ಪ್ರಥಮ ಬಾರಿಗೆ ರಾಮನಗರದಲ್ಲಿ ಪಂಚಾಯತಿ ಅಧಿಕಾರ ಹಿಡಿದ ಬಿಜೆಪಿ
ರಾಮನಗರ, ಫೆಬ್ರವರಿ 10: ರಾಮನಗರ ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಬಿಜೆಪಿ ಪಕ್ಷದ ಬೆಂಬಲಿತ ಗ್ರಾಮ ಪಂಚಾಯತಿಯಾಗಿ ಮಾಯಗನಹಳ್ಳಿ ಗ್ರಾಮ ಪಂಚಾಯತಿ ಅಧಿಕಾರ ಹಿಡಿದಿದೆ.
ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಪ್ರಕಾಶ್, ಉಪಾಧ್ಯಕ್ಷರಾಗಿ ಶೋಭಾ ಪ್ರಕಾಶ್ ಆಯ್ಕೆಯಾಗಿದ್ದಾರೆ. ಪ್ರಥಮ ಬಾರಿಗೆ ತಾಲ್ಲೂಕಿನಲ್ಲಿ ಬಿಜೆಪಿ ಗ್ರಾಮ ಪಂಚಾಯತಿ ಆಧ್ಯಕ್ಷ ಗಾದಿ ಹಿಡಿದ ಹಿನ್ನಲೆಯಲ್ಲಿ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎಂ.ರುದ್ರೇಶ್ ಹಾಗೂ ಬಿಡದಿ ಸ್ಮಾರ್ಟ್ ಸಿಟಿ ಅಧ್ಯಕ್ಷ ವರದರಾಜು ಬಾಬು, ನೂತನ ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ರಾಮನಗರ; ಆರೋಗ್ಯ ವಿಶ್ವವಿದ್ಯಾಲಯ ಶೀಘ್ರವೇ ನಿರ್ಮಾಣ
ಈ ವೇಳೆ ಮಾತನಾಡಿದ ಎಂ.ರುದ್ರೇಶ್, ತಾಲ್ಲೂಕಿನಲ್ಲಿ ಪ್ರಥಮ ಬಿಜೆಪಿ ಪಂಚಾಯತಿಯಾಗಿ ಮಾಯಗನಹಳ್ಳಿ ಪಂಚಾಯತಿಯಲ್ಲಿ ಅಧಿಕಾರ ಹಿಡಿದಿದ್ದೇವೆ, ಮಾಯಗನಹಳ್ಳಿ ಗ್ರಾಮದ ಮುಖಂಡ ಬಮೂಲ್ ನಿರ್ದೇಶಕ ನಾಗರಾಜ್ ಅವರ ವಿರುದ್ಧವಾಗಿ ಇವತ್ತು ನಾವು ಚುನಾವಣೆ ನಡೆಸಿ ಅಧಿಕಾರ ಪಡೆದಿದ್ದೇವೆ ಎಂದರು.
ಈ ಗ್ರಾಮ ಪಂಚಾಯತಿ ಅಧಿಕಾರವನ್ನೇ ಮೆಟ್ಟಿಲು ಮಾಡಿಕೊಂಡು ಮುಂದಿನ ದಿನಗಳಲ್ಲಿ ತಾಲ್ಲೂಕಿನ ಅಧಿಕಾರ ಹಿಡಿಯುತ್ತೇವೆ ಎಂದು ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎಂ.ರುದ್ರೇಶ್ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಚುನಾವಣೆಯಲ್ಲಿ ಸಹಕಾರ ಕೊಟ್ಟ ಗ್ರಾ.ಪಂ ಸದಸ್ಯರು ಹಾಗೂ ಪಕ್ಷದ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.