• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈಗಲೂ ಎಚ್ಡಿಕೆ - ಡಿಕೆಶಿ ಜೋಡೆತ್ತುಗಳೇ...!

|

ರಾಮನಗರ, ಡಿಸೆಂಬರ್ 26: ಸದ್ಯ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಆದರೆ ಅಂದು ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕೆಂದು ಪಣ ತೊಟ್ಟು ನಿಂತವರು ಮತ್ತು ಕುಮಾರಸ್ವಾಮಿಗೆ ಬೆನ್ನೆಲುಬಾಗಿದ್ದವರು ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್ ಎಂಬುದು ಗೊತ್ತಿರುವ ವಿಚಾರ.

ಕಾಂಗ್ರೆಸ್‌ನಿಂದ ಶಾಸಕರೆಲ್ಲ ರಾಜೀನಾಮೆ ನೀಡಿ ಗುಳೆಹೋಗಿ ಮುಂಬೈನಲ್ಲಿ ಕುಳಿತಿದ್ದಾಗ ಅವರನ್ನು ಕರೆತರಲು ಖುದ್ದು ಮುಂಬೈಗೆ ಹೋಗಿ ಬಂದವರು ಡಿ.ಕೆ.ಶಿವಕುಮಾರ್. ಅಷ್ಟೇ ಅಲ್ಲ ಬಹುಮತವಿಲ್ಲದೆ ಸರ್ಕಾರ ಪತನವಾಗುತ್ತದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಸದನದಲ್ಲಿ ತಮ್ಮೆಲ್ಲ ಆಕ್ರೋಶವನ್ನು ಎಳೆಎಳೆಯಾಗಿ ಬಿಚ್ಚಿಟ್ಟವರು ಡಿಕೆಶಿ. ಈ ವೇಳೆ ಸಮ್ಮಿಶ್ರ ಸರ್ಕಾರದ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷ್ಣಬೈರೇಗೌಡ ಮೊದಲಾದ ನಾಯಕರು ಮಾತನಾಡಿದರೂ ಅದ್ಯಾವುದೂ ಪರಿಣಾಮ ಬೀರಲಿಲ್ಲ. ಜತೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರನ್ನು ಒಗ್ಗೂಡಿಸುವಲ್ಲಿ ಯಾವುದೇ ಪಾತ್ರವನ್ನು ವಹಿಸಲಿಲ್ಲ.

ದೇವೇಗೌಡರ ಮನೆ ಮುಂದೆ ಎಸ್.ಎಂ.ಕೃಷ್ಣ ನಿಂತಿದ್ದರು: ರಮೇಶ್ ಬಾಬು

ಒಂದು ವೇಳೆ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕವೂ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ತಮ್ಮ ಮೈತ್ರಿ ಧರ್ಮವನ್ನು ಕಾಪಾಡಿಕೊಂಡು ಬಂದಿದ್ದರೆ ಉಪ ಚುನಾವಣೆಯಲ್ಲಿ ಗೆದ್ದು ಸಮ್ಮಿಶ್ರ ಸರ್ಕಾರವನ್ನು ಮತ್ತೆ ಅಸ್ತಿತ್ವಕ್ಕೆ ತರಬಹುದಿತ್ತೇನೋ. ಆದರೆ ಅದ್ಯಾವುದು ಆಗಲಿಲ್ಲ.

ಅದಕ್ಕೆ ಕಾರಣ ಸಿದ್ದರಾಮಯ್ಯ ಮತ್ತು ದೇವೇಗೌಡರ ಕುಟುಂಬದ ನಡುವೆ ಇದ್ದ ಒಂದಷ್ಟು ಅಸಮಾಧಾನಗಳು. ಇವೆಲ್ಲವೂ ಬಹಿರಂಗಗೊಂಡು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುವ ಮುಖೇನ ಎರಡು ಪಕ್ಷಗಳ ನಡುವೆ ಇದ್ದ ಬಿರುಕನ್ನು ಕಂದಕವನ್ನಾಗಿ ಮಾಡಿಕೊಂಡರು. ಕಾಂಗ್ರೆಸ್‌ನ ಒಂದಷ್ಟು ನಾಯಕರು, ಜೆಡಿಎಸ್ ‌ನ ಮತ್ತೊಂದಷ್ಟು ನಾಯಕರು ತಮ್ಮ ಆಕ್ರೋಶವನ್ನು ಹಲವು ರೀತಿಯಲ್ಲಿ ಹೊರ ಹಾಕಿದ್ದರೂ ಈ ವಿಷಯಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಯಾವುದೇ ರೀತಿಯಲ್ಲಿಯೂ ಆರೋಪ-ಪ್ರತ್ಯಾರೋಪಗಳನ್ನು ಮಾಡಲಿಲ್ಲ.

ಹಿಂದೆ ಅವರು ಹಾವು ಮುಂಗುಸಿಯಂತಿದ್ದರೂ ನಂತರದ ಕಾಲಘಟ್ಟದಲ್ಲಿ, ರಾಜಕೀಯ ಪರಿಸ್ಥಿತಿಗನುಗುಣವಾಗಿ ತಮ್ಮ ಸಂಬಂಧವನ್ನು ಗಟ್ಟಿ ಮಾಡಿಕೊಂಡಿದ್ದರು. ಲೋಕಸಭಾ ಚುನಾವಣೆ ಸಂದರ್ಭ ತಾವೇ ಜೋಡೆತ್ತುಗಳು ಎಂಬುದನ್ನು ಸಾಬೀತು ಮಾಡಿದರು. ಅಷ್ಟೇ ಅಲ್ಲ, ತಮ್ಮ ಸಂಬಂಧ ಇನ್ನು ಗಟ್ಟಿಯಾಗಿಯೇ ಉಳಿದಿದೆ ಎಂಬುದನ್ನು ರಾಜಕೀಯ ವಲಯದಲ್ಲಿ ತೋರಿಸಿಕೊಟ್ಟಿದ್ದರು. ಈಗಲೂ ಅದನ್ನು ಮುಂದುವರೆಸಿರುವುದಕ್ಕೆ ರಾಮನಗರದಲ್ಲಿ ಪೌರತ್ವ ಕಾಯ್ದೆ ಜಾರಿ ವಿರುದ್ಧದ ಹೋರಾಟ ಸಾಕ್ಷಿ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಇಳಿದ ಡಿಕೆಶಿ

ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸಿದ್ದಾರೆ. ರಾಮನಗರ ಕ್ಷೇತ್ರವನ್ನು ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವುದರಿಂದ ಪತಿ ಕುಮಾರಸ್ವಾಮಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅವರ ಜತೆಗೆ ಕಾಂಗ್ರೆಸ್‌ನ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಇತರೆ ನಾಯಕರು ಇದ್ದರು. ಇವರೆಲ್ಲ ಸೇರಿ ಪ್ರತಿಭಟನೆ ನಡೆಸಿದ್ದರು. ಇದೆಲ್ಲವನ್ನು ಗಮನಿಸಿದರೆ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಜೋಡೆತ್ತುಗಳಾಗಿ ಮುಂದುವರೆಯುತ್ತಿದ್ದಾರೆ ಎಂಬುದಂತು ಸ್ಪಷ್ಟವಾಗುತ್ತಿದೆ. ಆದರೆ ದೇವೇಗೌಡರ ಕುಟುಂಬದೊಂದಿಗಿನ ಉತ್ತಮ ಸಂಬಂಧ ಡಿ.ಕೆ.ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷ ಗಾದಿಗೆ ತೊಡಕಾಗುತ್ತಿದೆಯಾ? ಎಂಬ ಪ್ರಶ್ನೆಯೂ ಕಾಡತೊಡಗಿದೆ. ಇಲ್ಲಿ ತನಕ ಕೆಪಿಸಿಸಿ ಅಧ್ಯಕ್ಷ ಗಾದಿ ಡಿಕೆಶಿ ಅವರಿಗೆ ಸಿಗುವಲ್ಲಿ ಹಾದಿ ಸುಗಮವಾಗಿದೆ ಎನ್ನಲಾಗುತ್ತಿತ್ತಾರೂ ಇದೀಗ ಸಿದ್ದರಾಮಯ್ಯ ಬಣದಿಂದ ಕೃಷ್ಣಬೈರೇಗೌಡರನ್ನು ರೇಸಿಗೆ ಬಿಟ್ಟಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಏನೆಲ್ಲ ಆಗುತ್ತದೆ ಎಂಬುದನ್ನು ಕಾಲವೇ ಹೇಳಬೇಕಾಗಿದೆ.

English summary
In the present state, the coalition government collapsed and the BJP government came to power. But it was DK Shivakumar who backed the Kumaraswamy and pledged to keep the coalition government at that time
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more