ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 13: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ರಾಮನಗರ ಜಿಲ್ಲಾ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಪ್ರತಿಭಟಿಸಿದ ಪದಾಧಿಕಾರಿಗಳು, ಅಳ್ಳಿಮಾರನಹಳ್ಳಿ ಗ್ರಾಮದ ನಿರಾಶ್ರಿತ ದಲಿತ ಕುಟುಂಬಗಳಿಗೆ ಹಕ್ಕು ಪತ್ರ ನೀಡುವುದು ಸೇರಿದಂತೆ ಹಲವು ಹಕ್ಕೋತ್ತಾಯಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಸಹಾಯಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ರಾಮನಗರ ಜಿಲ್ಲೆಯಾದ್ಯಂತ ನಾಲ್ಕು ತಾಲ್ಲೂಕುಗಳಲ್ಲಿ ಕೆಲವು ಕಡೆ ಕಟ್ಟಿಂಗ್ ಶಾಪ್, ಹೋಟೆಲ್ ಹಾಗೂ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಬೇಕೆಂದು ಆಗ್ರಹಿಸಿದರು.

 ಆಶ್ರಯ ಯೋಜನೆಯಡಿ ಬಡವರಿಗೆ ಹಂಚಿಕೆ

ಆಶ್ರಯ ಯೋಜನೆಯಡಿ ಬಡವರಿಗೆ ಹಂಚಿಕೆ

ಕನಕಪುರ ತಾಲೂಕು ಅಳ್ಳಿಮಾರನಹಳ್ಳಿ ಗ್ರಾಮದ ಸರ್ವೆ ನಂಬರ್ 40ರಲ್ಲಿರುವ ಸರ್ಕಾರಿ ಗೋಮಾಳದ ಪೈಕಿ 5 ಎಕರೆ 20 ಗುಂಟೆ ಜಮೀನನ್ನು 2014ರಲ್ಲಿ ಆಶ್ರಯ ಯೋಜನೆಯಡಿ ಬಡವರಿಗೆ ಹಂಚಿಕೆ ಮಾಡುವ ಸಲುವಾಗಿ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಇದರಲ್ಲಿ ಮೂರೂವರೆ ಎಕರೆ ಜಮೀನನ್ನು ಅಧಿಕಾರಿಗಳು ತಮಗೆ ಬೇಕಾದವರಿಗೆ ನೀಡಿದ್ದಾರೆ.
ಉಳಿದ ಸುಮಾರು ಎರಡು ಎಕರೆಯಷ್ಟು ಆಶ್ರಯ ಯೋಜನೆಯ ಗೋಮಾಳದ ಜಮೀನಿನಲ್ಲಿ 30ಕ್ಕೂ ಹೆಚ್ಚು ದಲಿತ ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಈಗ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತಮಗೆ ಬೇಕಾದವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಸಲುವಾಗಿ ದಲಿತರ ಗುಡಿಸಲುಗಳನ್ನು ಏಕಾಏಕಿ ತೆರವುಗೊಳಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದರು.

 ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ

ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ

ದಲಿತರ ಗುಡಿಸಲುಗಳನ್ನು ಅಕ್ರಮವಾಗಿ ಧ್ವಂಸಗೊಳಿಸಿದ ತಹಶೀಲ್ದಾರ ವಿಶ್ವನಾಥ್, ತಾ.ಪಂ ಇಒ ಮಧು, ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಹನುಮಪ್ಪ ರೇಣಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹೇಮಂತ್ ಕುಮಾರ್‌ರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು. ಇವರೆಲ್ಲರ ವಿರುದ್ಧ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ದೌರ್ಜನ್ಯಕ್ಕೆ ಒಳಗಾಗಿ ಗುಡಿಸಲು ಕಳೆದುಕೊಂಡ ನಿರಾಶ್ರಿತ ದಲಿತ ಕುಟುಂಬಗಳಿಗೆ ಸರ್ವೆ ನಂಬರ್ 40ರಲ್ಲಿ ಉಳಿಕೆ ಇರುವ 2 ಎಕರೆ ಜಮೀನನ್ನು ಮೀಸಲಿಟ್ಟು ಆಶ್ರಯ ಯೋಜನೆಯಡಿ ಹಕ್ಕುಪತ್ರ ನೀಡುವುದು ಹಾಗೂ ಮೂಲಭೂತ ಸೌಕರ್ಯ ಒದಗಿಸುವುದು. ದೌರ್ಜನಕ್ಕೆ ಒಳಗಾದ ಕುಟುಂಬಗಳಿಗೆ ಜಿಲ್ಲಾಡಳಿತವೇ ನಷ್ಟ ಭರಿಸಬೇಕು. ಈ ಅಳ್ಳಿಮಾರನಹಳ್ಳಿ ಸರ್ವೆ ನಂಬರ್ 14ರಲ್ಲಿರುವ ಕೊಡುಗೆ ಭೂಮಿಯಲ್ಲಿ ಸುಮಾರು 40 ದಲಿತ ಕುಟುಂಬಗಳು ಮತ್ತು ಸವರ್ಣಿಯರ 40 ಕುಟುಂಬಗಳು ಸುಮಾರು 2-3 ತಲೆಮಾರಿನಿಂದ ವಾಸವಾಗಿದ್ದು, ಎಲ್ಲರಿಗೂ ಹಕ್ಕುಪತ್ರಗಳನ್ನು ವಿತರಿಸಿ ಮೂಲಭೂತ ಸೌಕರ್ಯ ಒದಗಿಸಬೇಕು. ಒತ್ತುವರಿಯಾಗಿರುವ ದಲಿತರ 2 ಎಕರೆ ಜಮೀನಿನ ಹದ್ದುಬಸ್ತು ಗುರುತಿಸುವಂತೆ ಆಗ್ರಹಿಸಿದರು.

 ದಲಿತರ ಜಮೀನು ಪೋಡಿಗೆ ಆಗ್ರಹ

ದಲಿತರ ಜಮೀನು ಪೋಡಿಗೆ ಆಗ್ರಹ

ಮರಳವಾಡಿ ಹೋಬಳಿ ಬೆಳ್ಳಿಪುರ ಗ್ರಾಮದ 16 ದಲಿತ ಕುಟುಂಬಗಳಿಗೆ ಆನೆಹೊಸಳ್ಳಿ ಗ್ರಾಮದ ಸರ್ವೆ ನಂಬರ್ 41ರಲ್ಲಿ 1983-84ರಲ್ಲಿ ತಲಾ 3 ಎಕರೆ ಭೂಮಿ ಮಂಜೂರಾಗಿದ್ದು, ಈ ಜಮೀನುಗಳ ಪೋಡಿ ದುರಸ್ತಿಗೆ ಅರ್ಜಿ ಸಲ್ಲಿಸಲಾಗಿದೆ. ಕೂಡಲೇ ಕ್ರಮವಹಿಸುವುದು, ಉಯ್ಯಂಬಳ್ಳಿ ಹೋಬಳಿ ಮಾಹಳ್ಳಿ ಗ್ರಾಮದ ಸರ್ವೆ ನಂಬರ್‌ 6ರಲ್ಲಿರುವ ತೋಟ ಇನಾಮತಿ ಜಮೀನು 3 ಎಕರೆ 15 ಗುಂಟೆ ಮತ್ತು ಒತ್ತುವರಿ ಸೇರಿರುವ ಜಮೀನನ್ನು ಕಾನೂನು ಬಾಹಿರವಾಗಿ ಕಂದಾಯ ಅಧಿಕಾರಿಗಳು ನಕಲಿ ಸೃಷ್ಟಿಸಿದ್ದಾರೆ. ಬಲಾಢ್ಯರು ಮತ್ತು ಪೊಲೀಸರ ಸಹಾಯದಿಂದ ದಲಿತರ ಮೇಲೆ ದೌರ್ಜನ್ಯವೆಸಗಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಭೂಮಿಯನ್ನು ಮೂಲ ದಲಿತರಿಗೆ ವಾಪಸ್ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು.

Recommended Video

ನೆಟ್ ಪ್ರಾಕ್ಟೀಸ್ ನಲ್ಲಿ ನಿರತರಾಗಿರುವ Mr.360 | Oneindia Kannada
 ಅಕ್ರಮ ಗಣಿಗಾರಿಕೆ ತಡೆಗೆ ಆಗ್ರಹ

ಅಕ್ರಮ ಗಣಿಗಾರಿಕೆ ತಡೆಗೆ ಆಗ್ರಹ

ತಾಮಸಂದ್ರ ಗ್ರಾಮದ ಸರ್ವೆ ನಂಬರ್ 253ರ ಪಟಾ ಭೂಮಿ ಮತ್ತು ಸರ್ವೆ ನಂಬರ್ 84ರಲ್ಲಿರುವ ಪರಿಶಿಷ್ಟ ಸಮುದಾಯದವರ ಭೂಮಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ನೀಡಿರುವ ಎನ್‌ಒಸಿಯನ್ನು ತಕ್ಷಣವೇ ರದ್ದುಪಡಿಸಬೇಕು. ಕನಕಪುರ ಟೌನ್ ಅಂಬೇಡ್ಕರ್ ನಗರ ಗೋಮಾಳ ಸರ್ವೆ ನಂಬರ್ 109ರಲ್ಲಿ 20 ಗುಂಟೆ, ಸಂತೆಕೋಡಿಹಳ್ಳಿ ಹೋಬಳಿ ಕೊಳಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 53ರಲ್ಲಿ 3 ಎಕರೆ ದಲಿತರ ಸ್ಮಶಾನಕ್ಕೆ ಮಂಜೂರಾಗಿದ್ದು, ಒತ್ತುವರಿಯಾಗಿರುವ ಭೂಮಿ ಹದ್ದುಬಸ್ತು ಗುರುತಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘರ್ಷ ಸಮಿತಿ ಬೆಂಗಳೂರು ವಿಭಾಗೀಯ ಸಂಚಾಲಕ ಸೋಮಶೇಖರ್‌, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಶಿವಲಿಂಗಯ್ಯ, ಮುಖಂಡರಾದ ಸಿದ್ದರಾಜು, ಪುನೀತ್, ಅಪ್ಪಾಜಿ, ಗುರುಲಿಂಗಯ್ಯ, ರವೀಂದ್ರ, ಎ.ಸಿ. ಕೃಷ್ಣ, ನವೀನ್, ಗೋಪಿ, ಕಮಲಮ್ಮ, ಮಲ್ಲೇಶ್ ಮತ್ತಿತರರು ಭಾಗವಹಿಸಿದ್ದರು.

English summary
Ramanagara District Dalit and Progressive Organizations unions staged protests condemning the atrocities on Dalits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X