ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌ಡಿಕೆ vs ಸಿಪಿವೈ: ಚನ್ನಪಟ್ಟಣದಲ್ಲಿ ದಲಿತರ ಮನವೊಲಿಕೆಗೆ ಸರ್ಕಸ್!

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 31: ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿ ಎದುರಾಗುವ ಸಾಧ್ಯತೆ ಹೆಚ್ಚಾಗಿದ್ದು, ಈಗಾಗಲೇ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿ.ಪಿ. ಯೋಗೇಶ್ವರ್ ಅಖಾಡಕ್ಕೆ ಇಳಿದಿದ್ದು ಮೇಲಿಂದ ಮೇಲೆ ತಂತ್ರಗಳನ್ನು ಮಾಡುತ್ತಿರುವುದು ಕ್ಷೇತ್ರದಲ್ಲಿ ಎದ್ದು ಕಾಣಿಸುತ್ತಿದೆ.

ಇದುವರೆಗೆ ಮೌನಕ್ಕೆ ಶರಣಾಗಿದ್ದ ಸಿ.ಪಿ. ಯೋಗೇಶ್ವರ್ ಸಂಕ್ರಾಂತಿ ಬಳಿಕ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು, ಗ್ರಾಮೀಣ ಮಟ್ಟದಲ್ಲಿ ಒಂದಷ್ಟು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಜೊತೆಗೆ ದಲಿತ ಮುಖಂಡರು ಮತ್ತು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವತ್ತ ಪ್ರಯತ್ನ ಮುಂದುವರೆಸಿದ್ದು, ಈ ಸಂಬಂಧ ಸಭೆಯನ್ನು ನಡೆಸಿ ದಲಿತ ಮುಖಂಡರಿಂದ ಸಲಹೆಗಳನ್ನು ಪಡೆದುಕೊಂಡಿದ್ದಾರೆ.

ಚನ್ನಪಟ್ಟಣ: ಬಿಜೆಪಿ ಸೈನಿಕನ ವೇಗಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಯುವರಾಜನ ಎಂಟ್ರಿ ಚನ್ನಪಟ್ಟಣ: ಬಿಜೆಪಿ ಸೈನಿಕನ ವೇಗಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಯುವರಾಜನ ಎಂಟ್ರಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಮತ್ತು ಸಿ.ಪಿ. ಯೋಗೇಶ್ವರ್ ನಡುವೆ ಭಾರೀ ಪೈಪೋಟಿ ಎದುರಾಗಿತ್ತು. ಕೊನೆಗೂ ಕುಮಾರಸ್ವಾಮಿ ಗೆಲುವು ಪಡೆಯುವುದರೊಂದಿಗೆ ಸಿ.ಪಿ. ಯೋಗೇಶ್ವರ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಆದರೆ ಕುಮಾರಸ್ವಾಮಿ ಅವರಿಗೆ ಪ್ರಬಲ ಪೈಪೋಟಿಯಂತೂ ಇದ್ದೇ ಇತ್ತು.

ಎಚ್‌ಡಿಕೆ ಮಾಡಿದ ಅಭಿವೃದ್ಧಿ ಕಂಡು ಯೋಗೇಶ್ವರ್‌ಗೆ ಮತಿಭ್ರಮಣೆ; ಜೆಡಿಎಸ್ ತಿರುಗೇಟು ಎಚ್‌ಡಿಕೆ ಮಾಡಿದ ಅಭಿವೃದ್ಧಿ ಕಂಡು ಯೋಗೇಶ್ವರ್‌ಗೆ ಮತಿಭ್ರಮಣೆ; ಜೆಡಿಎಸ್ ತಿರುಗೇಟು

 ಗೆದ್ದೆ ಗೆಲ್ಲಬೇಕೆನ್ನುವ ಹಠದಲ್ಲಿ ಯೋಗೇಶ್ವರ್

ಗೆದ್ದೆ ಗೆಲ್ಲಬೇಕೆನ್ನುವ ಹಠದಲ್ಲಿ ಯೋಗೇಶ್ವರ್

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಗೆದ್ದೆ ಗೆಲ್ಲಬೇಕೆಂಬ ಹಠಕ್ಕೆ ಸಿ.ಪಿ. ಯೋಗೇಶ್ವರ್ ಬಿದ್ದಿದ್ದಾರೆ. ತನ್ನ ಗೆಲುವಿಗೆ ಯಾವುದೆಲ್ಲ ಪೂರಕವಾಗಬಹುದೋ ಅದೆಲ್ಲವನ್ನು ಅವರು ಮಾಡುತ್ತಿದ್ದಾರೆ. ಜತೆಗೆ ರಾಜ್ಯದಲ್ಲಿ ಬಿಜೆಪಿ ಆಡಳಿತವಿರುವುದರಿಂದ ತಮಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಅವರದ್ದಾಗಿದೆ.

ಸಾಮಾನ್ಯವಾಗಿ ಹಿಂದುಳಿದ ದಲಿತ ಮತಗಳು ಕಾಂಗ್ರೆಸ್‌ನ ಮತ ಬ್ಯಾಂಕ್ ಆಗಿದ್ದು, ಬದಲಾದ ಕಾಲದಲ್ಲಿ ಅಲ್ಪಸಂಖ್ಯಾತ ಮತ್ತು ದಲಿತ ಮತಗಳನ್ನು ಜೆಡಿಎಸ್ ತನ್ನತ್ತ ಸೆಳೆದುಕೊಂಡಿದೆ. ಜತೆಗೆ ಒಂದಷ್ಟು ಒಕ್ಕಲಿಗ ಮತಗಳು ಜೆಡಿಎಸ್ ಜತೆಗಿದೆ. ರಾಮನಗರದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಿವೆ. ಅವು ಜೆಡಿಎಸ್ ಪರವಾಗಿಯೇ ಇದೆ ಎಂಬುದು ಈಗಾಗಲೇ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿರುವುದಕ್ಕೆ ಸಾಕ್ಷಿಯಾಗಿದೆ.

 ಗೆಲುವಿನ ಸರದಾರರಾಗಿದ್ದ ಯೋಗೇಶ್ವರ್

ಗೆಲುವಿನ ಸರದಾರರಾಗಿದ್ದ ಯೋಗೇಶ್ವರ್

ಹಾಗೆ ನೋಡಿದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ್ ಪಾರುಪತ್ಯ ಹೊಂದಿದ್ದರು. ಅವರು ಯಾವುದೇ ಪಕ್ಷದಿಂದ ಅಥವಾ ಪಕ್ಷೇತರರಾಗಿ ಸ್ಪರ್ಧಿಸಿದರೂ ಗೆಲ್ಲುವ ಶಕ್ತಿಯನ್ನು ಹೊಂದಿದ್ದರು. ಅವರ ರಾಜಕೀಯ ಇತಿಹಾಸವನ್ನು ನೋಡಿದರೆ ಅವರು ಪಕ್ಷೇತರರಾಗಿ, ವಿವಿಧ ಪಕ್ಷಗಳ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವುದು ನಮ್ಮ ಮುಂದಿದೆ. ಹಾಗಾದರೆ ಮತದಾರರು ಯೋಗೇಶ್ವರ್ ಅವರನ್ನು ಒಪ್ಪಿಕೊಂಡು ಮತ ಹಾಕುತ್ತಿದ್ದಾರೆಯೇ ವಿನಃ ಅವರು ಪ್ರತಿನಿಧಿಸುತ್ತಿರುವ ಪಕ್ಷವನ್ನಲ್ಲ ಎಂಬುದು ಸುಲಭವಾಗಿ ಅರ್ಥವಾಗಿ ಬಿಡುತ್ತದೆ.

ಕಳೆದ 2018ರ ಚುನಾವಣೆ ವೇಳೆ ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ ಒಂದೊಳ್ಳೆಯ ಹವಾ ಸೃಷ್ಟಿ ಮಾಡಿತ್ತು. ಹೀಗಾಗಿ ಕುಮಾರಸ್ವಾಮಿ ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸುಲಭವಾಗಿ ಗೆದ್ದು ಬಂದಿದ್ದರು. ಅವರಿಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲುವು ಅಷ್ಟೊಂದು ಸಲೀಸಲ್ಲ ಎಂಬುದು ಗೊತ್ತಾಗಿತ್ತು. ಹೀಗಾಗಿಯೇ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡಿದ್ದರು.

 ಕಾಂಗ್ರೆಸ್ ಆರ್ಭಟ ಕಾಣಿಸುತ್ತಿಲ್ಲ

ಕಾಂಗ್ರೆಸ್ ಆರ್ಭಟ ಕಾಣಿಸುತ್ತಿಲ್ಲ

ಇದೀಗ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಆರ್ಭಟ ಕಾಣಿಸುತ್ತಿಲ್ಲ. ಈಗ ಇಲ್ಲಿ ಕುಮಾರಸ್ವಾಮಿ ವರ್ಸಸ್ ಯೋಗೇಶ್ವರ್ ಎಂಬಂತಾಗಿದೆ. ಯೋಗೇಶ್ವರ್ ಅವರು ಪಕ್ಷ ಸಂಘಟನೆ ಜತೆ ಜತೆಯಲ್ಲಿಯೇ ಜೆಡಿಎಸ್ ಮುಖಂಡರನ್ನು ಬಿಜೆಪಿಯತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸಿದ್ದು, ಅದರಲ್ಲಿ ಒಂದಷ್ಟು ಯಶಸ್ಸನ್ನು ಕಂಡಿದ್ದಾರೆ ಎಂದರೆ ತಪ್ಪಾಗಲಾರದು. ಜೆಡಿಎಸ್‌ನಿಂದ ಹೊರಬಂದ ಒಂದಷ್ಟು ಮುಖಂಡರು ಕುಮಾರಸ್ವಾಮಿ ವಿರುದ್ಧವೇ ಆರೋಪಗಳನ್ನು ಮಾಡಿರುವುದನ್ನು ನಾವೆಲ್ಲರೂ ನೋಡಿದ್ದೇವೆ.

ಯಾವಾಗ ದಲಿತ ಮುಖಂಡರ ಸಭೆ ನಡೆಸಿ ತಮ್ಮನ್ನು ಬೆಂಬಲಿಸುವಂತೆ ಸಿ.ಪಿ. ಯೋಗೇಶ್ವರ್ ಮನವಿ ಮಾಡಿಕೊಂಡರೋ ಅದಾಗಲೇ ಕುಮಾರಸ್ವಾಮಿ ಅವರು ಎಚ್ಚೆತ್ತುಕೊಂಡಿದ್ದಾರೆ. ಇನ್ನು ಸುಮ್ಮನಿದ್ದರೆ ಕಷ್ಟವಾಗಬಹುದು ಎಂಬುದನ್ನರಿತು ದಲಿತ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

 ದಲಿತ ಸಮುದಾಯ ಒಗ್ಗೂಡಬೇಕು

ದಲಿತ ಸಮುದಾಯ ಒಗ್ಗೂಡಬೇಕು

ತಮ್ಮ ರಾಜಕೀಯ ಕಾರ್ಯಕ್ಷೇತ್ರವಾಗಿರುವ ಬಿಡದಿಯ ತೋಟದ ಮನೆಯಲ್ಲಿ ದಲಿತ ಸಮುದಾಯ ಮುಖಂಡರ ಸಭೆ ನಡೆಸಿ ಸಮಾಲೋಚನೆ ಮಾಡಿದ್ದಾರೆ. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸಭೆ ಮಾಡಿ ಜೆಡಿಎಸ್ ಅನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಅಲ್ಲದೆ, ಕ್ಷೇತ್ರದಲ್ಲಿ ಜೆಡಿಎಸ್ ಬಲವರ್ಧನೆಗೊಳ್ಳಲು ದಲಿತ ಸಮುದಾಯಗಳು ಒಗ್ಗೂಡಬೇಕೆಂದು ಈ ವೇಳೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇಷ್ಟೇ ಅಲ್ಲದೆ ಕ್ಷೇತ್ರದಲ್ಲಿ ದಲಿತ ಸಮುದಾಯಕ್ಕೆ ಅರ್ಥಾತ್ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದ್ದು, ಅದನ್ನು ತಲುಪಿಸುವ ಸಲುವಾಗಿ ಆಗಬೇಕಾಗಿರುವ ಸೌಲಭ್ಯದ ಪಟ್ಟಿ ಕೇಳಿದ್ದು, ಜತೆಗೆ ದಲಿತ ಸಮುದಾಯಗಳ ಪ್ರಗತಿಗೆಂದೇ ಮೀಸಲಾಗಿರುವ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡಲು ಸಮುದಾಯಗಳ ಪಾತ್ರ ಬಹಳವಾಗಿದೆ ಎಂದು ಹೇಳಿದ್ದಲ್ಲದೆ, ಯುಗಾದಿ ನಂತರ ದಲಿತ ಸಮುದಾಯದ ಜೆಡಿಎಸ್ ಬೃಹತ್‌ ಸಭೆಯನ್ನು ಆಯೋಜನೆ ಮಾಡುವ ಬಗ್ಗೆಯೂ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಈಗಿನಿಂದಲೇ ಶುರುವಾಗಿದ್ದು, ಕಾಂಗ್ರೆಸ್ ಮೌನವಾಗಿರುವುದು ಅಚ್ಚರಿ ಮೂಡಿಸಿದೆ.

English summary
Competition Between Former CM HD Kumaraswamy and Fomer Minister CP Yogeshwar For Dalits Votes in Channapattana Constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X