ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ನೀರಿಗಾಗಿ ಬೆಂಗಳೂರು ಪಾದಯಾತ್ರೆ ಪ್ರಾರಂಭಿಸಿದ ಮೇಕೆದಾಟು ಹೋರಾಟ ಸಮಿತಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 23: ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಶೀಘ್ರ ಯೋಜನೆ ಅನುಷ್ಠಾನಕ್ಕಾಗಿ ಆಗ್ರಹಿಸಿ ರಾಜ್ಯ ಮೇಕೆದಾಟು ಹೋರಾಟ ಸಮಿತಿ ವತಿಯಿಂದ ಐದು ದಿನಗಳ ಕಾಲ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟಿನಿಂದ ವಿಧಾನಸೌಧದವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಗುರುವಾರದಿಂದ ಪಾದಯಾತ್ರೆ ಆರಂಭಗೊಂಡಿದ್ದು, ಸೆಪ್ಟೆಂಬರ್ 28ರವರೆಗೂ ಪಾದಯಾತ್ರೆ ನಡೆದು ವಿಧಾನಸೌಧ ತಲುಪಲಿದೆ.

ಬೆಂಗಳೂರು ಪಾದಯಾತ್ರೆ ಅಂಗವಾಗಿ ಕನಕಪುರ ತಾಲೂಕಿನ ಮೇಕೆದಾಟು ಸಮೀಪದ ಸಂಗಮದಲ್ಲಿ ಕಾವೇರಿ ನದಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭ ಮಾಡಲಾಯಿತು. ಇನ್ನು ಪಾದಯಾತ್ರೆಗೆ ವಿವಿಧ ಮಠಾಧೀಶರು, ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರು ಸಾಥ್ ನೀಡಿದರು.

ಸರ್ಕಾರ ಯೋಜನೆ ಆರಂಭಿಸಬೇಕು

ಸರ್ಕಾರ ಯೋಜನೆ ಆರಂಭಿಸಬೇಕು

ಇನ್ನು ಹೋರಾಟ ಸಮಿತಿಯ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, "ನಾವು ಇಂದು ಪಾದಯಾತ್ರೆ ಪ್ರಾರಂಭಿಸಿದ್ದು, ಬೆಂಗಳೂರು ತಲುಪುವ ವೇಳೆಗೆ ಸರ್ಕಾರ ಯೋಜನೆ ಆರಂಭಿಸಬೇಕು. ಪಾದಯಾತ್ರೆ ಬೆಂಗಳೂರು ತಲುಪಲು ಇನ್ನೂ ಐದು ದಿನಗಳು ಇವೆ. ಅಷ್ಟರಲ್ಲಿ ಸರ್ಕಾರ ತನ್ನ ನಿಲುವನ್ನು ಪ್ರದರ್ಶನವನ್ನು ಮಾಡಬೇಕು," ಎಂದು ಒತ್ತಾಯಿಸಿದರು. ಸರ್ಕಾರ ಈ ಬಗ್ಗೆ ಶೀಘ್ರ ಗಮನಹರಿಸಬೇಕೆಂದು ಸ್ವಾಮೀಜಿಗಳು ಕೂಡ ಆಗ್ರಹಿಸಿದರು.

 ಬಯಲು ಸೀಮೆಯ ಬಹುದಿನದ ಬೇಡಿಕೆ ಮೇಕೆದಾಟು

ಬಯಲು ಸೀಮೆಯ ಬಹುದಿನದ ಬೇಡಿಕೆ ಮೇಕೆದಾಟು

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮ- ಮೇಕೆದಾಟು ನಡುವೆ ಅಣೆಕಟ್ಟು ನಿರ್ಮಾಣ ಮಾಡಬೇಕೆಂಬುದು ಬಯಲು ಸೀಮೆ ಜನರ ಬಹುದಿನದ ಕನಸು. ಹೀಗಾಗಿ 2013ರಿಂದಲೂ ಈ ಯೋಜನೆ ಜಾರಿಗೆ ಆಗ್ರಹಿಸಿ, ರೈತರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದರೆ ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳು ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಮೇಕೆದಾಟು ಅಣೆಕಟ್ಟು ನಿರ್ಮಿಸಿದರೆ ಸುಮಾರು 66 ಟಿಎಂಸಿಯಷ್ಟು ನೀರು ಸಂಗ್ರಹ ಆಗಲಿದೆ. ಅಲ್ಲದೆ 400ರಿಂದ 440 ಮೆಗಾವ್ಯಾಟ್ ವಿದ್ಯುತ್ ಸಹ ಉತ್ಪಾದನೆ ಮಾಡಬಹುದಾಗಿದೆ. ಈ ಮೂಲಕ ಬಯಲು ಸೀಮೆ ಜನರ ನೀರಿನ ದಾಹ ತೀರಲಿದ್ದು, ಆದರೆ ಯೋಜನೆ ಮಾತ್ರ ಇದುವರೆಗೂ ಕಾರ್ಯ ರೂಪಕ್ಕೆ ಬಂದಿಲ್ಲ.

 ಮೇಕೆದಾಟು ಹೋರಾಟ ಬೆಂಬಲಿಸಿದ ಡಿ.ಕೆ. ಸುರೇಶ್

ಮೇಕೆದಾಟು ಹೋರಾಟ ಬೆಂಬಲಿಸಿದ ಡಿ.ಕೆ. ಸುರೇಶ್

ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಕರ್ನಾಟಕ ಮೇಕೆದಾಟು ಹೋರಾಟ ಸಮಿತಿಯು ಆಯೋಜಿಸಿದ್ದ 'ಮೇಕೆದಾಟುವಿನಿಂದ ವಿಧಾನಸೌಧದವರೆಗಿನ ಪಾದಯಾತ್ರೆ' ಬೆಂಬಲಿಸಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಪಾದಯಾತ್ರೆ ಸಂದರ್ಭದಲ್ಲಿ ಸೇರಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಸಂಸದ ಡಿ.ಕೆ. ಸುರೇಶ್ ಮಾತನಾಡಿ, "ಕರ್ನಾಟಕದಿಂದ ಹರಿದು ಹೊರಹೋಗುವ ನೀರನ್ನು ತಡೆದು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದದ್ದೇ ಆದರೆ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳ ಕೋಟ್ಯಂತರ ಜನರಿಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಟ್ಟಂತಾಗುತ್ತದೆ," ಎಂದರು.

 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ

400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ

"ಅಲ್ಲದೇ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಂದರೆ ಸುಮಾರು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಿ, ರೈತರ ಮತ್ತು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ವ್ಯವಸ್ಥೆ ರೂಪುಗೊಳ್ಳುವ ಬಗ್ಗೆ ವಿಶ್ವಾಸವಿದೆ. ಕೇಂದ್ರ ಸರ್ಕಾರ ತಮ್ಮ ತಾರತಮ್ಯ ನೀತಿಯನ್ನು ಬದಿಗಿಟ್ಟು, ಈ ಯೋಜನೆಯ ಅನುಷ್ಠಾನಕ್ಕೆ ಹಸಿರು ನಿಶಾನೆ ತೋರಬೇಕು," ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಸಂಸದ ಡಿ.ಕೆ. ಸುರೇಶ್ ಆಗ್ರಹಿಸಿದರು. "ಹಾಗೆಯೇ ಮೇಕೆದಾಟು ಹೋರಾಟದ ಪ್ರತೀ ಹಂತದಲ್ಲೂ ರೈತ ಸಮುದಾಯದ ಜೊತೆಗೆ ನಾನು ಮತ್ತು ಸ್ಥಳೀಯ ಶಾಸಕರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ನಿಲ್ಲುತ್ತೇವೆ. ಈ ಒಂದು ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯದ ಎಲ್ಲಾ ಸಂಸದರು, ಕೇಂದ್ರ ಸಚಿವರು ಪಕ್ಷ ಭೇದ ಮರೆತು ರಾಜ್ಯದ ಮತ್ತು ರೈತರ ಪರವಾಗಿ ನಿಲ್ಲಬೇಕು," ಎಂದು ಸಂಸದ ಡಿ.ಕೆ. ಸುರೇಶ್ ಕರೆ ನೀಡಿದರು.

Recommended Video

ಮೋದಿ ಅಮೆರಿಕಾಕ್ಕೆ ಭೇಟಿ ಕೊಟ್ಟಿದ್ದಕ್ಕೆ ಚೀನಾ ತಾಲಿಬಾನ್ ಪಾಕಿಸ್ತಾನಕ್ಕೆ ಭಯ ಯಾಕೆ? | Oneindia Kannada

English summary
The Bengaluru Padayatra for the Mekedatu Dam project was launched from the Sangama of Kanakapura Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X