"ಪ್ರಾಧಿಕಾರಗಳಿಂದ ಸಮುದಾಯದ ಅಭಿವೃದ್ಧಿಯಾಗುವ ನಂಬಿಕೆ ನನಗಿಲ್ಲ"
ರಾಮನಗರ, ನವೆಂಬರ್ 19: ರಾಜ್ಯ ಸರ್ಕಾರ ಮರಾಠ ಮತ್ತು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಒಪ್ಪಿಗೆ ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಗುರುವಾರ ಮಾತನಾಡಿದ ಅವರು, ಅಭಿವೃದ್ಧಿ ಪ್ರಾಧಿಕಾರಗಳಿಂದ ಸಮುದಾಯದ ಅಭಿವೃದ್ಧಿ ಆಗುತ್ತದೆ ಎನ್ನುವ ನಂಬಿಕೆ ನನಗೆ ಇಲ್ಲ. ನಾನು ಈ ವಿಚಾರಕ್ಕೆ ತಲೆ ಹಾಕುವುದಿಲ್ಲ. ಆದರೆ ಬಡ ಜನರ ಬಗ್ಗೆ ಸರ್ಕಾರ ಚಿಂತನೆ ನಡೆಸಲಿ ಎಂದು ಸಲಹೆ ನೀಡಿದ್ದಾರೆ.
ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಒಕ್ಕಲಿಗ ಸಮುದಾಯದಿಂದ ಬೇಡಿಕೆ!
"ಪ್ರಾಧಿಕಾರ ರಚನೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವಂತಿಲ್ಲ. ಎಲ್ಲಾ ಜಾತಿಗಳಿಗೂ ಪ್ರಾಧಿಕಾರ ಮಾಡಿದರೆ, ರಾಜ್ಯದಲ್ಲಿ ಸಣ್ಣ ಪುಟ್ಟದು ಎಂದು ಲೆಕ್ಕ ಹಾಕಿದರೆ 560 ಜಾತಿಗಳಿವೆ. ಹಾಗಿದ್ದರೆ ಎಲ್ಲದಕ್ಕೂ ಪ್ರಾಧಿಕಾರ ಮಾಡಿದರೆ ಒಳ್ಳೆಯದಲ್ಲವ? ವೀರಶೈವರ ಪ್ರಾಧಿಕಾರ ರಚನೆಯಾಗಿದೆ, ಒಕ್ಕಲಿಗರ ಪ್ರಾಧಿಕಾರದ ಬಗ್ಗೆ ಕೆಲವರು ಧ್ವನಿ ಎತ್ತಿದ್ದಾರೆ.ಆದರೆ ನಾನು ಈ ವಿಚಾರಗಳಿಗೆ ತಲೆಹಾಕಲ್ಲ. ಬಡವರ ಬಗ್ಗೆ ಸರ್ಕಾರ ಯೋಚಿಸಲಿ. ಎಲ್ಲಾ ಸಮುದಾಯದಲ್ಲೂ ಬಡವರಿದ್ದಾರೆ" ಎಂದಿದ್ದಾರೆ.
ಇದೇ ವೇಳೆ, ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕೊಳ್ಳೆಗಾಲದ ಹನೂರಿನಲ್ಲಿ ಕಾಂಗ್ರೆಸ್ - ಬಿಜೆಪಿ ಮೈತ್ರಿಯಾಗಿವೆ. ನವಲಗುಂದದಲ್ಲಿಯೂ ಕಾಂಗ್ರೆಸ್ - ಬಿಜೆಪಿ ಮೈತ್ರಿಯಾಗಿವೆ. ಸ್ಥಳೀಯವಾಗಿ ಮೂರು ಪಕ್ಷದವರು ಹೊಂದಾಣಿಕೆಯಾಗುತ್ತಿದ್ದಾರೆ. ಈಗ ಕೆಲವು ಬೈಎಲೆಕ್ಷನ್ ಗಳಿವೆ ಅಷ್ಟೆ. ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಕಾಯಬೇಕಿದೆ ಎಂದು ಹೇಳಿದರು.