ಟೊಯೊಟೊ ಆಡಳಿತ ಮಂಡಳಿ ಹಠಮಾರಿ ಧೋರಣೆಗೆ ಬಿಎಸ್ಪಿ ಖಂಡನೆ
ರಾಮನಗರ, ನವೆಂಬರ್ 20: ಟೊಯೋಟಾ ಕಿರ್ಲೋಸ್ಕರ್ ಘಟಕದಲ್ಲಿ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ.
ಇದಕ್ಕೆ ಟೊಯೋಟಾ ಆಡಳಿತ ಮಂಡಳಿಯ ಹಠಮಾರಿ ಧೋರಣೆ ಕಾರಣವಾಗಿದ್ದು, ಇದನ್ನು ಬಹುಜನ ಸಮಾಜ ಪಕ್ಷ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಹೇಳಿದರು.
ಮುಂದುವರೆದ ಟೊಯೊಟಾ ಆಡಳಿತ ಮಂಡಳಿ- ನೌಕರರ ನಡುವಿನ ಬಿಕ್ಕಟ್ಟು
ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದರ ಜೊತೆಗೆ ಇಲ್ಲಸಲ್ಲದ ನಿಯಮಗಳನ್ನು ಹೇರಿ ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ಒಳಪಡಿಸಿಕೊಳ್ಳುವ ಆಡಳಿತ ಮಂಡಳಿಯ ಹುನ್ನಾರವನ್ನು ಬಹುಜನ ಸಮಾಜವಾದಿ ಪಕ್ಷ ವಿರೋಧಿಸುತ್ತದೆ.
ಈಗಾಗಲೇ ಮೂರು ನಿಮಿಷಕ್ಕೆ ಒಂದು ಕಾರನ್ನು ತಯಾರಿಸುತ್ತಿದ್ದು, ಈಗ ಯಾವುದೇ ಹೆಚ್ಚುವರಿ ಸೌಲಭ್ಯ ನೀಡದೆ ಮತ್ತು ನೇಮಕಾತಿ ಮಾಡಿಕೊಳ್ಳದೆ, ಅಷ್ಟೇ ಕಾರ್ಮಿಕರು ಎರಡೂವರೆ ನಿಮಿಷಕ್ಕೆ ಒಂದು ಕಾರನ್ನು ತಯಾರು ಮಾಡಿ ಎನ್ನುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಇದೊಂದು ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಅಂತರಾಷ್ಟ್ರೀಯ ಮಾನದಂಡವನ್ನು ಇಲ್ಲಿನ ಕಾರ್ಮಿಕರ ಮೇಲೆ ಹೇರುವುದಾದರೆ ಅಲ್ಲಿನ ಕಾರ್ಮಿಕರಿಗೆ ನೀಡುವ ಸಂಬಳ, ಸಾರಿಗೆ, ಭತ್ಯೆ, ತರಬೇತಿ ಮುಂತಾದ ಸೌಲಭ್ಯಗಳನ್ನು ಇಲ್ಲೂ ಕಲ್ಪಿಸಲಿ ಎಂದು ಆಗ್ರಹಿಸಿದರು.
ಉಪ ಮುಖ್ಯಮಂತ್ರಿ ಮತ್ತು ಕಾರ್ಮಿಕ ಸಚಿವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿರುವುದರಿಂದ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಬೇಕೆಂದು ಬಹುಜನ ಸಮಾಜ ಪಕ್ಷ ಆಗ್ರಹಿಸುತ್ತದೆ ಎಂದರು.
ಈ ಹೋರಾಟದಲ್ಲಿ ಜಿಲ್ಲಾ ಕಾರ್ಯದರ್ಶಿ ಮುರುಗೇಶ್, ಉಸ್ತುವಾರಿ ಬಾನಂದೂರು ಕುಮಾರ್, ರಾಮನಗರ ತಾಲೂಕು ಅಧ್ಯಕ್ಷ ಸ್ವಾಮಿ, ಬಿಡದಿ ಕುಮಾರ್, ಗುರುಪ್ರಸಾದ್ ಮುಂತಾದವರು ಭಾಗವಹಿಸಿದ್ದರು.