Sankranti Special; ಹಬ್ಬದ ಕಳೆ ಹೆಚ್ಚಿಸುವ ಚನ್ನಪಟ್ಟಣದ ಕರಿ ಕಬ್ಬು
ರಾಮನಗರ, ಜನವರಿ 13: ಸುಗ್ಗಿ ಕಾಲದ ಮೊದಲ ಹಬ್ಬ ಸಂಕ್ರಾಂತಿ. ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಡು ಎಂಬ ಸಂದೇಶ ಸಾರುವ ಹಬ್ಬ ಸಂಕ್ರಾಂತಿ. ಸಂಕ್ರಾಂತಿ ಹಬ್ಬದಲ್ಲಿ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಕರಿ ಕಬ್ಬಿಗೆ ತುಂಬಾ ಬೇಡಿಕೆ ಇದೆ.
ಕಳೆದ ವರ್ಷ ಕೋವಿಡ್ ಹೊಡೆತಕ್ಕೆ ಸಿಲುಕಿ ಕರಿ ಕಬ್ಬಿನ ಧಾರಣೆ ಕುಸಿದು ರೈತರು ನಷ್ಟವನ್ನು ಅನುಭವಿಸಿದ್ದರು. ಈ ಬಾರಿ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೋವಿಡ್ ಭೀತಿಯ ನಡುವೆಯೂ ಧಾರಣೆ ಏರಿಕೆಯಾಗಿದ್ದು, ಅಲ್ಪ ಪ್ರಮಾಣದ ಬೇಡಿಕೆ ಸಹ ಹೆಚ್ಚಿದೆ.
Sankranti Special: ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೆಲ್ಲ ಬೀರುವುದೇಕೆ? ಇಲ್ಲಿದೆ ವೈಜ್ಞಾನಿಕ ಕಾರಣ...
ಕರ್ನಾಟಕದಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಕಬ್ಬು ಬೆಳೆಯಲಾಗುತ್ತದೆ. ಆದರೆ, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಮಾತ್ರ ಬಹುತೇಕರ ಆಯ್ಕೆ ಕರಿ ಕಬ್ಬು. ಸಂಕ್ರಾಂತಿಯಂದು ಎಳ್ಳು ಬೆಲ್ಲದೊಂದಿಗೆ ಒಂದು ತುಂಡು ಕಬ್ಬು ಹಂಚುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ.
Sankranti Special: ಮಕರ ಸಂಕ್ರಾಂತಿ ಹಬ್ಬದ ಮಹತ್ವವೇನು?
ಕರಿ ಕಬ್ಬು ಕಟಾವಿಗೆ ಬಳ್ಳಾರಿ ಮೂಲದ ಕಾರ್ಮಿಕರು ಎತ್ತಿದ ಕೈ. ಆದರೆ, ಕೋವಿಡ್ ಭೀತಿಯ ಕಾರಣ ಬಳ್ಳಾರಿಯ ಕೂಲಿ ಕಾರ್ಮಿಕರು ಈ ಬಾರಿ ಕೆಲಸಕ್ಕೆ ಬಂದಿಲ್ಲ. ಆದ್ದರಿಂದ ಕಟಾವಿನ ಸಮಸ್ಯೆಯಾಗಿದೆ.
Sankranti Special: ಈ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬವನ್ನೇ ಆಚರಿಸುವುದಿಲ್ಲ!

ಚನ್ನಪಟ್ಟಣದ ಕರಿ ಕಬ್ಬು
ಸಂಕ್ರಾಂತಿ ಹಬ್ಬದಲ್ಲಿ ಪ್ರಧಾನವಾದ ಕರಿ ಕಬ್ಬು ಬೆಳೆಯುವ ರೈತರು ಮತ್ತು ಗ್ರಾಮಗಳು ಮಾತ್ರ ರಾಜ್ಯದಲ್ಲಿ ಅತೀ ವಿರಳ. ಬೊಂಬೆ ನಗರಿ ಖ್ಯಾತಿಯ ಚನ್ನಪಟ್ಟಣದ ಪಟ್ಲು ಗ್ರಾಮ ಕರಿ ಕಬ್ಬಿನಿಂದಾಗಿ ರಾಷ್ಟದ ಗಮನ ಸೆಳೆದಿದೆ. ಅಲ್ಲದೇ ಇಲ್ಲಿ ಬೆಳೆದ ಕರಿ ಕಬ್ಬು ಈ ಬಾರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ತನ್ನ ಕಂಪು ಬೀರಿದೆ.

ಕರಿ ಕಬ್ಬು ಬೇಸಾಯ
ಚನ್ನಪಟ್ಟಣ ತಾಲೂಕಿನ ಪಟ್ಲು, ತಿಟ್ಟಮಾರನಹಳ್ಳಿ, ಚಿಕ್ಕನದೊಡ್ಡಿ ಗ್ರಾಮದ ರೈತರು ನಂಬಿಕೊಂಡಿರುವುದು ಈ ಕರಿ ಕಬ್ಬು ಬೇಸಾಯವನ್ನೇ. ಇಡೀ ರಾಮನಗರ ಜಿಲ್ಲೆಯಲ್ಲಿ ಕರಿ ಕಬ್ಬನ್ನು ಬೆಳೆಯುವ ಗ್ರಾಮಗಳು ಎಂಬ ಹಿರಿಮೆಯನ್ನು ಈ ಗ್ರಾಮಗಳು ಹೊಂದಿವೆ. ಈ ಗ್ರಾಮಗಳ ಕರಿ ಕಬ್ಬಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಹು ಬೇಡಿಕೆ ಇದೆ. ಇಲ್ಲಿನ ಕಬ್ಬು ರಾಜ್ಯದ ಗಡಿಯನ್ನು ದಾಟಿ ನೆರೆಯ ಕೇರಳ, ತಮಿಳುನಾಡು, ಗುಜರಾತ್ ಅಲ್ಲದೇ ದೇಶದ ರಾಜಧಾನಿ ದೆಹಲಿ ರಾಜ್ಯಗಳಿಗೂ ರಫ್ತಾಗುತ್ತದೆ.

100 ಎಕರೆಗೂ ಅಧಿಕ ಜಾಗದಲ್ಲಿ ಬೇಸಾಯ
ಕೋವಿಡ್-19 ಮಹಾ ಮಾರಿ ಕರಿ ಕಬ್ಬು ಬೆಳೆಗಾರರನ್ನು ಕಾಡಿತ್ತು. ಕಳೆದ ವರ್ಷ ಇಲ್ಲಿನ ರೈತರು 100 ಎಕರೆಗೂ ಹೆಚ್ಚು ಕರಿ ಕಬ್ಬು ಬೇಸಾಯ ಮಾಡಿದ್ದರು. ಕೊರೋನಾ ಕಾರಣದಿಂದ ಬೇಡಿಕೆ ಕುಸಿದು ಬಾರಿ ನಷ್ಟ ಅನುಭವಿಸಿದ ಕಾರಣ ಈ ವರ್ಷ ಕೇವಲ 50 ಎಕರೆಯಲ್ಲಿ ಕರಿ ಕಬ್ಬು ಬೆಳೆದಿದ್ದಾರೆ. ಈ ಬಾರಿ ಕಳೆದ ವರ್ಷಕ್ಕಿಂತ ಉತ್ತಮ ಬೆಲೆ ಸಿಗುತ್ತಿದೆ. ಸರಾಸರಿ ಕಳೆದ ವರ್ಷ ಒಂದು ಕಟ್ಟು ಕರಿ ಕಬ್ಬಿಗೆ 200-250 ರೂ. ಗೆ ಮಾರಾಟವಾಗಿದ್ದರೆ, ಈ ಬಾರಿ ಒಂದು ಕಟ್ಟು ಕಬ್ಬಿಗೆ 300-350 ರೂ. ಬೆಲೆಗೆ ಮಾರಾಟವಾಗುತ್ತಿದೆ. ವರ್ತಕರು ರೈತರ ಬಳಿ ಬಂದು ನೇರವಾಗಿ ಖರೀದಿಸುತ್ತಿದ್ದಾರೆ.

2 ಲಕ್ಷ ಖರ್ಚು ಆಗುತ್ತದೆ
"ಪ್ರತಿ ಎಕರೆ ಕರಿ ಕಬ್ಬು ಬೆಳೆಯಲು ಕನಿಷ್ಠ 2 ಲಕ್ಷ ಖರ್ಚಾಗುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕು ಫಸಲು 4 ಲಕ್ಷ ರೂ. ಗೆ ಮಾರಾಟವಾದರೆ ರೈತನಿಗೆ ಲಾಭ ಸಿಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಏರಿಳಿತದಿಂದ ಹಲವಾರು ಬಾರಿ ಬಂಡವಾಳ ಹಾಕಿದ ದುಡ್ಡು ಸಿಗದೆ ನಷ್ಟ ಅನುಭವಿಸಿದ್ದಾರೆ. ಈ ಬಾರಿ ಮಾರುಕಟ್ಟೆಯಲ್ಲಿ ಕರಿ ಕಬ್ಬಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೇವೆ" ಎನ್ನುತ್ತಾರೆ ರೈತ ರಮೇಶ್ ಮತ್ತು ಕುಮಾರ್.

ಸಂಖ್ಯೆ ಕಡಿಮೆಯಾಗಿದೆ
ಕರಿ ಕಬ್ಬು ಬೆಳೆ ಕುರಿತು ವರ್ತಕ ಅಭಿಷೇಕ ಮಾತನಾಡಿದ್ದು, "ಈ ಬಾರಿ ಮಾರುಕಟ್ಟೆಯಲ್ಲಿ ಕರಿಕಬ್ಬಗೆ ಬೇಡಿಕೆ ಹೆಚ್ಚಾಗಿದೆ. ಸಂಕ್ರಾಂತಿಯಲ್ಲಿ ಬಳಸುವ ಕರಿ ಕಬ್ಬು ಬೆಳೆದ ರೈತರಲ್ಲಿ ಬಂದು ನೇರವಾಗಿ ಖರೀದಿಸುತ್ತೇವೆ. ಆದರೆ, ಈ ಕರಿ ಕಬ್ಬು ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ, ಕರಿ ಕಬ್ಬು ಕಟಾವಿಗೆ ಹೆಚ್ಚಿನ ಸಂಖ್ಯೆಯ ಕೂಲಿ ಕಾರ್ಮಿಕರು ಬೇಕು. ಕೊರೋನಾ ಭೀತಿಯಿಂದಾಗಿ ಈ ವರ್ಷ ಕೂಲಿ ಕಾರ್ಮಿಕರ ಬರ ಕಾಡುತ್ತಿದೆ" ಎಂದರು.