ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಹೈಕಮಾಂಡ್ ಬಿಡದಿಯಲ್ಲಿದೆ; ನಾಗಪುರ, ದೆಹಲಿಯಲ್ಲಿಲ್ಲ: ಎಚ್‌ಡಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 4: "ಬಿಜೆಪಿ ಹೈಮಾಂಡ್ ನಾಗಪುರದಲ್ಲಿದೆ, ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿದೆ. ಆದರೆ ಜೆಡಿಎಸ್ ಹೈಕಮಾಂಡ್ ಕರ್ನಾಟಕದ ಬಿಡದಿಯಲ್ಲಿದೆ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರಾಮನಗರದ ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಜನತಾ ಪರ್ವ 1.0 ಹಾಗೂ ಮಿಷನ್- 123 ಕಾರ್ಯಾಗಾರದ ಆರನೇ ದಿನ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾಜಿ ಸಿಎಂ ಎಚ್‌ಡಿಕೆ ಮಾತನಾಡಿದರು.

ರಸ್ತೆ ಗುಂಡಿ ಮುಚ್ಚಲು ಇಟ್ಟಿದ್ದ 20,000 ಕೋಟಿ ರೂ. ಎಲ್ಲಿ ಹೋಯಿತು?: ಎಚ್‌ಡಿಕೆ ಪ್ರಶ್ನೆ ರಸ್ತೆ ಗುಂಡಿ ಮುಚ್ಚಲು ಇಟ್ಟಿದ್ದ 20,000 ಕೋಟಿ ರೂ. ಎಲ್ಲಿ ಹೋಯಿತು?: ಎಚ್‌ಡಿಕೆ ಪ್ರಶ್ನೆ

"ನಿಮ್ಮ ಕೂಗಳತೆಯಲ್ಲಿ ನಿಮ್ಮ ಪಕ್ಷದ ವರಿಷ್ಠ ನಾಯಕರು ಇದ್ದಾರೆ. ಕಾರ್ಯಕರ್ತರು ಹೈಕಮಾಂಡ್ ನೋಡಲು ವಿಮಾನ ಹತ್ತಿ ದೆಹಲಿಗೆ ಹೋಗಬೇಕಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಬೇಕಿಲ್ಲ," ಎಂದು ಅವರು ಹೇಳಿದರು.

 ರಾಜಕೀಯವಾಗಿ ಜಿಗುಪ್ಸೆಗೊಂಡಿದ್ದೆ

ರಾಜಕೀಯವಾಗಿ ಜಿಗುಪ್ಸೆಗೊಂಡಿದ್ದೆ

"ಕಾಂಗ್ರೆಸ್ ಜತೆ ಮೈತ್ರಿ ಸರಕಾರ ಬಿದ್ದ ಮೇಲೆ ನಾನು ಈ ರಾಜಕೀಯದ ಬಗ್ಗೆ ಜಿಗುಪ್ಸೆಗೊಂಡಿದ್ದೆ. ಪರಸ್ಪರ ಕಾಲೆಳೆಯುವ ಪ್ರವೃತ್ತಿ ಕಂಡು ನನಗೆ ರಾಜಕೀಯ ಸಾಕೆನಿಸಿತ್ತು. ನನಗೆ ನೆಮ್ಮದಿ ಬೇಕಿತ್ತು, ಹಾಗಾಗಿ ಬಿಡದಿಯ ತೋಟ ಸೇರಿಕೊಂಡೆ," ಎಂದರು.

"ಸಮ್ಮಿಶ್ರ ಸರಕಾರ ಹೋಗುತ್ತದೆ ಅಂತ ನಂಗೆ ಗೊತ್ತಿತ್ತು. ಜನತೆಯ ಕೆಲಸ ಮಾಡಲು ಹೆಜ್ಜೆ ಹೆಜ್ಜೆಗೂ ಅಡ್ಡಿಗಳು, ಒತ್ತಡಗಳು. ಯಾವುದೇ ಸಂದರ್ಭದಲ್ಲೂ ಸರಕಾರ ಹೋಗುತ್ತದೆ ಅಂತ ಗೊತ್ತಿದ್ದೂ ನಾನು ಅಮೆರಿಕಕ್ಕೆ ಹೋದೆ. ಅಂತಹ ಹಂಗಿನ ಸರಕಾರ ನನಗೆ ಬೇಕಿರಲಿಲ್ಲ. ಮುಂದಿನ ಸಲ ಇದೇ ರೀತಿಯ ಅತಂತ್ರ ಸ್ಥಿತಿ ಬಂದರೆ ಮುಂದೆಂದೂ ನಾನು ಮತ ಕೇಳಲು ಬರುವುದಿಲ್ಲ. ಸರ್ಕಾರ ಹೋದ ಮೇಲೆ ನಾನು ಬಿಡದಿ ತೋಟಕ್ಕೆ ಬಂದ ಮೇಲೆ ದಿನವೂ ಕಾರ್ಯಕರ್ತರು ಬರುತ್ತಿದ್ದರು. ಪಕ್ಷದ ಮೇಲಿನ ಅವರ ಪ್ರೀತಿ, ಬದ್ಧತೆ ನನ್ನ ರಾಜಕೀಯ ನಿವೃತ್ತಿಯ ನಿರ್ಧಾರವನ್ನು ಬದಲಿಸಿತು," ಎಂದು ಎಚ್‌ಡಿಕೆ ತಮ್ಮ ಮನದಾಳವನ್ನು ಹಂಚಿಕೊಂಡರು.

 ನನ್ನ ಅದೃಷ್ಟದ ನೆಲ ಬಿಡದಿ ತೋಟ

ನನ್ನ ಅದೃಷ್ಟದ ನೆಲ ಬಿಡದಿ ತೋಟ

"ಬಿಡದಿಯಲ್ಲಿ ನೀವು ಕೂತಿರುವ ಈ ಜಾಗ ಹಾಗೂ ಈ ತೋಟ ನನ್ನ ಪಾಲಿನ ಪುಣ್ಯಭೂಮಿ. ನನ್ನ ಕಷ್ಟದ ದುಡಿಮೆಯಿಂದ 1983ರಲ್ಲಿ ಈ ಭೂಮಿಯನ್ನು ಖರೀದಿ ಮಾಡಿದೆ. ಕೃಷಿ ಮಾಡುವ ಉದ್ದೇಶ ನನಗಿತ್ತು. ಆದರೆ ಈ ಭೂಮಿ ನನ್ನನ್ನು ರಾಜಕೀಯಕ್ಕೆ ಎಳೆದು ತಂದಿತು.'

"ಒಂದು ದಿನ ನನ್ನನ್ನು ದೊಡ್ಡ ಸಂಖ್ಯೆಯ ಕಾರ್ಯಕರ್ತರು ತೋಟಕ್ಕೆ ಬಂದರು. ಅವರು ಒತ್ತಾಯ ಮಾಡಿ ಹೀಗೆ ಹೇಳಿದರು. ನೀವು ಬಿಡದಿಯಲ್ಲಿ ಮನೆ ಹೊಂದಿದ್ದೀರಿ. ಆದರೆ, ರಾಮನಗರದಲ್ಲಿ ಜೆಡಿಎಸ್ 3ನೇ ಸ್ಥಾನದಲ್ಲಿದೆ. ಪಕ್ಷಕ್ಕಾಗಿ ತಾವು ಕೆಲಸ ಮಾಡಬೇಕು. ನಮಗೆ ಮಾರ್ಗದರ್ಶನ ಮಾಡಬೇಕು ಎಂದಾಗ ನಾನು ಅವರ ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬರಬೇಕಾಯಿತು."

 ದೇವೇಗೌಡರು ರಾಮನಗರದಿಂದ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿಯಾದರು

ದೇವೇಗೌಡರು ರಾಮನಗರದಿಂದ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿಯಾದರು

"ಆಗ ತಂದೆಯವರು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಬೇಕು ಎಂದು ವರದೇಗೌಡರು ಭಾರೀ ಒತ್ತಡ ಹೇರಿದರು. ಆದರೆ ನಾನು ರಾಮನಗರದಲ್ಲಿ ಕಣಕ್ಕೆ ಇಳಿಯುವಂತೆ ಮನವಿ ಮಾಡಿದೆ. ಆಗ ದೇವೇಗೌಡರು ರಾಮನಗರದಿಂದ ಸ್ಪರ್ಧಿಸಿ ಗೆದ್ದು ಸಿಎಂ ಆದರು. ಒಂದು ವೇಳೆ ಆ ಘಟನೆ ನಡೆದಿರದ್ದರೆ ನಾನಿಂದು ಇಲ್ಲಿ ನಿಂತು ಮಾತನಾಡುವ ಅವಕಾಶವೇ ಇರುತ್ತಿರಲಿಲ್ಲ."

"ದೇವರ ಪ್ರೇರಣೆಯಿಂದ ನಾನು ಈ ಭೂಮಿ ಖರೀದಿ ಮಾಡಿದೆ ಎಂದು ಮತ್ತೆ ಹೇಳ ಬಯಸುತ್ತೇನೆ. ಅದೇ ನಂಬಿಕೆ, ಪ್ರೇರಣೆಯಿಂದ ಇಲ್ಲೇ ಈ ಕಾರ್ಯಾಗಾರ ನಡೆಯುತ್ತಿದೆ. ಪಕ್ಷದ ಕಚೇರಿಯಲ್ಲಿ ಅಥವಾ ರೆಸಾರ್ಟ್‌ನಲ್ಲಿ ಮಾಡಬಹುದಿತ್ತು. ನಾನು ಹಾಗೆ ಮಾಡದೆ ಈ ಮಣ್ಣಿನ ಮಡಿಲಲ್ಲಿ ಈ ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಿದೆ."

 ಸಿಎಂ ಗಾದಿಗಲ್ಲ ಕಾರ್ಯಗಾರ, ಜನರ ಭವಿಷ್ಯಕ್ಕೆ

ಸಿಎಂ ಗಾದಿಗಲ್ಲ ಕಾರ್ಯಗಾರ, ಜನರ ಭವಿಷ್ಯಕ್ಕೆ

"ಈ ಕಾರ್ಯಾಗಾರ ಸ್ಥಳದ, ಈ ಎರಡೂವರೆ ಎಕರೆ ಜಾಗದಲ್ಲಿ ನನ್ನ ತಂದೆ- ತಾಯಿ ಹೆಸರಿನಲ್ಲಿ ಶಾಶ್ವತವಾದ ಒಂದು ಅನಾಥಾಶ್ರಮ, ಒಂದು ದೇಗುಲ ಹಾಗೂ ಎಂದು ಛತ್ರ ಕಟ್ಟುವ ಉದ್ದೇಶ ನನ್ನದು. ಅದನ್ನು ಮಾಡಲು ಈ ಕಾರ್ಯಕ್ರಮದ ಜಾಗ ಮೀಸಲು ಇಟ್ಟಿದ್ದೇನೆ. ಇದು ಎಲ್ಲರಿಗೂ ಮುಕ್ತವಾಗಿರುತ್ತದೆ. ಇಂತಹ ಜಾಗದಿಂದಲೇ ಪಕ್ಷ ಮತ್ತೆ ಪುಟಿದೇಳುತ್ತಿದೆ. ಈಗ ಎಲ್ಲವೂ ಶುಭಾರಂಭ ಆಗಿದೆ. ಇನ್ನು ಮುಂದುವರೆಸಿಕೊಂಡು ಹೋಗಬೇಕಿದೆ. ಅದನ್ನು ಎಲ್ಲರೂ ಚಾಚೂ ತಪ್ಪದೇ ಮಾಡಬೇಕಿದೆ."

"ಮುಂದೆ ನಾನು ಮುಖ್ಯಮಂತ್ರಿ ಆಗುವ ಉದ್ದೇಶಕ್ಕೆ ಮಾಡುತ್ತಿರುವ ಕಾರ್ಯಾಗಾರ ಇದಲ್ಲ. ರಾಜ್ಯದ ಭವಿಷ್ಯಕ್ಕಾಗಿ ಇದು. ಎಲ್ಲರೂ ಯೋಧರಂತೆ ಕೆಲಸ ಮಾಡಬೇಕು. ರಾಷ್ಟ್ರೀಯ ಪಕ್ಷಗಳು ದಲಿತ- ಹಿಂದುಳಿದ ಜನರಿಗೆ ಮಾಡಿದ್ದೇನು? ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿ ಸರಕಾರ ಹಾಗೂ ಸಿದ್ದರಾಮಯ್ಯ ಸರಕಾರ ಈ ಜನರಿಗೆ ಕೊಟ್ಟಿದ್ದೇನು ಇಲ್ಲ. ಐದು ವರ್ಷ ಸಿಎಂ ಆಗಿದ್ದ ಅವರು ಎಷ್ಟೆಲ್ಲ ಮಾಡಬೇಕಿತ್ತು, ಆದರೆ ಮಾಡಲಿಲ್ಲ."

 ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ಮಾಡುವ ಉದ್ದೇಶ

ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ಮಾಡುವ ಉದ್ದೇಶ

"ಸಿದ್ದರಾಮಯ್ಯ 85,000 ಕೋಟಿ ರೂಪಾಯಿ ಹಣವನ್ನು ದಲಿತ ಸಮುದಾಯದ ಉದ್ಧಾರಕ್ಕೆ ಕೊಟ್ಟಿದ್ದೇವೆ ಎಂದು ಹೇಳಿದ್ದರು. ಆದರೆ ಆಗಿದೆಯಾ? ಯಾರಿಗೆ ಹೋಯಿತು ಆ ದುಡ್ಡು? ಗಂಗಾ ಕಲ್ಯಾಣ ಯೋಜನೆಯಲ್ಲೂ 2016ರಿಂದ ಯಾರಿಗೂ ಉಪಯೋಗವಾಗಿಲ್ಲ. ನಿಜವಾದ ಒಬ್ಬ ಫಲಾನುಭವಿಯನ್ನೂ ಗುರುತಿಸಿಲ್ಲ."

"ಇನ್ನು ನರೇಂದ್ರ ಮೋದಿ ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಎಲ್ಲವನ್ನೂ ಆರ್‌ಎಸ್‌ಸ್ ನಿರ್ಧಾರ ಮಾಡುತ್ತದೆ. ಸೂಪರ್ ಹೈಕಮಾಂಡ್ ಆಗಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ."

"ಶಿಕ್ಷಣ, ಆರೋಗ್ಯ, ವಸತಿ, ಕೃಷಿ, ಉದ್ಯೋಗ ಕ್ಷೇತ್ರಗಳಲ್ಲಿ ಗುಣಮಟ್ಟದ ಆಮೂಲಾಗ್ರ ಬದಲಾವಣೆ ಮಾಡುವ ಉದ್ದೇಶ ನಮ್ಮದು. 6000 ಪಂಚಾಯಿತಿಗಳಲ್ಲಿ, ರಾಜ್ಯದ ಎಲ್ಲಾ ಹಳ್ಳಿಗಳಲ್ಲೂ ಈ ಬದಲಾಣೆ ಆಗಲಿದೆ. ನಾನು ಹೇಳಿದ್ದೆಲ್ಲಾ ಮಾಡಿದ್ದೇನೆ," ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

 ಹೃದಯ ಇಲ್ಲದ ಸರಕಾರವಿದೆ

ಹೃದಯ ಇಲ್ಲದ ಸರಕಾರವಿದೆ

"ಈಗ ರಾಜ್ಯದಲ್ಲಿ ಅಮಾನುಷ ಸರಕಾರ ಇದ್ದು, ಹೃದಯ ಇಲ್ಲದ ಸರಕಾರ ಇದು. ಕೊರೊನಾದಿಂದ ಪ್ರಾಣ ಬಿಟ್ಟವರ ನೆರವಿಗೆ ಬರಲಿಲ್ಲ. ನೆಲಮಂಗಲ ಘಟನೆ ನೋಡಿ. ನೇಣಿಗೆ ಕೊರಳು ಕೊಟ್ಟ ಆ ಹೆಣ್ಣು ಮಗಳಿಗೆ ಒಂದು ಅನುಕಂಪದ ಕೆಲಸ, ಒಂದಿಷ್ಟು ಪರಿಹಾರ ಕೊಟ್ಟಿದ್ದರೆ ಆ ಮೂರು ಜೀವಗಳು ಉಳಿಯುತ್ತಿದ್ದವು. ಅದನ್ನು ಸರಕಾರ ಮಾಡಲಿಲ್ಲ. ಕೊರೊನಾ ವಾರಿಯರ್ಸ್‌ಗಳು ಸತ್ತರೆ 30 ಲಕ್ಷ ರೂ. ಪರಿಹಾರ ಕೊಡಬೇಕು. ಅದನ್ನು ಕೂಡ ಕೊಟ್ಟಿಲ್ಲ."

"ಇನ್ನು ಕುರಿ ಸತ್ತರೆ 5000 ಕೊಡಲಾಗುವುದು ಎಂದಿದ್ದರು ಸಿದ್ದರಾಮಯ್ಯ. ಬೆಳಗಾವಿಯಲ್ಲಿ ಭೀಮಪ್ಪ ಎಂಬಾತನ 30 ಕುರಿಗಳು ಮಣ್ಣು ಕುಸಿದು ಸತ್ತು ಹೋದವು. ಸಿಎಂ ಕಚೇರಿ ಹತ್ತಿರ ಆತ ಹೋದರೆ ಏನು ಆಗಲಿಲ್ಲ. ಸಿದ್ದರಾಮಯ್ಯ ಕಣ್ಣೆತ್ತಿ ನೋಡಲಿಲ್ಲ. ಕುರುಬ ಸಮುದಾಯದ ವ್ಯಕ್ತಿ ಆತ. ನಾನು 25,000 ರೂಪಾಯಿ ಕೊಟ್ಟು, ಎರಡು ಕುರಿಯನ್ನು ನೀಡಿ ಕಳಿಸಿದೆ," ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

Recommended Video

ದೆಹಲಿಯಲ್ಲಿ ಫ್ಲೈ ಓವರ್ ಕೆಳಗೆ‌ ನುಗ್ಗಿದ‌ ವಿಮಾನ:ವೈರಲ್ ವಿಡಿಯೋ | Oneindia Kannada

English summary
The BJP High Command is in Nagpur, while the Congress High Command is in Delhi. But JDS High Command is in Bidadi, former Chief Minister HD Kumaraswamy said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X