"ರೈತರಿಗೆ ಒಳ್ಳೆಯದಾದರೆ ಕೆಲವರು ರಾಜಕೀಯ ಅಸ್ತಿತ್ವ ಕಳೆದುಕೊಳ್ತಾರೆ''
ರಾಮನಗರ, ಜನವರಿ 25: ದೇಶದಲ್ಲಿ ಬಂದಿರುವ ಕೃಷಿ ಕಾನೂನುಗಳು ರೈತರ ಪರವಾಗಿವೆ. ರೈತರ ಸುಧಾರಣೆಗೆ ತಂದಿರುವ ಕಾನೂನುಗಳಾಗಿವೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಹೇಳಿದರು.
ರಾಮನಗರದ ಬಿಡದಿಯಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ, ರಾಜಕೀಯ ಪ್ರೇರಿತವಾಗಿ ರೈತರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಒಳ್ಳೆಯ ಕೆಲಸವಾಗುತ್ತಿದ್ದು, ರೈತರ ಪರವಾಗಿ ಸರ್ಕಾರ ನಿರ್ಧಾರ ಮಾಡಿದೆ ಎಂದರು.
ರೈತರ ಟ್ರಾಕ್ಟರ್ ಪರೇಡ್ ತಡೆಯಬೇಡಿ; ಪೊಲೀಸರಿಗೆ ಎಚ್ಚರಿಕೆ
ಸದ್ಯ ಈಗ ಇರುವ ಕೃಷಿ ಕಾನೂನಿಗೆ ಸೇರಿಸಲಾಗಿದ್ದು, ಯಾವುದನ್ನು ತೆಗೆದು ಹಾಕಿಲ್ಲ. 73 ವರ್ಷದಲ್ಲಿ ಮಾಡಿರುವ ಕಾನೂನುಗಳು ಸರಿ ಇದ್ದಾವೆಯೇ? ಎಂದು ಪ್ರಶ್ನಿಸಿದ ಡಿಸಿಎಂ, ರೈತರ ಪರವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕು ಎಂದು ತಿಳಿಸಿದರು.

ಯಾವ ತೀರ್ಮಾನ ತೆಗೆದುಕೊಂಡರೂ ಸರಿ
ಹೊಸ ಕೃಷಿ ಕಾನೂನಿನಲ್ಲಿ ಏನ್ ತಪ್ಪಿದೆ ಎಂದು ಹೇಳಲಿ, ರೈತರಿಗೆ ಒಳ್ಳೆಯದಾದರೆ ಕೆಲವರು ರಾಜಕೀಯ ಅಸ್ತಿತ್ವ ಕಳೆದುಕೊಳ್ಳುತ್ತಾರೆ. ಸಮಸ್ಯೆ ಇದ್ದರೆ ಬೇಳೆ ಬೇಯಿಸುವ ಕೆಲಸ ಮಾಡ್ತಾರೆ ಎಂದು ರಾಮನಗರದ ಬಿಡದಿಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಅಭಿಪ್ರಾಯಪಟ್ಟರು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ವಿಚಾರವಾಗಿ ಮಾತನಾಡಿದ ಡಿಸಿಎಂ, ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಯಾವ ತೀರ್ಮಾನ ತೆಗೆದುಕೊಂಡರೂ ಸರಿ. ಎಲ್ಲಿ ಜವಾಬ್ದಾರಿ ಕೊಟ್ಟರೂ ನಾನು ಕೆಲಸ ಮಾಡಲು ಸಿದ್ಧವೆಂದು ಹೇಳಿದರು.

ಹೋರಾಟ ರಾಜಕೀಯ ಪ್ರೇರಿತ
ರೈತರ ಕಲ್ಯಾಣಕ್ಕಾಗಿ ರೂಪಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಕಟುವಾಗಿ ಟೀಕಿಸಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಟೊಯೊಟಾ ಕಿರ್ಲೋಸ್ಕರ್ ಕಂಪನಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಮಾದರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಿಲಾನ್ಯಾಸ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ 73 ವರ್ಷಗಳಲ್ಲಿ ಮಾಡಲಾಗದ್ದನ್ನು ನರೇಂದ್ರ ಮೋದಿ ಅವರು ಮಾಡಿದ್ದಾರೆ. ಇದನ್ನು ಸಹಿಸಲಾಗದೆ ಕೆಲವರು ಅಪಪ್ರಚಾರ ನಡೆಸುತ್ತ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ರೈತರು ಆರ್ಥಿಕವಾಗಿ ಪ್ರಬಲರಾಗುವುದು ಇಷ್ಟವಿಲ್ಲ
ರೈತ ವಿರೋಧಿ ಕೆಲಸಗಳಲ್ಲಿ ತೊಡಗಿರುವ ಕೆಲವರು ಈ ಎಲ್ಲ ಷಡ್ಯಂತ್ರಗಳ ಹಿಂದೆ ಇದ್ದಾರೆ. ದೇಶ ಮುನ್ನಡೆಯುವುದನ್ನು ವ್ಯವಸ್ಥಿತವಾಗಿ ತಡೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಆರ್ಥಿಕವಾಗಿ ಪ್ರಬಲರಾಗುವುದು ಅವರಿಗೆ ಇಷ್ಟವಿಲ್ಲ. ಯಾವತ್ತಿಗೂ ಅವರು ಮತಬ್ಯಾಂಕ್ನ ಬಲಿಪಶುಗಳಾಗಿಯೇ ಇರಬೇಕು ಎಂಬುದು ಅವರ ದುರುದ್ದೇಶ ಎಂದು ಡಿಸಿಎಂ ದೂರಿದರು. ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿದ್ದ ರೈತರು ಬೆಳೆದ ಬೆಳೆಗಳನ್ನು ಈಗ ಎಲ್ಲಿ ಬೇಕಾದರೂ ಮಾರಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಇದ್ದರೆ ಅನ್ನದಾತನಿಗೆ ಉತ್ತಮ ಬೆಲೆ ಸಿಗುತ್ತದೆ. ದಲ್ಲಾಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿಯೇ ರೈತರನ್ನು ಎತ್ತಿಕಟ್ಟಲಾಗುತ್ತಿದೆ ಎಂದು ಡಾ.ಅಶ್ವಥ್ ನಾರಾಯಣ ಹೇಳಿದರು.

ರೈತರಿಗೆ ಮಾರಕವಾದ ಒಂದು ಅಂಶವೂ ಇಲ್ಲ
ಕೃಷಿ ಕಾಯ್ದೆಗಳಲ್ಲಿ ರೈತರಿಗೆ ಮಾರಕವಾದ ಒಂದು ಅಂಶವೂ ಇಲ್ಲ. ಸ್ವತಃ ಪ್ರಧಾನಮಂತ್ರಿಗಳೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲ ಅನುಮಾನಗಳನ್ನು ಬಗೆಹರಿಸಿದ್ದಾರೆ. ಇಷ್ಟಾದರೂ ಹಠಕ್ಕೆ ಬಿದ್ದು ರೈತರನ್ನು ಹಾದಿ ತಪ್ಪಿಸುತ್ತಾರೆಂದರೆ ಇದರ ಹಿಂದೆ ಯಾವುದೋ ದುರುದ್ದೇಶ ಅಡಗಿದೆ ಎಂಬ ಅನುಮಾನ ಬರುವುದು ಸಹಜ. ಇಂಥ ಜನಪರ ಕಾರ್ಯಕ್ರಮಗಳಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಡಿಸಿಎಂ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಜನರ ಆರೋಗ್ಯಕ್ಕೆ ವರದಾನವಾಗಲಿದೆ
ಬಿಡದಿಯಲ್ಲಿ ಟಯೋಟ ಕಿರ್ಲೋಸ್ಕರ್ ಸಂಸ್ಥೆ ನಿರ್ಮಿಸುತ್ತಿರುವ 12 ಕೋಟಿ ರೂ. ವೆಚ್ಚದ ಸಮುದಾಯ ಆರೋಗ್ಯ ಕೇಂದ್ರದಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ. ಈ ಭಾಗದ ಜನರ ಆರೋಗ್ಯಕ್ಕೆ ವರದಾನವಾಗಲಿದೆ. ಅವರೇ ಇದನ್ನು ನಿರ್ವಹಣೆ ಮಾಡಬೇಕು ಎಂದು ಮನವಿ ಮಾಡಿದ್ದೇನೆ. ಅವರೂ ಒಪ್ಪಿದ್ದಾರೆ. ಇದಕ್ಕಾಗಿ ಕಂಪನಿಗೆ ಕೃತಜ್ಞನಾಗಿದ್ದೇನೆ ಎಂದು ಡಿಸಿಎಂ ಹೇಳಿದರು. ಮಾಗಡಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ, ಜಿಪಂ ಸಿಇಒ ಇಕ್ರಮ್, ಎಸ್ಪಿ ಗಿರೀಶ್, ಡಿಎಚ್ಒ ಡಾ.ನಿರಂಜನ ಇದ್ದರು.