ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿತಾಳದು ಆತ್ಮಹತ್ಯೆಯೋ ಮರ್ಯಾದಾ ಹತ್ಯೆಯೋ?

By ಪ್ರಕಾಶ್ ಪತ್ತಾರ್
|
Google Oneindia Kannada News

ತೀರ್ಥಹಳ್ಳಿ, ನ. 8 : ಶಿವಮೊಗ್ಗ ತಾಲೂಕಿನ ಈ ಗ್ರಾಮದ ಪ್ರಶಾಂತ ವಾತಾವರಣವನ್ನೇ ಕದಡಿರುವ ನಂದಿತಾ ಸಾವಿನ ಪ್ರಕರಣ, ದಿನದಿಂದ ದಿನಕ್ಕೆ ಹೊಸಹೊಸ ತಿರುವುಗಳನ್ನು ಪಡೆಯುತ್ತಿದ್ದು, ರಾಜಕಾರಣಿಗಳ 'ಮಧ್ಯಸ್ಥಿಕೆ'ಯಿಂದ ಮತ್ತಷ್ಟು ಕಗ್ಗಂಟಾಗುತ್ತ ಸಾಗಿದೆ.

ಸಿಐಡಿ ತಂಡ ನಡೆಸುತ್ತಿರುವ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಕೆಲ ಆಘಾತಕಾರಿ ಸುದ್ದಿಗಳು ಕೂಡ ಹೊರಬರುತ್ತಿವೆ. ಇದು ಕೊಲೆಯೂ ಅಲ್ಲ, ಆತ್ಮಹತ್ಯೆಯೂ ಅಲ್ಲ 'ಮರ್ಯಾದೆ ಹತ್ಯೆ'ಯಾಗಿರಬಹುದೆ ಎಂಬ ಅನುಮಾನಗಳು ಕೂಡ ಕಂಡುಬರುತ್ತಿವೆ. ಆದರೆ, ಸಿಐಡಿ ತನ್ನ ತನಿಖೆಯನ್ನು ಇನ್ನೂ ಪೂರ್ಣಗೊಳಿಸದಿರುವುದರಿಂದ ಯಾವುದನ್ನೂ ನಿಖರವಾಗಿ ಹೇಳುವಂತಿಲ್ಲ.

ಬಲ್ಲ ಮೂಲಗಳ ಪ್ರಕಾರ, ಅನ್ಯ ಕೋಮಿಗೆ ಸೇರಿದ ಯುವಕನೊಂದಿಗೆ ನಂದಿತಾ ಸಂಪರ್ಕ ಹೊಂದಿದ್ದು ನಂದಿತಾಳ ಪಾಲಕರಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. 'ಅತ್ಯಾಚಾರ'ದ ಘಟನೆ ನಡೆದ ದಿನ ನಂದಿತಾಳನ್ನು ಇಬ್ಬರು ಮಹಿಳೆಯರು ವಾಪಸ್ ಕರೆದುಕೊಂಡು ಬಂದ ದಿನವೂ ಯುವಕನೊಂದಿಗಿನ ಸಾಂಗತ್ಯದ ಕುರಿತು ವಾಗ್ವಾದಗಳಾಗಿವೆ. ತಂದೆ ಕೃಷ್ಣ ನಂದಿತಾಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Is death of Nanditha an honour killing?

ಇದರಿಂದ ಬೇಸತ್ತ ನಂದಿತಾ ಮನೆಯಲ್ಲಿಯೇ ವಿಷ ಸೇವಿಸಿದ್ದಾಳೆ. ಇದರಿಂದಾಗಿ ಸತತ ಹತ್ತು ಹನ್ನೆರಡು ಬಾರಿ ನಂದಿತಾ ವಾಂತಿ ಮಾಡಿಕೊಂಡಿದ್ದಾಳೆ. ಇದರಿಂದ ಗಾಬರಿಯಾದ ನಂದಿತಾಳ ಪೋಷಕರು ಆಕೆಯನ್ನು ಮರುದಿನ ಬೆಳಗಿನ ಜಾವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಅ.31ರಂದು ಸಾವನ್ನಪ್ಪಿದಳು.

ಅಲ್ಲದೆ, ಮರಣಪತ್ರದಲ್ಲಿ "ನಾನು ಚೆನ್ನಾಗಿ ಓದಲೇ ಇಲ್ಲ, ಅಪ್ಪ ನನ್ನನ್ನು ಕ್ಷಮಿಸಿ', 'ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ, ನಾನು ದೊಡ್ಡ ತಪ್ಪು ಮಾಡಿ ವಿಷ ಕುಡಿಯುತ್ತಿದ್ದೇನೆ' ಎಂದು ಬರೆದಿರುವುದು ನಂದಿತಾಳ ಕೈಬರಹದೊಂದಿಗೆ ಹೊಂದಿಕೆಯಾಗಿರುವುದು ವಿಧಿವಿಜ್ಞಾನ ಇಲಾಖೆ ನಡೆಸಿದ ಪರೀಕ್ಷೆಯಿಂದ ಸಾಬೀತಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. [ಡೆತ್ ನೋಟ್ ಕೈಬರಹ ನಂದಿತಾಳದ್ದು]

ಇಷ್ಟೆಲ್ಲ ಆದರೂ, ನಂದಿತಾಳ ತಂದೆ, ಅದು ಆಕೆಯ ಕೈಬರಹವೇ ಅಲ್ಲ, ಆಕೆಯ ಬಳಿ ಕೆಂಪು ಶಾಯಿಯ ಪೆನ್ನು ಇರಲೇಯಿಲ್ಲ, ಆಕೆಯನ್ನು ದುರುಳರು ಅತ್ಯಾಚಾರ ಮಾಡಿ ಹತ್ಯೆಗೈದಿದ್ದಾರೆ ಎಂದೆಲ್ಲ ಹೇಳುತ್ತಿದ್ದಾರೆ. ಫೇಸ್ ಬುಕ್ ನಲ್ಲಿ ನಂದಿತಾಗೆ ನ್ಯಾಯ ದೊರಕಿಸಿಕೊಡಿ ಎಂದು ಆರಂಭಿಸಲಾಗಿರುವ ಪುಟದಲ್ಲಿ 'ಮೊಹಮ್ಮದ್ ಬಿನ್ ತುಘಲಕ್ ತನಿಖೆಯಲ್ಲಿ ನಮಗೆ ವಿಶ್ವಾಸವಿಲ್ಲ' ಎಂದು ಪ್ರಕಟಿಸಲಾಗಿದೆ.

ಈ ನಡುವೆ ಸಿಐಡಿ ಪೊಲೀಸರು, ಪ್ರಮುಖ ಆರೋಪಿಯ ಜೊತೆ ಇದ್ದರೆನ್ನಲಾದ ಇನ್ನಿಬ್ಬರು ಶಂಕಿತ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿ ಇನ್ನೂ ಪೊಲೀಸರ ಬಲೆಗೆ ಸಿಕ್ಕುಬಿದ್ದಿಲ್ಲ. ಪ್ರಮುಖ ಆರೋಪಿ ಜೊತೆ ಇವರಿಬ್ಬರು ನಂದಿತಾಳನ್ನು ಆನಂದಗಿರಿಗೆ ಅಪಹರಿಸಿಕೊಂಡು ಹೋಗಿದ್ದರು ಎಂದು ನಂದಿತಾ ತಂದೆ ದೂರಿನಲ್ಲಿ ತಿಳಿಸಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಇವರಿಬ್ಬರು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ ಎಂಬುದನ್ನು ತನಿಖೆಯ ವಿವರ ಹೊರಹಾಕಿದೆ. ನಂದಿತಾಳನ್ನು ಆನಂದಗಿರಿಯಿಂದ ಕರೆತಂದಿತ್ತ ಮಹಿಳೆಯರು ಕೂಡ ಘಟನಾ ಸ್ಥಳದಲ್ಲಿ ಆ ಸಮಯ ಯಾರೂ ಇರಲಿಲ್ಲ ಎಂದು ಹೇಳಿಕೆ ನೀಡಿರುವುದು ಇದಕ್ಕೆ ಪುಷ್ಟಿ ನೀಡಿದೆ. ಪ್ರಮುಖ ಆರೋಪಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಪೊಲೀಸರು ಕಲೆಹಾಕುತ್ತಿದ್ದಾರೆ.

ಈ ನಡುವೆ, ಈ ಪ್ರಕರಣ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದ್ದು, ಈಶ್ವರಪ್ಪ ಅವರು ಜಾರ್ಜ್ ಮತ್ತು ಸಿದ್ದರಾಮಯ್ಯ ಅವರ ಕುರಿತು ನೀಡಿರುವ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದ್ದರೆ, ಎಂಎಲ್‌ಸಿ ಐವಾನ್ ಡಿಸೋಜಾ ಅವರು, 'ಈಶ್ವರಪ್ಪ ಪತ್ನಿಯ ಮೇಲೆ ಅತ್ಯಾಚಾರ ನಡೆದಿದ್ದರೆ ಹೇಗಿರುತ್ತಿತ್ತು' ಎಂದು ಹೇಳಿಕೆ ನೀಡಿ, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದು ಮತ್ತಷ್ಟು ಧಗಧಗಿಸುವಂತೆ ಮಾಡಿದ್ದಾರೆ.

English summary
Is death of Nanditha an honour killing? This question has going round as CID intensified the investigation into the death of Thirthahalli girl Nanditha. Nanditha breathed her last on October 31 in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X