ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ದಶಕದ ನಂತರ ಮೈದುಂಬಿದ ಕಣ್ವ ಜಲಾಶಯ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್ 26; ರಾಮನಗರ ಜಿಲ್ಲೆಯಲ್ಲಿರುವ ಕಣ್ವ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಜಲಾಶಯ ಭರ್ತಿಗೆ ಇನ್ನು ಒಂದೂವರೆ ಅಡಿ ಮಾತ್ರ ಬಾಕಿ ಉಳಿದಿದೆ. ಸುಮಾರು ಎರಡು ದಶಕಗಳಿಂದ ಭರ್ತಿಯಾಗದೆ ಉಳಿದಿದ್ದ ಜಲಾಶಯಕ್ಕೆ ಈಗ ಜೀವಕಳೆ ಬಂದಿದ್ದು, ಅಕಾಲಿಕ ಮಳೆಯಿಂದ ಡ್ಯಾಂ ಭರ್ತಿಯಾಗಿದೆ.

ಕಣ್ವ ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 32 ಅಡಿ. ಸದ್ಯ 30.5 ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 250 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಜಲಾಶಯ ಭರ್ತಿಯಾದರೆ ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು ಹರಿಸಲು ನೀರಾವರಿ ಇಲಾಖೆ ಸಿದ್ಧತೆ ನಡೆಸಿದೆ.

ಮಂಚನಬೆಲೆ ಜಲಾಶಯದಿಂದ ನೀರು ಬಿಡುಗಡೆ; ನದಿ ಪಾತ್ರದ ಜನರಿಗೆ ಎಚ್ಚರಿಕೆಮಂಚನಬೆಲೆ ಜಲಾಶಯದಿಂದ ನೀರು ಬಿಡುಗಡೆ; ನದಿ ಪಾತ್ರದ ಜನರಿಗೆ ಎಚ್ಚರಿಕೆ

ಮಾಗಡಿಯಲ್ಲಿ ಹುಟ್ಟುವ ಕಣ್ವ ನದಿಗೆ 1946ರಲ್ಲಿ ಚನ್ನಪಟ್ಟಣ ತಾಲ್ಲೂಕಿನ ಗಡಿಭಾಗದಲ್ಲಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಸುಮಾರು 776 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಜಲಾಶಯ ತಾಲ್ಲೂಕಿನ ಸಾವಿರಾರು ಹೆಕ್ಟೇರ್ ಜಮೀನಿಗೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ವಯಂ ಚಾಲಿತ ಸೈಫನ್ ವ್ಯವಸ್ಥೆ ಹೊಂದಿರುವ ಜಲಾಶಯಕ್ಕೆ ದಶಕದ ಹಿಂದೆ ಕ್ರಸ್ಟ್ ಗೇಟ್ ಅಳವಡಿಸಲಾಗಿದೆ.

 ರಾಮನಗರ: ಅಕಾಲಿಕ ಮಳೆಗೆ ನಲುಗಿದ ರೈತರು, 27 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ರಾಮನಗರ: ಅಕಾಲಿಕ ಮಳೆಗೆ ನಲುಗಿದ ರೈತರು, 27 ಕೋಟಿ ರೂ. ಮೌಲ್ಯದ ಬೆಳೆ ನಷ್ಟ

ಈ ಹಿಂದೆ 2000ನೇ ಇಸವಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಜಲಾಶಯ ಭರ್ತಿಯಾಗಿ ಸ್ವಯಂಚಾಲಿತ ಸೈಫನ್ ಮೂಲಕ ನೀರು ಕಣ್ವನದಿಗೆ ಹರಿದಿತ್ತು. ಅದಾದ ನಂತರ ಜಲಾಶಯ ಭರ್ತಿಯಾಗಿರಲಿಲ್ಲ. ಮಾಗಡಿಯ ವೈ. ಜಿ. ಗುಡ್ಡ ಜಲಾಶಯ ನಿರ್ಮಾಣವಾದ ನಂತರ ಕಣ್ವ ಜಲಾಶಯಕ್ಕೆ ಎತ್ತರ ಪ್ರದೇಶದಿಂದ ನೀರು ಹರಿಯುವಿಕೆ ಗಣನೀಯವಾಗಿ ಕಡಿಮೆಯಾಗಿ ಜಲಾಶಯ ಬಣಗುಡುವಂತಾಗಿತ್ತು.

ರಾಮನಗರ; ಭಾರೀ ಮಳೆ, ಜೀವ ಕಳೆ ಪಡೆದ ಕಣ್ವ ನದಿ ರಾಮನಗರ; ಭಾರೀ ಮಳೆ, ಜೀವ ಕಳೆ ಪಡೆದ ಕಣ್ವ ನದಿ

ಕಣ್ವ ಜಲಾಶಯ ಭರ್ತಿಯಾಗಿರಲಿಲ್ಲ

ಕಣ್ವ ಜಲಾಶಯ ಭರ್ತಿಯಾಗಿರಲಿಲ್ಲ

ಕಳೆದ ಐದಾರು ವರ್ಷಗಳಿಂದ ಇಗ್ಗಲೂರು ಎಚ್. ಡಿ. ದೇವೇಗೌಡ ಬ್ಯಾರೇಜಿನಿಂದ ಏತ ನೀರಾವರಿ ಮೂಲಕ ಕಣ್ವ ಜಲಾಶಯಕ್ಕೆ ನೀರು ಹರಿಸಲಾಗುತ್ತಿತ್ತಾದರೂ, ಅರ್ಧದಷ್ಟೂ ನೀರು ಸಹ ಸಂಗ್ರಹವಾಗಿರಲಿಲ್ಲ. ಇದೀಗ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿರುವುದರಿಂದ ಜಲಾಶಯ ಭರ್ತಿಯಾಗುವತ್ತ ದಾಪುಗಾಲು ಹಾಕಿದೆ. ಆ ಮೂಲಕ ತಾಲ್ಲೂಕಿನ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಅಪಾಯದಲ್ಲಿರುವ ನದಿ ಪಾತ್ರ

ಅಪಾಯದಲ್ಲಿರುವ ನದಿ ಪಾತ್ರ

ಕಳೆದ 6-7 ವರ್ಷಗಳ ಹಿಂದೆ ನಡೆದ ಅತಿಯಾದ ಮರಳು ಗಣಿಗಾರಿಕೆಯಿಂದಾಗಿ ಕಣ್ವ ನದಿ ತನ್ನ ನೆಲೆಯನ್ನು ಕಳೆದುಕೊಂಡಿದ್ದು, ಜಲಾಶಯ ಭರ್ತಿಯಾಗಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದರೆ ಎಲ್ಲೆಂದರಲ್ಲಿ ನೀರು ಹರಿದು ನದಿಪಾತ್ರದ ಅಕ್ಕಪಕ್ಕದ ಜಮೀನು, ಹಳ್ಳಿಗಳಿಗೆ ನುಗ್ಗುವ ಆತಂಕ ಎದುರಾಗಿದೆ. ನದಿಯ ಪಕ್ಕದ ಜಮೀನುಗಳನ್ನು ಮರಳಿಗಾಗಿ ತೋಡಿರುವ ಕಾರಣದಿಂದ ದೊಡ್ಡ ದೊಡ್ಡ ಕಂದಕಗಳು ಸೃಷ್ಟಿಯಾಗಿವೆ. ನೀರು ಒಮ್ಮೆಲೇ ರಭಸವಾಗಿ ಹರಿದುಬಂದರೆ ನದಿಯ ಅಕ್ಕಪಕ್ಕದ ಜಮೀನುಗಳು, ತೋಟಗಳು ಕೊಚ್ಚಿಹೋಗುವುದು ನಿಶ್ಚಿತವಾಗಿದೆ.

ನದಿ ಪಾತ್ರದ ಜನರಿಗೆ ಎಚ್ಚರಿಕೆ

ನದಿ ಪಾತ್ರದ ಜನರಿಗೆ ಎಚ್ಚರಿಕೆ

ಕಣ್ವ ಜಲಾಶಯ ಭರ್ತಿಯಾಗುವ ಮುನ್ಸೂಚನೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ನದಿಯಂಚಿನ ಗ್ರಾಮಗಳ ಜನರಿಗೆ ಎಚ್ಚರದಿಂದಿರಲು ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮ ಸೂಚನೆ ನೀಡಿದೆ. ಈ ಸಂಬಂಧ ತಾಲ್ಲೂಕು ಆಡಳಿತ, ನದಿಯಂಚಿನ ಗ್ರಾಮಗಳ ಗ್ರಾಮ ಪಂಚಾಯಿತಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದು, ಕಣ್ವ ಯೋಜನಾ ಆಧುನೀಕರಣ ಉಪವಿಭಾಗದ ಅಧಿಕಾರಿಗಳು, ನದಿಪಾತ್ರದ ಜನ ಜಾನುವಾರುಗಳ ಸುರಕ್ಷತೆ ಬಗ್ಗೆ ನಿಗಾ ವಹಿಸುವಂತೆ ತಿಳಿಸಿದ್ದಾರೆ.

ತಾಲ್ಲೂಕಿನ ದಶವಾರ, ತಿಟ್ಟಮಾರನಹಳ್ಳಿ, ಮಳೂರುಪಟ್ಟಣ, ಕೂಡ್ಲೂರು, ಕೋಡಂಬಹಳ್ಳಿ, ಸೋಗಾಲ, ಹಾರೋಕೊಪ್ಪ, ಅಕ್ಕೂರು, ಬಾಣಗಹಳ್ಳಿ, ಎಲೆತೋಟದಹಳ್ಳಿ, ಇಗ್ಗಲೂರು, ವಿರುಪಾಕ್ಷಿಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಣ್ವ ನದಿ ಹಾದು ಹೋಗಲಿದ್ದು, ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಕೈ ಬೀಸಿ ಕರೆಯುತ್ತಿದೆ ಕಣ್ವ ಜಲಾಶಯ

ಕೈ ಬೀಸಿ ಕರೆಯುತ್ತಿದೆ ಕಣ್ವ ಜಲಾಶಯ

ಕಣ್ವ ಮಹರ್ಷಿ ತಪಸ್ಸು ಮಾಡಿದ್ದರು ಎಂಬ ಪ್ರಸಿದ್ಧಿ ಪಡೆದಿರುವ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಣ್ವ ಜಲಾಶಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಪಟ್ಟಣದಿಂದ ಸುಮಾರು 12 ಕಿ. ಮೀ. ದೂರದಲ್ಲಿರುವ ಜಲಾಶಯವನ್ನು 1946ರಲ್ಲಿ ಅಂದಿನ ಮೈಸೂರಿನ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ಅವರು ನಿರ್ಮಿಸಿದ್ದರು. ಸುತ್ತಮುತ್ತಲು ಇರುವ ಆಕರ್ಷಕ ಹಸಿರುಸಿರಿಯ ಬೆಟ್ಟಗುಡ್ಡೆಗಳ ನಡುವೆ ಇರುವ ಜಲಾಶಯ ಪ್ರಾಕೃತಿಕ ಸೌಂದರ್ಯದ ಮಡಿಲು ಎಂಬಂತಿದೆ.

ಕಣ್ವ ಜಲಾಶಯವು ಬೆಂಗಳೂರಿನಿಂದ ರಾಮನಗರ ಮಾರ್ಗವಾಗಿ ಸುಮಾರು 65 ಕಿ. ಮೀ. ದೂರದಲ್ಲಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ತಾಲ್ಲೂಕಿನ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಕೇವಲ 8 ಕಿ. ಮೀ. ದೂರದಲ್ಲಿರುವ ಕಣ್ವ ಜಲಾಶಯದ ಸೊಬಗನ್ನು ವೀಕ್ಷಿಸಲು ಬೆಂಗಳೂರು, ಮೈಸೂರು ಸೇರಿದಂತೆ ದೂರದೂರುಗಳಿಂದ ಪ್ರವಾಸಿಗರ ದಂಡೇ ಆಗಮಿಸುತ್ತದೆ. ಶನಿವಾರ, ಭಾನುವಾರ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುವುದು ಇಲ್ಲಿಯ ವಿಶೇಷ.

ಜಲಾಶಯದ ಪ್ರವೇಶ ದ್ವಾರದವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶವಿದೆ. ಜಲಾಶಯದ ಏರಿಯ ಮೇಲೆ ಪ್ರವೇಶ ನಿಷಿದ್ಧ ಮಾಡಲಾಗಿದೆ. ಜಲಾಶಯದ ಏರಿಯ ಮೇಲೆ ಹಿಂದೆ ಪ್ರವೇಶವಿತ್ತು. ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವ ಆರೋಪ ಕೇಳಿಬಂದ ಮೇಲೆ ಒಳಗೆ ಬಿಡುತ್ತಿಲ್ಲ. ಪ್ರವೇಶ ದ್ವಾರದ ಮುಂದೆ ಹಾಗೂ ಪಕ್ಕ ಸಾಕಷ್ಟು ವಿಶಾಲವಾದ ಜಾಗವಿದ್ದು, ಅಲ್ಲಿ ಜಲಾಶಯವನ್ನು ಕುಳಿತು ವೀಕ್ಷಣೆ ಮಾಡಲು ಸಿಮೆಂಟ್ ಬೆಂಚ್ ಗಳನ್ನು ಹಾಕಲಾಗಿದೆ.

Recommended Video

ಈ 4 ಆಟಗಾರರು ಮಾತ್ರ RCBಯಲ್ಲಿ ಸೇಫ್ | Oneindia Kannada
ಯಾವ ಸಮಯದಲ್ಲಿ ಭೇಟಿ ಉತ್ತಮ

ಯಾವ ಸಮಯದಲ್ಲಿ ಭೇಟಿ ಉತ್ತಮ

ಜಲಾಶಯ ವೀಕ್ಷಣೆಗೆ ಬರುವವರು ಸ್ವಂತ ವಾಹನದಲ್ಲಿ ಬರುವುದೇ ಹೆಚ್ಚು. ಇಲ್ಲಿಗೆ ಸರ್ಕಾರಿ ಬಸ್ ಸೌಲಭ್ಯ ಇಲ್ಲ. ಜಲಾಶಯದ ಹತ್ತಿರವಿರುವ ದಶವಾರ ಗ್ರಾಮದವರೆಗೆ ಮಾತ್ರ ಬಸ್ ಸೌಲಭ್ಯ ಇದೆ. ಅಲ್ಲಿಂದ ಜಲಾಶಯಕ್ಕೆ ಸುಮಾರು 4 ಕಿ. ಮೀ. ದೂರವಿದೆ. ಕೆಂಗಲ್ ಕಡೆಯಿಂದ ಜಲಾಶಯಕ್ಕೆ ಆಗಮಿಸುವ ರಸ್ತೆಯು ಅಲ್ಲಲ್ಲಿ ಗುಂಡಿಬಿದ್ದಿದೆ. ಇಲ್ಲಿಗೆ ಉತ್ತಮ ರಸ್ತೆ ನಿರ್ಮಾಣ ಮೊದಲ ಅವಶ್ಯಕತೆಯಾಗಿದೆ.

ಜಲಾಶಯದ ಬಳಿ ಊಟ, ತಿಂಡಿ ವ್ಯವಸ್ಥೆಗೆ ಯಾವುದೇ ಹೋಟೆಲ್ ಇಲ್ಲ. ಸಣ್ಣಪುಟ್ಟ ಅಂಗಡಿಗಳು ಇವೆ. ಶನಿವಾರ, ಭಾನುವಾರ ಪಾನಿಪೂರಿ, ಮಸಾಲಪೂರಿ, ಗೋಬಿ ಅಂಗಡಿಗಳು ತೆರೆಯುತ್ತವೆ. ಜಲಾಶಯ ವೀಕ್ಷಣೆಗೆ ಬರುವವರು ಜೊತೆಯಲ್ಲಿ ತಿಂಡಿ, ಊಟ ಒಯ್ಯುವುದು ಉತ್ತಮ. ಜಲಾಶಯ ವೀಕ್ಷಣೆಗೆ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಸಮಯ ಉತ್ತಮ. ನಂತರ ಈ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗುತ್ತದೆ. ಈ ಪ್ರದೇಶ ಸಂಪೂರ್ಣ ಬೆಟ್ಟಗುಡ್ಡಗಳಿಂದ ಕೂಡಿರುವ ಕಾರಣ ಕಾಡು ಪ್ರಾಣಿಗಳ ವಾಸಸ್ಥಳವಾಗಿದೆ.

English summary
After a gap of two decades the water level in the Kanva dam in Ramanagara district reached the 30.5 feet mark. Dam full capacity 32 feet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X