• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರ ಬಿಜೆಪಿಯಲ್ಲಿನ ಮುಸುಕಿನ ಗುದ್ದಾಟಕ್ಕೀಗ ತೆರೆಬೀಳುತ್ತಾ?

|

ರಾಮನಗರ, ಆಗಸ್ಟ್‌ 01: ರಾಮನಗರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಬಲ ಪಕ್ಷಗಳಾಗಿ ಬೆಳೆದು ನಿಂತಿವೆ. ಇಲ್ಲಿ ಬಿಜೆಪಿ ಇನ್ನೂ ಅಸ್ತಿತ್ವ ಕಂಡುಕೊಂಡಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿ ಬಿಜೆಪಿಯನ್ನು ಸಂಘಟಿಸುವ ಕೆಲಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಬೆಳೆಯಬೇಕಿದ್ದರೆ ಅದು ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಅವರಿಂದ ಮಾತ್ರ ಸಾಧ್ಯ ಎಂಬುದು ಬಿಜೆಪಿ ಮುಖಂಡರಿಗೆ ಗೊತ್ತಿಲ್ಲದ್ದೇನಲ್ಲ. ಜತೆಗೆ ಇವತ್ತು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಲ್ಲಿ ಯೋಗೇಶ್ವರ್ ಅವರ ಮಹತ್ವದ ಪಾತ್ರವಿರುವುದನ್ನು ಅಲ್ಲಗಳೆಯುವಂತಿಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಅವರನ್ನು ಸೋಲಿಸಲೇ ಬೇಕೆಂಬ ಹಟಕ್ಕೆ ಬಿದ್ದಿದ್ದ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಜೋಡೆತ್ತುಗಳಂತೆ ಒಂದಾಗಿ ನಿಂತರು. ಪರಿಣಾಮ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಎರಡು ಕಡೆ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುವ ಮೂಲಕ ಸಿ.ಪಿ.ಯೋಗೇಶ್ವರ್ ಸೋಲುವಂತೆ ಮಾಡಿದರು. ಅದಾದ ಬಳಿಕ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಇದು ಸಿ.ಪಿ.ಯೋಗೇಶ್ವರ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಎಚ್ಡಿಕೆ ಮತ್ತು ಡಿಕೆಶಿ ಇಬ್ಬರೂ ರಿಟೈರ್ಡ್ ಕುದುರೆಗಳು; ಸಿ.ಪಿ.ಯೋಗೇಶ್ವರ್

 ಸೋಲಿಗೆ ಪ್ರತಿಕಾರ ತೀರಿಸಿದ ಯೋಗೇಶ್ವರ್

ಸೋಲಿಗೆ ಪ್ರತಿಕಾರ ತೀರಿಸಿದ ಯೋಗೇಶ್ವರ್

ತನ್ನ ಸೋಲಿಗೆ ಕಾರಣವಾದವರು ರಚಿಸಿದ ಮೈತ್ರಿ ಸರ್ಕಾರವನ್ನು ಕೆಳಗಿಳಿಸಲೇಬೇಕೆಂದು ಯೋಗೇಶ್ವರ್ ಅವರು ಏನು ಮಾಡಿದರು? ಬಿಜೆಪಿ ಸರ್ಕಾರ ಹೇಗೆ ಅಸ್ತಿತ್ವಕ್ಕೆ ಬಂತು ಎಂಬುದು ಎಲ್ಲರ ಕಣ್ಣಮುಂದೆಯೇ ಇದೆ. ಅದರ ಋಣ ತೀರಿಸುವ ಸಲವಾಗಿ ಇದೀಗ ಸಿ.ಪಿ.ಯೋಗೇಶ್ವರ್ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಮುಂದೆ ಸಚಿವರಾದರೂ ಅಚ್ಚರಿಪಡಬೇಕಾಗಿಲ್ಲ. ಇದೆಲ್ಲದರ ನಡುವೆ ರಾಮನಗರದಲ್ಲಿ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

 ಜಿಲ್ಲಾ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ

ಜಿಲ್ಲಾ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ

ಆದರೆ ಈ ನಡುವೆ ರಾಮನಗರ ಜಿಲ್ಲಾ ಬಿಜೆಪಿಯಲ್ಲಿ ಒಗ್ಗಟ್ಟು ಮಾಯವಾಗುತ್ತಿರುವುದು ಮತ್ತು ಗುಂಪುಗಾರಿಕೆ ಹೆಚ್ಚಾಗಿರುವುದು ಸಂಘಟನೆಗೆ ಧಕ್ಕೆಯಾಗುವ ಲಕ್ಷಣಗಳು ಕಂಡು ಬಂದಿವೆ. ಇದನ್ನು ಸರಿಪಡಿಸಿ ಪಕ್ಷವನ್ನು ಒಗ್ಗಟ್ಟಾಗಿ ಮುನ್ನಡೆಸುವುದು ಯೋಗೇಶ್ವರ್ ‌ಗೆ ಸವಾಲಾಗಿದೆ. ಜಿಲ್ಲಾ ಬಿಜೆಪಿ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಅದು ಇದೀಗ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಎದುರಲ್ಲೇ ಸ್ಫೋಟವಾಗಿರುವುದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದೆ.

ರಾಮನಗರ ಜಿಲ್ಲಾ ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರು ಎಂಬ ಗುಂಪುಗಾರಿಕೆಯಿರುವುದು ಹೊಸತೇನಲ್ಲ. ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆ ಮುಖ್ಯ. ಹೀಗಾಗಿ ಎಲ್ಲರೂ ತಮ್ಮ ಪ್ರತಿಷ್ಠೆ ಬದಿಗಿಟ್ಟು ಪಕ್ಷಕ್ಕಾಗಿ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ಅದ್ಯಾವುದೂ ಇಲ್ಲಿ ಆಗಲೇ ಇಲ್ಲ.

 ಮಾಜಿ -ಹಾಲಿ ಅಧ್ಯಕ್ಷರಲ್ಲಿ ಗುಂಪುಗಾರಿಕೆ

ಮಾಜಿ -ಹಾಲಿ ಅಧ್ಯಕ್ಷರಲ್ಲಿ ಗುಂಪುಗಾರಿಕೆ

ಈ ಹಿಂದೆ ಜಿಲ್ಲಾಧ್ಯಕ್ಷರಾಗಿದ್ದ ಎಂ.ರುದ್ರೇಶ್ ಅವರಿಗೆ ಪಕ್ಷವನ್ನು ಮುನ್ನಡೆಸಲು ಸಾಧ್ಯವಾಗಲೇ ಇಲ್ಲ. ಸಹಕಾರ ನೀಡಬೇಕಾದವರು ಅದನ್ನು ನೀಡದೆ ಅವರ ವಿರುದ್ಧ ಗುಂಪುಗಾರಿಕೆ ಮಾಡಿದರಲ್ಲದೆ, ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಇಳಿಸಲು ಬೇಕಾದ ಎಲ್ಲ ತಂತ್ರಗಳನ್ನು ಅನುಸರಿಸಿದರು. ಅದರ ಪರಿಣಾಮ ಅವರು ಜಿಲ್ಲಾಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಇದೀಗ ಹುಲುವಾಡಿ ದೇವರಾಜು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಬೆಳವಣಿಗೆಯಿಂದ ಪಕ್ಷದಲ್ಲಿ ಮಾಜಿ ಮತ್ತು ಹಾಲಿ ಅಧ್ಯಕ್ಷರ ನಡುವೆ ಭಿನ್ನಾಭಿಪ್ರಾಯಗಳು ಹೊಗೆಯಾಡುತ್ತಿದ್ದು, ಅದು ಇದೀಗ ರಾಜ್ಯಾಧ್ಯಕ್ಷರ ಎದುರಲ್ಲೇ ಸ್ಫೋಟಗೊಳ್ಳುವಂತಾಗಿದೆ. ಹಾಲಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಅವರು ಹಿಟ್ಲರ್ ದರ್ಬಾರ್ ಮಾಡುತ್ತಿದ್ದಾರೆ ಎಂಬುದು ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಬೆಂಬಲಿಗರ ಆರೋಪ. ಆದರೂ ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ತೇಪೆ ಸಾರಿಸುತ್ತಾ ಬರಲಾಗುತ್ತಿದೆ.

 ರಾಜ್ಯ ನಾಯಕರಿಗೆ ನುಂಗಲಾರದ ತುತ್ತು

ರಾಜ್ಯ ನಾಯಕರಿಗೆ ನುಂಗಲಾರದ ತುತ್ತು

ರಾಜ್ಯದಲ್ಲಿ ಬಿಜೆಪಿ ನಾಯಕರು ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಬಿಜೆಪಿ ಬೆಳೆಸುವ ಕುರಿತಂತೆ ಚಿಂತನೆ ನಡೆಸಿದ್ದು, ಮಂಡ್ಯ ಮತ್ತು ರಾಮನಗರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಾಮನಗರಕ್ಕೆ ಭೇಟಿ ನೀಡಿ ಜಿಲ್ಲಾ ಬಿಜೆಪಿಯಲ್ಲಿರುವ ಅಸಮಾಧಾನ ಶಮನಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಸಂಬಂಧ ನಡೆದ ಸಭೆಯಲ್ಲಿ ಎರಡು ಗುಂಪಿನ ನಾಯಕರು ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈದಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಪಕ್ಷದ ಪದಾಧಿಕಾರಿಗಳ ನೇಮಕದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಲವರು ಕಷ್ಟದ ಪರಿಸ್ಥಿತಿಯಲ್ಲಿ ಪಕ್ಷವನ್ನು ಮುನ್ನೆಡೆಸಿದ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಉದ್ದೇಶಪೂರ್ವಕವಾಗಿ ದೂರ ತಳ್ಳಲಾಗಿದೆ. ಇದರಿಂದ ನಿಷ್ಠಾವಂತ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂಬ ಆರೋಪವನ್ನು ಮಾಡಿದ್ದಾರೆ ಅಲ್ಲದೆ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುವಂತೆಯೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಗಮನಸೆಳೆದಿದ್ದಾರೆ ಎನ್ನಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ರಾಮನಗರದಲ್ಲಿ ಬಿಜೆಪಿಯನ್ನು ಸಂಘಟನೆ ಮಾಡಲೇ ಬೇಕಾಗಿದೆ. ಆದರೆ ಜಿಲ್ಲಾ ಬಿಜೆಪಿಯಲ್ಲಿಯೇ ಭಿನ್ನಾಭಿಪ್ರಾಯಗಳಿರುವುದು ರಾಜ್ಯ ನಾಯಕರಿಗೆ ನುಂಗಲಾರದ ತುತ್ತಾಗಿದೆ.

English summary
The JDS and the Congress have emerged as the dominant parties in Ramanagar. The BJP has not yet found a strong presence here. Now much emphasis has been placed on the work of organizing the BJP in ramanagar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X