ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚನ್ನಪಟ್ಟಣದಲ್ಲೂ ಕೆಲಸವಾಗಬೇಕಾದರೆ 40% ಕೊಡಬೇಕು: ಡಿಕೆಶಿ

|
Google Oneindia Kannada News

ಚನ್ನಪಟ್ಟಣ, ಮೇ 12: ಚನ್ನಪಟ್ಟಣದಲ್ಲಿ 40% ಕಮಿಷನ್ ಇಲ್ಲದೆ ಯಾವುದೇ ಕೆಲಸಗಳು ಆರಂಭವಾಗುತ್ತಿಲ್ಲ. ಇದು ಎಲ್ಲ ಕಾರ್ಯಕರ್ತರಿಗೂ ಗೊತ್ತಿದೆ. ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಕೇವಲ ಚನ್ನಪಟ್ಟಣದ ತಹಶೀಲ್ದಾರ್ ನೇಮಕ ವಿಚಾರವಾಗಿ ತಮಟೆ, ನಗಾರಿ ಹಾಕಿಕೊಂಡು ಕಿತ್ತಾಡುತ್ತಿದ್ದಾರೆ. ಇದು ಅವರ ಪಕ್ಷದ ಮಟ್ಟವನ್ನು ತೋರುತ್ತದೆ. ನೀವು ಒಗ್ಗಟ್ಟಿನಿಂದ ಕೆಲಸ ಮಾಡಿ.
ಮುಂದೆ ಯಾರೆಲ್ಲಾ ಪಕ್ಷ ಸೇರಲು ಬಯಸುತ್ತಾರೆ ಎಂಬ ಪಟ್ಟಿ ಮಾಡಿ. ಅವರನ್ನು ಗೌರವಯುತವಾಗಿ ಕಾಣಬೇಕು. ಅವರಿಗೆ ಅಧಿಕಾರ ನೀಡಲು ಆಗದಿದ್ದರೂ ಪ್ರೀತಿ, ವಿಶ್ವಾಸದಿಂದ ನಡೆಸಿಕೊಳ್ಳಬೇಕು. ಬಿಜೆಪಿಯಲ್ಲಿರುವ ಅನೇಕರು ಪಕ್ಷಕ್ಕೆ ಬರಲು ಸಿದ್ಧರಿದ್ದು, ಈಗಲೇ ಏನು ಹೇಳಬೇಡಿ, ಸಮಯ ಬರಲಿ ಎಂದು ಹೇಳುತ್ತಿದ್ದಾರೆ. ನೀವೆಲ್ಲರೂ ಪ್ರತಿ ಬೂತ್ ಮಟ್ಟದಲ್ಲಿ ಹಾಗೂ ಹಳ್ಳಿ, ಹಳ್ಳಿಗೆ ಹೋಗಬೇಕು ಎಂದರು.

ನಾನು ಚನ್ನಪಟ್ಟದಲ್ಲಿ ಈ ಸಭೆ ಮಾಡಲು ನಿರ್ಧರಿಸಿದ್ದೆ. ಆದರೆ ನಾನು, ಸಂಸದ ಸುರೇಶ್ ಹಾಗೂ ಸಿದ್ದರಾಮಯ್ಯ ಅವರು ರಾಜಸ್ಥಾನದ ಉದಯಪುರದಲ್ಲಿ ಒಂದು ವಾರ ನಡೆಯಲಿರುವ ಪಕ್ಷದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಇಲ್ಲಿಯೇ ಮಾಡಿದ್ದೇವೆ. ಚಿಂತನಾ ಸಭೆಯಲ್ಲಿ ಮುಂದಿನ ಚುನಾವಣೆ ಹೇಗೆ ಎದುರಿಸಬೇಕು, ಪಕ್ಷವನ್ನು ಯಾವ ರೀತಿ ಸಂಘಟನೆ ಮಾಡಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ. ಹೀಗಾಗಿ ಸಮಯ ವ್ಯರ್ಥವಾಗಬಾರದು ಎಂದು ಇಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದುವರೆಗೂ ಚನ್ನಪಟ್ಟಣದಲ್ಲಿ ನಮಗೆ ಹೆಚ್ಚಿನ ಸಂಖ್ಯೆ ಬಾರದಿದ್ದರೂ, ಕ್ಷೇತ್ರದ ಜನ ಕಷ್ಟಕಾಲದಲ್ಲಿ ನಮ್ಮ ಪಕ್ಷವನ್ನು ಉಳಿಸಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮಗೆ ಚನ್ನಪಟ್ಟಣದಿಂದ ಉತ್ತಮ ಬೆಂಬಲ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕು, ಜನರ ಕಷ್ಟಕ್ಕೆ ಸ್ಪಂದಿಸುವವರಿಗೆ ಆದ್ಯತೆ ನೀಡಬೇಕು ಎಂಬುದು ನಮ್ಮ ಆಶಯ ಎಂದರು.

Need To Give 40% Commission For Any Work In Channaptna: DK Shivakumar

ರಾಜ್ಯದಲ್ಲಿ ಜನ ಬದಲಾವಣೆ ಬಯಸುತ್ತಿದ್ದು, ಅನೇಕರು ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಈಗ ಅವರ ಹೆಸರು ಹೇಳುವುದಿಲ್ಲ. ಕಳೆದ 2 ವರ್ಷಗಳಿಂದ ಮಾಜಿ ಶಾಸಕರಾದ ರಾಜು ಸೇರಿದಂತೆ ಅನೇಕ ನಾಯಕರನ್ನು ಸೇರಿಸಿಕೊಂಡಿದ್ದೇವೆ. ನಮ್ಮ ಪಕ್ಷ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದು, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ತನ್ನದೇ ಆದ ಅಸ್ತಿತ್ವ ಹೊಂದಿದೆ. ಕಾರಣಾಂತರಗಳಿಂದ ನಾನು ಈ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಆಗಲಿಲ್ಲ. ಆದರೆ ಲೋಕಸಭಾ ಸದಸ್ಯರು ನಿಮಗೆ ಸಮಯ ಕೊಟ್ಟು, ಕಾರ್ಯಕರ್ತರಿಗೆ ಶಕ್ತಿ ತುಂಬುತ್ತಿದ್ದಾರೆ. ತಾವುಗಳು ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಉತ್ತಮ ಸಾಧನೆ ಮಾಡಿದ್ದು, ಅಭಿಯಾನದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆಗಳು. ಇಡೀ ದೇಶದಲ್ಲಿ ಕರ್ನಾಟಕ 78 ಲಕ್ಷ ಸದಸ್ಯತ್ವ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ. ಕಾಂಗ್ರೆಸ್ ಸೇರ್ಪಡೆಗೆ ಬಹಳ ಅರ್ಜಿಗಳು ಬಾಕಿ ಇದ್ದು, ಮಾರ್ಗಸೂಚಿ ಅನುಸರಿಸುತ್ತಿರುವುದರಿಂದ ತಡವಾಗುತ್ತಿದೆ ಎಂದರು.

ಚನ್ನಪಟ್ಟಣದಲ್ಲಿ ಮತಗಳು ಕಡಿಮೆ, ಗೆಲ್ಲಲು ಸಾಧ್ಯವಿಲ್ಲ ಎಂದು ನೀವ್ಯಾರು ಭಾವಿಸಬೇಡಿ. ಮತದಾರರು ಎಲ್ಲರಿಗೂ ಅವಕಾಶ ಕೊಟ್ಟಿದ್ದು, ಅಲ್ಲಿ ಸಾಧನೆ ಆಗಿಲ್ಲ ಎಂದು ಜನರಿಗೆ ಗೊತ್ತಿದೆ. ಗುತ್ತಿಗೆ ವಿಚಾರವಾಗಿ ಏನಾಗಿದೆ ಎಂದು ಜನರಿಗೆ ಗೊತ್ತಿದೆ. ಅದನ್ನು ಈ ವೇದಿಕೆಯಲ್ಲಿ ಚರ್ಚೆ ಮಾಡುವುದಿಲ್ಲ. ಕಾಂಗ್ರೆಸ್ ಗೆ ದುಡಿಯುವುದಾಗಿ ಪ್ರಸನ್ನ ಅವರು ಬೇಷರತ್ತಾಗಿ ಪಕ್ಷ ಸೇರುತ್ತಿದ್ದಾರೆ. ಅವರನ್ನು ಸ್ವಾಗತಿಸುತ್ತೇನೆ. ಇನ್ನು ಬಿಜೆಪಿಯಿಂದ, ಕುಮಾರ್, ಶಾಶ್ವತ್, ಸಂತೋಷ್, ಪ್ರಕಾಶ್, ಪ್ರದೀಪ್ ಪಕ್ಷ ಸೇರಿದ್ದಾರೆ. ಚನ್ನಪಟ್ಟಣದ ಇನ್ನು ಸಾಕಷ್ಟು ಜನ ನನ್ನ ಸಂಪರ್ಕದಲ್ಲಿದ್ದು, ಚನ್ನಪಟ್ಟದಲ್ಲೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು. ನೀವೆಲ್ಲರೂ ಸೇರಿ ಒಗ್ಗಟ್ಟಿನಿಂದ ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದರು.

ಪಕ್ಷದ ಸಿದ್ಧಾಂತ, ಕಾರ್ಯಕ್ರಮದ ಮೇಲೆ ನಾವು ಚುನಾವಣೆ ಮಾಡೋಣ. ಜನ ಮೈತ್ರಿ ಸರ್ಕಾರ ಹಾಗೂ ಬಿಜೆಪಿ ಸರ್ಕಾರವನ್ನೂ ನೋಡಿದ್ದಾರೆ. ರಾಜ್ಯಾದ್ಯಂತ ನಾವು ಸಮೀಕ್ಷೆ ಮಾಡಿದ್ದು, ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಬಿಜೆಪಿ ಸರ್ಕಾರ ಅಭಿವೃದ್ಧಿ ಬಗ್ಗೆ ಗಮನ ಹರಿಸದೇ ಭಾವನಾತ್ಮಕ, ಕೋಮು ವಿಚಾರವನ್ನು ಮುಂದೆ ತರುತ್ತಿದ್ದಾರೆ. ಬಿಜೆಪಿ ಸರ್ಕಾರ ಈಗಲೂ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗುತ್ತಿದೆ. ಈ ಕಾಯ್ದೆ ಹಾಗೂ ಬಸವಣ್ಣನವರ ತತ್ವ ಬಹಳ ಭಿನ್ನವಾಗಿದೆ. ಚನ್ನಪಟ್ಟಣ, ಕನಕಪುರದಲ್ಲಿ ಯಾರಾದರೂ ಮತಾಂತರವಾಗಿದ್ದಾರಾ? ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ವಿಚಾರ ತರುತ್ತಾರೆ. ನಾವು ಹೇಗೆ ವಿರೋಧಿಸಬೇಕೋ ಹಾಗೆ ವಿರೋಧಿಸುತ್ತೇವೆ.

Need To Give 40% Commission For Any Work In Channaptna: DK Shivakumar

ಇನ್ನು ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯ್ತಿ ಚುನಾವಣೆ ಎದುರಾಗಬಹುದು. ಹೀಗಾಗಿ ನೀವೆಲ್ಲರೂ ಅದಕ್ಕೆ ಸಿದ್ಧತೆ ಮಾಡಿಕೊಳ್ಳಿ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲೆ ವಿಶ್ವಾಸ ಇಟ್ಟು, ಪಕ್ಷದ ಸಿದ್ಧಾಂತ ಒಪ್ಪಿ ಬಂದ ಎಲ್ಲರಿಗೂ ಸ್ವಾಗತ ಬಯಸುತ್ತೇನೆ ಎಂದರು.

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಇಂದು ಚನ್ನಪಟ್ಟದ ಪಾಲಿಗೆ ವಿಶೇಷ ದಿನ. ಎಲ್ಲಾ ನಾಯಕರೂ ಕಾಂಗ್ರೆಸ್ ಪಕ್ಷ ಗಟ್ಟಿಗೊಳಿಸಲು ತೀರ್ಮಾನಿಸಿ, ಪ್ರಸನ್ನ ಅವರ ನೇತತ್ವದಲ್ಲಿ ಸಾಕಷ್ಟು ಜನ ಆಗಮಿಸಿದ್ದೀರಿ. ಪ್ರಸನ್ನ ಅವರು ಹಾಗೂ ಅವರೊಂದಿಗೆ ಬಂದಿರುವ ಎಲ್ಲ ಮುಖಂಡರಿಗೂ ಸ್ವಾಗತ ಕೋರುತ್ತೇನೆ. ಚುನಾವಣೆಗೆ 11ತಿಂಗಳು ಬಾಕಿ ಇದ್ದು, ಯಾವುದೂ ಅಸಾಧ್ಯವಲ್ಲ. ನಿಮ್ಮಲ್ಲಿ ಶಕ್ತಿ ಇದ್ದು, ನಿಮ್ಮ ಆಲೋಚನೆಯನ್ನು ಪಕ್ಷ ಸಂಘಟನೆಗೆ ಸರಿಯಾಗಿ ಬಳಸಿಕೊಳ್ಳಿ. ಚನ್ನಪಟ್ಟಣ ಕ್ಷೇತ್ರದ ಪ್ರತಿ ಹಳ್ಳಿಯ ಮುಖಂಡರು ಡಿ.ಕೆ. ಶಿವಕುಮಾರ್ ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದು, ಅವರಿಗೆ ಗೌರವ ತಂದುಕೊಡಲು ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮ ಮೇಲಿದೆ. ಜತೆಗೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು.

ರಮ್ಯಾ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಮಾಜಿ ಸಂಸದೆ ರಮ್ಯಾ ಅವರ ಟ್ವೀಟ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ ಅವರು, 'ನನಗೆ ಯಾವುದೇ ವಿಚಾರ ತಿಳಿದಿಲ್ಲ. ಎಂ.ಬಿ. ಪಾಟೀಲ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರು. ರಮ್ಯಾ ಅವರು ಪಕ್ಷದ ಮಾಜಿ ಸಂಸದೆ. ಇಬ್ಬರೂ ನಮಗೆ ಬೇಕಾದವರು. ಎಲ್ಲಿ, ಏನು ಅಪಾರ್ಥವಾಗಿದೆಯೋ ತಿಳಿದಿಲ್ಲ. ನಮ್ಮ ಮನೆಗೆ ಬಂದು ಅಶ್ವತ್ಥ್ ನಾರಾಯಣ್ ಅವರು ಎಂ.ಬಿ ಪಾಟೀಲ್ ಅವರ ಮನೆಗೆ ಹೋಗಿದ್ದಾರೆ ಎಂದಿದ್ದಕ್ಕೆ ನಾನು ರಕ್ಷಣೆಗೆ ಹೋಗಿರಬಹುದು ಎಂದು ಹೇಳಿದ್ದೇನೆ. ಇದರ ಹೊರತಾಗಿ ಬೇರೇನೂ ವಿಚಾರವಿಲ್ಲ. ಅನಗತ್ಯ ರಂಪಾಟ ಬೇಡ. ಯಾರಿಗೆ ಯಾವ ವಿಚಾರವಾಗಿ ನೋವಾಗಿದೆಯೋ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಬಹಿರಂಗವಾಗಿ ಚರ್ಚೆ ಮಾಡಲು ಸಿದ್ಧವಿಲ್ಲ.

ಸದ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಅಕ್ರಮವನ್ನು ಮುಚ್ಚಿಹಾಕುವ ಪ್ರಯತ್ನದ ಬಗ್ಗೆ ಚರ್ಚೆ ಮಾಡೋಣ. ಪಿಎಸ್ಐ ಹಗರಣ, ಎಫ್ ಡಿಎ, ಕಿರಿಯ ಇಂಜಿನಿಯರ್ ನೇಮಕ ವಿಚಾರದಲ್ಲಿ ಏನಾಗಿದೆ ಎಂದು ತನಿಖೆ ಆಗಲಿ. ಈಗಾಗಲೇ ಬಂಧಿತರು ಜೆಇ ಹುದ್ದೆ ಅಕ್ರಮದಲ್ಲೂ ಭಾಗಿಯಾಗಿರುವುದಾಗಿ ಹೇಳಿಕೆ ನೀಡಿದ್ದರೂ ಅದನ್ನು ಪಕ್ಕಕ್ಕಿಟ್ಟು ಪಿಎಸ್ ಐ ವಿಚಾರವನ್ನು ಮಾತ್ರ ತನಿಖೆ ಮಾಡುತ್ತಿದ್ದಾರೆ. ಇದು ದೊಡ್ಡ ಡೀಲ್, 300 ಕೋಟಿ ರು. ಅವ್ಯವಹಾರ ನಡೆದಿದೆ ಎಂಬ ಕುಮಾರಸ್ವಾಮಿ ಅವರ ಆರೋಪದಲ್ಲಿ ಸತ್ಯಾಂಶವಿದೆ. ಈ ವಿಚಾರದಲ್ಲಿ ಚಿಂತನೆ ಮಾಡಬೇಕು ಎಂದು ಒತ್ತಾಯ ಮಾಡುತ್ತೇವೆ' ಎಂದರು.

Need To Give 40% Commission For Any Work In Channaptna: DK Shivakumar

ಪಿಎಸ್ಐ ಹಾಗೂ ಇತರೆ ನೇಮಕಾತಿ ಅಕ್ರಮ ವಿಚಾರದಲ್ಲಿ ಸರ್ಕಾರ ಮೌನವಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ನಾವು ಮೌನ ವಹಿಸಿಲ್ಲ. ಜನರ ಗಮನವನ್ನು ಈ ವಿಚಾರದಿಂದ ಬೇರೆಡೆ ಸೆಳೆಯಲು ಈ ಎಲ್ಲ ವಿಚಾರಗಳು ಬರುತ್ತಿವೆ. 40 ಪರ್ಸೆಂಟ್ ಕಮಿಷನ್, ನೇಮಕಾತಿ ಅಕ್ರಮ ನಮ್ಮ ಪ್ರಮುಖ ಅಜೆಂಡಾ. ಪಿಎಸ್ಐ ಅಕ್ರಮದಲ್ಲಿ ಕೇವಲ ಅಭ್ಯರ್ಥಿಗಳನ್ನು ಬಂಧಿಸಿದರೆ ಸಾಲದು, ನೀವು ಅಕ್ರಮದ ಅಂಗಡಿ ತೆರೆದಿದ್ದಕ್ಕೆ ಅವರು ಬಂದಿದ್ದಾರೆ. ಈ ಅಕ್ರಮದ ಅಂಗಡಿ ತೆರೆಯಲು ಬೆಂಬಲ ನೀಡಿದ ಪ್ರಮುಖರ ಹೆಸರು ಬಹಿರಂಗವಾಗಲಿ. ಯಾರು ಎಷ್ಟು ಜನರಿಗೆ ಬೆಂಬಲ ನೀಡಿದ್ದಾರೆ. ಯಾರ ಕಚೇರಿಯಿಂದ ಯಾರಿಗೆ ಎಷ್ಟು ಕರೆ ಹೋಗಿದೆ ಎಂಬ ಮಾಹಿತಿ ನಮ್ಮ ಬಳಿ ಇವೆ. ಸರ್ಕಾರ ತನಿಖೆಯನ್ನು ಯಾವ ರೀತಿ ಮಾಡುತ್ತದೆಯೋ ಮಾಡಲಿ. ಸಮಯ ಬಂದಾಗ ನಾವು ಮಾತನಾಡುತ್ತೇವೆ' ಎಂದರು.

ದಿನನಿತ್ಯ ಅಶ್ವತ್ಥ್ ನಾರಾಯಣ್ ಅವರು ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, 'ಮಾತನಾಡಲಿ, ಅವರು ನನ್ನ ಬಗ್ಗೆ ಮಾತನಾಡಿದರೆ ಅವರಿಗೆ ಅವರ ಪಕ್ಷದಲ್ಲಿ ಶಕ್ತಿ ಬರುತ್ತದೆ' ಎಂದು ತಿರುಗೇಟು ಕೊಟ್ಟರು.

English summary
No work is started without a 40% commission in Channapatna. This is known to all activists: DK Shivkumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X