ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

RSS ವಿರುದ್ಧದ ಹೇಳಿಕೆಗೆ ಬದ್ಧ; ಬಿಜೆಪಿಯೊಂದಿಗೆ ಚರ್ಚೆಗೂ ಸಿದ್ಧ: ಎಚ್‌ಡಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 8: "ನಾನು ಈ ಹಿಂದೆ ಆರ್‌ಎಸ್‌ಎಸ್ ಬಗ್ಗೆ ನೀಡಿರುವ ಹೇಳಿಕೆಗೆ ಬದ್ಧನಾಗಿದ್ದೇನೆ, ನಾನು ವಾಸ್ತವತೆಯ ಆಧಾರದಲ್ಲಿ ಆ ಮಾತನ್ನು ಹೇಳಿದ್ದೇನೆ," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

"ಆರ್‌ಎಸ್‌ಎಸ್ ಪ್ರಚಾರಕರೇ ಹೇಳಿರುವ ಮಾತುಗಳನ್ನು ಪ್ರಸ್ತಾಪ ಮಾಡಿದ್ದೇನೆ. ಇದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ನಾನು ಸಿದ್ಧ, ಬಿಜೆಪಿ ಅಥವಾ ಆರ್‌ಎಸ್‌ಎಸ್ ನಾಯಕರು ಬರಲಿ," ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಸವಾಲೆಸೆದರು.

ಚನ್ನಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವಿರುದ್ಧ ಹರಿಹಾಯ್ದರು.

 ಆರ್‌ಎಸ್‌ಎಸ್ ಪ್ರಚಾರಕರೇ ಹೇಳಿದ್ದಾರೆ

ಆರ್‌ಎಸ್‌ಎಸ್ ಪ್ರಚಾರಕರೇ ಹೇಳಿದ್ದಾರೆ

"ಆರ್‌ಎಸ್‌ಎಸ್ ಅಜೆಂಡಾಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ಧನಿದ್ದು, ಆರ್‌ಎಸ್‌ಎಸ್ ಪ್ರಚಾರಕರೇ ಒಬ್ಬ ಲೇಖಕರ ಮುಂದೆ ಹೇಳಿರುವುದನ್ನು ನಾನು ಹೇಳಿದ್ದೇನೆ. ಸ್ವಾತಂತ್ರ್ಯ ಬಂದಾಗ ಆರ್‌ಎಸ್‌ಎಸ್ ಇಲ್ಲದಿದ್ದರೆ ಭಾರತ ಪಾಕಿಸ್ತಾನ ಆಗುತ್ತಿತ್ತು ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, ಸ್ವಾತಂತ್ರ್ಯ ಬಂದಾಗ ಈಶ್ವರಪ್ಪ ಹುಟ್ಟಿದ್ರಾ?," ಎಂದು ಪ್ರಶ್ನೆ ಮಾಡಿದರು.

"ಈಶ್ವರಪ್ಪನೂ ಹುಟ್ಟಿರಲಿಲ್ಲ, ನಾನೂ ಹುಟ್ಟಿರಲಿಲ್ಲ. ಯಾರ ಕೊಡುಗೆ ಏನೇನ್ ಇದೆ ಅಂತಾ ಈಶ್ವರಪ್ಪರಿಗೆ ಏನ್ ಗೊತ್ತು‌. ಆರ್‌ಎಸ್‌ಎಸ್‌ನವರು ಬಂದು ಪಾಕಿಸ್ತಾನ ಆಗುವುದನ್ನು ತಪ್ಪಿಸಿದ್ದಾರಾ?," ಎಂದು ಪ್ರಶ್ನಿಸಿದರು.

 ಇದೇನಾ ಆರ್‌ಎಸ್‌ಎಸ್‌ ನಿಮಗೆ ಹೇಳಿಕೊಟ್ಟಿರುವುದು

ಇದೇನಾ ಆರ್‌ಎಸ್‌ಎಸ್‌ ನಿಮಗೆ ಹೇಳಿಕೊಟ್ಟಿರುವುದು

"ಕಾಶ್ಮೀರದಲ್ಲಿ ಶಾಲೆಗೆ ನುಗ್ಗಿ ಭಯೋತ್ಪಾದಕರು ಶಿಕ್ಷಕರನ್ನು ಸುಟ್ಟಿದ್ದಾರೆ. ದೇವೇಗೌಡರು 10 ತಿಂಗಳು ಪ್ರಧಾನಿ ಆಗಿದ್ದ ವೇಳೆ ದೇಶದಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ಘಟನೆ ಯಾವುದಾದರೂ ನಡೆದಿತ್ತಾ? ಕಳೆದ 4 ದಿನಗಳಲ್ಲಿ ಕಾಶ್ಮೀರದಲ್ಲಿ ಪಂಡಿತರು, ಶಿಕ್ಷಕರು ಹಾಗೂ ನಾಗರಿಕರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಇದೇನಾ ಆರ್‌ಎಸ್‌ಎಸ್‌ ನಿಮಗೆ ಸರಕಾರ ನಡೆಸುವುದು ಹೇಗೆ ಅಂತಾ ಹೇಳಿಕೊಟ್ಟಿರುವುದು," ಎಂದು ಮಾಜಿ ಸಿಎಂ ಎಚ್‌ಡಿಕೆ ಕಿಡಿಕಾರಿದರು.

"ಕಾಂಗ್ರೆಸ್ ನಾಯಕರ ಜತೆಗೆ ಬಿಜೆಪಿ ನಾಯಕರು ವಾದ ಮಾಡಿದ ಹಾಗೆ ನನ್ನ ಬಳಿ ಚರ್ಚೆ ಬೇಡ. ನಾನು ದಾಖಲೆ ಆಧಾರ ಇಟ್ಟಿಕೊಂಡು ಮಾತನಾಡುತ್ತೇನೆ. ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಸೇರಿಕೊಂಡು ಕಾಶ್ಮೀರವನ್ನು ಹಾಳು ಮಾಡುತ್ತಿದ್ದಾರೆ," ಎಂದು ವಾಗ್ದಾಳಿ ನಡೆಸಿದರು.

 ಅಲ್ಪಸಂಖ್ಯಾತ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಬೆಂಬಲಿಸಿ

ಅಲ್ಪಸಂಖ್ಯಾತ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಬೆಂಬಲಿಸಿ

"ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಅನ್ನುವ ಕಾಂಗ್ರೆಸ್‌ನವರು, ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದಾರೆ ಅಂತಾರೆ. ಜೆಡಿಎಸ್ ಪಕ್ಷದ ಬಗ್ಗೆ ಮಾತಾನಾಡಲು ಕಾಂಗ್ರೆಸ್ ನಾಯಕರಿಗೆ ವಿಷಯವಿಲ್ಲ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

"ಜೆಡಿಎಸ್ ಕಾರ್ಯಾಗಾರದಲ್ಲಿ ನಾನೇ ಹೇಳಿದಂತೆ ಜೆಡಿಎಸ್ ಪಕ್ಷ ಎಲ್ಲಿ ಸ್ಟ್ರಾಂಗ್ ಇದೆ ಅಲ್ಲಿ ಪಕ್ಷ ಬೆಂಬಲಿಸಿ. ಎಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುಂದೆ ಇದೆ ಅಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಅಂತಾ ಓಪನ್ನಾಗಿ ಹೇಳಿದ್ದೇನೆ. ಕಾಂಗ್ರೆಸ್ ಪಕ್ಷದ ಹಾಗೇ ಹೀನಾಯ ರಾಜಕೀಯ ಮಾಡಲ್ಲ. ಸಿದ್ದರಾಮಯ್ಯನವರ ಹಾಗೆ ಕುಲಗೆಟ್ಟ ರಾಜಕೀಯ ನಾನು ಮಾಡಲ್ಲವೆಂದು," ಎಚ್‌ಡಿಕೆ ಕುಟುಕಿದರು.

"ರಾಜ್ಯದಲ್ಲಿ ಜಾತ್ಯಾತೀತ ಶಕ್ತಿ ಉಳಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಅಂತಾ ಹೇಳಿದ್ದೇನೆ. ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿ ತಮ್ಮ ಕೀಳುಮಟ್ಟದ ರಾಜಕೀಯ ಏನು ಎಂಬುದನ್ನು ಪ್ರದರ್ಶನ ಮಾಡುತ್ತಿದ್ದಾರೆ," ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

 2023ಕ್ಕೆ ಅಧಿಕಾರಕ್ಕೆ ತರಲು ಕಾರ್ಯಾಗಾರ

2023ಕ್ಕೆ ಅಧಿಕಾರಕ್ಕೆ ತರಲು ಕಾರ್ಯಾಗಾರ

"ಉಪ ಚುನಾವಣೆ ನಡೆಯುತ್ತಿರುವ ಎರಡು ಕ್ಷೇತ್ರಗಳಲ್ಲಿ ಉತ್ತಮ ವಾತಾವರಣವಿದೆ. ಸಿಂದಗಿಯಲ್ಲಿ ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವ ಸೂಚನೆ ಇದೆ. ಹಾನಗಲ್‌ನಲ್ಲಿ ಗೆಲ್ಲಲು ಪೈಪೋಟಿ ನೀಡಲಿದ್ದೇವೆ," ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

"ನಮ್ಮ ಪಕ್ಷವನ್ನು 2023ಕ್ಕೆ ಅಧಿಕಾರಕ್ಕೆ ತರಲು ಕಾರ್ಯಾಗಾರಗಳನ್ನು ಮಾಡಿದ್ದೇನೆ. ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಜನತೆ ಮುಂದೆ ಇಡಲು ಪ್ರಾರಂಭ ಮಾಡಿದ್ದೇನೆ. ಇದನ್ನು ಇಲ್ಲಿಗೆ ನಿಲ್ಲಿಸುವ ಪ್ರಶ್ನೆ ಇಲ್ಲ. ಕಾರ್ಯಾಗಾರಗಳನ್ನು ಮಾಡುವ ಮೂಲಕ ಮುಂದೆಯೂ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆ," ಎಂದು ವಿವರಿಸಿದರು.

"ಇದು ಉಪ ಚುನಾವಣೆಯಲ್ಲಿ ಯಾರನ್ನೋ ಓಲೈಸಿಕೊಳ್ಳಲು ಕಾರ್ಯಾಗಾರ ಮಾಡಿಲ್ಲ. ಓಲೈಸುವ ರಾಜಕಾರಣ ಏನಿದ್ದರೂ ಬಿಜೆಪಿ ಪಕ್ಷದ್ದು. ಹಿಂದುತ್ವದ ಹೆಸರಿನಲ್ಲಿ ಸಂದೇಶ ಕೊಡಲು ಬಿಜೆಪಿಯವರು ಹೊರಟ್ಟಿದ್ದಾರೆ. ಹಿಂದುತ್ವದ ರಾಜಕಾರಣ ಮಾಡಿಕೊಂಡು ಮತಗಳಿಗೊಸ್ಕರ ನಾನು ಓಟ್‌ಬ್ಯಾಂಕ್ ರಾಜಕಾರಣ ನಾನು ಮಾಡುವುದಿಲ್ಲ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

Recommended Video

Neeraj Chopra ಅವರ Javelin ಹರಾಜಿನಲ್ಲಿ ಮಾರಾಟವಾದ ದುಬಾರಿ ವಸ್ತು | Oneindia Kannada

English summary
RSS vs HDK: Adhere To The Statement against RSS; ready for debate with BJP says HD Kumaraswamy in Channapattana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X