ಟೊಯೊಟಾ ಕಂಪನಿ ವಿರುದ್ಧ ಕಾರ್ಮಿಕರ ಅಹೋರಾತ್ರಿ ಧರಣಿ
ರಾಮನಗರ, ನವೆಂಬರ್ 10: ಕಾರ್ಖಾನೆಯು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಡದಿಯ ಕಾರು ತಯಾರಿಕಾ ಸಂಸ್ಥೆ ಟೊಯೊಟಾ ಕಂಪನಿ ನೌಕರರು ಅಹೋರಾತ್ರಿ ಧರಣಿಗಿಳಿದಿದ್ದಾರೆ.
ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಮಿಕರನ್ನು ಶೋಷಿಸುತ್ತಿದೆ ಎಂದು ಆರೋಪಿಸಿ ಕಂಪನಿಯ ಸುಮಾರು 3500 ಕಾರ್ಮಿಕರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಕೋವಿಡ್ -19 ಪ್ರಾರಂಭದಿಂದಲೂ ಕಂಪನಿ ಕಾರ್ಮಿಕರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದೆ. ಕೆಲಸ ಮಾಡಲು ಅಸಾಧ್ಯವಾದ ರೀತಿಯಲ್ಲಿ ಮಿಲಿ ಸೆಕೆಂಡ್ ಲೆಕ್ಕದಲ್ಲಿ ಕೆಲಸದ ಟಾರ್ಗೆಟ್ ನೀಡುತ್ತಿದ್ದಾರೆ. ಕಾರ್ಮಿಕರ ಮೇಲೆ ಒತ್ತಡ ಹೇರಿ ದುಡಿಸಿಕೊಳ್ಳುತ್ತಿದೆ ಎಂದು ದೂರಿದ್ದಾರೆ.
ಟೊಯೊಟಾ ಕಾರ್ಮಿಕರ ವಾಕ್ ಸ್ವಾತಂತ್ರ್ಯ ಹರಣ ಮಾಡುತ್ತಿದೆ; ಕಾರ್ಮಿಕ ಸಂಘಟನೆ ಆರೋಪ
ಈಗಾಗಲೇ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಸಚಿವರನ್ನು ಭೇಟಿ ಮಾಡಿ ನಮ್ಮ ಕಷ್ಟ ಹೇಳಿಕೊಂಡಿದ್ದೇವೆ. ಆದರೆ ಕಾರ್ಖಾನೆಯ ಆಡಳಿತ ಮಂಡಳಿ, ನಮ್ಮ ಕಂಪನಿ ಜಪಾನ್ ಮೂಲದ ಅಂತರರಾಷ್ಟ್ರೀಯ ಕಂಪನಿ. ಇಲ್ಲಿಯ ಕಾನೂನು ನಮಗೆ ಅನ್ವಯಿಸುವುದಿಲ್ಲ ಎಂದು ದುಂಡಾವರ್ತನೆ ಮಾಡುತ್ತಿದೆ ಎಂದು ಕಾರ್ಮಿಕ ಸಂಘಟನೆ ಆರೋಪಿಸಿದೆ.
ಕಂಪನಿ ಲಾಕೌಟ್: ಕಾರ್ಮಿಕರು ಅಹೋರಾತ್ರಿ ಧರಣಿಗೆ ಮುಂದಾದ ಹಿನ್ನೆಲೆಯಲ್ಲಿ ಕಾರ್ಮಿಕರ ಸಂಘದ ಖಜಾಂಚಿಯನ್ನು ಕೆಲಸದಿಂದ ವಜಾಗೊಳಿಸಿದ್ದು, ಕಂಪನಿಯ ನಡೆಯಿಂದ ಕಾರ್ಮಿಕರ ಪ್ರತಿಭಟನೆ ತಾರಕಕ್ಕೇರಿದೆ. ಕಾರ್ಮಿಕರ ಪ್ರತಿಭಟನೆಯ ಕಾವು ಹೆಚ್ಚಾದ ಕಾರಣ ಕಾರ್ಖಾನೆ ಆಡಳಿತ ಮಂಡಳಿ ತಾತ್ಕಾಲಿಕ ಲಾಕೌಟ್ ಘೋಷಣೆ ಮಾಡಿದೆ.