ಕಾಂಗ್ರೆಸ್ ಮುಖಂಡರ ವಕ್ರದೃಷ್ಟಿ ಕ್ಷೇತ್ರಕ್ಕೆ ಬಿದ್ದಿದೆ; ಎಚ್ಡಿಕೆ
ರಾಮನಗರ, ಏಪ್ರಿಲ್ 05; "ಕಾಂಗ್ರೆಸ್ ಮುಖಂಡರ ವಕ್ರ ದೃಷ್ಟಿ ನಮ್ಮ ಕ್ಷೇತ್ರಕ್ಕೆ ಬಿದ್ದಿದೆ. ಈ ಹಿನ್ನಲೆಯಲ್ಲಿ ಸ್ವತಃ ನಾನೇ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ರಾಮನಗರ, ಚನ್ನಪಟ್ಟಣ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ರಾಮನಗರದಲ್ಲಿ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಿ ಅವರು ಮಾತನಾಡಿದರು. "ಈ ಹಿಂದೆ ನಡೆಯುತ್ತಿದ್ದ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಥಳೀಯ ಮುಖಂಡರು ನೇತೃತ್ವ ವಹಿಸುತ್ತಿದ್ದರು. ಆದರೆ ಈ ಭಾರಿ ಈ ಕ್ಷೇತ್ರದ ಮೇಲೆ ಕೆಲ ಕಾಂಗ್ರೆಸ್ ಮುಖಂಡರ ವಕ್ರ ದೃಷ್ಟಿ ಬಿದ್ದಿದೆ" ಎಂದು ಕುಮಾರಸ್ವಾಮಿ ಆರೋಪಿಸಿದರು.
ಕೋವಿಡ್ 2ನೇ ಅಲೆ; ರಾಮನಗರ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ
"ಹೇಗಾದರೂ ಮಾಡಿ ರಾಮನಗರದಲ್ಲಿ ಜೆಡಿಎಸ್ ಸೋಲಿಸುವ ಹುನ್ನಾರ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ನಾನು ಅದಕ್ಕೆ ಅವಕಾಶ ನೀಡುವುದಿಲ್ಲ" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಅವಳಿ ನಗರವಾಗಿ ಚನ್ನಪಟ್ಟಣ-ರಾಮನಗರ ಅಭಿವೃದ್ಧಿ; ಎಚ್ಡಿಕೆ
ನಗರವಾಸಿಗಳ ಮನೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಅವರು, "ನಾನು 2007ರಲ್ಲಿ ಸಿಎಂ ಆಗಿದ್ದಾಗ ಮನೆ ಕಟ್ಟಲು ನಗರವಾಸಿಗಳಿಂದ ಹಣ ಪಡೆಯಲಾಗಿತ್ತು. 5 ಸಾವಿರ ಹಣ ಕಟ್ಟಿಸಿಕೊಂಡು ಕೊಳಚೆ ನಿರ್ಮೂಲನೆ ಮಂಡಳಿಯಿಂದ ಮನೆ ಕೂಡ ನಿರ್ಮಾಣ ಮಾಡಲಾಗಿತ್ತು. ನಾನು ಸಿಎಂ ಸ್ಥಾನದಿಂದ ಇಳಿದ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆ ಯೋಜನೆ ನೆನೆಗುದಿಗೆ ಬಿದ್ದಿತ್ತು" ಎಂದರು.
"ಮತ್ತೊಮ್ಮೆ ನಾನು ಸಿಎಂ ಆದ ಬಳಿಕ ಕ್ಷೇತ್ರದಲ್ಲಿ 1,300 ಮನೆ ಕಟ್ಟಲಾಗುತ್ತಿದೆ. ಜನರಿಗೆ ಯಾವುದೇ ಅನುಮಾನ ಬೇಡ ಎಲ್ಲರಿಗೂ ಮನೆ ಸಿಕ್ಕೇ ಸಿಗುತ್ತದೆ" ಎಂದು ಎಚ್. ಡಿ. ಕುಮಾರಸ್ವಾಮಿ ಭರವಸೆ ನೀಡಿದರು.