ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ ವಿಶೇಷ; ರಾಜ್ಯದಲ್ಲಿ ಸದ್ದು ಮಾಡುತ್ತಿದೆ ರಾಮನಗರ ರಾಜಕೀಯ!

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 27; ರಾಜ್ಯ ರಾಜಕಾರಣದಲ್ಲಿ ರಾಮನಗರ ಜಿಲ್ಲೆ ಇತ್ತೀಚೆಗೆ ಸದಾ ಸುದ್ದಿಯಾಗುತ್ತದೆ. ಘಟಾನುಘಟಿ ನಾಯಕರು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವುದರಿಂದ ಇವರ ಪ್ರತಿ ಹೇಳಿಕೆಗಳು ರಾಜಕೀಯವಾಗಿ ಮಹತ್ವ ಪಡೆದುಕೊಳ್ಳುವುದರೊಂದಿಗೆ ಜನ ಇತ್ತ ಆಸಕ್ತಿಯ ನೋಟ ಬೀರುವಂತೆ ಮಾಡುತ್ತಿದೆ.

ಒಂದೆಡೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಮೂಲಕ ರಾಮನಗರ ಜಿಲ್ಲೆಯ ಪಾರುಪತ್ಯ ಸಾಧಿಸಬೇಕೆಂದು ಹೊರಟಿರುವ ಡಿಕೆ ಬ್ರದರ್ಸ್‌ಗೆ ತಮ್ಮ ಪಕ್ಷದೊಳಗೆ ಅಸಮಾಧಾನದ ಹೊಗೆ ಕಾಣಿಸಿಕೊಳ್ಳುತ್ತಿರುವುದು ಆತಂಕವನ್ನು ತಂದೊಡ್ಡಿದೆ.

ಜೆಡಿಎಸ್ ಬಿಡದಂತೆ ಮನವೊಲಿಸಲು ಕೆಲವು ಶಾಸಕರಿಗೆ ಜವಾಬ್ದಾರಿ: ಜೆಡಿಎಲ್‌ಪಿ ಸಭೆ ನಿರ್ಣಯಜೆಡಿಎಸ್ ಬಿಡದಂತೆ ಮನವೊಲಿಸಲು ಕೆಲವು ಶಾಸಕರಿಗೆ ಜವಾಬ್ದಾರಿ: ಜೆಡಿಎಲ್‌ಪಿ ಸಭೆ ನಿರ್ಣಯ

ಮೇಕೆದಾಟು ಪಾದಯಾತ್ರೆ ಮೂಲಕ ತಮ್ಮ ಸಾಮರ್ಥ್ಯವೇನು? ಎಂಬುದನ್ನು ಹೈಕಮಾಂಡ್‌ಗೆ ತೋರಿಸಿಕೊಡುವುದರೊಂದಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಬೇಕೆಂದು ಹೊರಟಿದ್ದ ಡಿಕೆ ಬ್ರದರ್ಸ್‌ಗೆ ಪಕ್ಷದೊಳಗಿನ ಇತ್ತೀಚೆಗಿನ ಬೆಳವಣಿಗೆಗಳು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

ವರ್ಷಕ್ಕೂ ಮೊದಲು ಅಭ್ಯರ್ಥಿಗಳ ಪಟ್ಟಿ; ಏನಿದು ಎಚ್‌ಡಿಕೆ ಲೆಕ್ಕಾಚಾರ! ವರ್ಷಕ್ಕೂ ಮೊದಲು ಅಭ್ಯರ್ಥಿಗಳ ಪಟ್ಟಿ; ಏನಿದು ಎಚ್‌ಡಿಕೆ ಲೆಕ್ಕಾಚಾರ!

ರಾಮನಗರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಮಾಜಿ ಸಚಿವ ಸಿ. ಪಿ. ಯೋಗೇಶ್ವರ್‌ಗೆ ತವರು ಜಿಲ್ಲೆ. ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್‌ ಜಿಲ್ಲಾ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

ಚನ್ನಪಟ್ಟಣ ನಗರಸಭೆ ಜೆಡಿಎಸ್ ತೆಕ್ಕೆಗೆ; ಫಲಿಸಲಿಲ್ಲ ಸಿಪಿವೈ ಯೋಜನೆಚನ್ನಪಟ್ಟಣ ನಗರಸಭೆ ಜೆಡಿಎಸ್ ತೆಕ್ಕೆಗೆ; ಫಲಿಸಲಿಲ್ಲ ಸಿಪಿವೈ ಯೋಜನೆ

ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮಾಯ

ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಮಾಯ

ಇನ್ನು ಮಾಜಿ ಸಂಸದೆ ರಮ್ಯಾ ಟ್ವಿಟರ್ ಮೂಲಕ ಟಕ್ಕರ್ ನೀಡಿದರೂ ಹೈಕಮಾಂಡ್ ಡಿ. ಕೆ. ಶಿವಕುಮಾರ್ ನೆರವಿಗೆ ಬಾರದಿರುವುದು ಒಂದೆಡೆಯಾದರೆ, ತಮ್ಮದೇ ಜಿಲ್ಲೆಯಲ್ಲಿ ತಮ್ಮ ಬಾವನೇ (ಶರತ್ ಚಂದ್ರ) ಚನ್ನಪಟ್ಟಣದಲ್ಲಿ ತಿರುಗಿ ಬಿದ್ದಿರುವುದು ಮತ್ತೊಂದೆಡೆಯಾಗಿದೆ. ಇದರ ನಡುವೆ ಹಿರಿಯ ನಾಯಕರಾದ ಹೆಚ್. ಎಂ. ರೇವಣ್ಣ ಮತ್ತು ಮಾಜಿ ಶಾಸಕ ಬಾಲಕೃಷ್ಣ ನಡುವಿನ ಕಿತ್ತಾಟಗಳು ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತಿದೆ.

ರಾಮನಗರದಲ್ಲಿ ಜೆಡಿಎಸ್‌ಗೆ ಸೆಡ್ಡು ಹೊಡೆದು ಕಾಂಗ್ರೆಸ್ ಪಕ್ಷವನ್ನು ಸಂಘಟಿಸಬೇಕೆಂಬ ಕಾರಣಕ್ಕಾಗಿ ಮತ್ತು ರೈತರನ್ನು ತಮ್ಮತ್ತ ಸೆಳೆಯುವ ಸಲುವಾಗಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಆರಂಭಿಸಿದ ಡಿ. ಕೆ. ಶಿವಕುಮಾರ್ ಇದರ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದರು. ಕೋವಿಡ್ ನಡುವೆ ಪಾದಯಾತ್ರೆ ಮಾಡಿಯೇ ತೀರುತ್ತೇನೆಂದು ಹೊರಟ ಅವರು ಪಕ್ಷದ ನಾಯಕರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾದರು.

ಜೆಡಿಎಸ್ ಗೆ ಸೆಡ್ಡು ಹೊಡೆಯಲು ತಯಾರಿ

ಜೆಡಿಎಸ್ ಗೆ ಸೆಡ್ಡು ಹೊಡೆಯಲು ತಯಾರಿ

ಆದರೆ ಮೇಲ್ನೋಟಕ್ಕೆ ಈ ಪಾದಯಾತ್ರೆ ಕಾಂಗ್ರೆಸ್ ಪಕ್ಷದ ಶಕ್ತಿಪ್ರದರ್ಶನದಂತೆ ಭಾಸವಾಯಿತೇ ಹೊರತು, ಅಂದು ಕೊಂಡಂತೆ ಏನೂ ನಡೆಯಲಿಲ್ಲ. ಕೋವಿಡ್ ಸಮಯದಲ್ಲಿ ಸರ್ಕಾರವನ್ನು ಎದುರು ಹಾಕಿಕೊಂಡು ಪಾದಯಾತ್ರೆ ಮಾಡಿದ್ದು, ಸಾಮಾಜಿಕ ಕಾಳಜಿಗಿಂತ ರಾಜಕೀಯ ಸ್ವಾರ್ಥವೇ ಎದ್ದು ಕಾಣುವಂತಾಯಿತು. ಪರಿಣಾಮ ನ್ಯಾಯಾಲಯ ಮಧ್ಯಪ್ರವೇಶಿಸಿದ್ದರಿಂದ ಪಾದಯಾತ್ರೆಯನ್ನು ಮೊಟಕು ಗೊಳಿಸಬೇಕಾಯಿತು. ಆ ನಂತರ ಮತ್ತೆ ಪಾದಯಾತ್ರೆ ಮುಂದುವರೆಸಿ ಮುಕ್ತಾಯಗೊಳಿಸಲಾಯಿತಾದರೂ ಅಂದು ಕೊಂಡಷ್ಟು ಜನರ ಮೇಲೆ ಪರಿಣಾಮ ಬೀರಿಲ್ಲ ಎನ್ನುವುದು ಅಷ್ಟೇ ಸತ್ಯ.

ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಡಿ. ಕೆ. ಶಿವಕುಮಾರ್ ಭದ್ರವಾಗಿ ನೆಲೆಯೂರಿದ್ದಾರೆ. ಆದರೆ ಉಳಿದಂತೆ ಜೆಡಿಎಸ್‌ಗೆ ಸೆಡ್ಡು ಹೊಡೆದು ಕಾಂಗ್ರೆಸ್ ಅನ್ನು ಬೆಳೆಸುವುದಕ್ಕೆ ಡಿಕೆ ಬ್ರದರ್ಸ್‌ಗೆ ಸಾಧ್ಯವಾಗಲೇ ಇಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ತಮ್ಮ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಹೆಚ್ಚಿನ ಸ್ಥಾನವನ್ನು ಗೆಲ್ಲದೆ ಹೋದರೆ ಅದಕ್ಕಿಂತ ಅವಮಾನ ಬೇರೊಂದು ಇಲ್ಲ. ಹೀಗಾಗಿಯೇ ಅವರು ರಾಮನಗರ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿದ್ದಾರೆ.

ಡಿಕೆ ಬ್ರದರ್ಸ್‌ಗೆ ಸವಾಲು

ಡಿಕೆ ಬ್ರದರ್ಸ್‌ಗೆ ಸವಾಲು

ಆದರೆ ಮಾಗಡಿಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾದ ಹೆಚ್. ಎಂ. ರೇವಣ್ಣ ಮತ್ತು ಬಾಲಕೃಷ್ಣ ಅವರ ನಡುವಿನ ಸಮರ ತಲೆನೋವು ತಂದಿದೆ. ಮತ್ತೊಂದೆಡೆ ಚನ್ನಪಟ್ಟಣದಲ್ಲಿ ಡಿ. ಕೆ. ಶಿವಕುಮಾರ್ ಅಕ್ಕನ ಗಂಡ ಶರತ್ ಚಂದ್ರ ರೊಚ್ಚಿಗೆದ್ದಿದ್ದಾರೆ. ಈ ಬಾರಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ನೀಡದಿದ್ದರೆ ಮುಂದಿನ ದಾರಿ ನೋಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ನಿಷ್ಟಾವಂತ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡಿಕೊಂಡು ಬಂದಿದ್ದು ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂಬ ಆರೋಪವನ್ನು ಅವರು ಮಾಡುತ್ತಿರುವುದು ಡಿಕೆಶಿಗೆ ಮಗ್ಗುಲ ಮುಳ್ಳಾಗಿ ಚುಚ್ಚುತ್ತಿದೆ.

ಮಾಗಡಿ ಕ್ಷೇತ್ರದಲ್ಲಿ ಗಟ್ಟಿಯಾಗಿದ್ದ ಹೆಚ್. ಎಂ. ರೇವಣ್ಣರವರಿಗೆ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಟಿಕೆಟ್ ನೀಡಿ ಕುಮಾರಸ್ವಾಮಿ ಮತ್ತು ಸಿ. ಪಿ. ಯೋಗೇಶ್ವರ್ ವಿರುದ್ಧ ಕಣಕ್ಕಿಳಿಸಲಾಗಿತ್ತು. ಅಲ್ಲಿ ಸೋಲು ಕಂಡಿದ್ದ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಇತ್ತ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮಾಗಡಿ ಕ್ಷೇತ್ರದ ಬಾಲಕೃಷ್ಣ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದರೂ ಅದೇ ಸಮಯದಲ್ಲಿ ಕಾಂಗ್ರೆಸ್‌ನಲ್ಲಿದ್ದ ಎ. ಮಂಜುನಾಥ್ ಜೆಡಿಎಸ್ ಸೇರಿ ಟಿಕೆಟ್ ಪಡೆದು ಗೆಲುವು ಸಾಧಿಸಿದ್ದರು.

ಬಾಲಕೃಷ್ಣಗೆ ಹೆಚ್. ಎಂ. ರೇವಣ್ಣ ಅಡ್ಡಗಾಲು

ಬಾಲಕೃಷ್ಣಗೆ ಹೆಚ್. ಎಂ. ರೇವಣ್ಣ ಅಡ್ಡಗಾಲು

ಈ ಬಾರಿ ಮಾಗಡಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಗೆಲುವಿನ ನಗೆ ಬೀರಬೇಕೆಂಬ ಕನಸನ್ನು ಬಾಲಕೃಷ್ಣ ಅವರು ಕಾಣುತ್ತಿರುವಾಗಲೇ ಹೆಚ್. ಎಂ. ರೇವಣ್ಣ ಅವರು ಮಾಗಡಿಯತ್ತ ಒಲವು ತೋರಿರುವುದು ಬಾಲಕೃಷ್ಣ ಅವರಿಗೆ ಆತಂಕವನ್ನು ತಂದೊಡ್ಡಿದೆ. ಈ ನಡುವೆ ಜೆಡಿಎಸ್‌ನ ಶಾಸಕ ಎ. ಮಂಜುನಾಥ್ ಅವರು ಕೂಡ ಕಾಂಗ್ರೆಸ್ ನಾಯಕ ಹೆಚ್. ಎಂ. ರೇವಣ್ಣ ಪರ ಬ್ಯಾಟ್ ಮಾಡಿರುವುದು ಇರಿಸು ಮುರಿಸಿಗೆ ಕಾರಣವಾಗಿದೆ.

ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ರಾಮನಗರದಲ್ಲಿ ಕಾಂಗ್ರೆಸ್ ಪಕ್ಷ ಪ್ರಾಬಲ್ಯ ಸಾಧಿಸಬೇಕೆನ್ನುವ ಡಿಕೆ ಬ್ರದರ್ಸ್‌ನ ಕನಸು ಈಡೇರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಹೇಗೆ ಮುನ್ನಡೆಯುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಮನಗರ ರಾಜಕೀಯದತ್ತ ಜನ ಕುತೂಹಲದ ನೋಡ ಬೀರುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ.

ರಾಮನಗರದ ರಾಜಕೀಯ ಸದ್ದು ಮಾಡುವುದೇಕೆ?

ರಾಮನಗರದ ರಾಜಕೀಯ ಸದ್ದು ಮಾಡುವುದೇಕೆ?

ಹೇಳಿ ಕೇಳಿ ರಾಮನಗರ ಜಿಲ್ಲೆ ಜೆಡಿಎಸ್ ಕೋಟೆಯಾಗಿದ್ದು, ಇಲ್ಲಿನ ಕ್ಷೇತ್ರಗಳನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಂಸದ ಡಿ. ಕೆ. ಸುರೇಶ್, ಶಾಸಕ ಎ. ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಸಿ. ಎಂ. ಲಿಂಗಪ್ಪ ಪ್ರತಿನಿಧಿಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಮಾಜಿ ಸಚಿವರಾದ ಸಿ. ಪಿ. ಯೋಗೇಶ್ವರ್, ಎಚ್. ಎಂ. ರೇವಣ್ಣ, ಮಾಜಿ ಶಾಸಕ ಎಚ್. ಸಿ. ಬಾಲಕೃಷ್ಣ ಪ್ರಭಾವಿಗಳಾಗಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಎಂಟ್ರಿ ಕೊಟ್ಟಿದ್ದು ಬಿಜೆಪಿಯನ್ನು ಸಂಘಟಿಸುವತ್ತ ಹೆಜ್ಜೆ ಹಾಕಿದ್ದಾರೆ. ಹೀಗಿರುವಾಗ ಯಾವ ನಾಯಕ ಹೇಳಿಕೆ ನೀಡಿದರೂ ಅದು ರಾಮನಗರ ರಾಜಕೀಯದಲ್ಲಿ ಸದ್ದು ಮಾಡುವುದಂತು ನಿಜ.

ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್‌ಗೆ ಪ್ರಾಬಲ್ಯ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾದರೆ, ಕಾಂಗ್ರೆಸ್‌ಗೆ ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ಇನ್ನಷ್ಟು ಕ್ಷೇತ್ರವನ್ನು ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳಬೇಕಾಗಿದೆ. ಇನ್ನು ಬಿಜೆಪಿ ಹೇಗಾದರು ಮಾಡಿ ಒಂದು ಕ್ಷೇತ್ರದಲ್ಲಿಯಾದರೂ ಗೆಲುವು ಪಡೆಯಬೇಕೆಂಬ ಹಠಕ್ಕೆ ಬಿದ್ದಿದೆ. ಹೀಗಾಗಿ ರಾಮನಗರದ ರಾಜಕೀಯ ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ.

English summary
All people eyes on Ramanagara district politics now. District home town for former chief minister H. D. Kumaraswamy and KPCC president D. K. Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X