

|
Google Oneindia Kannada News

"ಯಡಿಯೂರಪ್ಪ ಅವರ ಸಿಟ್ಟು ಈಗಿನದಲ್ಲ. ಅದನ್ನು ಅವರು ಸಾಕಿಕೊಂಡು ಬಂದಿದ್ದಾರೆ. ಅಧಿಕಾರಿಗಳು ಏನೋ ತಪ್ಪು ಮಾಡಿದರು ಅನ್ನಿಸಿದರೆ ಹೊಡೆಯುವುದಕ್ಕೆ ಅಂತಲೇ ನುಗ್ಗಿ ಬಿಡುತ್ತಿದ್ದರು. ಆಗ ಡಿ. ಎಚ್. ಶಂಕರಮೂರ್ತಿ ಅಂಥವರು ತಡೆಯಲು ಪ್ರಯತ್ನಿಸಿ, ಅವರಿಗೂ ಸಣ್ಣ- ಪುಟ್ಟ ಗಾಯಗಳಾಗಿದ್ದು ಉಂಟು".

- ಯಡಿಯೂರಪ್ಪ ಅವರ ಕೆಲಸದ ವೈಖರಿ, ಸಿಟ್ಟು ಎರಡನ್ನೂ ಒಟ್ಟಿಗೆ ಕಟ್ಟಿಕೊಡುವಂಥ ಮಾತಿದು. ಶಿವಮೊಗ್ಗ ಸುತ್ತಾಡಿ, ಜನಸಂಘದ ದಿನಗಳಿಂದ ಯಡಿಯೂರಪ್ಪ ಅವರನ್ನು ನೋಡಿಕೊಂಡು ಬರುತ್ತಿರುವವರು ಇಂಥ ಹಲವು ಉದಾಹರಣೆ ನೀಡುತ್ತಾರೆ.

ಈಶ್ವರಪ್ಪ ಹಾಗೂ ಯಡಿಯೂರಪ್ಪ ಇಬ್ಬರೂ ಜನಸಂಘಕ್ಕೆ ಒಟ್ಟಿಗೆ ಒಂದೇ ಸಮಯಕ್ಕೆ ಬಂದವರು. ಇಬ್ಬರನ್ನೂ ಕರೆತಂದವರು ಡಿ. ಎಚ್. ಶಂಕರಮೂರ್ತಿ. ಅದಾಗಲೇ ಜನ ಸಂಘದಲ್ಲಿ ಶಂಕರಮೂರ್ತಿ ಅವರು ಪ್ರಾಂತೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದ್ದವರು. ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರಿಗಿಂತ ವಯಸ್ಸಿನಲ್ಲಿ ಕೂಡ ಶಂಕರಮೂರ್ತಿ ಹಿರಿಯರು, ಆರ್ಥಿಕವಾಗಿಯೂ ತಕ್ಕಮಟ್ಟಿಗೆ ಅನುಕೂಲವಾಗಿ ಇದ್ದವರು.

ವ್ಯಕ್ತಿಚಿತ್ರ: ವ್ಯಕ್ತಿಚಿತ್ರ: "ಶಿಸ್ತಿನ ಸಿಪಾಯಿ" ಯಡಿಯೂರಪ್ಪ ರಾಜಕೀಯ ಬದುಕಿನ ಚಿತ್ರಣ

ಆ ದಿನಗಳು ಹೇಗಿದ್ದವು ಅಂದರೆ, ಜನ ಸಂಘದಿಂದ ನೂರಾ ಒಂದು ಸ್ಥಾನಗಳಿಗೆ ಸ್ಪರ್ಧಿಸಿದರೆ ಒಂದು ಕ್ಷೇತ್ರದಲ್ಲಿ ಮಾತ್ರ ಠೇವಣಿ ಬಂದಿತ್ತು. ಉಳಿದೆಲ್ಲ ಕಡೆ ಠೇವಣಿ ಕೂಡ ಬಂದಿರಲಿಲ್ಲ. ಪಕ್ಷದಿಂದ ಚುನಾವಣೆಗೆ ನಿಲ್ಲುವಂತೆ ಕಾಡಿ, ಬೇಡಿದರೂ ಅಭ್ಯರ್ಥಿಗಳು ಸಿಗುತ್ತಿರಲಿಲ್ಲ. ಅಂಥ ಸನ್ನಿವೇಶ ಇದ್ದ ದಿನಗಳಿಂದ ಈಗಿನ ಬಿಜೆಪಿ ತನಕ ಪಕ್ಷ ಬೆಳವಣಿಗೆ ಕಂಡಿದೆ.

 ಈಶ್ವರಪ್ಪ ಸ್ಕೂಟರ್ ನಲ್ಲಿ ಯಡಿಯೂರಪ್ಪ ಹಿಂಬದಿ ಸವಾರ

ಈಶ್ವರಪ್ಪ ಸ್ಕೂಟರ್ ನಲ್ಲಿ ಯಡಿಯೂರಪ್ಪ ಹಿಂಬದಿ ಸವಾರ

ಮೊದಲೇ ಹೇಳಿದ ಹಾಗೆ ಯಡಿಯೂರಪ್ಪ, ಈಶ್ವರಪ್ಪ ಇಬ್ಬರೂ ಆರ್ಥಿಕವಾಗಿ ಸದೃಢರೇನಾಗಿರಲಿಲ್ಲ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಯಡಿಯೂರಪ್ಪ ಅವರು ಬಸ್ಸಿನಲ್ಲಿ ಬಂದರೆ ವಾಪಸ್ ಹೋಗುವುದಕ್ಕೆ ದುಡ್ಡಿರುತ್ತಿರಲಿಲ್ಲ. ಶಂಕರಮೂರ್ತಿ ಅವರು ಬಸ್ ಚಾರ್ಜ್ ಗೆ ದುಡ್ಡು ಕೊಡಬೇಕಾಗುತ್ತಿತ್ತು. ಈಶ್ವರಪ್ಪ ಹತ್ತಿರ ಒಂದು ಸ್ಕೂಟರ್ ಇತ್ತು. ಅದರಲ್ಲೇ ಶಿವಮೊಗ್ಗಕ್ಕೆ ಬಂದಾಗ ಬಿಎಸ್ ವೈ ಸವಾರಿ. ಗಾಡಿ ಓಡಿಸುತ್ತಿದ್ದವರು ಈಶ್ವರಪ್ಪ, ಹಿಂಬದಿ ಸವಾರ ಯಡಿಯೂರಪ್ಪ. ಹಣಕಾಸಿನ ಮುಗ್ಗಟ್ಟಲ್ಲವಾ? ಅದರಿಂದ ಹೊರಬರಬೇಕು ಎಂಬ ಕಾರಣಕ್ಕೆ ಈಶ್ವರಪ್ಪ, ಯಡಿಯೂರಪ್ಪ ಹಾಗೂ ಡಿ. ಎಚ್. ಶಂಕರಮೂರ್ತಿ ಸೇರಿ ಒಂದು ಫ್ಯಾಕ್ಟರಿ ಶುರು ಮಾಡಿದ್ದರು. ಆಗ ಟೊರಿನೋ ಎಂಬ ತಂಪು ಪಾನೀಯ ತಯಾರಿಸುವ ಕಾರ್ಖಾನೆ ಆರಂಭಿಸಿದ್ದರು. ಕೆಐಎಡಿಬಿಯಿಂದ ಭೂಮಿ ಪಡೆದು, ಕೆಎಸ್ ಎಫ್ ಸಿಯಿಂದ ಸಾಲ ತೆಗೆದುಕೊಂಡಿದ್ದರು.

 ಸಾಲ ವಹಿಸಿಕೊಂಡಿದ್ದು ಡಿ. ಎಚ್. ಶಂಕರಮೂರ್ತಿ

ಸಾಲ ವಹಿಸಿಕೊಂಡಿದ್ದು ಡಿ. ಎಚ್. ಶಂಕರಮೂರ್ತಿ

ಆದರೆ, ಆ ಉದ್ಯಮ ಕೈ ಹಿಡಿಯಲಿಲ್ಲ. ಭಾರೀ ನಷ್ಟ ಉಂಟು ಮಾಡಿತು. ಆ ಸಂದರ್ಭದಲ್ಲಿ ಸಾಲದ ಹೊರೆಯನ್ನು ಹೊತ್ತುಕೊಂಡವರು ಶಂಕರ ಮೂರ್ತಿ. "ನೀವಿಬ್ಬರು ಈ ಜವಾಬ್ದಾರಿಯಿಂದ ಮುಕ್ತರಾಗಿ, ನಾನು ವಹಿಸಿಕೊಳ್ಳುತ್ತೇನೆ" ಎಂದು, ತಾವೇ ಆ ಸಾಲವನ್ನು ತೀರಿಸಿದರು. ಈಗ ಅದೇ ಜಾಗದಲ್ಲಿ ಶಂಕರಮೂರ್ತಿ ಅವರ ಮಗ ಮಿನರಲ್ ವಾಟರ್ ವ್ಯಾಪಾರ ಮಾಡಿಕೊಂಡು ಇದ್ದಾರೆ. "ಶಂಕರಮೂರ್ತಿ ಅವರು ನನಗೆ ಹಿರಿಯರು. ಅವರು ನನಗೆ ಬಹಳ ಉಪಕಾರ ಮಾಡಿದ್ದಾರೆ. ಅವರಿಂದ ದೊಡ್ಡ ಪ್ರಯೋಜನ ಪಡೆದುಕೊಂಡಿದ್ದೀನಿ. ಅವರಿಗೆ ಇಂದಿಗೂ ನಾನು ಸಾಲಗಾರ" ಎಂದು ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಡಿಯೂರಪ್ಪ ಹೇಳಿದಾಗ, ಸ್ವತಃ ಶಂಕರಮೂರ್ತಿ ತಡೆಯಲು ಮುಂದಾದರು. "ನೀವು ನನ್ನನ್ನು ತಡೆಯಬಾರದು, ನನಗೆ ಅನಿಸಿದ್ದನ್ನು ಹೇಳಲು ಬಿಡಿ" ಎಂದಿದ್ದರು.

 ಈಶ್ವರಪ್ಪ ಜತೆಗೆ ಏಕ ವಚನದಲ್ಲೇ ಮಾತುಕತೆ

ಈಶ್ವರಪ್ಪ ಜತೆಗೆ ಏಕ ವಚನದಲ್ಲೇ ಮಾತುಕತೆ

"ಹಾಗಿದ್ದರೆ ಯಡಿಯೂರಪ್ಪ ಅವರ ಮೇಲಿದ್ದ ಆ ಋಣ ಭಾರ ಯಾವುದು?" ಎಂದು ಮಾಧ್ಯಮದವರೆಲ್ಲ ಸೇರಿ, ಶಂಕರಮೂರ್ತಿ ಅವರನ್ನೇ ಕೇಳಿದ್ದರು. ಅಂದು ಟೊರಿನೋ ಫ್ಯಾಕ್ಟರಿ ಬಗ್ಗೆ ಒಂದೇ ಒಂದು ಮಾತನ್ನೂ ಆಡದ ಅವರು, ಅದೆಲ್ಲ ನಿಮಗೆ ಯಾಕ್ರೀ ಎಂದು ಎಲ್ಲರನ್ನೂ ಸುಮ್ಮನಾಗಿಸಿದ್ದರು. ಈಗಲೂ ಈಶ್ವರಪ್ಪ ಅವರನ್ನು ಶಂಕರಮೂರ್ತಿ ಅವರು ಮಾತನಾಡಿಸುವುದು ಏಕ ವಚನದಲ್ಲೇ. ತಮ್ಮ ಪಕ್ಷ ಅಧಿಕಾರಕ್ಕೆ ಮತ್ತೊಮ್ಮೆ ಏರುತ್ತಿರುವ ಸಂದರ್ಭದಲ್ಲಿ ಶಂಕರಮೂರ್ತಿ ಅವರ ಅಭಿಪ್ರಾಯ ಪಡೆಯಲು ಒನ್ ಇಂಡಿಯಾ ಕನ್ನಡದಿಂದ ಮಾತನಾಡಿಸಲಾಯಿತು.

 ಸುಭದ್ರ ಸರಕಾರ, ಪ್ರಣಾಳಿಕೆ ಭರವಸೆ ಪೂರೈಸುವ ಕಠಿಣ ಸವಾಲು

ಸುಭದ್ರ ಸರಕಾರ, ಪ್ರಣಾಳಿಕೆ ಭರವಸೆ ಪೂರೈಸುವ ಕಠಿಣ ಸವಾಲು

"ಬಿಜೆಪಿ ಮುಂದೆ ಈಗ ಕಠಿಣ ಸವಾಲುಗಳಿವೆ. ಬಹುಮತ ಉಳಿಸಿಕೊಂಡು, ಜನಪರವಾದ, ಸುಭದ್ರ ಸರಕಾರ ನೀಡಬೇಕು. ಜತೆಗೆ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಪಕ್ಷ ನೀಡಿದ್ದ ಭರವಸೆಗಳನ್ನೂ ಪೂರೈಸಬೇಕು. ಯಡಿಯೂರಪ್ಪ ಅವರಿಂದ ಅದು ಸಾಧ್ಯ. ಇನ್ನು ಬಿಜೆಪಿ ಹೈಕಮಾಂಡ್ ನ ಮಾತು ಕೇಳುವ ಶಾಸಕರು ನಮ್ಮವರು. ಆದ್ದರಿಂದ ಕಾಂಗ್ರೆಸ್ ನಲ್ಲಿ ಆದಂತೆ ಭಿನ್ನಮತ ಕಾಣಿಸಿಕೊಳ್ಳುವುದಿಲ್ಲ ಎಂಬ ನಂಬಿಕೆ ನನಗಿದೆ" ಎನ್ನುತ್ತಾರೆ ಅವರು. "ಚುನಾವಣೆಯಲ್ಲಿ ಡೆಪಾಸಿಟ್ ಉಳಿಸಿಕೊಳ್ಳುವುದೇ ಸಾಧನೆ ಎಂದು ಭಾವಿಸಿದ್ದ ಪಕ್ಷ ನಮ್ಮದು. ಇವತ್ತಿಗೆ ಟಿಕೆಟ್ ಪಡೆದುಕೊಳ್ಳುವ ಸಲುವಾಗಿ ನನ್ನಿಂದ ಒಂದು ಮಾತು ಹೇಳಲು ಸಾಧ್ಯವಾ ಎಂದು ಕೆಲವರು ಮನೆ ಬಾಗಿಲಿಗೆ ಬರುವಂತಾಗಿದೆ. ಇದು ನಮ್ಮ ಪಕ್ಷದ ಬೆಳವಣಿಗೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಬೆಳವಣಿಗೆ ಕೂಡ ಬಹಳ ಖುಷಿ ತಂದಿದೆ. ಆದರೆ ಈಗಿನ ಸ್ಪೀಕರ್ ನಡೆದುಕೊಳ್ಳುತ್ತಿರುವ ರೀತಿಗೆ ಬಹಳ ಬೇಸರ ಆಗುತ್ತದೆ" ಎಂದು ಮಾತು ಮುಗಿಸಿದರು ಹಿರಿಯರಾದ ಡಿ. ಎಚ್. ಶಂಕರಮೂರ್ತಿ.

English summary
Karnataka BJP president BS Yediyurappa all set to take oath as CM of Karnataka on Friday. His political career beginning days of Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X