ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಸಿಗೆ ಬೆಳೆಗೆ ಭದ್ರಾ ಜಲಾಶಯದಿಂದ 120 ದಿನ ನೀರು; ಅಧಿಕಾರಿಗಳ ವಿರುದ್ಧ ಕಾಡಾ ಆಕ್ರೋಶ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 29: ಭದ್ರಾ ಅಚ್ಚುಕಟ್ಟಿನ ಬೇಸಿಗೆ ಬೆಳೆಗೆ ಜಲಾಶಯದಿಂದ 120 ದಿನ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಡಿ.29ರಿಂದ ಎಡದಂಡೆ ನಾಲೆಗೆ, ಡಿ.30ರಿಂದ ಬಲದಂಡೆ ನಾಲಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಡಿ.29ರ ಮಧ್ಯ ರಾತ್ರಿಯಿಂದ ಎಡದಂಡೆ ನಾಲೆಗೆ ಪೂರ್ಣ ಪ್ರಮಾಣದಲ್ಲಿ 350 ಕ್ಯೂಸೆಕ್ ಮತ್ತು ಡಿ.30ರಿಂದ ಬಲದಂಡೆ ನಾಲೆಗೆ ಮೊದಲ ಹತ್ತು ದಿನ 1,500 ಕ್ಯೂಸೆಕ್, ನಂತರದ ದಿನಗಳಲ್ಲಿ 3 ಸಾವಿರ ಕ್ಯೂಸೆಕ್‌ನಂತೆ ಸತತ 120 ದಿನ ನೀರು ಹರಿಸಲಾಗುವುದು ಎಂದು ಪ್ರಕಟಿಸಿದರು.

 ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ

ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ

ನಾಲೆಗಳಿಗೆ ನೀರು ಹರಿಸುವ ಹಿನ್ನೆಲೆಯಲ್ಲಿ ಇಂಜಿನಿಯರ್‌ಗಳು ಯಾವುದೇ ಸಬೂಬು ಹೇಳದೆ ಕ್ಯಾನಲ್‌ಗಳ ಮೇಲೆ ನಿಗಾ ಇಡಬೇಕು. 2022ರ ಜ.6ರೊಳಗೆ ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಸಲಹಾ ಸಮಿತಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಧ್ಯಕ್ಷೆ ಪವಿತ್ರ ರಾಮಯ್ಯ ಅಧಿಕಾರಿಗಳ ವಿರುದ್ಧ ಗರಂ ಆದರು. ರೈತರು ಸೇರಿದಂತೆ ಯಾರೇ ಫೋನ್ ಮಾಡಿದರೂ ಮೊದಲು ಕರೆ ಸ್ವೀಕರಿಸುವುದನ್ನು ಕಲಿಯಬೇಕು. ಬಹಳಷ್ಟು ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ. ಅಧ್ಯಕ್ಷರ ಕರೆಯನ್ನೇ ಸ್ವೀಕರಿಸುವುದಿಲ್ಲ ಅಂದ ಮೇಲೆ ರೈತರಿಗೆ ಯಾವ ರೀತಿ ಸ್ಪಂದಿಸುತ್ತೀರಿ ಎಂದು ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

 ಅಚ್ಚುಕಟ್ಟು ಪ್ರದೇಶದ ರೈತರಿಗೆ ಸ್ಪಂದಿಸಬೇಕು

ಅಚ್ಚುಕಟ್ಟು ಪ್ರದೇಶದ ರೈತರಿಗೆ ಸ್ಪಂದಿಸಬೇಕು

ನಾನು ಕಾಡಾ ಕಚೇರಿಯಲ್ಲೇ ಕುಳಿತಿಲ್ಲ. ಸರ್ಕಾರದಿಂದ ಅನುದಾನ ಬಿಡುಡೆಯಾಗಿದ್ದರೂ ಒಂದು ದಿನ ಕೂಡ ಕ್ಷೇತ್ರ ಪ್ರವಾಸ ನಿಲ್ಲಿಸಿಲ್ಲ. ಇಂಜಿನಿಯರ್‌ಗಳ ಕೆಲಸ ನಾನು ಮಾಡುತ್ತಿದ್ದೇನೆ. ಬಹಳಷ್ಟು ಇಂಜಿನಿಯರ್‌ಗಳು ಕಾಮಗಾರಿ ಸ್ಥಳ ಪರಿಶೀಲನೆ ಮಾಡುವುದೇ ಇಲ್ಲ ಎಂದು ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳು ಅಚ್ಚುಕಟ್ಟು ಪ್ರದೇಶದ ರೈತರಿಗೆ ಸ್ಪಂದಿಸಬೇಕು. ರೈತರು ಹಾಗೂ ನನ್ನ ದೂರವಾಣಿ ಕರೆಗಳಿಗೆ ಸೂಕ್ತ ಉತ್ತರ ನೀಡಬೇಕು. ನರೇಗಾ ಯೋಜನೆಯಡಿ ಕೆನಾಲ್‌ಗಳಲ್ಲಿ ಹೂಳು ತೆಗೆಸಿದ್ದು ಇನ್ಮುಂದೆ ಚಾನಲ್‌ಗಳ ಮೇಲೆ ಇಂಜಿನಿಯರ್‌ಗಳು ಓಡಾಡಿ ಕೆಲಸ ಮಾಡಬೇಕು ಎಂದು ತಿಳಿಸಿದರು.

 ಮುಖ್ಯ ಕಾಲುವೆಯಲ್ಲಿ ಗೇಟ್ ಅಳವಡಿಸಿ

ಮುಖ್ಯ ಕಾಲುವೆಯಲ್ಲಿ ಗೇಟ್ ಅಳವಡಿಸಿ

ವಿದ್ಯುತ್‌ ಎಲ್‌ಸಿ ಮಾದರಿಯಂತೆ ಭದ್ರಾ ಅಚ್ಚುಕಟ್ಟು ಪ್ರದೇಶದ ಮುಖ್ಯ ಕಾಲುವೆಗಳಲ್ಲಿ ಎರಡ್ಮೂರು ಕಡೆ ಗೇಟ್ ಅಳವಡಿಸುವುದು ಸೂಕ್ತ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಸಲಹೆ ನೀಡಿದರು.

ಬೇಡವಾದ ಭಾಗಕ್ಕೆ ನೀರು ಹರಿಸುವುದನ್ನು ತಪ್ಪಿಸಲು ಗೇಟ್ ಬಂದ್ ಮಾಡಿ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಶಾಸಕರು, ಸಂಸದರು ಮತ್ತು ಅಧ್ಯಕ್ಷರು ಇದನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಮಾರ್ಚ್‌ವರೆಗೆ ನೀರು ಹರಿಸುವ ತೀರ್ಮಾನ ಕೈಗೊಂಡಿದ್ದಾರೆ. ಬೇಸಿಗೆಯಲ್ಲಿ ತುಂಗಾ ಮೇಲ್ದಂಡೆ ಅಚ್ಚುಕಟ್ಟು ರೈತರು ಮತ್ತು ಭದ್ರಾ ಅಚ್ಚುಕಟ್ಟು ರೈತರ ನಡುವೆ ಸಂಘರ್ಷ ಉಂಟಾಗಬಹುದು. ಹಾಗಾಗಿ ತುಂಗಾ ಮೇಲ್ದಂಡೆ ಯೋಜನೆಗೆ ತುಂಗಾದಿಂದ 17.5 ಟಿಎಂಸಿ ಮತ್ತು ಭದ್ರಾ ಅಣೆಕಟ್ಟಿನಿಂದ 12.4 ಟಿಎಂಸಿ ಒದಗಿಸುವ ಬದಲಾಗಿ ಸಂಪೂರ್ಣ 29.9 ಟಿಎಂಸಿ ನೀರನ್ನು ತುಂಗಾದಿಂದಲೇ ಒದಗಿಸುವಂತೆ ಡಿಪಿಆರ್ ಸಿದ್ಧಪಡಿಸಲು ಸರ್ಕಾರಕ್ಕೆ ಒತ್ತಾಯಿಸಬೇಕಿದೆ ಎಂದು ಹೇಳಿದರು.

 ನೀರು ಹರಿಸಲು ಅಧಿಕಾರಿಗಳಿಗೆ ಏನು ಸಮಸ್ಯೆ

ನೀರು ಹರಿಸಲು ಅಧಿಕಾರಿಗಳಿಗೆ ಏನು ಸಮಸ್ಯೆ

ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ನಾಲೆಗಳಿಗೆ ನೀರು ಹರಿಸದ ಕಾರಣ ಎಡದಂಡೆ ಭಾಗದ ರೈತರಿಗೆ ಹಾಗೂ ಜಾನುವಾರುಗಳಿಗೆ ತೊಂದರೆಯಾಗಿದೆ. ಇಂಜಿನಿಯರ್‌ಗಳು ಕಾಮಗಾರಿ ನೆಪದಲ್ಲಿ ಇಷ್ಟು ದಿನಗಳಾದರೂ ಕಾಲುವೆಗಳಿಗೆ ನೀರು ಹರಿಸಲಿಲ್ಲ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

ಜಲಾಶಯ ಭರ್ತಿಯಾಗಿ ಹೊರ ಜಿಲ್ಲೆಗಳಿಗೆ ನೀರು ಕೊಡುತ್ತಿದ್ದೇವೆ. ಆದರೆ ಜಿಲ್ಲೆಯ ರೈತರಿಗೆ ನೀರೊದಗಿಸುವ ನಾಲೆಗಳಿಗೆ ಕನಿಷ್ಠ 1,500- 2000 ಕ್ಯೂಸೆಕ್ ನೀರು ಹರಿಸಲು ಅಧಿಕಾರಿಗಳಿಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು.

ದಾವಣಗೆರೆ- ಕಾರಿಗನೂರು ನೀರು ಬಳಕೆದಾರರ ಒಕ್ಕೂಟದ ಅಧ್ಯಕ್ಷ ತೇಜಸ್ವಿ ಪಟೇಲ್, ಎಡದಂತೆ ನಾಲೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಜಿ.ರಘುನಾಥ್, ಅಧೀಕ್ಷಕ ಇಂಜಿನಿಯರ್ ಎಂ. ಚಂದ್ರಹಾಸ್, ಭದ್ರಾ ಕಾಡಾ ನಿರ್ದೇಶಕರಾದ ರುದ್ರಮೂರ್ತಿ, ವಿನಾಯಕ್, ಹನುಮಂತಪ್ಪ, ಸದಾಶಿವಪ್ಪ ಗೌಡ, ರಾಜಪ್ಪ, ರೈತ ಮುಖಂಡರಾದ ವೈ.ಜಿ. ಮಲ್ಲಿಕಾರ್ಜುನ, ಯಶವಂತರಾವ್, ರಾಮಪ್ಪ, ಹನುಮಂತಪ್ಪ, ಶೇಖರಪ್ಪ, ಇತರೆ ನಾಲೆಗಳ ಸದಸ್ಯರಾದ ವೈ. ದ್ಯಾಮಪ್ಪ ರೆಡ್ಡಿ, ಪರಮೇಶ ಗೌಡ, ಅಡಳಿತಾಧಿಕಾರಿ ಕೆ.ಪಿ. ಅರುಣ್ (ಪ್ರಭಾರ), ಭದ್ರಾ ಯೋಜನಾ ವೃತ್ತದ ಇಇ ರವಿಚಂದ್ರ, ಎಇಇಗಳಾದ ಪ್ರಸನ್ನ, ವೆಂಕಟೇಶ್ ಇತರರಿದ್ದರು.

Recommended Video

Team Indiaದಲ್ಲಿ ಗುರು-ಶಿಷ್ಯರ ಮೋಡಿ ನೋಡಿ | Oneindia Kannada

English summary
It has been decided at a meeting of the Bhadra Irrigation Advisory Committee to provide 120 days of water release from the Bhadra reservoir for the summer crop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X