ವಿಡಿಯೋ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಚಾಲಾಕಿ ಕಳ್ಳನ ಕೈಚಳಕ
ರಾಮನಗರ, ಅಕ್ಟೋಬರ್ 22: ತರಕಾರಿ ಖರೀದಿಯಲ್ಲಿ ಮಗ್ನನಾಗಿದ್ದ ವ್ಯಕ್ತಿಯ ಜೇಬಿನಿಂದ ಮೊಬೈಲ್ ಎಗರಿಸಿದ ಕಳ್ಳನ ಕೈಚಳಕ ನಗರದ ಕೃಷಿ ಮಾರುಕಟ್ಟೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಗರದ ರೈತ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡುತ್ತಿದ್ದ ಶ್ರೀನಿವಾಸ್ ಎಂಬುವರ ಜೇಬಿನಲ್ಲಿದ್ದ ಸುಮಾರು 30 ಸಾವಿರ ಮೌಲ್ಯದ ಮೊಬೈಲ್ ಅನ್ನು ಕಳ್ಳ ಎಗರಿಸಿದ್ದಾನೆ. ಶ್ರೀನಿವಾಸ್ ಅವರು ಕುಳಿತು ತರಕಾರಿ ಕೊಳ್ಳುವ ಸಮಯದಲ್ಲಿ ಕಳ್ಳ ತನ್ನ ಕೈಲಿದ್ದ ಬ್ಯಾಗ್ ಮರೆ ಮಾಡಿ ಯಾರಿಗೂ ತಿಳಿಯದಂತೆ ಮೊಬೈಲ್ ಕದ್ದಿದ್ದಾನೆ.
ರಾಮನಗರ: ದ್ವಿಚಕ್ರ ವಾಹನದಲ್ಲಿದ್ದ 300 ಗ್ರಾಂ ಚಿನ್ನ ದೋಚಿದ ಕಳ್ಳರು
ಈ ಸಂಬಂಧ ನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡು ಮಾರುಕಟ್ಟೆಯ ಆವರಣದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದಾಗ ಕಳ್ಳನ ಕೈಚಳಕ ಸೆರೆಯಾಗಿರುವುದು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮೊಬೈಲ್ ಕಳವು ಪ್ರಕರಣ: ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಮೊಬೈಲ್ ಕಳವು ಪ್ರಕರಣಗಳು ಹೆಚ್ಚಾಗಿದ್ದು, ಬಸ್ ನಿಲ್ದಾಣ, ರೇಷ್ಮೆ ಮಾರುಕಟ್ಟೆ, ಕೃಷಿ ಮಾರುಕಟ್ಟೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ತಮ್ಮ ಕೈಚಳಕ ತೋರುವ ಕಳ್ಳರು ಮೊಬೈಲ್ ಎಗರಿಸಿ ಕ್ಷಣಾರ್ಧದಲ್ಲಿ ಮಾಯವಾಗುತ್ತಾರೆ. ಕೆಲವೊಮ್ಮೆ ಮೊಬೈಲ್ ನಲ್ಲಿ ಮಾತನಾಡುತ್ತಿರುವ ಸಮಯದಲ್ಲಿ ಮೊಬೈಲ್ ಕಿತ್ತುಕೊಂಡು ಪರಾರಿಯಾದ ಘಟನೆಗಳೂ ನಡೆದಿವೆ.
ಪೊಲೀಸರನ್ನೇ ಯಮಾರಿಸುವ ಕಳ್ಳರು: ಜನರ ಗಮನ ಬೇರೆಡೆ ಸೆಳೆದು ಮೊಬೈಲ್ ಎಗರಿಸುವ ಚಾಲಕಿ ಕಳ್ಳರು ಕದ್ದ ಮೊಬೈಲ್ ಗಳನ್ನು ದೂರದ ಕೇರಳದಲ್ಲಿ ಮಾರಾಟ ಮಾಡುತ್ತಾರೆ. ಇತ್ತ ಮೊಬೈಲ್ ಕಳೆದುಕೊಂಡವರಿಂದ ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು ಆರು ತಿಂಗಳು ತನಿಖೆ ನಡೆಸಿ ನಂತರ ಪತ್ತೆಯಾಗದ ಪ್ರಕರಣ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಾರೆ.
ಪೊಲೀಸ್ ತನಿಖೆ ವಿಧಾನ ತಿಳಿದುಕೊಂಡಿರುವ, ಕದ್ದ ಮೊಬೈಲ್ ಕೊಳ್ಳುವ ಕೇರಳ ರಾಜ್ಯದ ವ್ಯಕ್ತಿಗಳು ಆರು ತಿಂಗಳ ನಂತರ ಆ ಮೊಬೈಲ್ ಗಳನ್ನು ಅಮಾಯಕರಿಗೆ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಳುತ್ತಾರೆ. ಇತ್ತ ಮೊಬೈಲ್ ಕಳೆದುಕೊಂಡವರು ಮೊಬೈಲ್ ಆಸೆ ಬಿಟ್ಟು ಸುಮ್ಮನಾಗುತ್ತಾರೆ. ಹಾಗಾಗಿ ಬಹುತೇಕ ಪ್ರಕರಣಗಳು ಪತ್ತೆಯಾಗುವುದಿಲ್ಲ.