ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಶವಕೃಪಾ ಡೈರೆಕ್ಷನ್‌ನಲ್ಲಿ ಸಿಎಂ ಬೊಮ್ಮಾಯಿ ಸರಕಾರ; ಮೋದಿಯೂ ಆರ್‌ಎಸ್‌ಎಸ್ ಕೀಲುಗೊಂಬೆ

|
Google Oneindia Kannada News

ರಾಮನಗರ, ಅಕ್ಟೋಬರ್ 5: "ಪ್ರಧಾನಮಂತ್ರಿ ನರೇಂದ್ರ ಮೋದಿ ಆರ್‌ಎಸ್‌ಎಸ್ ಕೀಲುಗೊಂಬೆ ಆಗಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮರಾಜಪೇಟೆಯ ಕೇಶವ ಕೃಪಾದ ಕೃಪಾಕಟಾಕ್ಷ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದಾರೆ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ರಾಮನಗರದ ಬಿಡದಿಯ ತೋಟದಲ್ಲಿ ಕಳೆದ ಏಳು ದಿನಗಳಿಂದ ನಡೆದ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಾಗಾರದ ಕೊನೆ ದಿನವಾದ ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದರು. ಇದೇ ವೇಳೆ ಆರ್‌ಎಸ್‌ಎಸ್ ಬಗ್ಗೆ ಕೆಲ ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟರು.

"ಕಳೆದ ಹಲವು ದಿನಗಳಿಂದ ಆರ್‌ಎಸ್‌ಎಸ್ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಹಲವಾರು ಪುಸ್ತಕಗಳನ್ನು ಓದುತ್ತಿದ್ದೇನೆ. ಆರ್‌ಎಸ್‌ಎಸ್ ಹೇಗೆ ಕೆಲಸ ಮಾಡುತ್ತದೆ ಹಾಗೂ ಚುನಾಯಿತ ಸರಕಾರಗಳನ್ನು ಹೇಗೆ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುತ್ತದೆ ಎಂಬುದನ್ನು ತಿಳಿದು ನನಗೆ ಆಘಾತ ಆಯಿತು. ಸಂಘದ ಐಡಿಯಾಲಜಿ ಹೊಂದಿರುವ ಅಧಿಕಾರಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಆರ್‌ಎಸ್‌ಎಸ್ ಬಳಸಿಕೊಳ್ಳುತ್ತಿದೆ. ದೇಶದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಸಂಘದ ತರಬೇತಿ ಪಡೆದು ಕೆಲಸ ಮಾಡುತ್ತಿದ್ದಾರೆ ಅನ್ನುವ ಮಾತಿದೆ," ಎಂದು ಹೇಳಿದರು.

 ಆಡಳಿತ ನಡೆಸುತ್ತಿರುವ ನಾಯಕರಿಗೆ ಸ್ವಾತಂತ್ರ್ಯ ಇಲ್ಲ

ಆಡಳಿತ ನಡೆಸುತ್ತಿರುವ ನಾಯಕರಿಗೆ ಸ್ವಾತಂತ್ರ್ಯ ಇಲ್ಲ

"ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ನಾಯಕರಿಗೆ ಸ್ವಾತಂತ್ರ್ಯ ಇಲ್ಲ. ನಮ್ಮ ರಾಜ್ಯದ ಬಿಜೆಪಿ ಸರಕಾರದ ಎರಡನೇ ಮುಖ್ಯಮಂತ್ರಿ ಕೇಶವಕೃಪಾಕ್ಕೆ ಏಕೆ ಹೋದರು. ಎಲ್ಲಿಯೇ ಹೋದರೂ ಆರ್‌ಎಸ್‌ಎಸ್ ಕಚೇರಿಗಳಿಗೆ ಯಾಕೆ ಹೋಗುತ್ತಾರೆ? ರಾಜ್ಯದಲ್ಲಿ ಇರುವುದು ಸಂಪೂರ್ಣ ಆರ್‌ಎಸ್‌ಎಸ್ ಸರಕಾರ. ಕೇಶವಕೃಪಾಕ್ಕೆ ಜನ ಮತ ಹಾಕಿಲ್ಲ ಎಂಬುದನ್ನು ಆಡಳಿತ ನಡೆಸುವವರು ಅರ್ಥ ಮಾಡಿಕೊಳ್ಳಬೇಕು," ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದರು.

"ಇವರಿಗೆ ದೇಶದ ಮತ್ತು ರಾಜ್ಯದ ಪ್ರಗತಿಯ ಅಜೆಂಡಾ ಇಲ್ಲ. ಜನರನ್ನು ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವುದೇ ಅವರ ಅಜೆಂಡಾ. ನಾವು ಕೂಡ ಹಿಂದೂಗಳೇ. ನಮಗೆ ಹಿಂದುತ್ವಕ್ಕಿಂತ ಮೊದಲು ದುಡಿಯುವ ಕೈಗೆ ದುಡಿಮೆ ಬೇಕು, ಅನ್ನ ಬೇಕು. ಸರ್ಕಾರ ಈ ರಾಜ್ಯದ, ದೇಶದ ಬಡವರ ಬಗ್ಗೆ ಗಮನ ಹರಿಸಬೇಕು," ಎಂದರು.

 ಅಡ್ವಾಣಿಯವರನ್ನು ರಾಜಕೀಯವಾಗಿ ಮುಗಿಸಲಾಯಿತು

ಅಡ್ವಾಣಿಯವರನ್ನು ರಾಜಕೀಯವಾಗಿ ಮುಗಿಸಲಾಯಿತು

"ಅಟಲ್ ಬಿಹಾರಿ ವಾಜಪೇಯಿ ಎಂಥಾ ನಾಯಕರು ಎಂಬುದು ನಮಗೆಲ್ಲರಿಗೂ ಗೊತ್ತು. ಹೆಜ್ಜೆ ಹೆಜ್ಜೆಗೂ ಅವರ ಸರಕಾರಕ್ಕೆ ಆರ್‌ಎಸ್‌ಎಸ್ ಅಡ್ಡಿ ಮಾಡಿತು. ಜಿನ್ನಾರನ್ನು ಹೊಗಳಿದ ಒಂದೇ ಕಾರಣಕ್ಕೆ ಎಲ್‌.ಕೆ. ಅಡ್ವಾಣಿಯವರನ್ನು ರಾಜಕೀಯವಾಗಿ ಮುಗಿಸಲಾಯಿತು. ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಅಪಮಾನಕರ ರೀತಿಯಲ್ಲಿ ಕೆಳಗಿಳಿಸಲಾಯಿತು."

"ಈ ದೇಶದಲ್ಲಿ ಸಣ್ಣ ಪುಟ್ಟ ಸಮಾಜಗಳಿಗೆ ಶಿಕ್ಷಣ, ಆರೋಗ್ಯ ಕೊಟ್ಟಿರುವುದು ಆರ್‌ಎಸ್‌ಎಸ್ ಅಲ್ಲ. ಹಿಂದುತ್ವ ಹಾಗೂ ಕೋಮುವಾದವನ್ನು ಹರಡುವ ಕೆಲಸವನ್ನು ಬಿಟ್ಟರೆ ಬೇರೆ ಯಾವ ಸಾಧನೆಯನ್ನೂ ಅದು ಮಾಡಿಲ್ಲ. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ ಆರ್‌ಎಸ್‌ಎಸ್ ಸಭೆಗಳಲ್ಲಿ ಚರ್ಚೆ ಆಗಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ."

"ಆರ್‌ಎಸ್‌ಎಸ್ ಕೇಂದ್ರಬಿಂದು ಇಟ್ಟಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ. ರಾಜಕೀಯವಾಗಿ ಪಕ್ಷಕ್ಕೆ ಸ್ವಾತಂತ್ರ್ಯ ಇಲ್ಲ. ಕೆಲ ವರ್ಷಗಳ ಹಿಂದೆ ಬಿಜೆಪಿಯನ್ನೇ ವಿಸರ್ಜಿಸಿ ಹೊಸ ಪಕ್ಷ ರಚನೆಯತ್ತ ಅದು ಅಲೋಚನೆ ಮಾಡಿತ್ತು," ಎಂದು ಸ್ಫೋಟಕ ಮಾಹಿತಿಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬಿಚ್ಚಿಟ್ಟರು.

 ವಿಧೇಯಕದ ಬದಲು ವಿಶ್ವಾಸ ಮೂಡಿಸಬೇಕು

ವಿಧೇಯಕದ ಬದಲು ವಿಶ್ವಾಸ ಮೂಡಿಸಬೇಕು

"ಮತಾಂತರ ನಿಷೇಧ ವಿಧೇಯಕದ ಬದಲು ಜನರಲ್ಲಿ ವಿಶ್ವಾಸ ತುಂಬಬೇಕು. ಉದ್ಯೋಗ, ಶಿಕ್ಷಣ ಕೊಡಬೇಕು. ಆರ್ಥಿಕ ಶಕ್ತಿ ತಂದು ಕೊಡಬೇಕು. ಮತಾಂತರ ನಿಷೇಧ ವಿದೇಯಕದಿಂದ ಮತಾಂತರವನ್ನು ನಿಲ್ಲಿಸಲು ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ, ವಸತಿ ಮುಂತಾದ ಸೌಲಭ್ಯಗಳನ್ನು ಉತ್ತಮವಾಗಿ ಒದಗಿಸಿದ್ದರೆ ಮತಾಂತರ ಎನ್ನುವ ಶಬ್ದವೇ ಕೇಳುತ್ತಿರಲಿಲ್ಲ. ಸ್ವಯಂ ಪ್ರೇರಿತರಾಗಿ ಬೇರೆ ಧರ್ಮಕ್ಕೆ ಜನ ಹೋಗುತ್ತಿರುವ ಉದಾಹರಣೆ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್‌ರವರೇ ಬೌದ್ಧ ಧರ್ಮಕ್ಕೆ ಹೋದರು. ಇದು ಇಂದಿನ ಸಮಸ್ಯೆ ಅಲ್ಲ," ಎಂದರು.

"ಬಿಜೆಪಿಯವರಿಗೆ ಬೇಕಾಗಿರುವುದು ಶಾಂತಿ, ನೆಮ್ಮದಿ ಅಲ್ಲ. ಅವರು ಪದೇಪದೇ ಈ ವಿಚಾರ ಹೇಳುತ್ತಿದ್ದಾರೆ. ವಿಧಾನಸಭಾ ಕಲಾಪದಲ್ಲಿ ಮತಾಂತರದ ಬಗ್ಗೆ ಚರ್ಚೆಯನ್ನು ಗಮನಿಸಿದ್ದೇನೆ. ಶಾಸಕರ ತಾಯಿ ಒಬ್ಬರು ಮತಾಂತರ ಆಗಿದ್ದರ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಇಂದಿನ ಕಾರ್ಯಗಾರದಲ್ಲಿ ಭಾಗಿಯಾಗಿದ್ದ ಕ್ರೈಸ್ತ ಗುರು ಒಬ್ಬರು, ಬೈಬಲ್‌ನಲ್ಲಿ ಒತ್ತಾಯ ಮಾಡಿ ಮತಾಂತರ ಮಾಡುವುದಕ್ಕೆ ಬೆಂಬಲ ಇಲ್ಲ. ಪ್ರೀತಿಯನ್ನು ನಾವು ಬಯಸುವವರು. ನಾವು ಬೇರೆ ದೇಶದಲ್ಲಿ ಹುಟ್ಟಿದ್ದಲ್ಲ. ನಾವು ಭಾರತೀಯರೇ ಅಂತ ಹೇಳಿದರು. ಅವರ ಮಾತುಗಳ ಬಗ್ಗೆ ಅಲೋಚನೆ ಮಾಡಬೇಕಿದೆ. ಅದು ಸತ್ಯವಾದ ಮಾತು," ಎಂದು ಹೇಳಿದರು.

 ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ

ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ

"ಕಾಂಗ್ರೆಸ್ ಸರಿಯಾಗಿದ್ದಿದ್ದರೆ ದೇಶದ ಸ್ಥಿತಿ ಬೇರೆ ರೀತಿಯೇ ಇರುತ್ತಿತ್ತು. ಅವರ ಸ್ವೇಚ್ಛಾ ವರ್ತನೆಯೇ ಇಂತಹ ವಾತಾವರಣ ನಿರ್ಮಾಣ ಮಾಡಿ ಬಿಜೆಪಿ ಆಟಾಟೋಪಗಳಿಗೆ ಅಂಕೆ ಇಲ್ಲದಂತೆ ಆಗಿದೆ. ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷದ್ದು ಅದೇ ಕತೆ. ಸುದೀರ್ಘ ಅಧಿಕಾರ ಇದ್ದಾಗ ಏನು ಮಾಡಲಿಲ್ಲ. ಮೂರು ಸಾವಿರ ರೈತರು ಸಾಯುವರೆಗೂ ಏನೂ ಗೊತ್ತಿಲ್ಲ ಅಂತ ಇದ್ದರು ಆಗಿನ ಮುಖ್ಯಮಂತ್ರಿ. ಈಗ ರಾಜಕೀಯಕ್ಕೆ ಹಾಗೂ ಅಧಿಕಾರ ಹಿಡಿಯಲು ತರಾತುರಿಯಲ್ಲಿ ಪಂಜಿನ ಮೆರವಣಿಗೆ ಮಾಡುತ್ತಿದ್ದಾರೆ," ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

"ಇವತ್ತು ಏಳನೇ ದಿನದ ಜೆಡಿಎಸ್ ಕಾರ್ಯಗಾರ ನಡೆಯಿತು. ಪ್ರಥಮ ಬಾರಿಗೆ ಕ್ರೈಸ್ತ ಸಮಾಜದವರಿಗೆ ಕಾರ್ಯಗಾರ ಮಾಡಲಾಯಿತು. ಆ ಸಮುದಾಯದ ಪ್ರತಿನಿಧಿಗಳ ಜತೆ ಚರ್ಚೆ ನಡೆಸಲಾಯಿತು. ಅವರಿಗೆ ನಂಬಿಕೆ, ವಿಶ್ವಾಸ ಮೂಡಿಸುವ ಕೆಲಸವನ್ನು ಪಕ್ಷ ಮಾಡಿದೆ. ಪ್ರಥಮ ಬಾರಿಗೆ ನಾವು ಕೂಡ ನಿಮ್ಮ ಜೊತೆಗೂಡುತ್ತೇವೆ ಅಂತ ಬಂದಿದ್ದಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡಲಾಗುವುದು. ಕ್ರೈಸ್ತ ಸಮುದಾಯದ ಜನರ ಬಗ್ಗೆ ಸರಕಾರ ಮೊಸಳೆ ಕಣ್ಣೀರು ಹಾಕಿದೆ ಅಷ್ಟೇ. ಅವರಿಗೆ ರಕ್ಷಣೆ ನೀಡುವ ಕೆಲಸ ಆಗಿಲ್ಲ," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

 ಕೇಂದ್ರ ಸಚಿವರನ್ನು ಮನೆಗೆ ಕಳಿಸಲು ಎಚ್‌ಡಿಕೆ ಆಗ್ರಹ

ಕೇಂದ್ರ ಸಚಿವರನ್ನು ಮನೆಗೆ ಕಳಿಸಲು ಎಚ್‌ಡಿಕೆ ಆಗ್ರಹ

"ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಸಚಿವರ ಬೆಂಗಾವಲು ವಾಹನ ಹತ್ತಿಸಿ ನಾಲ್ವರ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಹಾಗೂ ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ಸಂಪುಟದಿಂದ ವಜಾ ಮಾಡಬೇಕು," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಒತ್ತಾಯ ಮಾಡಿದರು.

"ಅಷ್ಟೇ ಅಲ್ಲದೆ, ಆ ಸಚಿವರ ಪುತ್ರನನ್ನು ಹಾಗೂ ಆತನ ಪುಂಡ ಬೆಂಬಲಿಗರನ್ನು ಬಂಧಿಸಿ ಎಫ್ಐಅರ್ ಹಾಕಬೇಕು ಎಂದ ಅವರು, ಉತ್ತರ ಪ್ರದೇಶದ ಘಟನೆ ರೈತರ ಮೇಲೆ ನಡೆದ ಅಮಾನುಷ ದಾಳಿ. ದೇಶ ತಲೆ ತಗ್ಗಿಸುವಂತಹ ಘಟನೆ," ಎಂದು ಗುಡುಗಿದರು.

"ರೈತರ ಬಗ್ಗೆ ಗೌರವ ಇದ್ದರೆ ಕಾರು ಹತ್ತಿಸಿದವನನ್ನು ಕೂಡಲೇ ಬಂಧನ ಮಾಡಬೇಕಿತ್ತು. ಯಾಕೆ ರಕ್ಷಣೆ ಕೊಟ್ಟಿದ್ದೀರಾ? ಸಾಮಾನ್ಯ ವ್ಯಕ್ತಿಯೊಬ್ಬ ಈ ಕೆಲಸ ಮಾಡಿದ್ದರೆ ತಕ್ಷಣ ಬಂಧಿಸುತ್ತಿದ್ದರು," ಎಂದು ಕಿಡಿಕಾರಿದರು.

 ಉತ್ತರಪ್ರದೇಶದಲ್ಲಿ ಶಾಂತಿ ಎಂದರೆ ಇದೇನಾ?

ಉತ್ತರಪ್ರದೇಶದಲ್ಲಿ ಶಾಂತಿ ಎಂದರೆ ಇದೇನಾ?

"ಯೋಗಿ ಆದಿತ್ಯನಾಥ್ ಸರಕಾರ ಬಂದ ಮೇಲೆ ಉತ್ತರಪ್ರದೇಶ ಶಾಂತಿಯುತ ರಾಜ್ಯ ಆಗಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಶಾಂತಿ ಎಂದರೆ ಇದೇನಾ? ಬಹಳ ದಿನ ಇದು ನಡೆಯುವುದಿಲ್ಲ. ನಿಮಗೂ ಪಾಠ ಕಲಿಸುವ ದಿನ ಹತ್ತಿರದಲ್ಲೇ ಇದೆ," ಎಂದು ಎಚ್‌ಡಿಕೆ ಎಚ್ಚರಿಸಿದರು.

"ಒಬ್ಬ ರೈತನನ್ನು ಕರೆದು ಚರ್ಚೆ ಮಾಡಿಲ್ಲ. ಪ್ರಧಾನಿ ಮೋದಿ ಕರೆದು ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಆದರೆ ಆ ಕೆಲಸ ಯಾಕೆ ಮಾಡಿಲ್ಲ? ರೈತರು ಎಂದರೆ ಅಷ್ಟೊಂದು ನಿರ್ಲಕ್ಷವೇ? ಇಲ್ಲಿನ ಸಿಎಂ ಹೇಳ್ತಾರೆ, ರೈತರ ಪ್ರತಿಭಟನೆ ಪ್ರಾಯೋಜಿತ ಅಂತ. ಇವರು ಬಂದಿದ್ದು ಕೂಡ ಹೋರಾಟದಿಂದಲೇ ಅಲ್ಲವೇ?," ಎಂದು ವ್ಯಂಗ್ಯವಾಡಿದರು.

 ಕಾರ್ಯಗಾರ ಯಶಸ್ವಿ ಆಗಿದೆ

ಕಾರ್ಯಗಾರ ಯಶಸ್ವಿ ಆಗಿದೆ

"ಏಳು ದಿನಗಳ ಜೆಡಿಎಸ್ ಕಾರ್ಯಗಾರ ಯಶಸ್ವಿಯಾಗಿದೆ. ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ಉತ್ಸಾಹ ಬಂದಿದೆ. ಹಬ್ಬದ ನಂತರ ಜನತಾ ಸಂಗಮ ಆರಂಭವಾಗುತ್ತದೆ. ಪಕ್ಷವನ್ನು ಎಲ್ಲಾ ಹಂತಗಳಿಗೆ ಹಾಗೂ ರಾಜ್ಯದ ಎಲ್ಲಾ ಮೂಲೆಗಳಿಗೂ ವಿಸ್ತರಿಸಲಾಗುವುದು."

"ಹಾಲಿ ಮತ್ತು ಮಾಜಿ ಶಾಸಕರು ಚುರುಕಾಗಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು, ಮುಸ್ಲಿಮರು, ಯುವಜನರು, ಎಸ್ಸಿ, ಎಸ್ಟಿ ಹಿಂದುಳಿದ ವರ್ಗದ ಪ್ರತಿನಿಧಿಗಳು, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ಪ್ರತಿನಿಧಿಗಳ ಕಾರ್ಯಗಾರ ನಡೆಯಿತು. ಎರಡನೇ ಹಂತದಲ್ಲಿ ಜನತಾ ಸಂಗಮ ಕಾರ್ಯಕ್ರಮ ನಡೆಯಲಿದೆ," ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದರು.

Recommended Video

ಮೋದಿ ಭೇಟಿ ಸುದ್ದಿ ತಿಳಿದು ವಿಡಿಯೋ ರಿಲೀಸ್ ಮಾಡಿ ಪ್ರಿಯಾಂಕಾ ಗಾಂಧಿ ಹೇಳಿದ್ದೇನು? | Oneindia Kannada

English summary
Prime Minister Narendra Modi is an RSS doll, Chief Minister Basavaraj Bommai is also working under the RSS direction, former Chief Minister HD Kumaraswamy said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X