ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ; ಮಳೆಯಿಂದ ಜೀವಕಳೆ ಪಡೆದ ಜಲಾಶಯ, ಕೆರೆ-ಕಟ್ಟೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 18; ರಾಜ್ಯಾದಂತ ಸುರಿಯುತ್ತಿರುವ ಮಳೆ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದರೆ, ಮತ್ತೊಂದೆಡೆ ಕೆರೆ ಕಟ್ಟೆಗಳು ಮೈದುಂಬಿವೆ, ಜಲಾಶಯಗಳು, ಕೆರೆ ಕಟ್ಟೆಗಳು ಭರ್ತಿಯಾಗಿ ಜೀವ ಕಳೆ ಪಡೆದುಕೊಂಡಿವೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ, ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಜಲಾಶಯ, ಕಣ್ವ ಜಲಾಶಯಗಳು ತುಂಬಿದ್ದು, ಬಹುತೇಕ ಕೆರೆಕಟ್ಟೆಗಳಲ್ಲಿ ನೀರು ಕಾಣಿಸಿದೆ. ಬತ್ತಿ ಹೋಗಿದ್ದ ನದಿಗಳಲ್ಲೂ ನೀರು ಹರಿಯುತ್ತಿದೆ. ಇದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ರಾಮನಗರ ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದ 16ರ ತನಕ 156.8 ಮಿಲಿಮೀಟರ್ ಮಳೆಯಾಗಿದೆ. ಇದು ವಾಡಿಕೆಗಿಂತ ಶೇ 66 ರಷ್ಟು ಹೆಚ್ಚುವರಿ ಮಳೆಯಾಗಿದೆ. ಹೀಗಾಗಿಯೇ ಜಿಲ್ಲಾದ್ಯಂತ ಕೆರೆಕಟ್ಟೆಗಳು ತುಂಬಲಾರಂಭಿಸಿದೆ. ಅಲ್ಲದೇ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂಗಳಲ್ಲೂ ನೀರು ಶೇಖರಣೆಯಾಗಿದೆ.

ಮಳೆ; ಟೊಮೆಟೋ, ಈರುಳ್ಳಿ ಬೆಲೆ ಭಾರೀ ಏರಿಕೆ ಮಳೆ; ಟೊಮೆಟೋ, ಈರುಳ್ಳಿ ಬೆಲೆ ಭಾರೀ ಏರಿಕೆ

ರಾಮನಗರ ಪಟ್ಟಣದ ಒಳಗೇ ಇರುವ ರಂಗರಾಯರದೊಡ್ಡಿ ಹಾಗೂ ಬೋಳಪ್ಪನಹಳ್ಳಿ ಕೆರೆಗಳಲ್ಲಿ ಹೆಚ್ಚು ನೀರಿನ ಸಂಗ್ರಹವಿದೆ. ಬಿಡದಿ ಪಟ್ಟಣದ ಜನರ ಜೀವನಾಡಿ ನಲ್ಲಿಗುಡ್ಡ ಕೆರೆ 4 ವರ್ಷಗಳ ನಂತರ ತುಂಬಿದ್ದು, ಇನ್ನೇನು ಕೋಡಿ ಬೀಳಲಿದೆ. ಬಿಡದಿ ಹೋಬಳಿಯ ತಮ್ಮನಾಯಕನ ಹಳ್ಳಿಯ ಕೆರೆಯು ಬರಗಾಲದಿಂದಾಗಿ ಸಂಪೂರ್ಣ ಬರಿದಾಗಿ ಹೋಗಿತ್ತು. ಆದರೆ ಸದ್ಯ ಅಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ನೀರಿನ ಸಂಗ್ರಹವಿದೆ. ಇದರಿಂದಾಗಿ ಕೊಕ್ಕರೆಗಳ ಹಿಂಡು ಬೀಡು ಬಿಟ್ಟಿವೆ.

ಅಕ್ಟೋಬರ್ 22ರವರೆಗೂ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಅಕ್ಟೋಬರ್ 22ರವರೆಗೂ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ

ಆಟದ ಮೈದಾನವಾಗಿದ್ದ ಕೆರೆ

ಆಟದ ಮೈದಾನವಾಗಿದ್ದ ಕೆರೆ

ಹತ್ತಾರು ಎಕರೆ ವಿಸ್ತೀರ್ಣದಲ್ಲಿ ಇರುವ ಕೇತೋಹಳ್ಳಿ ಗ್ರಾಮದ ಕೆರೆಯು ಸಹ ಕಳೆದ ಬೇಸಿಗೆಯ ವೇಳೆಗೆ ಸಂಪೂರ್ಣ ಬರಿದಾಗಿ ಆಟದ ಮೈದಾನವಾಗಿತ್ತು. ನಂತರದಲ್ಲಿ ಇಲ್ಲಿನ ಹೂಳನ್ನು ಎತ್ತಿ ಕಾಯಕಲ್ಪ ನೀಡಲಾಗಿತ್ತು. ಈಗ ಭಾರೀ ಮಳೆಯಾಗಿದ್ದು ಕೆರೆಯ ಅಂಗಳ ಸರೋವರದಂತೆ ಕಂಗೊಳಿಸತೊಡಗಿದೆ. ಮೀನುಗಾರಿಕೆಗೂ ಅನುಕೂಲವಾಗಿದೆ.

ಮಂಚನಬೆಲೆ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಎರಡು ಗೇಟ್ ಮೂಲಕ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದಾಗಿ ಅರ್ಕಾವತಿ ನದಿಗೆ ಜೀವ ಕಳೆ ಬಂದಿದೆ. ಒಟ್ಟಾರೆ ಈ ಬಾರಿಯ ವರುಣನ ಕೃಪೆಯಿಂದಾಗಿ ರೇಷ್ಮೆನಾಡಿನ ರೈತರು ಸಂತುಷ್ಟರಾಗಿದ್ದಾರೆ. ಹಾಗೇ ಮುಂದಿನ ದಿನಗಳಲ್ಲಿ ಎಲ್ಲಾ ಕೆರೆಗಳು ತುಂಬಲಿದ್ದು ಉತ್ತಮ ಬೇಸಾಯಕ್ಕೆ ಸಾಕ್ಷಿಯಾಗಲಿದೆ.

ವಿವಿಧ ಕೆರೆಗಳು ಭರ್ತಿ

ವಿವಿಧ ಕೆರೆಗಳು ಭರ್ತಿ

ಚನ್ನಪಟ್ಟಣ ತಾಲೂಕಿನಲ್ಲಿ ಕೂಡ್ಲೂರು ಕೆರೆ ಸಹ ಕೋಡಿ ಬಿದ್ದಿದೆ. ಮತ್ತಿಕೆರೆ ಕೆರೆ ಸಹ ಸದ್ಯದಲ್ಲೇ ಕೋಡಿ ಬೀಳಬಹುದು ಎಂದು ಹೇಳಲಾಗತ್ತಿದೆ. ಕನಕಪುರ ತಾಲೂಕಿನ ನಾರಾಯಣಪ್ಪನ ಕೆರೆ, ಹನುಮನಹಳ್ಳಿ ಕೆರೆ, ಹಾರೋಹಳ್ಳಿ ದೊಡ್ಡಕೆರೆಗಳು, ಎಡಮಾರನಹಳ್ಳಿಕೆರೆ ಅರ್ಧ ತುಂಬಿದ್ದು, ಮಾವತ್ತೂರುಕೆರೆ, ಕಗ್ಗಲಹಳ್ಳಿ ಕೆರೆ ಕೋಡಿ ಬೀಳುವ ಹಂತದಲ್ಲಿದೆ.

ಈ ಬಾರಿಯ ಹಿಂಗಾರು ಮಳೆ ಕೆರೆಕಟ್ಟೆ ಹಾಗೂ ನದಿಗಳಿಗೆ ಜೀವಕಳೆ ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಕೆರೆಗಳೂ ಸಮೃದ್ಧವಾಗಿವೆ. ಹೀಗೆಯೇ ಇನ್ನೂ ಹತ್ತು ಹಲವು ಕೆರೆಗಳು ಜೀವಕಳೆ ಉಳಿಸಿಕೊಂಡು ಗ್ರಾಮೀಣ ಭಾಗದ ಜನರ ಜೀವ ಉಳಿಸುತ್ತಿವೆ. ಬತ್ತಿ ಹೋಗಿದ್ದ ನದಿಗಳಲ್ಲಿ ನೀರು ಕಾಣಿಸತೊಡಗಿದೆ.

ಮೈದುಂಬಿದ ಜಲಾಶಯಗಳು

ಮೈದುಂಬಿದ ಜಲಾಶಯಗಳು

ಮಾಗಡಿ ತಾಲೂಕಿನಲ್ಲಿರುವ ಮಂಚನಬೆಲೆ ಮತ್ತು ಚನ್ನಪಟ್ಟಣದಲ್ಲಿರುವ ಇಗ್ಗಲೂರು ಜಲಾಶಯ ತುಂಬಿದ್ದು, ನೀರು ಹೊರ ಬಿಡಲಾಗುತ್ತಿದೆ. ಚನ್ನಪಟ್ಟಣದ ಕಣ್ವ ಜಲಾಶಯದಲ್ಲಿ ಇನ್ನು 4-5 ಅಡಿ ನೀರು ಬಂದರೆ ಜಲಾಶಯದಿಂದ ನೀರು ಹೊರ ಬಿಡಲಾಗುತ್ತದೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಾವೇರಿ ಜಲಾನಯನ ಪ್ರದೇಶ ತುಂಬಿ ಹರಿಯುತ್ತಿದ್ದು, ಚನ್ನಪಟ್ಟಣ ತಾಲ್ಲೂಕಿನ ಗಡಿಭಾಗದಲ್ಲಿನ ಇಗ್ಗಲೂರು ಗ್ರಾಮದಲ್ಲಿರುವ ಹೆಚ್. ಡಿ. ದೇವೇಗೌಡ ಬ್ಯಾರೇಜ್ ಸಂಪೂರ್ಣ ತುಂಬಿರುವ ಹಿನ್ನಲೆಯಲ್ಲಿ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಶಿಂಷಾ ನದಿಯೂ ತುಂಬಿದೆ

ಶಿಂಷಾ ನದಿಯೂ ತುಂಬಿದೆ

ಇಗ್ಗಲೂರು ಜಲಾಶಯಕ್ಕೆ ನೇರ ಸಂಪರ್ಕವಿರುವ ಶಿಂಷಾ ನದಿಯೂ ತುಂಬಿರುವ ಹಿನ್ನಲೆಯಲ್ಲಿ ಅಡ್ಡಲಾಗಿ ಕಟ್ಟಿರುವ ಮಾರ್ಕೋನಳ್ಳಿ ಡ್ಯಾಂ ಸಹ ತುಂಬಿದೆ. ಹೆಚ್ಚುವರಿ ಹರಿಯುವ ನೀರು ಇದೇ ಬ್ಯಾರೇಜ್ ಸೇರುವ ಮೂಲಕ ಸಂಪೂರ್ಣ ಭರ್ತಿಯಾಗಿದೆ. ಇದರಿಂದಾಗಿ ಚನ್ನಪಟ್ಟಣ ತಾಲೂಕಿನ ರೈತರು ಸಂತಸವಾಗಿದ್ದಾರೆ. ಇಗ್ಗಲೂರು ಜಲಾಶಯ ಸಂಪೂರ್ಣ ತುಂಬಿದ್ದು, ಹೆಚ್ಚುವರಿ ನೀರನ್ನು ಇದೇ ತಾಲೂಕಿನ ಮತ್ತೊಂದು ಜಲಾಶಯ ಕಣ್ವ-ಶಿಂಷಾ ಏತನೀರಾವರಿ ಯೋಜನೆ ಹಾಗೂ ಗರಕಹಳ್ಳಿ ಏತ ನೀರಾವರಿ ಯೋಜನೆಯಡಿ ಹೆಚ್ಚುವರಿ ನೀರನ್ನು ನೂರಾರು ಕೆರೆಗಳಿಗೆ ಭರ್ತಿ ಮಾಡಲಾಗುತ್ತಿದೆ.

Recommended Video

ತನ್ನ ಸ್ಥಾನವನ್ನು KL ರಾಹುಲ್ ಗೆ ದಾನ ಮಾಡಿದ ವಿರಾಟ್ | Oneindia Kannada
ನರೇಗಾ ಯೋಜನೆಯ ಚೆಕ್‌ ಡ್ಯಾಂ

ನರೇಗಾ ಯೋಜನೆಯ ಚೆಕ್‌ ಡ್ಯಾಂ

ರಾಮನಗರ ಜಿಲ್ಲೆಯ ಹಳ್ಳಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂಗಳು ಸಹ ತುಂಬಿವೆ. ಮಳೆನೀರನ್ನು ವ್ಯವಸ್ಥಿತವಾಗಿ ಹಳ್ಳ-ಕೊಳ್ಳ, ಕೆರೆ-ಕಟ್ಟೆ, ಕುಂಟೆಗಳ ಮೂಲಕ ಶೇಖರಿಸಿ ಅಂತರ್ಜಲ ವೃದ್ದಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ ಸುಮಾರು 2 ಸಾವಿರಕ್ಕೂ ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 1 ಸಾವಿರಕ್ಕೂ ಹೆಚ್ಚು ಚೆಕ್ ಡ್ಯಾಂಗಳಲ್ಲಿ ನೀರು ಶೇಖರಣೆಯಾಗಿದೆ.

ಕನಕಪುರ ತಾಲೂಕು ಉಯ್ಯಂಬಳ್ಳಿಯಲ್ಲಿ ಚೆಕ್ ಡ್ಯಾಂ ತುಂಬಿ ಹಳ್ಳದಲ್ಲಿ ನೀರು ಹರಿದಿದ್ದು ಆ ಭಾಗದ ಗ್ರಾಮಸ್ಥರ ಮೊಗದಲ್ಲಿ ಸಂತಸ ತರಿಸಿದೆ. ರಾಮನಗರ ತಾಲೂಕು ಕೈಲಾಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕನಹಳ್ಳಿ ಕೆರೆಯಲ್ಲಿ ಸಂಜೀವಿನ ಸ್ವಸಹಾಯ ಗುಂಪಿನ ಮಹಿಳೆಯರು ನರೇಗಾ ಯೋಜನೆಯಡಿ ಹೂಳು ತೆಗೆದಿದ್ದರು. ಈ ಕೆರೆಯಲ್ಲಿಯೂ ನೀರು ತಂಬಿದೆ. ಚನ್ನಪಟ್ಟಣ ತಾಲೂಕಿನ ಎಲೆತೋಟದಹಳ್ಳಿ ಪಂಚಾಯಿತಿ ವ್ಯಾಪ್ತಿಯ ಅಂಚಿಪುರ ಗ್ರಾಮದಲ್ಲಿ ಇಬ್ಬರು ಖಾಸಗಿ ಜಮೀನುಗಳ ನಡುವಿನ ಹಳ್ಳಗಳನ್ನು ಸಹ ಅಭಿವೃದ್ದಿ ಮಾಡಲಾಗಿತ್ತು. ಈ ಹಳ್ಳಗಳಲ್ಲಿಯೂ ಮಳೆ ನೀರು ಹರಿಯುತ್ತಿದ್ದು, ನರೇಗಾ ಕಾಮಗಾರಿಯಡಿ ಕೈಗೊಂಡ ಕೆಲಸಗಳು ಸಾರ್ಥಕವಾಗಿವೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

English summary
Due to heavy rain in Ramanagara district dam, lake and check dam full in the month of October. Farmers happy with rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X