ಪದವಿ ಕಾಲೇಜು ತೆರೆಯುವ ವಿಚಾರವಾಗಿ ಸರ್ಕಾರಕ್ಕೆ ಎಚ್ಡಿಕೆ ಸಲಹೆ
ರಾಮನಗರ, ನವೆಂಬರ್ 20: ಕೊರೊನಾ ವೈರಸ್ ಇದ್ದರೂ ಪದವಿ ಕಾಲೇಜು ತೆರೆಯುತ್ತಿರುವ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಸರ್ಕಾರ ಈ ವಿಚಾರವಾಗಿ ಉಡಾಫೆ ಹೊಡೆಯೋದು ಬೇಡ, ಕೊರೊನಾವನ್ನು ಲಘುವಾಗಿ ಪರಿಗಣಿಸಬಾರದು ಎಂದು ಕಿವಿಮಾತು ಹೇಳಿದರು.
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ""ಮುಂದಿನ 2 ತಿಂಗಳು ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ, ಸರ್ಕಾರದ ನಿರ್ಧಾರ ಜನರ ಜೀವನದ ಜೊತೆ ಚೆಲ್ಲಾಟವಾಡಬಾರದು'' ಎಂದು ತಿಳಿಸಿದರು.
"ಪ್ರಾಧಿಕಾರಗಳಿಂದ ಸಮುದಾಯದ ಅಭಿವೃದ್ಧಿಯಾಗುವ ನಂಬಿಕೆ ನನಗಿಲ್ಲ"
ಇದೇ ಸಂದರ್ಭದಲ್ಲಿ ರಾಮನಗರದಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್ಡಿಕೆ, ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದೆ. ಅಷ್ಟರಲ್ಲಿ ಏನೇನು ಆಗುತ್ತದೋ ಯಾರಿಗೆ ಗೊತ್ತು ಎಂದರು.
ನಾನು ನಿಖಿಲ್ ಕುಮಾರಸ್ವಾಮಿಗೆ ಯಾವುದೇ ಒತ್ತಡ ಹಾಕುವುದಿಲ್ಲ. ಪಕ್ಷದ ಕಾರ್ಯಕರ್ತರು, ರಾಮನಗರ ಜನರ ಭಾವನೆ ಗ್ರಹಿಸುತ್ತೇನೆ. ಈಗ ಜಿಲ್ಲೆಯಲ್ಲಿ 3 ಜನ ಜೆಡಿಎಸ್ ಶಾಸಕರಿದ್ದು, ನನಗೆ ಮತ್ತೆ 3 ಶಾಸಕರು ಗೆಲ್ಲಬೇಕು. ಅ ದೃಷ್ಟಿಯಲ್ಲಿ ನಾನು ತೀರ್ಮಾನ ಮಾಡುತ್ತೇನೆ ಎಂದು ನಿಖಿಲ್ ಸ್ಪರ್ಧೆಯ ಸುಳಿವು ನೀಡಿದರು.
ಇದೇ ಸಂದರ್ಭದಲ್ಲಿ ಮರಾಠ ನಿಗಮ ಮಂಡಳಿ ವಿರುದ್ಧ ಡಿಸೆಂಬರ್ 5ಕ್ಕೆ ರಾಜ್ಯ ಬಂದ್ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಹಲವಾರು ಮರಾಠರು ಉಪಕಸಬು ಮಾಡಿಕೊಂಡು ಇದ್ದಾರೆ. ಭಾಷೆ ಮಾತ್ರ ಮರಾಠಿ ಮಾತನಾಡುತ್ತಾರೆ ಎಂದರು.
ಎರಡು-ಮೂರು ಜಿಲ್ಲೆಯಲ್ಲಿ ಮಹಾರಾಷ್ಟ್ರದ ಕ್ಯಾತೆ ಇದೆ. ಅದಕ್ಕಾಗಿಯೇ ನಾನು ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿಸಿದ್ದು, ಆ ಭಾಗದಲ್ಲಿ ಅಧಿವೇಶನ ನಡೆಸಬೇಕೆಂದು ತೀರ್ಮಾನ ಮಾಡಿದ್ದೆ ಎಂದು ಹೇಳಿದರು.
ಚನ್ನಪಟ್ಟಣದಲ್ಲೂ ಮರಾಠಿಗರು ಇದ್ದಾರೆ, ಮಹಾರಾಷ್ಟ್ರದವರ ಸಣ್ಣತನದಿಂದ ಇಲ್ಲಿ ದ್ವೇಷ ಹುಟ್ಟಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮಾತನಾಡಿದರು.