ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯ ವಿಶೇಷ: ರಾಮನಗರದಲ್ಲಿ ಅಸ್ತಿತ್ವಕ್ಕಾಗಿ ಎಚ್‌ಡಿಕೆ ಹೋರಾಟ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 25 ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ವಿವಿಧ ಕ್ಷೇತ್ರಗಳಿಂದ ಎಚ್.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರಿದಂತೆ ನಿಖಿಲ್ ಕುಮಾರಸ್ವಾಮಿ ಅವರು ಆಯ್ಕೆ ಬಯಸುವ ಸಾಧ್ಯತೆ ಹೆಚ್ಚಿರುವ ಕಾರಣ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿರುವುದು ಕಂಡು ಬಂದಿದೆ.

ಇತ್ತೀಚೆಗಿನ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷ ಹೀನಾಯವಾಗಿ ಸೋಲು ಕಾಣುತ್ತಿದ್ದು, ಪಕ್ಷದಲ್ಲಿದ್ದ ನಾಯಕರು ಒಬ್ಬರಾದ ನಂತರ ಒಬ್ಬರು ಎಂಬಂತೆ ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಹೀಗಿರುವಾಗ ರಾಜ್ಯದಾದ್ಯಂತ ಪ್ರವಾಸ ಮಾಡಿ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷವನ್ನು ಸಂಘಟಿಸುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಅದರಲ್ಲೂ ಪಕ್ಷದ ನಾಯಕತ್ವ ವಹಿಸಿಕೊಂಡು ಮುನ್ನಡೆಯುವ ನಾಯಕರು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಹೊರತುಪಡಿಸಿದರೆ ಬೇರೆ ಯಾರೂ ಕಾಣಿಸುತ್ತಿಲ್ಲ.

 ರೇವಣ್ಣ ಹಾಸನ ಬಿಟ್ಟು ಬರುತ್ತಿಲ್ಲ

ರೇವಣ್ಣ ಹಾಸನ ಬಿಟ್ಟು ಬರುತ್ತಿಲ್ಲ

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಎಚ್.ಡಿ. ರೇವಣ್ಣನವರು ಹಾಸನಕ್ಕೆ ಮಾತ್ರ ಸೀಮಿತವಾದಂತೆ ಕಂಡು ಬರುತ್ತಿದ್ದಾರೆ. ಅವರು ಪ್ರವಾಸ ಮಾಡಿ ಪಕ್ಷದ ಸಂಘಟನೆ ಮಾಡುವತ್ತ ಚಿಂತನೆ ಮಾಡುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅವರು ಹಾಸನದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ರಾಜಕೀಯವಾಗಿ ಏನು ಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ತಮ್ಮ ಪುತ್ರರು, ಪತ್ನಿ ಎಲ್ಲರೂ ರಾಜಕೀಯವಾಗಿ ಹಾಸನದಲ್ಲಿ ಭದ್ರವಾಗಿದ್ದಾರೆ. ಜತೆಗೆ ರೇವಣ್ಣ ಅವರು ತಮ್ಮ ಹೊಳೆನರಸೀಪುರ ಕ್ಷೇತ್ರವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅವರು ಹಾಸನ ಬಿಟ್ಟು ಅದರಾಚೆಗೆ ಬರುವುದಾಗಲೀ, ಪಕ್ಷದ ಸಂಘಟನೆ ಮಾಡುವುದಾಗಲೀ ಕಷ್ಟ ಸಾಧ್ಯವೇ.

ಪಕ್ಷದ ಸಂಘಟನೆ ವಿಷಯ ಬಂದಾಗ ಹೆಚ್.ಡಿ.ದೇವೇಗೌಡರು ಹೊರತು ಪಡಿಸಿದರೆ ಹೆಚ್.ಡಿ.ಕುಮಾರಸ್ವಾಮಿ ಅವರೇ ಮಾಡಬೇಕಾಗುತ್ತದೆ. ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಸಂಘಟಿಸುವುದು ಸವಾಲಿನ ಕೆಲಸವಾಗಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ಜೆಡಿಎಸ್ ಪಕ್ಷವನ್ನು ಮುಗಿಸಲು ಬೇಕಾದ ತಂತ್ರಗಳನ್ನು ಮಾಡಿದ್ದಾರೆ ಮಾತ್ರವಲ್ಲ ಮಾಡುತ್ತಲೇ ಇದ್ದಾರೆ.

 ಜೆಡಿಎಸ್‌ನ್ನು ಕಾಡುತ್ತಿರುವ ಕಾಂಗ್ರೆಸ್

ಜೆಡಿಎಸ್‌ನ್ನು ಕಾಡುತ್ತಿರುವ ಕಾಂಗ್ರೆಸ್

ಈ ನಡುವೆ ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿಯಾಗಿ ಒಂದಷ್ಟು ಹೆಸರು ಮಾಡಿದ್ದ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್‍ ಜತೆಗೆ ಸೇರಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿ ಒಂದಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದು ಮಾತ್ರವಲ್ಲದೆ, ಮೊದಲು ಸಂಪಾದಿಸಿದ ಹೆಸರನ್ನೆಲ್ಲ ಕಳೆದುಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಕಾಂಗ್ರೆಸ್ ಜೆಡಿಎಸ್‍ನ್ನು ಬದ್ಧ ವೈರಿಯಂತೇ ನೋಡಿಕೊಂಡು ಬರುತ್ತಿದೆ. ಅದರಲ್ಲೂ ಸಿದ್ದರಾಮಯ್ಯ ಅವರಂತೂ ಸಮಯ ಸಿಕ್ಕಾಗಲೆಲ್ಲ ಜೆಡಿಎಸ್‍ನ್ನು ಜಾಡಿಸುತ್ತಲೇ ಬಂದಿದ್ದಾರೆ. ಹೀಗಿದ್ದರೂ ಕುಮಾರಸ್ವಾಮಿ ಮುಂದಿನ 2023ರ ವಿಧಾಸಭಾ ಚುನಾವಣೆಯಲ್ಲಿ ಬಹುಮತದಿಂದಲೇ ಅಧಿಕಾರ ಹಿಡಿಯುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ. ಅಷ್ಟೇ ಅಲ್ಲದೆ ತಳಮಟ್ಟದಿಂದ ಪಕ್ಷವನ್ನು ಬೆಳೆಸುವ ನಿರ್ಧಾರ ಕೈಗೊಂಡಿದ್ದಾರೆ.

 ತಳಮಟ್ಟದಿಂದಲೇ ಸಂಘಟನೆ ಅನಿವಾರ್ಯ

ತಳಮಟ್ಟದಿಂದಲೇ ಸಂಘಟನೆ ಅನಿವಾರ್ಯ

ರಾಜ್ಯದಲ್ಲಿ ಪಕ್ಷ ಸಂಘಟನೆ ಮಾತು ಆಚೆಗಿರಲಿ. ಅದಕ್ಕೆ ಇನ್ನೂ ಸಮಯವಿದೆ. ಈಗ ಜರೂರು ಆಗಬೇಕಾಗಿರುವುದು ತಮ್ಮ ಕಾರ್ಯಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವುದಾಗಿದೆ. ಸದ್ಯ ತಾವು ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ಕ್ಷೇತ್ರವನ್ನು ಗಟ್ಟಿ ಮಾಡಿಕೊಳ್ಳುವುದು ಜತೆಗೆ ಪುತ್ರನಿಗೆ ಸ್ಥಾನವನ್ನು ಸಿದ್ಧಮಾಡಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿಯೇ ಅವರು ರಾಮನಗರಕ್ಕೆ ಹೆಚ್ಚಿನ ಆದ್ಯತೆ ನೀಡಲು ಆರಂಭಿಸಿದ್ದಾರೆ. ಆಗಾಗ್ಗೆ ಅಲ್ಲಿಯೇ ಕಾಣಿಸಿಕೊಂಡು ತಮ್ಮ ಕಾರ್ಯಚಟುವಟಿಕೆಯನ್ನು ರಾಮನಗರದಿಂದಲೇ ಮಾಡುತ್ತಿದ್ದಾರೆ. ಇದೀಗ ಬಿಡದಿಯ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿದರೆ ಅವರಿಗೆ ತಳಮಟ್ಟದ ಗೆಲುವು ಎಷ್ಟು ಅನಿವಾರ್ಯ ಎಂಬುದು ತಿಳಿಯುತ್ತದೆ.

 ರಾಮನಗರದಲ್ಲಿ ಡಿಕೆ ಬ್ರದರ್ಸ್ ಪ್ರಾಬಲ್ಯ

ರಾಮನಗರದಲ್ಲಿ ಡಿಕೆ ಬ್ರದರ್ಸ್ ಪ್ರಾಬಲ್ಯ

ರಾಮನಗರದಲ್ಲಿ ಡಿಕೆ ಬ್ರದರ್ಸ್ ಪ್ರಾಬಲ್ಯ ಮೆರೆದಿದ್ದು, ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಬೆಳೆಸುವುದು ಅವರ ಮುಖ್ಯ ಅಜೆಂಡಾ ಆಗಿದೆ. ಹೀಗಾಗಿ ಅವರ ಎದುರು ಜೆಡಿಎಸ್‌ನ್ನು ಬೆಳೆಸಿ ತಮ್ಮ ಕ್ಷೇತ್ರಗಳನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಅದಕ್ಕಾಗಿಯೇ ಹಗಲು ರಾತ್ರಿ ಎನ್ನದೆ ಹೋರಾಟ ನಡೆಸುವಂತಾಗಿದೆ.

English summary
Former CM HD Kumaraswamy Fighted for Existence in Ramanagara district for the next assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X