ಟೊಯೊಟಾ ಕಂಪನಿ ಲಾಕೌಟ್ ತೆರವುಗೊಳಿಸುವಂತೆ ಡಿಸಿಎಂ ಸೂಚನೆ
ರಾಮನಗರ, ನವೆಂಬರ್ 17: ಬಿಡದಿಯಲ್ಲಿರುವ ಟೊಯೊಟೊ ಘಟಕದ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಸಮಸ್ಯೆಯ ಕುರಿತು ಮಂಗಳವಾರ ಡಿಸಿಎಂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಕಂಪನಿಯ ಲಾಕ್ ಔಟ್ ಹಾಗೂ ಮುಷ್ಕರ ಎರಡನ್ನೂ ನಿಷೇಧಿಸಲು ತೀರ್ಮಾನ ಮಾಡಲಾಗಿದೆ.
ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿ ಟೊಯೊಟಾದ ಬಿಡದಿಯ ಘಟಕದಲ್ಲಿ ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರು ಒಂಬತ್ತು ದಿನಗಳಿಂದ ಧರಣಿ ನಡೆಸುತ್ತಿದ್ದು, ಕಂಪನಿ ಲಾಕೌಟ್ ಘೋಷಿಸಿತ್ತು. ಈ ವಿಚಾರವಾಗಿ ಸರ್ಕಾರ ಮಧ್ಯಸ್ಥಿಕೆ ವಹಿಸಿದ್ದು, ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ಸೋಮವಾರ ತಿಳಿಸಿತ್ತು.
ಬಿಡದಿ ಟೊಯೋಟಾ ಘಟಕ ಬಂದ್; ಕಾರ್ಮಿಕರ ನೆರವಿಗೆ ಬಂದ ಸಿಎಂ
ಮಂಗಳವಾರ, ಈ ಕುರಿತು ಟ್ವೀಟ್ ಮಾಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ, 'ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಯಲ್ಲಿ ಉಂಟಾಗಿರುವ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಸಂಸ್ಥೆಯ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಜೊತೆ ಚರ್ಚಿಸಿ, ಆದಷ್ಟು ಶ್ರೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸುವಂತೆ ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಲಾಗಿದೆ' ಎಂದು ತಿಳಿಸಿದ್ದರು.
ಇದೀಗ ಡಿಸಿಎಂ ಅಶ್ವಥ್ ನಾರಾಯಣ ನೇತೃತ್ವದಲ್ಲಿ ಸಭೆ ನಡೆದಿದ್ದು, ಟೊಯೊಟಾ ಲಾಕ್ ಔಟ್ ಹಾಗೂ ಮುಷ್ಕರ ಎರಡನ್ನೂ ನಿಷೇಧಿಸಲು ತೀರ್ಮಾನ ಮಾಡಲಾಗಿದೆ. ಈ ಕುರಿತು ಮಂಗಳವಾರ ಸಂಜೆ ಕಾರ್ಮಿಕ ಇಲಾಖೆ ಆದೇಶ ಹೊರಡಿಸಲಿರುವುದಾಗಿ ತಿಳಿದುಬಂದಿದೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಮಾಗಡಿ ಶಾಸಕ ಮಂಜುನಾಥ, ಕೈಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಸಭೆಯಲ್ಲಿ ಹಾಜರಿದ್ದರು. ಬುಧವಾರದಿಂದ ಕಾರ್ಖಾನೆ ಆರಂಭಿಸಲು ಆಡಳಿತ ಮಂಡಳಿ ಪ್ರತಿನಿಧಿಗಳಿಗೆ ಡಿಸಿಎಂ ಸೂಚನೆ ನೀಡಿದರು.
ಹಾಗೆಯೇ ಕಾರ್ಮಿಕರಿಗೂ ಸಹಕರಿಸಲು ಸೂಚಿಸಿದರು. ಏನೇ ಸಮಸ್ಯೆಗಳು ಇದ್ದರೂ ಅದನ್ನು ಪರಸ್ಪರ ಚರ್ಚೆ ಮೂಲಕ ಬಗೆಹರಿಸಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಲೌಕ್ ಔಟ್ ತಕ್ಷಣ ತೆರವುಗೊಳಿಸಿ, ಕಾರ್ಮಿಕರು ಕೆಲಸ ಮಾಡಲು ಅನುವು ಮಾಡಬೇಕು ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ಸೂಚಿಸಿದ್ದಾರೆ.